ಬೆಂಗಳೂರು; ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ನೇಮಕಾತಿ ಕಾನೂನುಬದ್ಧ ರೀತಿಯಲ್ಲಿ ನಡೆದಿಲ್ಲ ಎಂಬುದನ್ನು ಕರ್ನಾಟಕ ಸರ್ಕಾರ ಇದೀಗ ಒಪ್ಪಿಕೊಂಡಿದೆ.
ನಿಯಮಬಾಹಿರವಾಗಿ ನೇಮಕಾತಿ ನಡೆಸಿ ಅದನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರ, ಕಾನೂನುಬದ್ಧ ರೀತಿಯಲ್ಲಿ ನೇಮಕಾತಿ ನಡೆದಿಲ್ಲ ಎಂದು ಹೇಳಿಕೆ ನೀಡಿ ಚಾಟಿ ಏಟಿನಿಂದ ತಪ್ಪಿಸಿಕೊಂಡಿದೆ.
ಮಂಡಳಿ ಅಧ್ಯಕ್ಷರ ನೇಮಕಾತಿಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮಾರ್ಚ್ 6,2020ರಂದು ನಡೆದ ವಿಚಾರಣೆ ವೇಳೆಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಅವರು ಹೈಕೋರ್ಟ್‌ಗೆ ಈ ವಿಷಯ ತಿಳಿಸಿದ್ದಾರೆ.
ಇದನ್ನು ಅಂಗೀಕರಿಸಿರುವ ಹೈಕೋರ್ಟ್, ಕಾನೂನುಬದ್ಧವಾಗಿ ನಡೆಯದೇ ಇರುವ ನೇಮಕಾತಿಯನ್ನು ರದ್ದುಗೊಳಿಸುವ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಪ್ರಕರಣವನ್ನು ಇದೇ ಏಪ್ರಿಲ್ 22ಕ್ಕೆ ಮಂದೂಡಿದೆ.
ಪರಿಸರ ತಜ್ಞರಲ್ಲದ ಮತ್ತು ಜ್ಯೋತಿಷ್ಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಡಾ ಸುಧೀಂದ್ರರಾವ್ ಅವರನ್ನು ಮಂಡಳಿಗೆ ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರೀಗ ಈ ಬೆಳವಣಿಗೆಯಿಂದ ತೀವ್ರ ಮುಜಗರಕ್ಕೊಳಗಾಗಿದ್ದಾರೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮತ್ತು ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ ಅಧ್ಯಕ್ಷ ಶಿವಕುಮಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ದಾವೆ ಹೂಡಿದ್ದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪರಿಸರ ತಜ್ಞರಲ್ಲದ ಸಿವಿಲ್ ಇಂಜಿನಿಯರ್ ಪದವಿ ಪಡೆದಿದ್ದ ಲಕ್ಷ್ಮಣ್ ಅವರನ್ನು ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಿಸಿದ್ದರು. ಇದನ್ನು ಪ್ರಶ್ನಿಸಿ ಹಿಂದೆಯೂ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿತ್ತು. ಆದರೆ ಆ ಅವಧಿಯಲ್ಲಿ ಹಸಿರು ನ್ಯಾಯ ಮಂಡಳಿ ಮಾರ್ಗಸೂಚಿಗಳನ್ನು ಹೊರಡಿಸಿರಲಿಲ್ಲ.
ಹೀಗಾಗಿ ಲಕ್ಷ್ಮಣ್ ಅಧಿಕಾರದಲ್ಲಿ ಮುಂದುವರೆದ್ದಿದರು. ಲಕ್ಷ್ಮಣ್ ಅವರ ಅಧಿಕಾರವಾಧಿ ಪೂರ್ಣಗೊಳ್ಳುವ ಹೊತ್ತಿನಲ್ಲಿ ಹಸಿರು ನ್ಯಾಯಾಧೀಕರಣ ಪೀಠ, ಅಧ್ಯಕ್ಷರ ನೇಮಕಾತಿ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದರನ್ವಯ ಮಂಡಳಿಯಲ್ಲಿ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆದಿತ್ತಲ್ಲದೆ, ನಿಯಮಗಳನ್ನು ರೂಪಿಸಿ ಸರ್ಕಾರಕ್ಕೆ ಕಳಿಸಿತ್ತು. ಆದರೆ ಈವರೆವಿಗೂ ಈ ಸಂಬಂಧದ ಕಡತ ಪರಿಸರ ಇಲಾಖೆಯಲ್ಲಿ ಧೂಳು ತಿನ್ನುತ್ತಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರವೂ ಈ ಸಂಬಂಧ ಯಾವುದೇ ನಿಯಮಗಳನ್ನು ರೂಪಿಸದೆಯೇ ನಿವೃತ್ತ ಐಎಫ್‌ಎಸ್ ಅಧಿಕಾರಿ ಜಯರಾಮ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ಆದರೆ ಅತ್ಯಲ್ಪ ದಿನಗಳಲ್ಲೇ ರಾಜಕೀಯ ಒತ್ತಡಗಳಿಗೆ ಮಣಿದಿದ್ದ ಹಿಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಡಾ ಸುಧಾಕರ್(ಹಾಲಿ ವೈದ್ಯಕೀಯ ಶಿಕ್ಷಣ ಸಚಿವ)ಅವರನ್ನು ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಿಸಿ ಸುಪ್ರೀಂ ಕೋರ್ಟ್ ಮತ್ತು ಹಸಿರು ನ್ಯಾಯಾಧೀಕರಣ ನೀಡಿದ್ದ ತೀರ್ಪು, ಆದೇಶಗಳನ್ನು ಉಲ್ಲಂಘಿಸಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಾ ಸುಧಾಕರ್ ಅವರು ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ನಂತರ ಮಂಡಳಿ ಅಧ್ಯಕ್ಷ ಹುದ್ದೆಯಿಂದ ಹಿಂದೆ ಸರಿದಿದ್ದರು. ಅವರಿಂದ ತೆರವುಗೊಂಡಿದ್ದ ಹುದ್ದೆಗೆ ಪರಿಸರ ತಜ್ಞರನ್ನು ನೇಮಿಸಬೇಕಿದ್ದ ಬಿಜೆಪಿ ಸರ್ಕಾರವೂ, ಹಿಂದಿನ ಸರ್ಕಾರಗಳು ಮಾಡಿದ್ದ ತಪ್ಪನ್ನು ಮುಂದುವರೆಸಿತ್ತು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸುವ ವ್ಯಕ್ತಿಯ ಅರ್ಹತೆ ಬಗ್ಗೆ ಸುಪ್ರೀಂಕೋರ್ಟ್ ಮತ್ತು ಹಸಿರು ನ್ಯಾಯಾಧೀಕರಣ ಹೇಳಿತ್ತಾದರೂ ಈ ಎರಡೂ ಪೀಠಗಳು ಕಾಲಕಾಲಕ್ಕೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಹಿಂದಿನ ಸರ್ಕಾರಗಳು ಪದೇ ಪದೇ ಉಲ್ಲಂಘಿಸುತ್ತಿದ್ದವು. ರಾಜಕೀಯ ಪ್ರಭಾವದ ಹಿನ್ನೆಲೆ ಹೊಂದಿರುವವರನ್ನೇ ಮಂಡಳಿ ಅಧ್ಯಕ್ಷರ ಹುದ್ದೆಗೆ ಮುಖ್ಯಮಂತ್ರಿಗಳು ನಾಮನಿರ್ದೇಶನ ಮಾಡುತ್ತಿದ್ದರು.
ಆದರೆ ಈ ಬಾರಿ ಛೀಮಾರಿಗೆ ಒಳಗಾಗುವ ಮುನ್ನವೇ ಎಚ್ಚೆತ್ತುಕೊಂಡಿರುವ ಸರ್ಕಾರ ನೇಮಕಾತಿ ಕಾನೂನು ಪ್ರಕಾರ ನಡೆದಿಲ್ಲ ಎಂದು ಹೇಳಿರುವುದು ಉತ್ತಮ ಬೆಳವಣಿಗೆ ಎನ್ನಲಾಗಿದೆ.