ಕೊರೊನಾ ನಡುವೆಯೇ ಕೆಪಿಸಿಎಲ್‌ನಲ್ಲಿ 2,400 ಕೋಟಿ ರು. ಟೆಂಡರ್‌; ಭಾರೀ ಅವ್ಯವಹಾರ!

ಬೆಂಗಳೂರು; ಬಳ್ಳಾರಿ, ರಾಯಚೂರು,ಯರಮರಸ್‌ ವಿದ್ಯುತ್‌ ಸ್ಥಾವರಗಳ ಚಿಲುಮೆ ಆಧುನೀಕರಣ ಯೋಜನೆ ಟೆಂಡರ್‌ ನೀಡಿಕೆಯಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿಯಮ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ. 

ತಾಂತ್ರಿಕ ಸಮಿತಿ ಅನರ್ಹಗೊಳಿಸಿರುವ ಖಾಸಗಿ  ಕಂಪನಿ ಶರ್ಪೋಜಿ ಅಂಡ್‌ ಫಾಲ್ಲೋನ್‌ಜಿ ಪರವಾಗಿಯೇ ಅಂದಾಜು 2,400 ಕೋಟಿ ರು. ಮೌಲ್ಯದ ಟೆಂಡರ್‌ ನೀಡಲು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಈ ಟೆಂಡರ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿವೆ. 

ಈ ಕುರಿತು ಹೈಕೋರ್ಟ್‌ ವಕೀಲ ನಟರಾಜ್‌  ಶರ್ಮಾ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) 2020ರ ಏಪ್ರಿಲ್‌ 17ರಂದು ದಾಖಲೆ ಸಮೇತ ದೂರು ನೀಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 13(ಡಿ) ಐಪಿಸಿ  420, 463, 464, 465, 468, 470,471 ಪ್ರಕಾರ ಶಿಕ್ಷಿಸಬೇಕು  ಎಂದು ದೂರಿನಲ್ಲಿ ಕೋರಲಾಗಿದೆ.  ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 

ವಿದ್ಯುತ್‌ ಸ್ಥಾವರಗಳ ಚಿಲುಮೆ ಆಧುನೀಕರಣಕ್ಕೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಭಾಗವಹಿಸಿ ಅರ್ಹತೆ ಪಡೆದಿದ್ದವು. ಆದರೆ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ವಿ ಪೊನ್ನುರಾಜ್‌ ಅವರು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಬದಿಗೊತ್ತಿ ಅರ್ಹತೆ ಇಲ್ಲದ ಖಾಸಗಿ ಕಂಪನಿಗೆ ಟೆಂಡರ್‌ ನೀಡಲು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ನಟರಾಜ್‌ ಶರ್ಮಾ ಅವರು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ. 

ಈ ದೂರನ್ನು ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು ಈ ಬಗ್ಗೆ ಕೆಪಿಸಿಎಲ್‌ ಹಿರಿಯ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟೀಸ್‌ ನೀಡುವ  ಸಾಧ್ಯತೆ ಇದೆ. ಕೆಪಿಸಿಎಲ್‌ ಟೆಂಡರ್‌  ಅಂತಿಮಗೊಳಿಸಿ ಸರ್ಕಾರಕ್ಕೆ ಕಳಿಸಿದ್ದು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ. 

ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಚ್‌ಇಎಲ್‌, ರಾಜ್ಯ ಸರ್ಕಾರಕ್ಕೆ ಮಾರ್ಚ್  16ರಂದೇ ಪತ್ರ ಬರೆದು ಅರ್ಹತೆ ಯೇ ಇಲ್ಲದ ಖಾಸಗಿ ಕಂಪನಿಗೆ ಟೆಂಡರ್‌ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.   

ಕೇಂದ್ರ ಸರ್ಕಾರಿ  ಸ್ವಾಮ್ಯದ ಮತ್ತೊಂದು  ಕಂಪನಿ ಬ್ರಿಡ್ಜ್‌ ಅಂಡ್‌ ರೂಫ್‌ ಕಂಪನಿ ಕೂಡ ಟೆಂಡರ್‌  ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತಲ್ಲದೇ ಇದರಲ್ಲಿ ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಇತ್ತೀಚೆಗಷ್ಟೇ ದೂರು ಸಲ್ಲಿಸಿತ್ತು ಎಂದು ನಟರಾಜ್‌ ಶರ್ಮಾ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. 

ಈ ದೂರುಗಳನ್ನು ಸಲ್ಲಿಸಿದ್ದಾಗ್ಯೂ ಖಾಸಗಿ ಕಂಪನಿಯೊಂದಕ್ಕೆ ಟೆಂಡರ್‌ ನೀಡಲು ಕೆಪಿಸಿಎಲ್‌ ಆಸಕ್ತಿ ತಳೆದಿದೆ. ಇದಕ್ಕೆ ಪೂರಕವಾಗಿ ಟೆಂಡರ್‌ ಆಯ್ಕೆ ಮಾಡುವ ತಾಂತ್ರಿಕ  ಸಮಿತಿಯಿಂದಲೂ ವರದಿ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.  

ಶರ್ಪೋಜಿ ಅಂಡ್‌ ಪಲ್ಲೋನ್‌ಜಿ ಖಾಸಗಿ  ಕಂಪನಿಯನ್ನು ತಾಂತ್ರಿಕ ಸಮಿತಿ ಅನರ್ಹಗೊಳಿಸಿತ್ತು. ಅದೇ ರೀತಿ ಇ- ಡಾಕ್‌  ಕಂಪನಿ ಕೂಡ ಆರ್ಥಿಕ ವಹಿವಾಟಿನ  ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಆ  ಕಂಪನಿಯನ್ನೂ ತಾಂತ್ರಿಕ ಸಮಿತಿ ಅನರ್ಹಗೊಳಿಸಿತ್ತು. 

ಹಾಗೆಯೇ ತಾಂತ್ರಿಕ ಸಮಿತಿ 2020ರ ಫೆ.4ರಂದು ಕೇಂದ್ರ ಸರ್ಕಾರಿ  ಸ್ವಾಮ್ಯದ ಬ್ರಿಡ್ಜ್‌ ಅಂಡ್  ರೂಫ್‌  ಕಂಪನಿಗೆ ಟೆಂಡರ್‌ ನೀಡಲು ಶಿಫಾರಸ್ಸು ಮಾಡಿ ಅಭಿಪ್ರಾಯ ನೀಡಿತ್ತು. 

ಆದರೆ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಶರ್ಪೋಜಿ ಅಂಡ್‌ ಫಾಲೋನ್‌ಜಿ ಕಂಪನಿ ಪರವಾಗಿ ವರದಿ ನೀಡಬೇಕು ಎಂದು ನಿವೃತ್ತಿ ಅಂಚಿನಲ್ಲಿರುವ ಕೆಪಿಸಿಎಲ್‌ ಇಂಜಿನಿಯರ್‌  ಎಲ್‌ ಶ್ರೀನಿವಾಸ್‌ ಅವರ ಮೇಲೆ ಒತ್ತಡ ಹೇರಿ ನಿರ್ದೇಶಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ಬಗ್ಗದಿದ್ದ ಎಲ್‌ ಶ್ರೀನಿವಾಸ್‌ ಅವರನ್ನು ಕದ್ರಾ ಜಲ ವಿದ್ಯುತ್‌ ಯೋಜನೆಗೆ ವರ್ಗಾವಣೆಗೊಳಿಸಿದ್ದರು ಎಂದೂ ದೂರಿನಲ್ಲಿ ವಿವರಿಸಲಾಗಿದೆ. 

ವಿದ್ಯುತ್‌ ಉತ್ಪಾದನೆಯನ್ನು ಆರಂಭಿಸುವ ನಿಟ್ಟಿನನಲ್ಲಿ ಬಳ್ಳಾರಿ, ರಾಯಚೂರು, ಯರಮರಸ್‌ ವಿದ್ಯುತ್‌ ಸ್ಥಾವರಗಳ ಚಿಲುಮೆ ಆಧುನೀಕರಣ ಯೋಜನೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಕೇಂದ್ರ ಮತ್ತು  ರಾಜ್ಯ ಸರ್ಕಾರ ಸೂಚಿಸಿತ್ತು. ವಿದ್ಯುತ್‌ ಸ್ಥಾವರಗಳ ಚಿಲುಮೆ ಆಧುನೀಕರಣವಾಗದ  ಕಾರಣ ವಿದ್ಯುತ್‌  ಕೊರತೆ ಉಂಟಾಗಿತ್ತು. ಹೀಗಾಗಿ ವಿದ್ಯುತ್‌ ಖರೀದಿ ಮಾಡಬೇಕಾದ  ಅನಿವಾರ್ಯ  ಸೃಷ್ಟಿಯಾಗಿದೆಯಲ್ಲದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ  ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. 

SUPPORT THE FILE

Latest News

Related Posts