ಬೆಂಗಳೂರು; ರಾಜ್ಯದಲ್ಲಿ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕಿದ್ದ ಬೆಳೆ ವಿಮೆ ಯೋಜನೆ ಮುಗ್ಗರಿಸಿ ಬಿದ್ದಿದೆ. ಅರ್ಹ ರೈತರಿಗೆ ವಿಮಾ ಪರಿಹಾರ ಮೊತ್ತವು ವಿಮಾ ಸಂಸ್ಥೆಯಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾದ ರೈತರ ಖಾತೆಗೆ ಜಮೆ ಮಾಡುವಲ್ಲಿ ಬ್ಯಾಂಕ್‌ಗಳ ಹಲವು ಶಾಖೆಗಳು ಹಿಂದೆ ಬಿದ್ದಿವೆ.
ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ವಿಮೆ ಮೊತ್ತ ಪಡೆಯಲು ಸಾವಿರಾರು ರೈತರ ಪರದಾಟಕ್ಕೆ ಕೊನೆಯಿಲ್ಲದಂತಾಗಿದೆ. ರೈತರು ಪಡುತ್ತಿರುವ ಬವಣೆಗೆ ಬ್ಯಾಂಕ್‌ಗಳ ಮಟ್ಟದಲ್ಲಾಗಿರುವ ಪ್ರಮಾದವೇ ಮೂಲ ಕಾರಣ.
ಕೊರೊನಾ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬೆಳೆ ವಿಮೆ ಯೋಜನೆ ನೆನೆಗುದಿಗೆ ಬಿದ್ದಿದೆ. ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಈ ಕುರಿತು ಇನ್ನೂ ಗಂಭೀರವಾಗಿ ಯೋಚಿಸಿಲ್ಲ. ಅಲ್ಲದೆ ವಿಧಾನಮಂಡಲದಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿಯೂ ಈ ಬಗ್ಗೆ ಯಾವೊಬ್ಬ ಸದಸ್ಯರೂ ಚರ್ಚೆಗೆ ಕೈಗೆತ್ತಿಕೊಳ್ಳಲಿಲ್ಲ.
ಬೆಳೆ ವಿಮೆ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಸಂಬಂಧ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಈಚೆಗೆ ನಡೆಸಿದ ಸಭೆಯಲ್ಲಿ ಬ್ಯಾಂಕ್‌ಗಳ ಶಾಖೆಗಳಲ್ಲಾಗುತ್ತಿರುವ ವಿಳಂಬ ಅನಾವರಣಗೊಂಡಿದೆ.
ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆ ವಿಮೆ ಅರ್ಜಿಗಳೊಂದಿಗೆ ಪರಿಶೀಲಿಸಿ ವಿಮಾ ಪರಿಹಾರ ವಿತರಣೆಯಲ್ಲಿ ಕಾರ್ಯಕ್ಷಮತೆ ಹೊಂದಬೇಕಿದ್ದ ಬ್ಯಾಂಕ್‌ಗಳ ಹಲವು ಶಾಖೆಗಳಿಗೆ ತಿಳಿವಳಿಕೆ ಇಲ್ಲವಾಗಿದೆ. ಹೀಗಾಗಿ ಸಾವಿರಾರು ರೈತರು ಬೆಳೆ ವಿಮೆ ಯೋಜನೆ ಲಾಭ ಪಡೆದಿಲ್ಲದಿರುವುದು ಸಮಿತಿ ಸಭೆಯಿಂದ ಗೊತ್ತಾಗಿದೆ.
ಬಹುತೇಕ ಬ್ಯಾಂಕ್‌ಗಳ ಶಾಖೆಗಳಿಗೆ ಬೆಳೆ ವಿಮೆಯ ಕಟ್ ಆಫ್ ದಿನಾಂಕವೂ ಗೊತ್ತಿಲ್ಲದ ಕಾರಣ ರೈತರು ಬೆಳೆ ವಿಮಾ ಹಣವನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಂಡು ಬಂದಿರುವ ಇಂತಹ ಹಲವು ಪ್ರಕರಣಗಳು ಬ್ಯಾಂಕ್‌ಗಳ ಗಮನಕ್ಕೆ ಬಂದಿದೆಯಾದರೂ ಸಕಾಲದಲ್ಲಿ ರೈತರ ಖಾತೆಗೆ ಜಮೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿವೆ.
ತುಮಕೂರು ಮತ್ತು ಹಾವೇರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಯಥೇಚ್ಛವಾಗಿ ಕಂಡು ಬಂದಿದೆ.ಈ ಎರಡೂ ಜಿಲ್ಲೆಗಳಲ್ಲಿನ ಬ್ಯಾಂಕ್‌ಗಳು ಎಸಗಿರುವ ತಪ್ಪಿನಿಂದಾಗಿ ಅಂದಾಜು 14,000 ರೈತರು ಬೆಳೆ ವಿಮೆ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎಂಬ ಅಂಶ ಸಮಿತಿ ಸಭೆ ನಡವಳಿಯಿಂದ ತಿಳಿದು ಬಂದಿದೆ.
ಬೆಳೆ ವಿಮೆ ಯೋಜನೆ ಅನುಷ್ಠಾನ ಸಲುವಾಗಿ ಪ್ರತಿ ವರ್ಷ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ವಿಮಾಸಂಸ್ಥೆಗಳಿಗೆ ಸಂಬಂಧಪಟ್ಟ ಜಿಲ್ಲೆಗಳನ್ನು ನಿಗದಿಪಡಿಸಿದೆ. ಆಯಾ ಜಿಲ್ಲೆಗಳ ವಿಮೆ ಹೊಂದಿದ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೇರವಾಗಿ ವಿತರಿಸಲಾಗುತ್ತದೆ.
ಬ್ಯಾಂಕಿಂಗ್ ವ್ಯವಸ್ಥೆಯು ಆನ್‌ಲೈನ್ ಆಗಿರುವ ಕಾರಣ ಅರ್ಹ ರೈತರಿಗೆ ವಿಮಾ ಪರಿಹಾರ ಮೊತ್ತವು ವಿಮಾ ಸಂಸ್ಥೆಯಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ಬೆಳೆ ವಿಮೆ ಪರಿಹಾರ ವಿತರಣೆ ಕೇಂದ್ರಗಳನ್ನು ಪ್ರತ್ಯೇಕವಾಗಿ ತೆರೆದಿಲ್ಲ ಎಂದು ಸರ್ಕಾರ ಹೇಳುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ 2018-19ನೇ ಸಾಲಿಗೆ ಸಂಬಂಧಿಸಿದಂತೆ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಯ ದತ್ತಾಂಶವನ್ನು ಪರಿಗಣಿಸಿ ಬೆಳೆ ವಿಮೆ ಪರಿಹಾರವನ್ನು ಲೆಕ್ಕಾಚಾರ ಮಾಡಲಾಗಿದೆ. ವಿಮಾ ಸಂಸ್ಥೆಯು ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆ ವಿಮೆ ಅರ್ಜಿಗಳೊಂದಿಗೆ ಪರಿಶೀಲಿಸಿ ವಿಮಾ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತಿದ್ದಾರಾದರೂ ಅರ್ಹ ರೈತರಿಗೆ ವಿಮಾ ಪರಿಹಾರ ಮೊತ್ತ ಅವರ ಖಾತೆಗೆ ಜಮೆ ಆಗುತ್ತಿಲ್ಲ ಎಂದು ತಿಳಿದು ಬಂದಿದೆ.
ಸರ್ಕಾರದ ಬೆಳೆ ವಿಮೆ ಪರಿಹಾರವನ್ನು ನಿಗದಿತ ಸಮಯದಲ್ಲಿ ಫಲಾನುಭವಿಗಳಿಗೆ ಪಾವತಿ ಮಾಡದಿದ್ದರೆ ಶೇ.12ರಷ್ಟು ಬಡ್ಡಿ ಮೊತ್ತವನ್ನು ನೀಡಬೇಕು. ಆದರೆ ಇದುವರೆಗೂ ಈ ಸಂಬಂಧ ಮಾರ್ಗಸೂಚಿ ಪರಿಷ್ಕರಣೆಗೊಂಡಿಲ್ಲ.