ಲಾಕ್‌ಡೌನ್‌; ಆನ್‌ಲೈನ್‌ ಪರೀಕ್ಷೆ ನಡೆಸುವ ಸರ್ಕಾರದ ಚಿಂತನೆ ಮೂರ್ಖತನವೇ?

ಬೆಂಗಳೂರು; ಲಾಕ್‌ಡೌನ್‌  ವಿಸ್ತರಣೆ ಆಗಿರುವ ಹಿನ್ನೆಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ನಡೆಸಲು ಚಿಂತಿಸಿರುವ ಉನ್ನತ ಶಿಕ್ಷಣ  ಇಲಾಖೆ, ಈ ನಿಟ್ಟಿನಲ್ಲಿ  ವಿಶ್ವವಿದ್ಯಾಲಯಗಳು ಸಜ್ಜುಗೊಂಡಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡಿಲ್ಲ. 

ಆನ್‌ಲೈನ್‌ ಪರೀಕ್ಷೆಯನ್ನು ನಡೆಸಲು ಚಿಂತಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್‌ ಅಶ್ವಥ್‌ನಾರಾಯಣ್‌  ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಹೊಸ  ಸವಾಲನ್ನು  ಎದುರಿಸುವುದು ಹೇಗೆ ಎಂದು  ವಿಶ್ವವಿದ್ಯಾಲಯಗಳ ಪರೀಕ್ಷೆ ವಿಭಾಗವೂ ಚಿಂತಿಸಲಾರಂಭಿಸಿದೆ. ಅಲ್ಲದೆ, ಈ ಸಂಬಂಧ ವಿಶ್ವವಿದ್ಯಾಲಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಾಥಮಿಕ  ಸಿದ್ಧತೆಗಳಿಲ್ಲದೇ ತಕ್ಷಣಕ್ಕೇ ಆನ್‌ಲೈನ್‌ ಪರೀಕ್ಷೆ ನಡೆಸಲು ಸರ್ಕಾರದ  ಚಿಂತನೆಯೇ ಮೂರ್ಖತನದಿಂದ ಕೂಡಿದೆ  ಎಂಬ ಮಾತುಗಳು ಕೇಳಿಬಂದಿವೆ.  

ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದರಿಂದ ಕಾಲೇಜುಗಳಲ್ಲಿ ಪರೀಕ್ಷೆ ನಡೆಸುವುದು ಸರಿಯಾದ ಚಿಂತನೆಯಲ್ಲ. ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆಸಿಕೊಂಡು ಆನ್‌ಲೈನ್‌ ಪರೀಕ್ಷೆ  ನಡೆಸುವುದು  ಕಷ್ಟಕರವಲ್ಲದೆ, ಇದು ಇನ್ನಷ್ಟು ಅಪಾಯಗಳಿಗೆ ದಾರಿಮಾಡಿಕೊಟ್ಟಂತಾಗುತ್ತದೆ. ಕಂಪ್ಯೂಟರ್‌ ಇದ್ದಲ್ಲಿ  ಎ ಸಿ  ವ್ಯವಸ್ಥೆಯೂ ಕಡ್ಡಾಯವಾಗಿ ಇರಲೇಬೇಕು. ಎ ಸಿ ವ್ಯವಸ್ಥೆಯಿಂದಾಗಿಯೇ ಕೊರೊನಾ ವೈರಾಣು ಸುಲಭವಾಗಿ ಹರಡುತ್ತದೆ ಎಂಬ ಸಾಮಾನ್ಯ ಅರಿವು ಉನ್ನತ ಶಿಕ್ಷಣ ಇಲಾಖೆಗೆ ಇದ್ದಂತಿಲ್ಲ. 

ವಿದ್ಯಾರ್ಥಿಗಳು ಇರುವ ಸ್ಥಳಗಳಿಂದಲೇ ಆನ್‌ಲೈನ್‌ ಪರೀಕ್ಷೆ ನಡೆಸಬಹುದು ಎಂಬ ವಾದವಿದ್ದರೂ ನಗರ ಪ್ರದೇಶ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ವ್ಯವಸ್ಥೆ ಇದೆ ಎನ್ನುವ ಬಗ್ಗೆಯೇ  ಸಾಕಷ್ಟು ಅನುಮಾನಗಳಿವೆ. ಮೇಲಾಗಿ ಪರೀಕ್ಷೆ ವ್ಯವಸ್ಥೆಯಲ್ಲಿ ಗೌಪ್ಯತೆ ಬಹುಮುಖ್ಯ. ಆನ್‌ಲೈನ್‌ ಪರೀಕ್ಷೆಯಲ್ಲಿ ಗೌಪ್ಯತೆಯನ್ನು ಹೇಗೆ ಕಾಯ್ದುಕೊಳ್ಳಲಿದೆ?

ಇನ್ನು, ಈಗಾಗಲೇ ಪರಿಶಿಷ್ಟ  ಜಾತಿ, ಪಂಗಡದ ಪದವಿ  ವಿದ್ಯಾರ್ಥಿಗಳಿಗೆ ಸರ್ಕಾರ  ಉಚಿತವಾಗಿ ಲ್ಯಾಪ್‌ಟಾಪ್‌ ನೀಡಿದೆಯಾದರೂ ಸಾಮಾನ್ಯ ವಿದ್ಯಾರ್ಥಿಗಳಿಗೆ  ಲ್ಯಾಪ್‌ಟಾಪ್‌ ನೀಡಿಲ್ಲ. ಮೇಲಾಗಿ  ಆನ್‌ಲೈನ್‌ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನೇ ಮೂಡಿಸಿಲ್ಲ. ರಾಜ್ಯದ ಸಾಂಪ್ರದಾಯಕ  ವಿಶ್ವವಿದ್ಯಾಲಯಗಳು ಈವರೆವಿಗೂ ಆನ್‌ಲೈನ್‌ ಪರೀಕ್ಷೆ ನಡೆಸಿದ ಅನುಭವ ಹೊಂದಿಲ್ಲ. ಹಾಗೆಯೇ ಪ್ರಯೋಗಾತ್ಮಕವಾಗಿಯೂ ಇದನ್ನು ಅನುಷ್ಠಾನಗೊಳಿಸಿಲ್ಲ. ಹೀಗಿರುವಾಗ ತಕ್ಷಣಕ್ಕೆ ಆನ್‌ಲೈನ್‌ ಪರೀಕ್ಷೆ  ನಡೆಸುವ ಮಾತಿರಲಿ, ಚಿಂತಿಸುವುದು ಕೂಡ  ಸರಿಯಲ್ಲ ಎಂಬ  ಮಾತುಗಳು ಕೇಳಿ ಬಂದಿವೆ.  

ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಕಾಲೇಜು ಶಿಕ್ಷಣ ಇಲಾಖೆ  ಅಧಿಕಾರಿಗಳು, ಆನ್‌ಲೈನ್‌ ಪರೀಕ್ಷೆಯ  ಹೊಸ ಸವಾಲುಗಳನ್ನು ಎದುರಿಸಲು ಸಮರ್ಥರಿದ್ದಾರೆಯೇ ಎಂಬ ಪ್ರಶ್ನೆಗಳೂ ಶಿಕ್ಷಣ ತಜ್ಞರನ್ನು ಕಾಡತೊಡಗಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಬಹುತೇಕ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಆನ್‌ಲೈನ್‌ ಪರೀಕ್ಷೆಯನ್ನು ಅನುಷ್ಠಾನಗೊಳಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಮಾತುಗಳು  ಕೇಳಿ ಬಂದಿವೆ. 

ಕೋವಿಡ್‌ 19ರ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಆನ್‌ಲೈನ್ ಪರೀಕ್ಷೆ ನಡೆಸಲು ಮುಂದಾದರೆ ವೈಫಲ್ಯ ಕಟ್ಟಿಟ್ಟ ಬುತ್ತಿ. ಆನ್‌ಲೈನ್‌ ಪರೀಕ್ಷೆಯನ್ನು ತಕ್ಷಣಕ್ಕೆ ಅನುಷ್ಠಾನಕ್ಕೆ  ತರುವುದು ಸಾಧ್ಯವಿಲ್ಲ. ಏಕೆಂದರೆ ಈ ಬಗ್ಗೆ  ಪ್ರಾಥಮಿಕ ಅಧ್ಯಯನವೂ ನಡೆದಿಲ್ಲ. ಆನ್‌ಲೈನ್‌ ಪರೀಕ್ಷೆ ನಡೆಸಲು ಸೌಕರ್ಯವನ್ನು ಒದಗಿಸದೆಯೇ ಪರೀಕ್ಷೆ ನಡೆಸಲು ಮುಂದಾಗುವ ನಿರ್ಧಾರವೇ ವಿವೇಚನಾರಹಿತವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 

‘ಆನ್‌ಲೈನ್‌ ಮೂಲಕ ಮೌಲ್ಯಮಾಪನ ಮಾಡಿದಂತೆ ಪರೀಕ್ಷೆ ಚಟುವಟಿಕೆ ನಡೆಸಲಾಗದು. ಈ ವ್ಯವಸ್ಥೆಯಲ್ಲಿ  ಸಾಕಷ್ಟು ನಿಬಂಧನೆಗಳಿರುತ್ತವೆ.  ಭದ್ರತಾ ವಿಷಯಗಳಿರುತ್ತವೆ. ದೃಢೀಕೃತವಾಗಿಯೇ ಪರೀಕ್ಷೆ ನಡೆಸಬೇಕು. ಆನ್‌ಲೈನ್‌ ಪರೀಕ್ಷೆ ನಡೆಸುವ ವಿಚಾರವೇ ಒಂದು ಸವಾಲು. ಇದನ್ನು ತಕ್ಷಣಕ್ಕೆ  ಎದುರಿಸಲು  ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕು. ಕೋವಿಡ್‌ 19ರ ಹಿನ್ನೆಲೆಯಲ್ಲಿ ಆನ್‌ಲೈನ್‌ ಪರೀಕ್ಷೆಗೆ ಮುಂದಾಗುವುದಕ್ಕಿಂತಲೂ ಶೈಕ್ಷಣಿಕ ವರ್ಷವನ್ನು ಮುಂದೂಡಬೇಕು,’ ಎನ್ನುತ್ತಾರೆ ಶಿಕ್ಷಣ ತಜ್ಞ  ಕರಣ್‌ಕುಮಾರ್‌. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್‌ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸಿಲ್ಲ. ಕಾಲೇಜಿನ ಆವರಣದಲ್ಲಿಯೇ ಆನ್‌ಲೈನ್‌ ಪರೀಕ್ಷೆ ನಡೆಸಬೇಕು. ಕಂಪ್ಯೂಟರ್‌ ಸಲಕರಣೆಗಳು, ಅಂತರ್ಜಾಲ ವ್ಯವಸ್ಥೆ, ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸಿರಬೇಕು. ಕಾಲೇಜುಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸದೆಯೇ ಆನ್‌ಲೈನ್‌ ಪರೀಕ್ಷೆ ನಡೆಸಲು ಸಾಧ್ಯವಾಗದು ಎಂಬ ವಾದವೂ  ಮುನ್ನೆಲೆಗೆ  ಬಂದಿದೆ.  

ಅದೇ ರೀತಿ ಕೆಲ ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್‌ ತರಗತಿಗಳು ಈಗಷ್ಟೇ ಆರಂಭಗೊಂಡಿವೆ. ಆನ್‌ಲೈನ್‌ ವ್ಯವಸ್ಥೆಗೆ ವಿದ್ಯಾರ್ಥಿಗಳನ್ನು ಮೊದಲು ಮಾನಸಿಕವಾಗಿ ಒಗ್ಗಿಸುವುದು ಮಾತ್ರವಲ್ಲದೆ ಕಲಿಕೆಯ ಗುಣಮಟ್ಟವನ್ನು ಕಾಯ್ದುಕೊಂಡ ನಂತರ ಹಂತಹಂತವಾಗಿ ಪರೀಕ್ಷೆ ಚಟುವಟಿಕೆಗಳಲ್ಲಿ  ಆನ್‌ಲೈನ್‌ ವ್ಯವಸ್ಥೆಯನ್ನು ಅಳವಡಿಸಬೇಕು. ಆರಂಭಿಕ ಹಂತದಲ್ಲಿ ಸ್ನಾತಕೋತ್ತರ ತರಗತಿಗಳಲ್ಲಿ ಆನ್‌ಲೈನ್ ಪರೀಕ್ಷೆಯನ್ನು ಪ್ರಯೋಗಾತ್ಮಕವಾಗಿ ಅನುಷ್ಠಾನಗೊಳಿಸಿ, ಇದರ ಫಲಿತಾಂಶಗಳನ್ನು ಆಧರಿಸಿ ಆನ್‌ಲೈನ್‌ ಪರೀಕ್ಷೆಯನ್ನು ಹಂತಹಂತವಾಗಿ ವಿಸ್ತರಿಸಬೇಕು ಎನ್ನುತ್ತಾರೆ ವಿಶ್ರಾಂತ ಕುಲಪತಿಯೊಬ್ಬರು. 

ಆದರೆ ಉನ್ನತ ಶಿಕ್ಷಣ ಇಲಾಖೆ ಇದಾವುದನ್ನೂ ಮಾಡದೆಯೇ ವ್ಯತಿರಿಕ್ತ ಪರಿಣಾಮಗಳನ್ನೂ ಊಹಿಸದೆಯೇ ಆನ್‌ಲೈನ್ ಪರೀಕ್ಷೆ ನಡೆಸುವ ಹೊಸ ಸವಾಲನ್ನು ಎದುರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಒಂದು ವೇಳೆ ಇದನ್ನೂ ಲೆಕ್ಕಿಸದೆಯೇ ಆನ್‌ಲೈನ್ ಪರೀಕ್ಷೆ ನಡೆಸಲು ಮುಂದಾಗಿದ್ದೇ ಆದಲ್ಲಿ ಇಡೀ ಶೈಕ್ಷಣಿಕ ವ್ಯವಸ್ಥೆಯೇ ಕುಸಿಯಲಿದೆ ಎಂಬ  ಅಭಿಪ್ರಾಯಗಳು ಕೇಳಿ ಬಂದಿವೆ. 

ಆನ್‌ಲೈನ್‌ ಪರೀಕ್ಷೆ ಕ್ರಮ ಏನಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾತ್ರ ಯಶಸ್ಸು ಕಂಡಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ವಸ್ತುನಿಷ್ಠ ಪ್ರಶ್ನೆಗಳಿಗೆ ಮಾತ್ರ ಸೀಮಿತವಾಗಿದೆಯೇ ವಿನಃ ದೀರ್ಘ ಉತ್ತರ ಅಥವಾ ಪ್ರಾಯೋಗಿಕ  ಪರೀಕ್ಷೆಗಳಿಗೆ ಅನ್ವಯಿಸಲು  ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳಲ್ಲಿರುವ ಆಡಳಿತ ಮಂಡಳಿ,  ಶೈಕ್ಷಣಿಕ ಮಂಡಳಿ,  ಪರೀಕ್ಷಾ ಮಂಡಳಿಗಳು ಮತ್ತು ಕುಲಾಧಿಪತಿಗಳು  ಆನ್‌ಲೈನ್‌ ಪರೀಕ್ಷೆ ವಿಧಾನಗಳನ್ನು ಅನುಮೋದಿಸಿರಬೇಕು. 

ರಾಜ್ಯದಲ್ಲಿ ಅಂದಾಜು 6ರಿಂದ  7 ಲಕ್ಷ ಸಂಖ್ಯೆಯಲ್ಲಿ ಪದವಿ ಮತ್ತು 1 ಲಕ್ಷ  ಸಂಖ್ಯೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. 

ಉದಾಹರಣೆಗೆ 1,000 ವಿದ್ಯಾರ್ಥಿಗಳಿದ್ದರೆ ಒಂದೊಂದು ಕೊಠಡಿಯಲ್ಲಿ 40 ವಿದ್ಯಾರ್ಥಿಗಳು ಎಂದಿಟ್ಟುಕೊಂಡರೆ  25 ಕೊಠಡಿಗಳಲ್ಲಿ  ಪರೀಕ್ಷೆ ನಡೆಸಬಹುದು. ಪರೀಕ್ಷೆ ನಡೆಯುವ ಕಾಲೇಜಿನಲ್ಲಿ 1,000 ಕಂಪ್ಯೂಟರ್‌ಗಳು ಇರಬೇಕು. ಅಥವಾ 100 ಕಂಪ್ಯೂಟರ್‌ಗಳಿದ್ದಲ್ಲಿ 10 ತಂಡಗಳಲ್ಲಿ ಪರೀಕ್ಷೆ ನಡೆಸಬೇಕು. 

ಹೀಗಾದರೆ ಪ್ರತಿ ತಂಡಕ್ಕೊಂದು ಪ್ರತ್ಯೇಕ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಒಂದು ವೇಳೆ  ಕಂಪ್ಯೂಟರ್‌ಗಳು ತಾಂತ್ರಿಕ ಅಡಚಣೆಗಳು  ಉಂಟಾದಲ್ಲಿ  ಇದರಿಂದ ಬಾಧಿತರಾಗುವ  ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವ ಅಗತ್ಯವಿರುತ್ತದೆ. ಇಷ್ಟೊಂದು  ಸಿದ್ಧತೆಗಳು ವಿಶ್ವವಿದ್ಯಾಲಯಗಳಲ್ಲಿವೆಯೇ?

ಇನ್ನು ಸಿಇಟಿ ಪರೀಕ್ಷೆ ಕೂಡ ಆನ್‌ಲೈನ್‌ ಮೂಲಕ ನಡೆಯುತ್ತಿದೆ ಎಂಬ ವಾದವನ್ನು ಮುಂದೊಡ್ಡಿದರೂ ಸಿಇಟಿ ಬರೆಯುವರ ಸಂಖ್ಯೆ ಶೇ.15ರಷ್ಟು ಮಾತ್ರ ಇದೆ. ವಿಷಯಗಳ ಸಂಖ್ಯೆ ಕಡಿಮೆ ಇರುವ ಕಾರಣ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ಕಷ್ಟಕರವಲ್ಲ. ಇದು ಕೂಡ ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತದೆಯಲ್ಲದೆ, ಇದನ್ನು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. 

ಸಿಇಟಿಯಲ್ಲಿ ಕಂಡಿರುವ ಯಶಸ್ಸಿನ ಮಾದರಿಯನ್ನು ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಿಗೆ ಅನ್ವಯಿಸಲಾಗದು.  ಏಕೆಂದರೆ ಪದವಿ ಮತ್ತು ಸ್ನಾತಕೋತ್ತರ ತರಗತಿಗಳ ಒಂದು ಸೆಮಿಸ್ಟರ್‌ನಲ್ಲಿ ಕನಿಷ್ಠ 2,000 ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಬೇಕು. 

ಪ್ರತಿ ವಿಷಯಕ್ಕೂ ನಾಲ್ಕೈದು ಪ್ರಶ್ನೆಪತ್ರಿಕೆಗಳ ಮಾದರಿಗಳನ್ನಿಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಒಂದು ಸೆಮಿಸ್ಟರ್‌ಗೆ ಅಂದಾಜು 10,000 ಪ್ರಶ್ನೆಪತ್ರಿಕೆಗಳು  ಬೇಕಾಗುತ್ತದೆ. ಒಂದು ಪ್ರಶ್ನೆಪತ್ರಿಕೆ  ಸಿದ್ಧಪಡಿಸಲು 4ರಿಂದ 5  ದಿನಗಳ ಕಾಲಾವಕಾಶ ಬೇಕು.  ಇದಕ್ಕೆ ವಿಶ್ವವಿದ್ಯಾಲಯಗಳ ಪರೀಕ್ಷೆ ವಿಭಾಗವಿನ್ನೂ ಸಜ್ಜುಗೊಂಡಿಲ್ಲ.  

ನ್ಯಾಕ್‌ ಸಂಸ್ಥೆ ಇ-ಮೈಲ್‌ನಲ್ಲಿ  ಕಳಿಸುವ ಪ್ರಶ್ನಾವಳಿಗಳಿಗೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಉತ್ತರಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಆನ್‌ಲೈನ್‌ ವ್ಯವಸ್ಥೆ ಗೊತ್ತಿರುವ ಕಾರಣ ವಸ್ತುನಿಷ್ಠ ಪರೀಕ್ಷೆ ನಡೆಸಬಹುದು ಎಂದು ವಾದವನ್ನು ಮುಂದೊಡ್ಡುತ್ತಾರೆ ಪ್ರಾಧ್ಯಾಪಕರೊಬ್ಬರು. 

ಪದವಿಯ ಎರಡನೇ ಸೆಮಿಸ್ಟರ್‌ನಲ್ಲಿ (2, 4,6) ಸ್ನಾತಕೋತ್ತರ 2 ಮತ್ತು 4ನೇ ಸೆಮಿಸ್ಟರ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾದರೆ ಹಿಂದಿನ 5 ಸೆಮಿಸ್ಟರ್‌ಗಳಲ್ಲಿ ಗಳಿಸಿರುವ ಸರಾಸರಿ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 

ವಿದ್ಯಾರ್ಥಿಗಳು ಏಕಕಾಲದಲ್ಲಿ 4 ಮತ್ತು 6ನೇ ಸೆಮಿಸ್ಟರ್‌ಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೈಕಿ ಶೇ.50ರಷ್ಟು ಅನುತ್ತೀರ್ಣರಾಗುವ ಸಾಧ್ಯತೆ ಇರುವ ಕಾರಣ, ಹಿಂದಿನ 5 ಸೆಮಿಸ್ಟರ್‌ಗಳಲ್ಲಿ ಗಳಿಸಿರುವ ಸರಾಸರಿ  ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸುವುದು ಅಸಾಧ್ಯ ಎನ್ನುತ್ತಾರೆ ವಿಶ್ರಾಂತ ಕುಲಪತಿಯೊಬ್ಬರು. 

ಆನ್‌ಲೈನ್‌ ಪರೀಕ್ಷೆ ನಡೆಸಲು ಮುಂದಾದರೂ ಒಂದು ವೇಳೆ ಫಲಿತಾಂಶದಲ್ಲಿ ಶೇಕಡವಾರು  ಕಡಿಮೆಯಾದಲ್ಲಿ ವಿದ್ಯಾರ್ಥಿಗಳ ಪ್ರತಿರೋಧವನ್ನು ಸರ್ಕಾರ ಹೇಗೆ ಎದುರಿಸಲಿದೆ  ಎಂದು ಪ್ರಶ್ನಿಸುತ್ತಾರೆ ಪ್ರಾಧ್ಯಾಪಕರೊಬ್ಬರು. 

SUPPORT THE FILE

Latest News

Related Posts