ಬೆಂಗಳೂರು; 1.25 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ್ದ ಪುತ್ತೂರು ತಾಲೂಕು ತಹಶೀಲ್ದಾರ್ ಡಾ ಪ್ರದೀಪ್ ಕುಮಾರ್ ಹಿರೇಮಠ್ ಅವರನ್ನು ಒಂದು ವರ್ಷದ ಅಂತರದಲ್ಲೇ ಗುಬ್ಬಿ ತಾಲೂಕಿನ ತಹಶೀಲ್ದಾರ್ ಗ್ರೇಡ್ 1 ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿದೆ.
ವಿಶೇಷವೆಂದರೆ ಡಾ ಪ್ರದೀಪ್‌ಕುಮಾರ್ ಅವರನ್ನು ಸೇವೆಗೆ ಮರು ನಿಯೋಜಿಸಲು ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಪತ್ರ ಬರೆದಿದ್ದರು. ಈ ಪತ್ರ ಆಧರಿಸಿ ಅವರನ್ನು ಸೇವೆಯಲ್ಲಿ ಮರು ನಿಯೋಜಿಸಿರುವ ಸರ್ಕಾರ ಈ ಬಗ್ಗೆ 2020ರ ಏಪ್ರಿಲ್ 1ರಂದು ಆದೇಶ ಹೊರಡಿಸಿದೆ. 2015ನೇ ಸಾಲಿನ ಕೆಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದ ಡಾ ಪ್ರದೀಪ್ ಕುಮಾರ್ ಪುತ್ತೂರು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆಗೊಂಡ 5 ತಿಂಗಳಲ್ಲೇ 1.50 ಲಕ್ಷ ರು. ಲಂಚಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದಿದ್ದರು.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಅನ್ವಯ ಸೇವೆಗೆ ನಿಯೋಜಿಸಿಲಾಗಿದೆಯಾದರೂ ಲಕ್ಷ ರು.ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರೂ ಅವರ ವಿರುದ್ಧ ಗಂಭೀರ ಶಿಸ್ತು ಕ್ರಮ ಜರುಗಿಸದೆಯೇ ಸೇವೆಯಲ್ಲಿ ಅದೂ ಮುಂಬಡ್ತಿ ನೀಡಿ ನಿಯೋಜಿಸಿರುವುದು ಸಂಶಯಗಳಿಗೆ ಕಾರಣವಾಗಿದೆ. ಮುಂಬಡ್ತಿ ನೀಡಲು ಕಂದಾಯ ಸಚಿವ ಆರ್ ಅಶೋಕ್ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಸಭೆಗಳಿಗೆ ಊಟ, ಉಪಾಹಾರ ಪೂರೈಕೆ ಮಾಡಿದ್ದ ಕೇಟರರ್ಸ್ ಮಾಲೀಕರಿಗೆ ಬಿಲ್ ಪಾವತಿಗೆ ₹ 1.25 ಲಕ್ಷ ಲಂಚ ಪಡೆಯುತ್ತಿದ್ದಾಗ 2019ರ ಜೂನ್ 20ರ ಗುರುವಾರದಂದು ಡಾ ಪ್ರದೀಪ್ ಹಿರೇಮಠ್ ಅವರು ಎಸಿಬಿಯ ಮಂಗಳೂರು ಠಾಣೆಯ ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಆ ನಂತರ ಅವರನ್ನು 48 ಗಂಟೆಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.
ಆ ನಂತರ ಕಚೇರಿ ಮೇಲೂ ದಾಳಿ ನಡೆಸಿದ್ದ ಎಸಿಬಿ ಪಶ್ಚಿಮ ವಲಯದ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದ ತಂಡ ಪುತ್ತೂರು ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿನ ವೆಚ್ಚಕ್ಕೆ ಸಂಬಂಧಿಸಿದ ಕಡತಗಳು ಮತ್ತು ಕಚೇರಿಯಲ್ಲಿ ವಿಲೇವಾರಿಗೆ ಬಾಕಿ ಇರುವ ಕಡತಗಳ ಕುರಿತು ತನಿಖಾ ತಂಡ ಮಾಹಿತಿ ಸಂಗ್ರಹಿಸಿತ್ತು.
ಆರೋಪಿತ ಅಧಿಕಾರಿಯು ಇತ್ತೀಚಿನ ದಿನಗಳಲ್ಲಿ ವಿಲೇವಾರಿ ಮಾಡಿರುವ ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಕಡತಗಳ ಮಾಹಿತಿಯನ್ನೂ ಕಲೆಹಾಕಿತ್ತು. ಆದರೆ ಕಲೆ ಹಾಕಿದ ಮಾಹಿತಿ ಆಧರಿಸಿ ಆರೋಪಿ ಅಧಿಕಾರಿಯನ್ನು ಕೇವಲ ಅಮಾನತುಗೊಳಿಸಿ ಕೈ ತೊಳೆದುಕೊಂಡಿದ್ದ ಕಂದಾಯ ಸಚಿವಾಲಯ, ಒಂದು ವರ್ಷದ ಒಳಗೇ ಅವರನ್ನು ತಹಶೀಲ್ದಾರ್ ಗ್ರೇಡ್ 2 ಹುದ್ದೆಗೆ ನಿಯೋಜಿಸಿದೆ.
ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನವರಾದ ಪ್ರದೀಪ್ ಹಿರೇಮಠ, ಪಶುವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಸರ್ಕಾರಿ ಪಶುವೈದ್ಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿದ್ದರು. ಗೆಜೆಟೆಡ್ ಅಧಿಕಾರಿಯಾಗುವ ಆಸೆಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ, ಕರ್ನಾಟಕ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದರು.
2015ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ನೇಮಕಾತಿ ಹೊಂದಿದ್ದರು. ನೇರವಾಗಿ ತಹಶೀಲ್ದಾರ್ ಹುದ್ದೆ ಲಭಿಸಿತ್ತು. 2019ರ ಜನವರಿಯಲ್ಲಿ ಪುತ್ತೂರು ತಹಶೀಲ್ದಾರ್ ಹುದ್ದೆಗೆ ವರ್ಗವಾಗಿ ಬಂದಿದ್ದರು.