ಬೆಂಗಳೂರು; ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಿರುವ ಖಾಸಗಿ ಆಸ್ಪತ್ರೆಗಳಿಗೆ ಕಳೆದ ಒಂದು ವರ್ಷದಿಂದ ವೆಚ್ಚದ ಮೊತ್ತ ಮರುಪಾವತಿ ಅಗಿಲ್ಲ. 2019-20ನೇ ಸಾಲಿನಲ್ಲಿ ಇದರ ಮೊತ್ತ ಅಂದಾಜು 25 ರಿಂದ 30 ಕೋಟಿ ರು.ಗಳಷ್ಟಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಎಲ್ಲ ಇಲಾಖೆಯ ನೌಕರರಿಗೂ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಕೆಲ ತಿಂಗಳ ಹಿಂದೆ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಇದೇ ಯೋಜನೆಯಡಿಯಲ್ಲಿ ಪೊಲೀಸ್ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಿರುವ ಖಾಸಗಿ ಆಸ್ಪತ್ರೆಗಳಿಗೆ ಕೋಟ್ಯಂತರ ರು.ಬಾಕಿ ಉಳಿಸಿಕೊಂಡಿರುವ ವಿಚಾರ ಮುನ್ನೆಲೆಗೆ ಬಂದಿದೆ.
ಚಿಕಿತ್ಸೆ ನೀಡಿರುವ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕನಿಷ್ಠ 2 ರಿಂದ 3 ಕೋಟಿ ರು. ಮರು ಪಾವತಿ ಆಗಬೇಕಿದೆ. ಬಾಕಿ ಇರುವ ಮೊತ್ತವನ್ನು ಸರ್ಕಾರ ಮರುಪಾವತಿ ಮಾಡದ ಹೊರತು ಚಿಕಿತ್ಸೆ ನೀಡಲು ನೋಂದಾಯಿತ ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂದು ಗೊತ್ತಾಗಿದೆ. ಖಾಸಗಿ ಆಸ್ಪತ್ರೆಗಳ ಧೋರಣೆಯಿಂದಾಗಿ ಪೊಲೀಸ್ ಸಿಬ್ಬಂದಿ ಪರದಾಡುತ್ತಿದ್ದಾರೆ. ಈ ಪೈಕಿ ನಿವೃತ್ತ ಪೊಲೀಸ್ ಸಿಬ್ಬಂದಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಾಕಿ ಹಣಕ್ಕಾಗಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿ ಸಂಪರ್ಕಿಸಿ ಹಲವು ಮನವಿಗಳನ್ನು ನೀಡಿದ್ದರೂ ಈವರೆವಿಗೂ ಬಾಕಿ ಮೊತ್ತ ಪಾವತಿಯಾಗಿಲ್ಲ.
ಅಲ್ಲದೆ, ಯಶಸ್ವಿನಿ ಯೋಜನೆ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳನ್ನು ಸ್ಥಗಿತಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿರುವ ಸರ್ಕಾರ, ಈ ಯೋಜನೆಯಡಿಯಲ್ಲಿಯೂ ಮರುಪಾವತಿಸಬೇಕಿರುವ ಮೊತ್ತದ ಪೈಕಿ ಒಂದೊಂದು ಅಸ್ಪತ್ರೆಗೆ ಕನಿಷ್ಠ 50 ಲಕ್ಷ ರು.ಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
‘ದಿ ಫೈಲ್’ ಜತೆ ಮಾತನಾಡಿದ ಖಾಸಗಿ ಆಸ್ಪತ್ರೆಯೊಂದರ ಆಡಳಿತ ಮಂಡಳಿ ನಿರ್ದೇಶಕರೊಬ್ಬರು ‘ಆರೋಗ್ಯಭಾಗ್ಯ ಯೋಜನೆಯಡಿಯಲ್ಲಿ ಮೂಳೆ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ನಮ್ಮ ಆಸ್ಪತ್ರೆಗೆ 2 ಕೋಟಿ ರು.ಮರು ಪಾವತಿ ಆಗಿಲ್ಲ. ಅದೇ ರೀತಿ ಯಶಸ್ವಿನಿ ಯೋಜನೆಯಡಿಯಲ್ಲಿಯೂ 1.50 ಕೋಟಿ ರು. ಬಾಕಿ ಬರಬೇಕಿದೆ,’ ಎಂದು ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಪಡೆದ ವೆಚ್ಚದ ಮರುಪಾವತಿ ವಿಳಂಬವಾಗುತ್ತಿದ್ದರೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ‘ಅನುದಾನದ ಕೊರತೆ ಇರುವ ಕಾರಣ ವೈದ್ಯಕೀಯ ಚಿಕಿತ್ಸೆ ವೆಚ್ಚದ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ,’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2018ರ ಜುಲೈನಿಂದ ಜಾರಿಯಲ್ಲಿರುವ ಆರೋಗ್ಯ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಯ ಪತಿ ಮತ್ತು ಪತ್ನಿಗೆ ಮಾತ್ರ ಸೀಮಿತವಾಗಿರುತ್ತದೆ. ಚಿಕಿತ್ಸೆಗಾಗಿ ಲಕ್ಷ ರೂ.ವರೆಗೆ ಹಾಗೂ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ.ವರೆಗೆ ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಅವಕಾಶವಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಭಾಗ್ಯ ಯೋಜನೆಗೆ 20,000 ನಿವೃತ್ತ ಪೊಲೀಸರನ್ನು ಸೇರ್ಪಡೆಗೊಳಿಸಲಾಗಿತ್ತು.
ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ‘ಆರೋಗ್ಯ ಭಾಗ್ಯ ಯೋಜನೆಗೆ ಹಿಂದಿನ ಸರ್ಕಾರ 10 ಕೋಟಿ ರೂ. ಮಂಜೂರು ಮಾಡಿತ್ತು.
ಇದೇ ಯೋಜನೆಯನ್ನು ಸರ್ಕಾರದ ಎಲ್ಲಾ ಇಲಾಖೆಗಳ ನೌಕರರಿಗೂ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘ, ಇದರಿಂದ 15 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿತ್ತು.
ಹಾಗೆಯೇ ರಾಜ್ಯ ಸರಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗದವರ ಚಿಕಿತ್ಸೆ ಮತ್ತು ವೈದ್ಯ ವೆಚ್ಚ ಪಾವತಿಸಲು ವರ್ಷಗಟ್ಟಲೇ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಮ ಪರಿವರ್ತನೆ ಮಾಡಬೇಕೆಂದು ಸರಕಾರಿ ನೌಕರರ ಸಂಘ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಭಾಗ್ಯವನ್ನು ಎಲ್ಲ ಸರಕಾರಿ ನೌಕರರಿಗೂ ವಿಸ್ತರಿಸಲು ನಿರ್ಧರಿಸಲಾಗಿತ್ತು.
ರಾಜ್ಯದ ಪೊಲೀಸರು ಸಾಮಾಜಿಕ ಒತ್ತಡ ಹಾಗೂ ಕೆಲಸದ ಒತ್ತಡದಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಳೆದ ವರ್ಷ ಖಾಸಗಿ ಸಂಸ್ಥೆ ನಡೆಸಿದ್ದ ಸಮೀಕ್ಷೆಯೊಂದು ಹೊರಗೆಡವಿತ್ತು.