ಏಪ್ರಿಲ್‌ನಲ್ಲಿ 10,000ಕ್ಕೆ ಏರಿಕೆ !; ಮಾದರಿ ಸಂಗ್ರಹಣೆಗೆ ಇನ್ನೂ ಆರಂಭವಾಗದ ಸಂಚಾರಿ ಘಟಕಗಳು

ಬೆಂಗಳೂರು;  ಇದೇ ಏಪ್ರಿಲ್‌ ಅಂತ್ಯಕ್ಕೆ ರಾಜ್ಯದಲ್ಲಿ 10 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಾದರೂ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿರುವ ರಾಜ್ಯ ಸರ್ಕಾರ, ಸೋಂಕಿನ ಮಾದರಿ ಸಂಗ್ರಹಣೆ ಮತ್ತು ತಪಾಸಣೆ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸಂಚಾರಿ ಘಟಕಗಳನ್ನು ತೆರೆಯಲು ಇನ್ನೂ ಮುಂದಾಗಿಲ್ಲ. 

ಆರೋಗ್ಯ ಇಲಾಖೆ 2020ರ ಏಪ್ರಿಲ್‌ 10 ರ ಸಂಜೆ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆವಿಗೆ ಪರೀಕ್ಷೆಗಾಗಿ 7,975ಒಟ್ಟು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ  ಆಸ್ಥೆ ವಹಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲಿದೆ ಎಂಬ  ಲಕ್ಷಣಗಳು ಗೋಚರಿಸುತ್ತಿವೆ.  

ಪ್ರಾಥಮಿಕ ಅರೋಗ್ಯ ಕೇಂದ್ರಗಳಿಂದಲೂ ಪಿಪಿಇ ಕಿಟ್‌ಗಳಿಗೆ  ಸಾಕಷ್ಟು ಬೇಡಿಕೆ  ಇದ್ದರೂ ಪೂರೈಕೆ ಮಾಡುವಲ್ಲಿ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ, ಇದರ ಬೇಡಿಕೆ ಮತ್ತು ಅಗತ್ಯತೆಯನ್ನು ಕಡಿಮೆಗೊಳಿಸುವ ಸಂಚಾರ ಘಟಕಗಳನ್ನೇಕೆ ತೆರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 

ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಘಟಕಗಳನ್ನು ತೆರೆದಿರುವ ನೆರೆಯ ಕೇರಳ ರಾಜ್ಯ, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ. ಇದೇ  ಮಾದರಿಯನ್ನೇ ಪಂಜಾಬ್‌ನ ಸಂಗ್ರೂರ್‌ ಜಿಲ್ಲೆ ಅನುಸರಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಸಂಚಾರಿ ಘಟಕಗಳನ್ನು ತೆರೆಯಲು ಆಸ್ಥೆ ವಹಿಸಿಲ್ಲ. 

‘ದಿ ಫೈಲ್‌ ಪ್ರತಿನಿಧಿ ಜತೆ ಮಾತನಾಡಿದ ನಿಮ್ಹಾನ್ಸ್‌ನ ಡಾ  ರವಿ ಅವರು ‘ಸೋಂಕಿನ ಮಾದರಿ ಸಂಗ್ರಹಿಸಲು ರಾಜ್ಯದಲ್ಲಿನ್ನೂ ಸಂಚಾರಿ ಘಟಕಗಳು ಶುರುವಾಗಿಲ್ಲ. ಪ್ರಯೋಗಾಲಯಗಳಲ್ಲೇ ಸದ್ಯ ಸಂಗ್ರಹಿಸಲಾಗುತ್ತಿದೆ. ಸಂಚಾರಿ ಘಟಕಗಳಿಗೆ ಇನ್ನೂ ಅನುಮತಿ ನೀಡಿಲ್ಲ.  ಖಾಸಗಿ ವಲಯದಿಂದಲೂ ಈವರೆವಿಗೂ ಇಂತಹ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಅಲ್ಲದೆ ಐಸಿಎಂಆರ್‌ನಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ‘ ಎಂದು ಪ್ರತಿಕ್ರಿಯಿಸಿದರು. 

ಮತ್ತೊಬ್ಬ ಅರೋಗ್ಯ ಅಧಿಕಾರಿ ಡಾ ಪ್ರಕಾಶ್‌ಕುಮಾರ್‌ ಅವರು ‘ಮುಕ್ತ ಪ್ರದೇಶದಲ್ಲಿ ಮಾದರಿಗಳನ್ನು ಸಂಗ್ರಹಿಸಿದರೆ ಕಲುಷಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾದರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಈ ಕಾರಣಗಳಿಗಾಗಿ ಸಂಚಾರಿ ಘಟಕಗಳನ್ನು ರಾಜ್ಯದಲ್ಲಿ ತೆರೆದಿಲ್ಲ,’ ಎಂದು ಮಾಹಿತಿ  ಒದಗಿಸಿದರು. 

ಆದರೆ ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಇದೇ ಮಾದರಿಯ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸೋಂಕಿನ ಮಾದರಿ ಸಂಗ್ರಹಣೆಗೆ ಸಂಚಾರಿ ಘಟಕಗಳನ್ನು ಕೇರಳ ರಾಜ್ಯವೇ ಅಭಿವೃದ್ಧಿಪಡಿಸಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾದರಿ  ಸಂಗ್ರಹಣಾ ಘಟಕಗಳನ್ನು ಅಭಿವೃದ್ಧಿಪಡಿಸಿರುವ ಕೇರಳ  ಸರ್ಕಾರ, ಎರ್ನಾಕುಲಂನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ ಆವರಣದಲ್ಲಿ 2 ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸುತ್ತಿದೆ. 

ಆದರೂ ರಾಜ್ಯ ಸರ್ಕಾರದ ವಿಶೇಷವಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಟಾಸ್ಕ್‌ಪೋರ್ಸ್‌ನಲ್ಲಿರುವ ತಜ್ಞರು  ಇದರ ಬಗ್ಗೆ ಗಮನ ಹರಿಸಿಲ್ಲವೇಕೆ, ಗಮನಹರಿಸಿದ್ದರೆ ಸಂಚಾರಿ ಘಟಕಗಳನ್ನು ತೆರೆಯುವ ಮೂಲಕ ಮಾದರಿಗಳ  ಸಂಗ್ರಹಣೆ ಮತ್ತು  ಪರೀಕ್ಷೆ  ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲವೇಕೆ ಎಂಬ ಪ್ರಶ್ನೆಗಳು ಸಹಜವಾಗಿ ಕೇಳಿ ಬಂದಿವೆ. 

ಕೇವಲ 40 ಸಾವಿರ ರೂ. ವೆಚ್ಚದಲ್ಲಿ ಅದೂ ಕೇವಲ 2 ದಿನದಲ್ಲಿ ಈ ಸಂಚಾರಿ ಮಾದರಿ ಸಂಗ್ರಹಣಾ ಘಟಕವನ್ನು ಸ್ಥಾಪಿಸಬಹುದು. ಈ ಘಟಕದ ಒಳಗೆ ಕುಳಿತು ಆರೋಗ್ಯ ಇಲಾಖೆ ತಜ್ಞರು ಮಾದರಿಗಳನ್ನು ಸಂಗ್ರಹಿಸುತ್ತಾರೆ. ವೈದ್ಯರಿಗೂ ಇದು  ಅನುಕೂಲಕರ ಎಂಬ ಅಭಿಪ್ರಾಯ ವ್ಯಕ್ತವಾಗಿವೆ. 

ವೈದ್ಯಕೀಯ ಸಿಬ್ಬಂದಿ ಗಾಜಿನಿಂದ ಆವೃತವಾಗಿರುವ ಘಟಕದ ಒಳಗೆ ಕುಳಿತುಕೊಳ್ಳುವುದರಿಂದ ಅವರಿಗೆ ಸೋಂಕು ತಗುಲುವ ಆತಂಕ ಇರುವುದಿಲ್ಲ. ಗ್ಲೌಸ್‌ ಮೂಲಕ ಕಾರ್ಯನಿರ್ವಹಿಸುವ ಕಾರಣ, ಕೈ ಆಡಿಸೋದಕ್ಕೂ ಸೂಕ್ತ ಸ್ಥಳಾವಕಾಶ ಲಭ್ಯ ಇರುತ್ತೆ. ಹೊರಗಡೆಯೇ ಇರುವ ಕಂಟೇನರ್‌ನಲ್ಲಿ ಪ್ರತಿಯೊಬ್ಬರ ಸ್ಯಾಂಪಲ್‌ ಹಾಕಲು ಸ್ಥಳಾವಕಾಶವಿದೆ. 

ಇನ್ನು, ಪಂಜಾಬ್‌ನ ಸಂಗ್ರೂರ್ ಜಿಲ್ಲಾಡಳಿತವೂ ಸಂಚಾರಿ ಘಟಕಗಳನ್ನು ತೆರೆದಿದೆ. ಶಂಕಿತ ರೋಗಿಗಳ ಮಾದರಿಗಳನ್ನು ತೆಗೆದುಕೊಳ್ಳುವ  ಅರೋಗ್ಯ ಸಿಬ್ಬಂದಿಯ ಸುರಕ್ಷತೆಯೂ ಈ ಸಂಚಾರಿ ಘಟಕದಲ್ಲಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಥೋರಿ ಸುದ್ದಿಸಂಸ್ಥೆಯೊಂದಿಗೆ ಮಾಹಿತಿ  ಹಂಚಿಕೊಂಡಿದ್ದಾರೆ.

ಜಾಗತಿಕ ಮಾನದಂಡಗಳ ಪ್ರಕಾರವೇ ಸಂಚಾರಿ ಘಟಕವನ್ನು ತೆರೆಯಲಾಗಿದೆ. 25,000 ರು.ಗಳಿಂದ 30,000 ರು.ಗಳ ವೆಚ್ಚದಲ್ಲಿ ಘಟಕವನ್ನು ಆರಂಭಿಸಬಹುದು.  ಉಪಕರಣವನ್ನು ವಾಹನದ ಮೇಲೂ ಅಳವಡಿಸಬಹುದು. ಅಲ್ಲದೆ  ಮಾದರಿಗಳನ್ನು ತೆಗೆದುಕೊಳ್ಳಲು  ಯಾವುದೇ ಸ್ಥಳಕ್ಕೆ ಬೇಕಾದರೂ ಸ್ಥಳಾಂತರಿಸಬಹುದು. ಜಿಲ್ಲಾ ಆಸ್ಪತ್ರೆ ಮತ್ತು ಅಗತ್ಯ ಸ್ಥಳಗಳಲ್ಲಿ ಘಟಕಗಳನ್ನು ತೆರೆಯಬಹುದು ಎಂದು ಸಂಗ್ರೂರ್‌ನ ಜಿಲ್ಲಾಧಿಕಾರಿ ಘನಶ್ಯಾಮ್‌  ಥೋರಿ  ಸುದ್ದಿ ಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ. 

ಸಂಚಾರಿ ಘಟಕಗಳನ್ನು ತೆರೆಯುವುದರಿಂದ ಪಿಪಿಇ ಕಿಟ್‌,  ಕೈಗವಸುಗಳು, ಮುಖಗವಸುಗಳ ಬೇಡಿಕೆಯನ್ನು ಕಡಿಮೆಗೊಳಿಸುತ್ತವೆ. ಶಂಕಿತ ಹಾಗೂ ರೋಗಿ ನೇರವಾಗಿ ವೈದ್ಯಕೀಯ ಸಿಬ್ಬಂದಿ ಜತೆ ನೇರ ಸಂಪರ್ಕದಲ್ಲಿರುವುದಿಲ್ಲ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಸಂಚಾರಿ ಘಟಕಗಳು ಸರಳವಾಗಿದೆಯಲ್ಲದೆ, ಸಾಮಾಜಿಕ  ಅಂತರವನ್ನು ಕಾಯ್ದುಕೊಂಡು ಮಾದರಿ  ಸಂಗ್ರಹವನ್ನು ಸುಲಭಗೊಳಿಸುತ್ತವೆ ಎಂದೂ ವಿವರಿಸಿದ್ದಾರೆ. 

“ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯು ನಮ್ಮ ಅತ್ಯಂತ ಆದ್ಯತೆಯಾಗಿರುವ ಕಾರಣ, ನೇರ ಸಂಪರ್ಕವನ್ನು ಇಲ್ಲಿ ನಿರ್ಬಂಧಿಸಲಾಗಿದೆ. ಜತೆಗೆ  ಮಾದರಿ ಸಂಗ್ರಹಣೆಗೆ  ಅಗತ್ಯವಾದ ಮಾನವಶಕ್ತಿಯನ್ನು ಕಡಿಮೆಗೊಳಿಸುತ್ತದೆ ಎನ್ನುತ್ತಾರೆ ಥೋರಿ. 

ದೇಶದಲ್ಲಿ ಸಾಕಷ್ಟು ಪರೀಕ್ಷೆಗಳು ನಡೆಯುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಏಪ್ರಿಲ್‌ 14ರೊಳಗೆ ಇಡೀ ದೇಶಾದ್ಯಂತ ಕನಿಷ್ಠ 2.5 ಲಕ್ಷ  ಮಂದಿಯನ್ನು ಪರೀಕ್ಷಿಸಲು ಕೇಂದ್ರ  ಸರ್ಕಾರ ಉದ್ದೇಶಿಸಿದೆ. ಈ ಕುರಿತು 2020ರ ಏಪ್ರಿಲ್‌ 9ರಂದು ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ  ನಡೆದ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. 

‘ಭಾರತದಲ್ಲಿ  ಲಾಕ್‌ಡೌನ್‌ ಹೇರಿರುವ ಕಾರಣ  ಸೋಂಕಿತರ  ಸಂಖ್ಯೆ  ಅಪಾಯಕಾರಿಯಾಗಿ ಹರಡದೇ ಹತೋಟಿಯಲ್ಲಿದೆ ಇದೆ ಎನ್ನುವುದು ಇಲ್ಲಿಯವರೆಗಿನ ಅಂಕಿ ಅಂಶಗಳು ತಿಳಿಸುತ್ತವೆ. ಆದರೆ ಇದೇ ಏಪ್ರಿಲ್‌ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 10,000 ಸಂಖ್ಯೆಗೆ ಏರಬಹುದು ಎಂದು  ಅಂದಾಜಿಸಿರುವ ರಾಜ್ಯ ಸರ್ಕಾರಕ್ಕೆ ಪರೀಕ್ಷೆಗಳನ್ನು ನಡೆಸುವುದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸಲು ಮತ್ತು ಯಾರನ್ನೆಲ್ಲಾ ತಪಾಸಣೆಗೊಳಪಡಿಸಬೇಕು ಎಂಬ  ಬಗ್ಗೆ ಇಲ್ಲಿನ ವೈದ್ಯರಿಗೂ ಸರಿಯಾದ ಮಾಹಿತಿ ಇಲ್ಲ. ಸೋಂಕು ಏನಾದರೂ ಸಮುದಾಯಕ್ಕೆ ಹರಡಿದ್ದ ಪಕ್ಷದಲ್ಲಿ ಇಲ್ಲಿಯ ತನಕ ಸರ್ಕಾರದ ನಡವಳಿಕೆಗಳು ಘೋರ ದುಷ್ಪರಿಣಾಮಗಳನ್ನು ಬೀರಲಿವೆ,’ ಎಂದು ಆತಂಕ  ವ್ಯಕ್ತಪಡಿಸುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ  ರವಿಕೃಷ್ಣಾರೆಡ್ಡಿ. 

the fil favicon

SUPPORT THE FILE

Latest News

Related Posts