‘ದಿ ಫೈಲ್‌’ ವರದಿಗೆ ಸ್ಪಂದನ; ಲೈಂಗಿಕ ಕಾರ್ಯಕರ್ತೆಯರ ಸಂಕಷ್ಟ ಆಲಿಸಲು ಮುಖ್ಯಮಂತ್ರಿಗೆ ಪತ್ರ

ಬೆಂಗಳೂರು; ಲಾಕ್‌ಡೌನ್‌ ವಿಸ್ತರಣೆ ಆಗಿರುವುದರಿಂದ ಸಂಕಷ್ಟಗಳಿಗೀಡಾಗಿರುವ  ರಾಜ್ಯದ ಲೈಂಗಿಕ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ  ನಾಗಲಕ್ಷ್ಮಿಬಾಯಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 

ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟ ಆಲಿಸದ ಸರ್ಕಾರ  ಎಂದು ‘ದಿ ಫೈಲ್‌’ ಏಪ್ರಿಲ್‌ 17ರಂದು ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿರುವ ನಾಗಲಕ್ಷ್ಮಿಬಾಯಿ ಅವರು, ‘ದಿ ಫೈಲ್‌’ ವರದಿಯನ್ನು ಉಲ್ಲೇಖಿಸಿ  ಕರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆ ಆದ ದಿನದಿಂದಲೂ ಸಂಕಷ್ಟದಲ್ಲಿ ಮುಳುಗಿದ್ದಾರೆ. ನೆರೆಯ ರಾಜ್ಯಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ  ಅಲ್ಲಿನ ಸರ್ಕಾರಗಳು ಕಾಳಜಿ ವಹಿಸಿರುವಂತೆಯೇ ರಾಜ್ಯ ಬಿಜೆಪಿ ಸರ್ಕಾರವೂ ಕಾಳಜಿ  ವಹಿಸಬೇಕು  ಎಂದು ಪತ್ರದಲ್ಲಿ ಕೋರಿದ್ದಾರೆ. 

‘ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ನೋಂದಣಿ  ಮಾಡಿಸಿಕೊಂಡಿದ್ದಾರೆ. ಅಲ್ಲದೆ,  ಅಂದಾಜು 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿ ಎಚ್‌ಐವಿ ಸೋಂಕಿನಿಂದ ನರಳುತ್ತಿದ್ದಾರೆ.  ಅಲ್ಲದೆ  ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಇವರು ಲಾಕ್‌ಡೌನ್‌ನಿಂದಾಗಿ  ಕಂಗಾಲಾಗಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 

ಬೆಂಗಳೂರು ನಗರವೊಂದರಲ್ಲಿ ಸುಮಾರು 23,327, ಬೆಳಗಾವಿಯಲ್ಲಿ 11,644, ವಿಜಯಪುರದಲ್ಲಿ  6,366, ಬಳ್ಳಾರಿಯಲ್ಲಿ 6,5200, ಕೋಲಾರದಲ್ಲಿ 2,000, ರಾಯಚೂರಿನಲ್ಲಿ 5,000,  ಚಿತ್ರದುರ್ಗದಲ್ಲಿ 4,868, ಧಾರವಾಡದಲ್ಲಿ 5,841, ಬಾಗಲಕೋಟೆಯಲ್ಲಿ 6,067 ಸೇರಿದಂತೆ ರಾಜ್ಯದಲ್ಲಿ ಶೇ.33ರಷ್ಟು ಲೈಂಗಿಕ ಕಾರ್ಯಕರ್ತೆಯರಿರುವುದು ನಾಗಲಕ್ಷ್ಮಿಬಾಯಿ ಅವರು ಬರೆದಿರುವ ಪತ್ರದಿಂದ ಗೊತ್ತಾಗಿದೆ. 

‘ಅನಿವಾರ್ಯ ಕಾರಣಗಳಿಂಂದ  ಲೈಂಗಿಕ  ಕಾರ್ಯಕರ್ತೆಯಾಗಿರುವವರ  ಪೈಕಿ ಇವರಲ್ಲಿ ಶೇ.40ರಷ್ಟು ವಿವಾಹಿತ ಮಹಿಳೆಯಲ್ಲದೆ  ಬಾಲಕಿಯರೂ ಇದ್ದಾರೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ  ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಲಾಕ್‌ಡೌನ್‌ ಅವಧಿಯಲ್ಲಿ ಇವರು  ಅನುಭವಿಸುತ್ತಿರುವ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ,’ ಎಂದು ಪತ್ರದಲ್ಲಿ ಮುಖ್ಯಮಂತ್ರಿಯ ಗಮನ ಸೆಳೆದಿದ್ದಾರೆ. 

ಲಾಕ್‌ಡೌನ್‌ ಅವಧಿ ಮೇ 3ರವರೆಗೆ ವಿಸ್ತರಣೆಯಾಗಿರುವುದರಿಂದ ಲೈಂಗಿಕ ಕಾರ್ಯಕರ್ತೆಯರ ಆರೋಗ್ಯದ ಮೇಲೂ  ಗಂಭೀರ ಪರಿಣಾಮ ಬೀರಿದೆ.  ಎಚ್‌ಐವಿ/ಏಡ್ಸ್‌ನಿಂದ  ಬಳಲುತ್ತಿರುವ ಲೈಂಗಿಕ ಕಾರ್ಯಕರ್ತೆಯರ ಬಳಿ ಔಷಧ ಖರೀದಿಸಲೂ ಹಣವಿಲ್ಲದ  ಸ್ಥಿತಿ  ಎದುರಾಗಿದೆ ಎಂದು ದಿ ಫೈಲ್ ವರದಿ ಪ್ರಕಟಿಸಿತ್ತು. 

ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ವಿವಿಧೆಡೆ ಇರುವ  ಲೈಂಗಿಕ ಕಾರ್ಯಕರ್ತೆಯರು, ಲಾಕ್‌ಡೌನ್‌ನಿಂದ  ಒಪ್ಪೊತ್ತಿನ ಗಂಜಿಗೆ ಪರದಾಡುತ್ತಿದ್ದರೂ ಕರ್ನಾಟಕದ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಕರ್ನಾಟಕ  ರಾಜ್ಯ ಮಹಿಳಾ ಆಯೋಗ  ಈವರೆವಿಗೂ ಲೈಂಗಿಕ ಕಾರ್ಯಕರ್ತರ ಸಂಕಷ್ಟವನ್ನು ಆಲಿಸಿಲ್ಲ. ಆಹಾರ ಪಡಿತರ  ಸೇರಿದಂತೆ  ಔಷಧ ಖರೀದಿಗೆ ಧನ ಸಹಾಯವನ್ನೂ ಘೋಷಿಸದಿರುವುದರ ಗಮನ  ಸೆಳೆದಿತ್ತು. 

ಲೈಂಗಿಕ ಕಾರ್ಯಕರ್ತೆಯರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಬೇಕು ಮತ್ತು  ನಾಗರಿಕ ಸಮಾಜ ಸಂಸ್ಥೆಯ ನೆರವಿನೊಂದಿಗೆ ಆಹಾರ ಪಡಿತರ ವಿತರಿಸಲು ಮುಂದಾಗಬೇಕು. ಅಗತ್ಯವಿದ್ದಲ್ಲಿ ಶಿಥಿಲವಾದ ವಸತಿಯಲ್ಲಿದ್ದವರನ್ನು ಸ್ಥಳಾಂತರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು  ಎಂದು ರಾಷ್ಟ್ರೀಯ ಮಹಿಳಾ ಆಯೋಗವು 2020ರ ಏಪ್ರಿಲ್‌ 15ರಂದು ಕರ್ನಾಟಕ ಸೇರಿದಂತೆ ಪಶ್ಚಿಮ ಬಂಗಾಳ, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆದಿತ್ತು. 

ಮಹಾರಾಷ್ಟ್ರದ ಮಹಿಳಾ ಮತ್ತು ಕಲ್ಯಾಣ ಸಚಿವರಾದ  ಯಶೋಮತಿ ಚಂದ್ರಕಾಂತ್‌ ಠಾಕೂರ್‌ ಈಗಾಗಲೇ ಅಲ್ಲಿನ ಮುಖ್ಯಮಂತ್ರಿ  ಉದ್ಧವ್‌ ಠಾಕ್ರೆ ಅವರೊಂದಿಗೆ ಚರ್ಚಿಸುವ ಮೂಲಕ ಲೈಂಗಿಕ ಕಾರ್ಯಕರ್ತೆಯರ ಸಂಕಷ್ಟಗಳಿಗೆ  ಕಿವಿಯಾಗಿದ್ದರು. 

ಅದೇ ರೀತಿ ಪಶ್ಚಿಮ ಬಂಗಾಳದ ಮಹಿಳಾ ಆಯೋಗ ಲೈಂಗಿಕ ಕಾರ್ಯಕರ್ತೆಯರ ಸಮುದಾಯಕ್ಕೆ ಸಹಾಯ ಮಾಡಲು  ಮುಂದಾಗಿತ್ತು.  ಧನ ಸಹಾಯ ನೀಡಲು ತಕ್ಷಣಕ್ಕೆ ಸಾಧ್ಯವಾಗದಿದ್ದರೂ ಪಡಿತರ ಸೇರಿದಂತೆ ಇನ್ನಿತರೆ ನೆರವು ನೀಡಲಿದೆ ಎಂದು ಆಯೋಗದ ಅಧ್ಯಕ್ಷೆ ಲೀನಾ ಗಂಗೋಪಾಧ್ಯಾಯ ಅವರು ಸ್ಥಳೀಯ ಸುದ್ದಿಸಂಸ್ಥೆಯೊಂದಕ್ಕೆ  ಪ್ರತಿಕ್ರಿಯಿಸಿದ್ದರು. 

ಹಾಗೆಯೇ ಪಶ್ಚಿಮ ಬಂಗಾಳದ ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ರಾಜ್ಯ ಸಚಿವ ಶಶಿ ಪಂಜಾ ಕೂಡ 1,500 ಸಂಖ್ಯೆಯ ಲೈಂಗಿಕ  ಕಾರ್ಯಕರ್ತರಿಗೆ ಪಡಿತರ ಮತ್ತು ಮುಖಗವಸುಗಳನ್ನು ವಿತರಿಸಿದ್ದರು. 

ಸಾಮಾಜಿಕ  ಅಂತರ ಕಾಪಾಡಿಕೊಳ್ಳಬೇಕು ಎಂಬ ಸರ್ಕಾರದ ಸೂಚನೆಯನ್ನು ಪಾಲಿಸುತ್ತಿರುವ ಲೈಂಗಿಕ  ಕಾರ್ಯಕರ್ತೆಯರಿಗೆ ಆಹಾರ ಪಡಿತರವನ್ನು ಪೂರೈಸುವ ಜವಾಬ್ದಾರಿಯನ್ನು  ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸುತ್ತಿಲ್ಲ ಎಂದು ‘ದಿ ಫೈಲ್‌’ ಗಮನ ಸೆಳೆದಿತ್ತು. 

ಕೊರೊನಾ ವೈರಸ್‌ನ್ನು ತಡೆಗಟ್ಟುವ ಭಾಗವಾಗಿ ಸಂತ್ರಸ್ತರಿಗೆ ಹಣಕಾಸು  ನೆರವು ನೀಡಲು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿಯಲ್ಲಿ ತಿಂಗಳಿಗೆ 500 ರು.ಗಳನ್ನು ಜನ್‌ಧನ್‌ ಅಡಿಯಲ್ಲಿ ಮಹಿಳಾ ಖಾತೆಗಳಿಗೆ 3 ತಿಂಗಳವರೆಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ 2020ರ  ಮಾರ್ಚ್ 26ರಂದು ಘೋಷಿಸಿತ್ತು. 

ಬೆರಳಣಿಕೆಯಷ್ಟು ಲೈಂಗಿಕ ಕಾರ್ಯಕರ್ತರ ಬಳಿ ಜನಧನ್‌  ಖಾತೆ ಇದ್ದರೆ, ಬಹುತೇಕ ಲೈಂಗಿಕ ಕಾರ್ಯಕರ್ತರ ಬಳಿ ಜನಧನ್‌ ಖಾತೆಯೇ ಇಲ್ಲ. ಹೀಗಾಗಿ ಅವರ ಪರಿಸ್ಥಿತಿ ಇನ್ನಷ್ಟೂ ಶೋಚನೀಯವಾಗಿದೆ.

ಮಹಾರಾಷ್ಟ್ರದ ಅರ್ಧದಷ್ಟು ಲೈಂಗಿಕ ಕಾರ್ಯಕರ್ತರು ಬದುಕುಳಿಯಲು ಲೈಂಗಿಕ ಕೆಲಸಗಳನ್ನೇ ಅವಲಂಬಿಸಿದ್ದಾರೆ. ಆದರೆ ಯಾವುದೇ ವಿಮೆ ಹೊಂದಿಲ್ಲ. ತಮಿಳುನಾಡಿನ 2/5ರಷ್ಟು ಮತ್ತು ಕರ್ನಾಟಕದಲ್ಲಿ 1/5ರಷ್ಟು ಲೈಂಗಿಕ ಕಾರ್ಯಕರ್ತರು ಕೂಡ ಇದೇ ಸ್ಥಿತಿಯಲ್ಲಿದ್ದಾರೆ. 

ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವಾಸಿಸುತ್ತಿರುವ ಶೇ. 31ರಷ್ಟು  ಲೈಂಗಿಕ ಕಾರ್ಯಕರ್ತರು ಆರ್ಥಿಕವಾಗಿ ಅಸುರಕ್ಷಿತರು. ಹೀಗಾಗಿ ಅವರು ಬಡತನದಲ್ಲಷ್ಟೇ ಇಲ್ಲ ಪದೇ ಪದೇ ಅನಾರೋಗ್ಯಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಚಿಕಿತ್ಸೆ ಪಡೆಯಲು ಕೂಡ ಅವರ ಬಳಿ ಸಾಕಷ್ಟು ಹಣವಿಲ್ಲದಂತಾಗಿದೆ.   

‘ನಾವು ಹಲವು  ಲೈಂಗಿಕ ಕಾರ್ಯಕರ್ತರೊಂದಿಗೆ ಮಾತನಾಡಿದ್ದೇವೆ. ಅವರ ಬಳಿ  ಬಾಡಿಗೆ ಪಾವತಿಸಲು ಮತ್ತು ಅವರ ಕುಟುಂಬಗಳಿಗೆ ಸಾಕಷ್ಟು ಆಹಾರವನ್ನು ಖರೀದಿಸಲು ಹಣದ ಕೊರತೆಯೂ ಎದುರಾಗಿದೆ,’ ಎಂದು ಎನ್‌ಜಿಒ ಪ್ರತಿನಿಧಿಯೊಬ್ಬರ ಬಳಿ ಅಳಲು  ತೋಡಿಕೊಂಡಿದ್ದರು. 

ಭಾರತದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. 2014 ರ ಸರ್ಕಾರದ ಅಂದಾಜಿನ ಪ್ರಕಾರ ಭಾರತದಲ್ಲಿ 2.8 ಮಿಲಿಯನ್ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಇವರಲ್ಲಿ  ಹೆಚ್ಚಿನವರು ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿದ್ದಾರೆ.  ವಿಶ್ವಸಂಸ್ಥೆ 2016 ರಲ್ಲಿ ಮಾಡಿದ್ದ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 657,800 ಲೈಂಗಿಕ ಕಾರ್ಯಕರ್ತೆಯರಿದ್ದಾರೆ.

the fil favicon

SUPPORT THE FILE

Latest News

Related Posts