ಬೆಂಗಳೂರು; ಕರ್ನಾಟಕ ರೈತ ಸುರಕ್ಷ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2019ರ ಮುಂಗಾರು ಹಂಗಾಮಿನಲ್ಲಿ ಮಧ್ಯಂತರ ವಿಮಾ ಪರಿಹಾರದ ಪೈಕಿ ಒಟ್ಟು ಮೊತ್ತದಲ್ಲಿ 150 ಕೋಟಿ ರು. ಮೊತ್ತವನ್ನು ವಿಮಾ ಕಂಪನಿಗಳು ಬಾಕಿ ಉಳಿಸಿಕೊಂಡಿವೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬು, ಭತ್ತ, ಬಾಳೆ ಸೇರಿದಂತೆ ಹಾನಿಗೀಡಾಗಿರುವ ಮತ್ತಿತರ ಬೆಳೆಗಳ ಸಮೀಕ್ಷೆ ನಡೆಸಿ ನಷ್ಟಕ್ಕೀಡಾಗಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ ಕೇಂದ್ರ ಸರ್ಕಾರವೂ ಫಸಲ್‌ಭಿಮಾ ಯೋಜನೆಯ ಹಣವನ್ನು ರಾಜ್ಯ ಸರ್ಕಾರಗಳಿಗೆ ಬಿಡುಗಡೆಗೊಳಿಸಲು ಕ್ರಮ ಕೈಗೊಂಡ ಬೆನ್ನಲ್ಲೇ ವಿಮಾ ಕಂಪನಿಗಳು ಕರ್ನಾಟಕದಲ್ಲಿ ಕೋಟ್ಯಂತರ ರು.ಮೊತ್ತ ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ಕೊರೊನಾ ವೈರಸ್‌ನಿಂದಾಗಿ ಕೃಷಿ ವಲಯದಲ್ಲಿ ಬಿಕ್ಕಟ್ಟುಗಳ ಸಂಖ್ಯೆ ಹೆಚ್ಚಿವೆ. ಇದರ ಮಧ್ಯೆಯೇ ಬರಗಾಲಕ್ಕೆ ತುತ್ತಾಗಿರುವ ಪ್ರದೇಶಗಳ ರೈತರಿಗೆ ಸಕಾಲದಲ್ಲಿ ವಿಮೆ ಮೊತ್ತ ದೊರಕದಿರುವುದು ರೈತರನ್ನು ಇನ್ನಷ್ಟು ಕಂಗೆಡಿಸುವ ಸಾಧ್ಯತೆಗಳಿವೆ. ಸದ್ಯ ಕೊರೊನಾ ವೈರಸ್‌ನ್ನು ತಡೆಗಟ್ಟುವ ಕಾರ್ಯಾಚರಣೆಗಳಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಗ್ನರಾಗಿದ್ದಾರೆ. ಹೀಗಾಗಿಯೇ ವಿಮೆ ಮೊತ್ತವನ್ನು ಒಂದು ವರ್ಷ ಕಳೆದರೂ ಇತ್ಯರ್ಥಪಡಿಸದ ಕಂಪನಿಗಳ ವಿರುದ್ಧ ಯಾವ ಕ್ರಮವೂ ಜರುಗಿಲ್ಲ. ರೈತರ ಗೋಳು ಕೇಳುವವರೂ ಇಲ್ಲವಾಗಿದೆ.
ವಿಜಯಪುರ, ಹಾವೇರಿ, ಗದಗ್, ಧಾರವಾಡ, ಚಾಮರಾಜನಗರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ, ಬಜಾಜ್ ಆಲಿಯನ್ಸ್, ಜಿ ಐ ಸಿ , ಭಾರತಿ ಆಕ್ಸ್, ಫ್ಯೂಚರ್ ಜನರಲಿ ಜಿಐಸಿ ವಿಮಾ ಕಂಪನಿಗಳು 2019ನೇ ಸಾಲಿನ ಮುಂಗಾರು ಹಂಗಾಮಿನ ವಿಮೆ ಪರಿಹಾರ ಮೊತ್ತ ಇನ್ನೂ ಇತ್ಯರ್ಥಗೊಳಿಸಿಲ್ಲ. ಇದರ ಮೊತ್ತವೇ 150 ಕೋಟಿ ರು. ಇದೆ ಎಂದು ಕೃಷಿ ಇಲಾಖೆ ನೀಡಿರುವ ಮಾಹಿತಿಯಿಂದ ಗೊತ್ತಾಗಿದೆ.
2020ರ ಮಾರ್ಚ್ 9ರ ಅಂತ್ಯಕ್ಕೆ 9 ಜಿಲ್ಲೆಗಳ 1,67,241 ಫಲಾನುಭವಿ ರೈತರಿಗೆ ಮಧ್ಯಂತರ ಪರಿಹಾರದ ಪೈಕಿ ಒಟ್ಟು 150.774 ಕೋಟಿ ರು.ಗಳನ್ನು ಇತ್ಯರ್ಥಪಡಿಸದೇ ಬಾಕಿ ಇಟ್ಟುಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಈ ಪೈಕಿ ಭಾರತಿ ಆಕ್ಸ್ ವಿಮಾ ಕಂಪನಿಯೊಂದೇ 77.14 ಕೋಟಿ ರು.ಗಳನ್ನು ಇತ್ಯರ್ಥಪಡಿಸದೇ ಬಾಕಿ ಉಳಿಸಿಕೊಂಡಿದೆ.
2020ರ ಫೆ.12 ಮತ್ತು 13ರ ಅಂತ್ಯಕ್ಕೆ ಒಟ್ಟು 327 ವಿಮಾ ಘಟಕಗಳು 56,184 ರೈತ ಫಲಾನುಭವಿಗಳಿಗೆ ಒಟ್ಟು ವಿಮೆ ಪರಿಹಾರ ಮೊತ್ತದ ಪೈಕಿ 32.37 ಕೋಟಿ ರು.ಮಾತ್ರ ಇತ್ಯರ್ಥಪಡಿಸಿದೆ.
2019-20ನೇ ಸಾಲಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದಿದೆಯಾದರೂ ಈ ಖಾತೆಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಅಳವಡಿಸಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಪ್ರಕ್ರಿಯೆ ಇನ್ನೂ ತೆವಳುತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ.
2019ರ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಅಭಿವೃದ್ಧಿಪಡಿಸಿರುವ ಸಂರಕ್ಷಣೆ ತಂತ್ರಾಂಶದಲ್ಲಿ ಬೆಳೆ ವಿಮೆ ಪರಿಹಾರ ಮೊತ್ತವು ನಿಯಂತ್ರಣವಾಗುತ್ತಿರಲಿಲ್ಲ. ಅಲ್ಲದೆ ನೇರವಾಗಿ ವಿಮಾ ಸಂಸ್ಥೆಯಿಂದ ಅರ್ಹ ಫಲಾನುಭವಿಗಳ ಖಾತೆಗೆ ಇತ್ಯರ್ಥಪಡಿಸಲಾಗುತ್ತಿತ್ತಾದರೂ ಇರಿಂದ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಿದ ವಿವರದ ಮಾಹಿತಿಯಲ್ಲಿ ಪಾರದರ್ಶಕತೆ, ನೈಜ ಸಮಯದ ಪಾವತಿಯ ಸ್ಥಿತಿಯು ಲಭ್ಯವಾಗುತ್ತಿರಲಿಲ್ಲ.
2016ನೇ ಮುಂಗಾರು ಹಂಗಾಮಿನಿಂದ 2019ರ ಹಿಂಗಾರು ಅವಧಿವರೆಗೆ ಒಟ್ಟು 6,421.25 ಕೋಟಿ ರು.ಗಳನ್ನು ವಿತರಿಸಿದೆ. ಇದರಲ್ಲಿ ರೈತರ ಪಾಲಿನಿಂದ 773.61 ಕೋಟಿ ಮತ್ತು ರಾಜ್ಯದ 2,823.81 ಕೋಟಿ ರು. ಈ ವಿಮೆ ಕಂತಿನಲ್ಲಿ ಸೇರಿದೆ.
ಕಳೆದ ಆಗಸ್ಟ್‌ನಲಿ ಬಂದ ಮಳೆ ಮತ್ತು ಪ್ರವಾಹದಿಂದ ಕರ್ನಾಟಕದ 9.35 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಹಾನಿಗೊಳಗಾಗಿದೆ ಎಂದು ಕೇಂದ್ರ ಸರಕಾರದ ಕೃಷಿ ಮಂತ್ರಾಲಯ 2019ರ ನವೆಂಬರ್ ಅಂತ್ಯಕ್ಕೆ ವರದಿ ಬಿಡುಗಡೆ ಮಾಡಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಿಲ್ಲ.
ದೇಶದಲ್ಲಿ ಒಟ್ಟು 64 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಹಾನಿಯಾಗಿದೆ ಎಂದು ವರದಿ ನೀಡಿತ್ತು. ಆದರೂ ಫಸಲ್ ಬಿಮಾ ಪರಿಹಾರ ಮಾತ್ರ ವಿಮಾ ರೈತರಿಗೆ ಇನ್ನೂ ಮರಿಚೀಕೆಯಾಗಿದೆ.
ಹವಾಮಾನ ವೈಪರಿತ್ಯ, ಮಳೆ, ನೆರೆ/ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ ಸೇರಿದಂತೆ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯು ಸಾಮಾನ್ಯ ಇಳುವರಿಯ ಶೇ.50ಕ್ಕಿಂತ ಕಡಿಮೆ ಬಂದಲ್ಲಿ ಮಾತ್ರ ವಿಮೆ ಮಾಡಿಸಿದ ರೈತರಿಗೆ ಹಣ ಬಿಡುಗಡೆಯಾಗುತ್ತದೆ.