ಕೊರೊನಾ; ಪಾಸ್‌ಪೋರ್ಟ್ ಹೊಂದಿರದ ಜ್ಯುಬಿಲಿಯೆಂಟ್‌ ನೌಕರ ಚೀನಾಕ್ಕೆ ಹೋಗಿದ್ದರೇ?

ಬೆಂಗಳೂರು; ನಂಜನಗೂಡು ಔಷಧ ತಯಾರಿಕೆ ಕಂಪನಿಯ ನೌಕರರಿಗೆ ಕೊರೊನಾ ವೈರಸ್‌ನ್ನು ಹರಡಿದ್ದರು ಎಂದು ಹೇಳಲಾಗಿದ್ದ ಪಿ-52 ಎಂದು ಗುರುತಿಸಲಾಗಿರುವ ನೌಕರ ರಮೇಶ್‌ ಎಂಬುವರು ಚೀನಾಕ್ಕೆ ಹೋಗಿರಲಿಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. 

ಆದರೆ ಪಿ-52  ಸೋಂಕಿತ ವ್ಯಕ್ತಿ ಚೀನಾಕ್ಕೆ ಹೋಗಿದ್ದರು ಎಂದು ಖಾಸಗಿ  ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌  ಅವರು  ಹೇಳಿಕೆ ನೀಡಿದ್ದರು. ಸುದ್ದಿಗಾರರೊಂದಿಗೆ  ಮಾತನಾಡಿದ್ದ ಶಾಸಕ ರಾಮದಾಸ್‌ ಕೂಡ ಸೋಂಕಿತ ವ್ಯಕ್ತಿಗೆ ಚೀನಾದಿಂದ ಬಂದ ಕಚ್ಚಾ ವಸ್ತುಗಳ ಬಳಕೆಯಿಂದ ಕೊರೊನಾ ಬಂದಿರಬಹುದು ಎಂದು ಶಂಕಿಸಿದ್ದರು. 

ಆದರೆ ರಮೇಶ್‌ ಅವರು ಚೀನಾಕ್ಕೆ ಹೋಗಿರಲಿಲ್ಲ ಎಂದು ಮೈಸೂರಿನ ಎಸ್ಪಿ ರಿಶ್ಯಂತ್ ರಮೇಶ್ ದೃಢಪಡಿಸಿರುವುದು ಸಚಿವ ಮತ್ತು ಶಾಸಕರ ಮಾತಿನಲ್ಲಿ ನಿಜಾಂಶವಿರಲಿಲ್ಲ ಎಂಬುದನ್ನು ಎತ್ತಿ ಹಿಡಿದಿದೆ. 

ಔಷಧ ತಯಾರಿಕೆ ಕಂಪನಿಯ ಗುಣಮಟ್ಟ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್‌ ಅವರಿಂದಲೇ 5 ಮಂದಿಗೆ ಕರೊನಾ ವೈರಸ್‌ ಹರಡಿತ್ತು ಎಂದು ಹೇಳಲಾಗಿತ್ತು. ಅಲ್ಲದೆ ಇವರು ಯಾವುದೇ ಪಾಸ್‌ಪೋರ್ಟ್‌ನ್ನು ಹೊಂದಿಲ್ಲ ಮತ್ತು ಚೀನಾಕ್ಕೆ ಹೋಗಿರಲಿಲ್ಲ ಎಂದು ಖಾಸಗಿ ಸುದ್ದಿ ಜಾಲತಾಣವೊಂದು ಬಹಿರಂಗಪಡಿಸಿದೆ.

ಖಾಸಗಿ ಸುದ್ದಿ ಸಂಸ್ಥೆಯೊಂದರ ಪ್ರತಿನಿಧಿ ಜತೆ ಮಾತನಾಡಿರುವ ರಮೇಶ್‌, ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳು ಕೇವಲ ಊಹೆಗಳಿಂದ ಕೂಡಿದೆ. ‘ನನ್ನನ್ನು ದೂಷಿಸಿರುವ ಅನೇಕ ಸುದ್ದಿ ಲೇಖನಗಳನ್ನು ಓದಿದ್ದೇನೆ. ನಾನು ಚೀನಾಕ್ಕೆ ಹೋಗಿದ್ದೆ ಎಂದು ಒಂದು ವೆಬ್‌ಸೈಟ್‌ನಲ್ಲಿಯೂ ಸುದ್ದಿ ಪ್ರಕಟವಾಗಿದ್ದನ್ನು ಓದಿದ್ದೇನೆ. ಆದರೆ ಅದಕ್ಕೆ ನನ್ನ ಕಂಪನಿ ಸ್ಪಷ್ಟೀಕರಣವನ್ನೂ ಕೊಟ್ಟಿದೆ. ಕರೊನಾ ವೈರಸ್‌ ನನಗೆ ಹೇಗೆ ತಗುಲಿತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನು  ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಅದೇ ರೀತಿ ಈ ವಿಚಾರದಲ್ಲಿ ನಾನು ಸುಳ್ಳು ಹೇಳುತ್ತಿಲ್ಲ,’ ಎಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಪಿ-52 ಸೋಂಕಿತ ರಮೇಶ್‌ ಅವರಿಂದಲೇ ಕಂಪನಿಯ ಐವರಿಗೆ ಕರೊನಾ ವೈರಸ್‌ ಹರಡಿತ್ತು ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಸೋಂಕಿತನಿಗೆ ಕೊರೊನಾ ವೈರಸ್‌ ಹೇಗೆ ಬಂತೆಂಬುದರ ಕುರಿತಾಗಿ ಸರ್ವೇ ನಡೆದಿತ್ತು. ಆತನ ಸಂಪರ್ಕದಲ್ಲಿದ್ದ 1 ಸಾವಿರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. 

“ನಾನು ಎಂದಿಗೂ ಚೀನಾಕ್ಕೆ ಪ್ರಯಾಣಿಸಿಲ್ಲ. ನನ್ನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ನನ್ನ ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಕಾರ್ಡ್ ಮಾತ್ರ ನನ್ನ ಬಳಿ ಇದೆ” ಎಂದು ಪ್ರತಿಕ್ರಿಯಿಸಿರುವ  ರಮೇಶ್‌, ಚೀನಾದಿಂದ ಬಂದಿರುವ ಕಚ್ಛಾಸಾಮಾಗ್ರಿ ಬಹುಶಃ ಕಲುಷಿತಗೊಂಡಿರಬಹುದು ಎಂದು ತಿಳಿಸಿದ್ದಾರೆ.  

‘ನಾನು ಪ್ರತಿದಿನ ಆಫೀಸ್‌ ವಾಹನದಲ್ಲಿ ಹೋಗುತ್ತೇನೆ. ನಾನು ವಿದೇಶಕ್ಕೆ ಹೋಗಿಲ್ಲ. ನಾನು ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ ಪಾರ್ಟಿಗಳಿಗೂ ಹೋಗುವುದಿಲ್ಲ. ನನಗೆ ಮೂರು ವರ್ಷದ ಮಗ ಮತ್ತು ಹೆಂಡತಿ ಇದ್ದಾರೆ. ಕೆಲಸ ಮುಗಿದ ಬಳಿಕ ನಾನು ಮನೆಗೆ ಮರಳುತ್ತೇನೆ,’ ಎಂದು ಹೇಳುವ ರಮೇಶ್‌  ಅವರು, ವೈರಸ್‌ನ್ನು ನಾನು ಹೇಗೆ ಪಡೆದುಕೊಂಡೆ  ಎಂಬುದು ನನಗೆ ಗೊತ್ತಿದ್ದರೆ ಖಂಡಿತವಾಗಿ ನಾನು ಅಧಿಕಾರಿಗಳಿಗೆ ತಿಳಿಸುತ್ತಿದ್ದೆ. ಸುಳ್ಳು ಹೇಳಲು ನನಗೆ ಯಾವುದೇ ಕಾರಣಗಳೂ  ಇಲ್ಲ,’ ಎಂದು ನೋವಿನಿಂದಲೇ ಹೇಳುತ್ತಾರೆ.  

ಖಾಸಗಿ  ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದ  ಪ್ರಕಾರ ರಮೇಶ್ ಅವರ ಕೆಲಸದ ಸ್ವರೂಪವು ಸರಕುಗಳೊಂದಿಗೆ ವ್ಯವಹರಿಸುವುದನ್ನು ಒಳಗೊಂಡಿಲ್ಲ. ಗುಣಮಟ್ಟದ ಭರವಸೆ ವಿಭಾಗದ ದಸ್ತಾವೇಜು ವಿಭಾಗದಲ್ಲಿ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕಾಗದಪತ್ರಗಳನ್ನು ಪರಿಶೀಲಿಸುವುದು ಮತ್ತು ತನಿಖೆ ನಡೆಸುವವರಿಗೆ ದಾಖಲೆಗಳನ್ನು ಹಸ್ತಾಂತರಿಸುವುದಷ್ಟೇ ಅವರ ಕೆಲಸವಾಗಿದೆ. 

ಮಾರ್ಚ್ 13 ರ ಬೆಳಿಗ್ಗೆ ರಮೇಶ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಕಚೇರಿಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ‘ನನಗೆ  ಜ್ವರ  ಬಂದಂತೆ ಭಾಸವಾಯಿತು. ಮನೆಗೆ  ಹಿಂದಿರುಗಿದ ನಂತರ ನನ್ನ ಕುಟುಂಬ ವೈದ್ಯರನ್ನು ಭೇಟಿಯಾಗಿದ್ದೆ.  ಅವರು ಜ್ವರಕ್ಕೆ ನೀಡಿದ್ದ ಮಾತ್ರೆಗಳನ್ನು ತೆಗೆದುಕೊಂಡೆ. ಮಾರ್ಚ್ 14 ಮತ್ತು 15 ಶನಿವಾರ ಮತ್ತು ಭಾನುವಾರವಾಗಿದ್ದರಿಂದ ಮನೆಯಲ್ಲಿದ್ದೆನೆ  ಹೊರತು, ನಾನು  ಎಲ್ಲಿಯೂ ಹೋಗಲಿಲ್ಲ,’ ಎಂದು ಸುದ್ದಿಸಂಸ್ಥೆಗೆ ವಿವರಿಸಿದ್ದಾರೆ.  

ಮಾರ್ಚ್ 16ರಂದು ಪುನಃ ಕಚೇರಿಗೆ ಎಂದಿನಂತೆ ರಮೇಶ್‌  ತೆರಳಿದ್ದರು. ಆ ಸಮಯದಲ್ಲಿ ಅವರಿಗೆ ಜ್ವರ ಇರಲಿಲ್ಲ. ಮಾರ್ಚ್ 17ರಂದು ಮೈಸೂರಿನಲ್ಲಿ ಗೃಹ ಪ್ರವೇಶಕ್ಕೆ ತಮ್ಮ ನಾಲ್ವರು ಸಹದ್ಯೋಗಿಗಳೊಂದಿಗೆ ತೆರಳಿದ್ದರು. ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗಿದ  ನಂತರ ಪುನಃ ಆತಂಕಕ್ಕೊಳಗಾಗಿದ್ದರು. ಮಾರ್ಚ್ 19ರಂದು ಅವರು ಪುನಃ ವೈದ್ಯರ ಬಳಿಗೆ ಹೋಗಿದ್ದರು.  ಅವರ  ಸೂಚನೆಯಂತೆ ರಕ್ತ ಪರೀಕ್ಷೆ ಮಾಡಿಸಿದ್ದರು ಎಂಬ ಮಾಹಿತಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಿಂದ  ತಿಳಿದು ಬಂದಿದೆ.  

ರಮೇಶ್‌ ಅವರು ತಮ್ಮ ಅತ್ತೆ ಸೂಚನೆ ಮೇರೆಗೆ ಮಾರ್ಚ್‌ 20ರಂದು ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ಹೋಗಿದ್ದರು. ಎದೆಯ ಎಕ್ಸರೇ ಮಾಡಿಸಿದ ನಂತರ  ಅವರು  ಮಾರ್ಚ್‌ 21ರಂದು ಅದೇ ಆಸ್ಪತ್ರೆಯಲ್ಲಿ ದಾಖಲಾದರು. 

“ಮಾರ್ಚ್ 22 ಜನತಾ ಕರ್ಫ್ಯೂ ಆಗಿತ್ತು. ಅಲ್ಲಿನ ವೈದ್ಯರು ಮತ್ತೊಂದು ಎಕ್ಸರೇ  ಮಾಡಿದರು. ಆ ವೇಳೆಯಲ್ಲಿ ನ್ಯುಮೋನಿಯಾ ಎಂದು ಗುರುತಿಸಿದ್ದ ವೈದ್ಯರು ಗಂಟಲಿನ ದ್ರವದ ಮಾದರಿ ಪಡೆದರಲ್ಲದೆ, ಕೋವಿಡ್‌ 19 ಸೋಂಕಿರಬಹುದು ಎಂದು ನನಗೆ ಮಾರ್ಚ್‌ 26ರಂದು ತಿಳಿಸಿದರು,’ ಎಂದು ರಮೇಶ್‌ ಅವರು ವಿವರಿಸಿದ್ದಾರೆ. 

ಇದಲ್ಲದೆ  ರಮೇಶ್‌  ಅವರು ಅನಾರೋಗ್ಯಕ್ಕೀಡಾಗುವ ಮುನ್ನ ತಮ್ಮ ಸಂಬಂಧಿಕರಿರೊಬ್ಬರ ಜಮೀನಿನ ಖಾತೆ ದಾಖಲೆಗಳನ್ನು ಪಡೆಯಲು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕು ಕಚೇರಿಗೆ ತೆರಳಿದ್ದರು.  ‘ಇದಲ್ಲದೆ ನಾನು ಬೇರೆ ಎಲ್ಲಿಗೂ ಪ್ರಯಾಣಿಸಿಲ್ಲ.  ಬೆಳಗ್ಗೆ  ಕೆಲಸಕ್ಕೆ ಹೋಗಿ ಸಂಜೆ  6 ಅಥವಾ 6-30ಕ್ಕೆ ಮನೆಗೆ ಬರುತ್ತೇನೆ.  ಈ ಅವಧಿಯಲ್ಲಿ ನಾನು ಯಾವ ಸ್ನೇಹಿತರನ್ನೂ ಭೇಟಿ ಮಾಡಿಲ್ಲ. ಹಾಗೆಯೇ ರಜಾದಿನಗಳಿದ್ದರೂ ಬೇರೆಲ್ಲೂ ಹೋಗಿಲ್ಲ,’ ಎಂದು ಇನ್ನಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.  

ಮೈಸೂರಿನಲ್ಲಿ ನಡೆದಿದ್ದ ಗೃಹ ಪ್ರವೇಶಕ್ಕೆ ರಮೇಶ್‌  ಅವರೊಂದಿಗೆ ತೆರಳಿದ್ದ ಇಬ್ಬರ  ಸ್ನೇಹಿತರ  ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಅವರ  ಪತ್ನಿ(27) ಮಾವ, ಅತ್ತೆ ಮತ್ತು ಮಗ ಕೂಡ ಪರೀಕ್ಷೆಗೆ ಒಳಗಾಗಿದ್ದರು.  ಅವರ  3  ವರ್ಷದ ಮಗ ಮತ್ತು ಅತ್ತೆ ಯಾವುದೇ  ಸೋಂಕು ಕಂಡು ಬಂದಿರಲಿಲ್ಲ. ಹೀಗಾಗಿ ಅವರ ಅವರ  ಪತ್ನಿ ಮತ್ತು ಅತ್ತೆಯನ್ನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. 

ಈ ಬೆಳವಣಿಗೆ ನಡೆಯುತ್ತಿರುವ  ಸಂದರ್ಭದಲ್ಲೇ ಜ್ಯುಬಿಲಿಯಂಟ್‌ ಲೈಫ್‌ ಸೈನ್ಸ್‌ ಕಂಪನಿ ಕೂಡ ರಮೇಶ್‌ ಅವರು ಚೀನಾಕ್ಕೆ ಹೋಗಿರಲಿಲ್ಲ ಎಂದು ಏಪ್ರಿಲ್‌ 16ರಂದು  ಸ್ಪಷ್ಟಪಡಿಸಿತ್ತು. ಆದರೂ ರಮೇಶ್‌ ಅವರ ಮೇಲೆ ಕಳಂಕ ಹೊರಿಸಲಾಗಿತ್ತು. 

ರಮೇಶ್ ಮೇಲಿನ ಕಳಂಕದಿಂದ ಅವರ ಅತ್ತೆ ಆಘಾತಗಳಿಗೆ ಒಳಗಾಗಿದ್ದರು. 63 ವರ್ಷದ ಅವರ ಅತ್ತೆ ತನ್ನ ಮೂರು ವರ್ಷದ ಮೊಮ್ಮಗನನ್ನು ಮನೆಯಲ್ಲಿ ಏಕಾಂಗಿಯಾಗಿ ನೋಡಿಕೊಂಡಿದ್ದರು. ಈ ಕಳಂಕ, ತನ್ನ ಕುಟುಂಬಕ್ಕೆ “ದುಃಸ್ವಪ್ನ”ದಂತಿತ್ತು  ಎಂದು ಹೇಳಿಕೊಂಡಿದ್ದಾರೆ. 

‘ಕೋವಿಡ್‌ 19 ತಮಗೆ ಸೋಂಕಬಹುದು ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನ ಸೊಸೆ ಎಲ್ಲಿಯೂ ಹೋಗಲಿಲ್ಲ. ರಮೇಶ್‌ಗೆ  ವೈರಸ್ ಹರಡಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಅವನಿಗೆ ಇದು ಹೇಗೆ ಸೋಂಕಿತು ಎಂಬುದು ನಮಗೂ ತಿಳಿದಿಲ್ಲ,’ ಎನ್ನುತ್ತಾರೆ   ರಮೇಶ್ ಅವರ ಅತ್ತೆ.

ಈ ಹೊತ್ತಿನಲ್ಲಿ ಸುದ್ದಿ ಮಾಧ್ಯಮಗಳು ಕೂಡ ತಮ್ಮನ್ನು ತಪ್ಪಾಗಿ ಬಿಂಬಿಸಿದವು ಎಂದು ಹೇಳುವ ರಮೇಶ್‌ ಅವರ ಅತ್ತೆ, ನನ್ನ ಸೊಸೆ ಚೀನಾಕ್ಕೆ ಹೋಗಿದ್ದರು ಎಂದರೆ, ಕೆಲ ಮಾಧ್ಯಮಗಳು ಕೇರಳಕ್ಕೆ ಹೋಗಿದ್ದರು ಎಂದು ಪ್ರಸಾರ ಮಾಡಿದ್ದವು. ಆದರೆ ಇದಾವುದೂ ನಿಜವಲ್ಲ ಎನ್ನುತ್ತಾರೆ.

ನಂಜನಗೂಡಿನ ಒಂದೇ ಸ್ಥಳದಲ್ಲಿ‌ ಹೆಚ್ಚು ಕೊರೊನಾ ವೈರಸ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ, ನಂಜನಗೂಡು ಪಟ್ಟಣವನ್ನು ‘ಕಂಟೇನರ್’ ಎಂದು ಪರಿಗಣಿಸಲಾಗಿದೆ. ನಂಜನಗೂಡನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳು, ಹಾಲು, ತರಕಾರಿ, ದಿನಸಿ ಔಷಧಿಗೆ ಮಾತ್ರ ಅವಕಾಶ ಒದಗಿಸಲಾಗಿದೆ.

ನಂಜನಗೂಡಿನ ಒಂದು ಸಾವಿರಕ್ಕೂ ಅಧಿಕ ಜನರು ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ. ಅವರನ್ನು ಮನೆಯಲ್ಲಿಯೂ ಇರಲು ಬಿಟ್ಟಿಲ್ಲ. ಎಲ್ಲರನ್ನೂ ಫೆಸಿಲಿಟಿ ಕ್ವಾರಂಟೈನ್‌ಗೆ ವರ್ಗಾಯಿಸಲಾಗಿದೆ. ಹಾಸ್ಟೆಲ್, ಶಾಲೆ, ಛತ್ರ ಹೀಗೆ ಹಲವು ಕಡೆ ಸೌಲಭ್ಯ ಸಮೇತ ಉಳಿಸಲಾಗಿದೆ. 

 

SUPPORT THE FILE

Latest News

Related Posts