ಬೆಂಗಳೂರು; ಲಾಕ್‌ಡೌನ್ ಘೋಷಿಸಿದ ನಂತರ ಬೆಂಗಳೂರು ನಗರ ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಕೆಲಸ ಮಾಡುತ್ತಿರುವ ಕಟ್ಟಡ ಕಾರ್ಮಿಕರ ಪೈಕಿ ಶೇ.50ರಷ್ಟು ಮಂದಿ ಖಾತೆಗೆ ಈವರೆವಿಗೂ ಹಣ ಜಮಾ ಅಗಿಲ್ಲ. ಇದರಲ್ಲಿ ಹೊರರಾಜ್ಯ ವಲಸಿಗ ಕಟ್ಟಡ ಕಾರ್ಮಿಕರ ಸಂಖ್ಯೆಯೇ ಅಧಿಕ ಎನ್ನುವ ಮಾಹಿತಿ ಇದೀಗ ಹೊರಬಿದ್ದಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈವರೆವಿಗೂ ಒಟ್ಟು 21 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಶೇ.50ರಷ್ಟು ಮಂದಿ ಬೆಂಗಳೂರಿನಲ್ಲಿ ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲ. ಬ್ಯಾಂಕ್ ಖಾತೆ ಹೊಂದಿದ್ದರೂ ಆಧಾರ್ ಸಂಖ್ಯೆ ಜತೆ ಜೋಡಣೆ ಆಗಿಲ್ಲ. ಹೀಗಾಗಿ ಲಾಕ್‌ಡೌನ್ ಆದ ದಿನದಿಂದಲೂ ಇವರಿಗೆ ಧನ ಸಹಾಯ ದೊರೆತಿಲ್ಲ ಎಂದು ತಿಳಿದು ಬಂದಿದೆ.
‘ದಿ ಫೈಲ್’ ಜತೆ ಮಾತನಾಡಿದ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ವಲಸಿಗ ಕಾರ್ಮಿಕರಿಗೆ ಸಹಾಯ ಧನ ಪಾವತಿಸಲು ಮುಂದಾಗಿದ್ದರೂ ಬಹುತೇಕರ ಬಳಿ ಬ್ಯಾಂಕ್ ಖಾತೆಯೇ ಇಲ್ಲವಾಗಿದೆ. ಹೀಗಾಗಿ ಸಹಾಯ ಧನದ ಮೊತ್ತ ಪಾವತಿಸುವಲ್ಲಿ ತೊಂದರೆಗಳಾಗಿವೆ. ಆದರೆ ಅವರ ವಸತಿ ವ್ಯವಸ್ಥೆಗೆ ಎಲ್ಲಾ ರೀತಿಯಿಂದಲೂ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ಒದಗಿಸಿದರು.
ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಈ ಕುರಿತು ಜನಸಹಾಯ್ ಸಂಸ್ಥೆ ಸಮೀಕ್ಷೆ ವರದಿ ಬಹಿರಂಗವಾದ ನಂತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಶೇ.50ರಷ್ಟು ವಲಸಿಗ ಕಟ್ಟಡ ಕಾರ್ಮಿಕರಿಗೂ ಸಹಾಯನಧನ ತಲುಪಿಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
ಬ್ಯಾಂಕ್ ಖಾತೆ ಇಲ್ಲದೇ ಇರುವುದನ್ನೇ ನೆಪ ಹೂಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು,ಪರ್ಯಾಯ ಕ್ರಮಗಳನ್ನು ಕೈಗೊಳ್ಳುವುದರಲ್ಲಿಯೂ ವಿಳಂಬ ಧೋರಣೆ ಅನುಸರಿಸಿದೆ. ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಅವರು ವಲಸಿಗ ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಬಗ್ಗೆ ಆಸ್ಥೆ ವಹಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ರಾಜ್ಯದೊಳಗಿನ ಕಟ್ಟಡ ಕಾರ್ಮಿಕರ ಸಂಖ್ಯೆ ಅಂದಾಜು 10 ಲಕ್ಷ ಮಂದಿ ಬೆಂಗಳೂರಿನಲ್ಲಿ ಈಗಾಗಲೇ ಬ್ಯಾಂಕ್ ಖಾತೆ ಹೊಂದಿರುವ ಕಾರಣ ಇವರೆಲ್ಲರಿಗೂ ಲಾಕ್‌ಡೌನ್ ಆದ ನಂತರ ಇವರ ಖಾತೆಗೆ ತಲಾ 1,000 ರು.ನಂತೆ ಹಣ ಜಮಾ ಆಗಿದೆ.
ವಲಸಿಗ ಕಾರ್ಮಿಕರು ಬ್ಯಾಂಕ್ ಖಾತೆ ಹೊಂದಿಲ್ಲ ಎಂದು ಈಗ ಹೇಳುತ್ತಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ವಲಸಿಗ ಕಾರ್ಮಿಕ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡಿದ ದಿನದಿಂದಲೇ ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ.
ಅಲ್ಲದೆ, ಹೊರರಾಜ್ಯದ ವಲಸಿಗ ಕಾರ್ಮಿಕರ ನೋಂದಣಿ ನವೀಕರಣವೂ ಆಗಿಲ್ಲ. ಶೇ.20ರಷ್ಟು ಮಂದಿ ಅಂದರೆ ಅಂದಾಜು 7 ಲಕ್ಷ ಮಂದಿ ನೋಂದಣಿ ನವೀಕರಣಗೊಂಡಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದಲ್ಲಿ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಸ್ಸಾ, ಅಸ್ಸಾಂ ಸೇರಿದಂತೆ ಇನ್ನಿತರೆ ರಾಜ್ಯಗಳ ಕಟ್ಟಡ ಕಾರ್ಮಿಕರಿಗೆ ಹಣ ತಲುಪದ ಕಾರಣ ಪರದಾಡುವ ಸ್ಥಿತಿ ಬಂದೊದಗಿದೆ.
ಹಲವು ವರ್ಷಗಳಿಂದಲೂ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಕಟ್ಟಡ ನಿರ್ಮಾಣ ವಲಯದಲ್ಲಿ ಹೊರರಾಜ್ಯದ ವಲಸಿಗರು ಕೆಲಸ ಮಾಡುತ್ತಿದ್ದರೂ ಇವರ ಬಗ್ಗೆ ನಿಖರ ಮಾಹಿತಿ ಸಂಗ್ರಹ ಮಾಡುವುದರಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಜನವರಿ 2020ರವರೆಗೆ ಸುಂಕ ನಿಧಿಯಲ್ಲಿ ಒಟ್ಟು 6,490.69 ಕೋಟಿ ರು. ಸಂಗ್ರಹವಾಗಿದೆ. ಸಾಮಾಜಿಕ ಭದ್ರತೆ ಸೌಲಭ್ಯಗಳಡಿಯಲ್ಲಿ 2007ರಿಂದ ಜನವರಿ 2020ರವರೆಗೆ 4,70,739 ಫಲಾನುಭವಿಗಳಿಗೆ 648.64 ಕೋಟಿ ರು. ಸಹಾಯಧನ ಮಂಜೂರಾಗಿರುವುದು ದಾಖಲೆಯಿಂದ ಗೊತ್ತಾಗಿದೆ.
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ 3,196 ವಲಸೆ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಅವರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತಾದರೂ ಇದುವರೆಗೆ ಶೇ.42ರಷ್ಟು ವಲಸಿಗ ಕಟ್ಟಡ ಕಾರ್ಮಿಕರಿಗೆ ಪಡಿತರ ಸಿಕ್ಕಿಲ್ಲ ಎಂಬ ಸಂಗತಿಯನ್ನು ಜನಸಹಾಯ್ ಸಂಸ್ಥೆಯ ಸಮೀಕ್ಷೆ ಹೊರಗೆಡವಿದೆ.
ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮಾರ್ಚ್ 24 ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತ್ತು. ಆದರೆ ಶೇ.94 ರಷ್ಟು ಮಂದಿ ಕಾರ್ಮಿಕರು ತಮ್ಮ ಗುರುತಿನ ಚೀಟಿ ಹೊಂದಿಲ್ಲ ಎಂಬುದನ್ನೂ ಸಮೀಕ್ಷೆ ಬಹಿರಂಗಪಡಿಸಿದೆ.
ಶೇ.55ರಷ್ಟು ಮಂದಿ ಕಾರ್ಮಿಕರು ದಿನಕ್ಕೆ 200-400 ರೂ ಕೂಲಿ ಹಣ ಪಡೆಯುತ್ತಿದ್ದರು. ಆದರೀಗ ಕೊರೊನಾ ಹಿನ್ನೆಲೆಯಲ್ಲಿ ಶೇ.92.5ರಷ್ಟು ಮಂದಿ ಕಟ್ಟಡ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸುಮಾರು ಮೂರ್ನಾಲ್ಕು ವಾರಗಳಿಂದ ಅವರಿಗೆ ದುಡಿಮೆ ಇಲ್ಲ, ತಿನ್ನಲು ಆಹಾರವೂ ಇಲ್ಲ. ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಎಂದು ಸಮೀಕ್ಷೆ ಅಧ್ಯಯನ ವಿವರಿಸಿದೆ.