ಲಾಕ್‌ಡೌನ್‌ ಅವಧಿಯಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ; ಏರಿಕೆಯಾಗಿಲ್ಲ ತಪಾಸಣೆ ಸಂಖ್ಯೆ

ಬೆಂಗಳೂರು; ಕೊರೊನಾ ವೈರಸ್‌ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾಗಿ 21 ದಿನಗಳು  ಕಳೆದಿದ್ದರೂ ಸೋಂಕಿತರ ಸಂಖ್ಯೆ  ಕಡಿಮೆಗೊಳ್ಳುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.  

ಕೋವಿಡ್‌ 19 ಸಮುದಾಯಕ್ಕೆ ಹರಡುವುದಕ್ಕೆ ಈಗಿನಿಂದಲೇ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಡೆಸುತ್ತಿರುವ ತಪಾಸಣೆಗಳ ಸಂಖ್ಯೆ ಇನ್ನೂ ಇಮ್ಮಡಿಗೊಳ್ಳುತ್ತಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌(ಐಸಿಎಂಆರ್‌) ಬೆಳಗ್ಗೆ 9ಕ್ಕೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಏಪ್ರಿಲ್‌ 12ರ ಅಂತ್ಯಕ್ಕೆ ಒಟ್ಟು 1,81,028 ವ್ಯಕ್ತಿಗಳಿಂದ 1,95,748 ಮಾದರಿಗಳನ್ನು ಸಂಗ್ರಹಿಸಲಾಗಿದೆ.ಈವರೆವಿಗೆ ದೇಶದಲ್ಲಿ  ಒಟ್ಟು 8,312 ಪ್ರಕರಣಗಳು ದೃಢಪಟ್ಟಿದ್ದರೆ  308 ಮಂದಿ ಕೋವಿಡ್‌ 19ಗೆ ಬಲಿಯಾಗಿದ್ದಾರೆ. 

ಏಪ್ರಿಲ್‌ 12ರಂದೇ  ಒಟ್ಟು  15,583 ಸಂಖ್ಯೆಯಲ್ಲಿ ತಪಾಸಣೆ ನಡೆಸಲಾಗಿದೆ. ಇದರಲ್ಲಿ 544 ಪ್ರಕರಣಗಳು ದೃಢಪಟ್ಟಿವೆ. ಕರ್ನಾಟಕದಲ್ಲಿ 9,251 ಮಾದರಿಗಳನ್ನು ಸಂಗ್ರಹಿಸಿದ್ದರೆ,  ಈ ಪೈಕಿ 232 ಪ್ರಕರಣಗಳು ದೃಢಪಟ್ಟಿವೆ. 6 ಮಂದಿ ಮೃತಪಟ್ಟಿದ್ದಾರೆ. 54 ಮಂದಿ ಚೇತರಿಸಿಕೊಂಡಿದ್ದಾರೆ. 

ಆಂಧ್ರ ಪ್ರದೇಶದಲ್ಲಿ 7,889 ಮಾದರಿಗಳನ್ನು ಸಂಗ್ರಹಿಸಿದ್ದರೆ, ಈವರೆವಿಗೆ 420 ಪ್ರಕರಣಗಳು ದೃಢಪಟ್ಟಿವೆ.  7 ಮಂದಿ ಮೃತಪಟ್ಟಿದ್ದಾರೆ. 12 ಮಂದಿ ಚೇತರಿಸಿಕೊಂಡಿದ್ದಾರೆ. 

ಕೇರಳದಲ್ಲಿ 14,989 ಮಾದರಿಗಳನ್ನು ಈವರೆವಿಗೆ  ಸಂಗ್ರಹಿಸಿದ್ದರೆ, ಈ ಪೈಕಿ 376 ಮಂದಿಯಲ್ಲಿ ಸೋಂಕು ದೃಢಪಟ್ಟಿವೆ.  3  ಮಂದಿ ಮೃತಪಟ್ಟಿದ್ದಾರೆ. 179 ಮಂದಿ  ಚೇತರಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಒಟ್ಟು 10,665 ಮಾದರಿಗಳನ್ನು ಸಂಗ್ರಹಿಸಿದ್ದರೆ ಇದರಲ್ಲಿ  1,075 ಮಂದಿಯಲ್ಲಿ ಸೋಂಕು  ಖಚಿತಪಟ್ಟಿವೆ.  11  ಮಂದಿ ಮರಣ ಹೊಂದಿದ್ದರೆ 50 ಮಂದಿ ಚೇತರಿಸಿಕೊಂಡಿದ್ದಾರೆ. 

ಆದರೆ ತೆಲಂಗಾಣ ಎಷ್ಟು ಸಂಖ್ಯೆಯಲ್ಲಿ  ಮಾದರಿಗಳನ್ನು ಸಂಗ್ರಹಿಸಿದೆ ಎಂದು ಐಸಿಎಂಆರ್‌ಗೆ ಮಾಹಿತಿ ಒದಗಿಸಿಲ್ಲ. ಇಲ್ಲಿ ಒಟ್ಟು 531 ಪ್ರಕರಣಗಳು  ಖಚಿತಪಟ್ಟಿವೆ. 16 ಮಂದಿ ಮೃತಪಟ್ಟಿದ್ದರೆ,  103 ಮಂದಿ ಚೇತರಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆವಿಗೆ 41,109 ಮಾದರಿಗಳನ್ನು ಸಂಗ್ರಹಿಸಿದೆ. ಒಟ್ಟು 1,985  ಖಚಿತಪಟ್ಟ ಪ್ರಕರಣಗಳಾಗಿವೆ.  149 ಮಂದಿ ಕೋವಿಡ್‌  19 ಕ್ಕೆ ಬಲಿಯಾಗಿದ್ದರೆ 217 ಮಂದಿ ಚೇತರಿಸಿಕೊಂಡಿರುವುದು ಐಸಿಎಂಆರ್‌ ಬಿಡುಗಡೆಗೊಳಿಸಿರುವ ಮಾಹಿತಿಯಿಂದ ಗೊತ್ತಾಗಿದೆ. ದೆಹಲಿಯಲ್ಲಿ 1,154 ,ತಮಿಳುನಾಡಿನಲ್ಲಿ 1,075, ರಾಜಸ್ಥಾನದಲ್ಲಿ 804, ಮಧ್ಯ ಪ್ರದೇಶದಲ್ಲಿ 532 ಮತ್ತು ಗುಜರಾತ್‌ನಲ್ಲಿ 516 ಪ್ರಕರಣಗಳು ವರದಿಯಾಗಿವೆ. 

the fil favicon

SUPPORT THE FILE

Latest News

Related Posts