ಲಾಕ್‌ಡೌನ್‌ ನಡುವೆಯೂ ಪೊಲೀಸ್‌, ಅರಣ್ಯ ಇಲಾಖೆಯಲ್ಲಿ ವರ್ಗಾವಣೆ

ಬೆಂಗಳೂರು; ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ ನಡುವೆಯೂ ಕರ್ನಾಟಕ ಪೊಲೀಸ್‌ ಮತ್ತು ಅರಣ್ಯ ಇಲಾಖೆಯಲ್ಲಿ ವರ್ಗಾವಣೆ ದಂಧೆ ಭರ್ಜರಿಯಾಗಿ ನಡೆದಿದೆ. ಲಾಕ್‌ಡೌನ್‌ ಅವಧಿಯಲ್ಲಿಯೂ ಈ ದಂಧೆಗೆ ಕಡಿವಾಣ ಬಿದ್ದಿಲ್ಲ.
ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಲಾಕ್‌ಡೌನ್‌, ಸೀಲ್‌ ಡೌನ್‌ ಆಗಿರುವ ಸ್ಥಳಗಳಲ್ಲಿ ಬಂದೋಬಸ್ತ್‌ ಕಾರ್ಯದಲ್ಲಿ ನಿರತರಾಗಿದ್ದರೂ ವರ್ಗಾವಣೆ ಆದೇಶಗಳು ಹೊರಬಿದ್ದಿವೆ.
ಅತ್ಯಗತ್ಯ ಸೇವೆಗಳ ಕಾಯ್ದೆಯಡಿಯಲ್ಲಿ ಬರುವ ಪೊಲೀಸ್‌ ಮತ್ತು ಅರಣ್ಯ ಇಲಾಖೆ ಲಾಕ್‌ಡೌನ್‌ ಅವಧಿಯಲ್ಲಿಯೂ ವರ್ಗಾವಣೆ ಮತ್ತು ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸುವ ತುರ್ತು ಏನಿತ್ತು ಎಂಬ ಪ್ರಶ್ನೆಗಳು ಅಧಿಕಾರಿಗಳ ವಲಯದಲ್ಲಿ ಕೇಳಿ ಬಂದಿವೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳು ಮುಂದಿನ 15 ದಿನದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಪೊಲೀಸ್‌ ಮಹಾನಿರೀಕ್ಷಕರ ಕಚೇರಿ 2020ರ ಏಪ್ರಿಲ್‌ 27ರಂದು ಆದೇಶ ಹೊರಡಿಸಿದೆ. ಅರಣ್ಯ ಇಲಾಖೆ ಹೊರಡಿಸಿರುವ ವರ್ಗಾವಣೆ ಆದೇಶಗಳು ಲಾಕ್‌ಡೌನ್‌ ಮುಕ್ತಾಯದ ನಂತರದಲ್ಲಿ ಜಾರಿಗೆ ಬರಲಿವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ. ವರ್ಗಾವಣೆ ಮತ್ತು ಮುಂಬಡ್ತಿ ನೀಡಲು ಎರಡೂ ಇಲಾಖೆಗಳ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಆನಂದ್‌ಸಿಂಗ್‌ ಅವರು ಅನುಮೋದಿಸಿದ್ದಾರೆ.
ವರ್ಗಾವಣೆಗೊಂಡಿರುವ ಅರಣ್ಯ ರಕ್ಷಕರು ಲಾಕ್‌ಡೌನ್‌ ಅವಧಿ ಪೂರ್ಣಗೊಂಡ ನಂತರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಿದೆ. ಈ ಎರಡೂ ಆದೇಶಗಳ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಮುಂಬಡ್ತಿಯಲ್ಲಿ ಸಿಂಹಪಾಲು ಪಡೆದಿದ್ದಾರೆ.
ಪೊಲೀಸ್‌ ಇಲಾಖೆ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿದ್ದರೆ, ಇತ್ತ ಅರಣ್ಯ ಇಲಾಖೆ ಅರಣ್ಯ ರಕ್ಷಕರು ಮತ್ತು ಇಲಾಖೆಯಲ್ಲಿರುವ ಪ್ರಥಮದರ್ಜೆ ಸಹಾಯಕರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಲೋಕಾಯುಕ್ತ ಪ್ರಕರಣ ಬಾಕಿ ಇರುವುದು ಸೇರಿದಂತೆ ಇನ್ನಿತರೆ ಕಾರಣಗಳಿಂದ ಒಟ್ಟು 25 ಮಂದಿಗೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಪರಿಗಣಿಸಿಲ್ಲ.
ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಒಟ್ಟು 39 ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಮುಂಬಡ್ತಿ ಪಡೆದಿರುವವರ ಪೈಕಿ ಕೆಲ ಪೊಲೀಸ್‌ ಅಧಿಕಾರಿಗಳು ಜಿಲ್ಲೆಯೊಳಗೆ ಸ್ಥಳ ನಿಯೋಜಿಸಿದ್ದರೆ, ಇನ್ನು ಹಲವರಿಗೆ ಹೊರಗಿನ ಜಿಲ್ಲೆಗೆ ಸ್ಥಳ ನಿಯುಕ್ತಿಗೊಳಿಸಿರುವುದು ಮುಂಬಡ್ತಿ ಆದೇಶದಿಂದ ತಿಳಿದು ಬಂದಿದೆ.
ಚನ್ನರಾಯಪಟ್ಟಣದಲ್ಲಿ ಎಎಸ್‌ಐ ಹುದ್ದೆಯಲ್ಲಿರುವ ಜಿ ಟಿ ಚಂದ್ರಯ್ಯ ಅವರಿಗೆ ಬೆಂಗಳೂರು ಜಿಲ್ಲಾ ಪೊಲೀಸ್‌ ಕಚೇರಿಯ ಸಿಇಎನ್‌ ಪೊಲೀಸ್‌ ಠಾಣೆ-2ಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್‌ಐ ಗೋಪಾಲರೆಡ್ಡಿ ಆರ್‌ ಅವರನ್ನು ಬೆಂಗಳೂರಿಗೆ (ರಾಜ್ಯ ಗುಪ್ತವಾರ್ತೆ) ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಅದೇ ರೀತಿ ತುಮಕೂರಿನ ಹೊಸ ಬಡಾವಣೆ ಠಾಣೆಯ ಶಕುಂತಲಾ ಜಿ, ಕೋಲಾರದಲ್ಲಿ ಕನ್ನಯ್ಯ(ರಾಜ್ಯ ಗುಪ್ತವಾರ್ತೆ) ಅವರನ್ನು ಬೆಂಗಳೂರಿನಲ್ಲಿರುವ ಬೆಸ್ಕಾಂ ಜಾಗೃತ ದಳಕ್ಕೆ ಮುಂಬಡ್ತಿ ನೀಡಿ ಆದೇಶಿಸಿದೆ.
ಇನ್ನು, 16 ಮಂದಿ ಅರಣ್ಯ ರಕ್ಷಕರನ್ನು ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ 2020ರ ಏಪ್ರಿಲ್‌ 27ರಂದೇ ಆದೇಶ ಹೊರಡಿಸಿದೆ. ಖಾನಾಪುರ ವಲಯದಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗಣೇಶ್‌ ಎಸ್‌ ಅವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ.
ಗದಗ್‌ ವಿಭಾಗದ ಸಾಮಾಜಿಕ ಅರಣ್ಯದಲ್ಲಿ ಅರಣ್ಯ ರಕ್ಷಕರಾಗಿರುವ ಮಂಜುನಾಥ್ ಎಂ ಕುಂಬಾರ ಅವರನ್ನು ಬಾಗಲಕೋಟೆ ವಿಭಾಗಕ್ಕೆ ವರ್ಗಾಯಿಸಲಾಗಿದ್ದರೆ, ಬೆಳಗಾವಿ ವಿಭಾಗದ ಲೋಂಡಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುರುಪಾದಪ್ಪ ಸಿ ಕಲ್ಯಾಣಿ ಅವರನ್ನು ಬಾಗಲಕೋಟೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ಹಳಿಯಾಳ ವಿಭಾಗದ ದುರುಗಣ್ಣ ಅವರನ್ನು ಯಾದಗಿರಿ ವಿಭಾಗದ ಸುರಪುರ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.

SUPPORT THE FILE

Latest News

Related Posts