ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದ ಬಿ ಎಸ್ ಯಡಿಯೂರಪ್ಪ ಅವರು, ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚಿಸಿ 6 ತಿಂಗಳ ಅವಧಿ ಪೂರ್ಣಗೊಳಿಸಿದ್ದರೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಗಳು ನಿರೀಕ್ಷೆಯಂತೆ ವೇಗವನ್ನು ಪಡೆದುಕೊಳ್ಳದೇ ತೆವಳುತ್ತಿವೆ.
ಹೆಚ್ಚು ಅನುದಾನವಿರುವ ಇಲಾಖೆಗಳೂ ಪ್ರಗತಿಯಲ್ಲಿ ಹಿಂದೆ ಬಿದ್ದಿವೆ ಎಂಬುದನ್ನು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಹೊರಗೆಡವಿದೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಷಣ ಮಾಡಿದ ಕೆಲ ದಿನಗಳಲ್ಲೇ ಬಿಜೆಪಿ ಸರ್ಕಾರದ ಪ್ರಗತಿಯ ಬಂಡವಾಳವೂ ಹೊರಬಿದ್ದಿದೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಸಾಧಿಸಿರುವ ಪ್ರಗತಿಯ ಪರಿಶೀಲನಾ ಸಭೆಯ ನಡವಳಿಗಳು ‘ದಿ ಫೈಲ್’ ಗೆ ಆರ್‌ಟಿಐ ಅಡಿಯಲ್ಲಿ ಲಭ್ಯವಾಗಿವೆ. ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಗಳು ತೆವಳುತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಶಾಸಕರ ಸಂಖ್ಯಾಬಲವನ್ನು ವೃದ್ಧಿಸಿಕೊಂಡಿರುವ ಬಿಜೆಪಿ ಸರ್ಕಾರ, ಅಭಿವೃದ್ಧಿ ಯೋಜನೆಗಳ ಪ್ರಗತಿಯತ್ತ ಕಣ್ಣಾಯಿಸಿಲ್ಲ. 6 ತಿಂಗಳಿನಿಂದಲೂ ಪ್ರಗತಿ ಎಂಬುದು ಮರೀಚಿಕೆಯಾಗಿದೆ. ಅನುದಾನ ಹಂಚಿಕೆಯಾಗಿದೆ ಎಂದು ಬಿಜೆಪಿ ಶಾಸಕರು ಪ್ರಚಾರ ಪಡೆದುಕೊಳ್ಳುತ್ತಿದ್ದಾರಾದರೂ ಹಲವು ಇಲಾಖೆಗಳಿಗೆ ಹಣವೇ ಬಿಡುಗಡೆಯಾಗಿಲ್ಲ.
ಈ ಅವಧಿಯಲ್ಲಿ ಕುಂಠಿತಗೊಂಡಿರುವ ಪ್ರಗತಿ, ಅಧಿಕಾರಿಗಳಲ್ಲಿರುವ ಮೈಗಳ್ಳತನವನ್ನು ಹೊರಗೆಡವಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರು ಪ್ರತಿ ತಿಂಗಳು ಅಭಿವೃದ್ಧಿ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡುತ್ತಿದ್ದರೂ ಅಭಿವೃದ್ಧಿ ಯೋಜನೆಗಳು ತೆವಳುತ್ತಲೇ ಇದೆ.
ಡಿಸೆಂಬರ್ 2019ರ ಅಂತ್ಯದವರೆಗಿನ ಪ್ರಗತಿಯನ್ನು ಪರಿಶೀಲಿಸಿರುವ ಮುಖ್ಯ ಕಾರ್ಯದರ್ಶಿ, ಸಂಚಿತ ಗುರಿಗೆ ಶೇ.75ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳ ಮುಖ್ಯಸ್ಥರ ಕಾರ್ಯವೈಖರಿಯನ್ನು ಒರೆಗೆ ಹಚ್ಚಿರುವುದು ಪ್ರಗತಿ ಪರಿಶೀಲನೆ ಸಭೆಯ ನಡವಳಿಯಿಂದ ತಿಳಿದು ಬಂದಿದೆ.
ಅದರಲ್ಲೂ ತುಂಬಾ ಮುಖ್ಯವಾಗಿ 2019-20ನೇ ಸಾಲಿನ ಶೈಕ್ಷಣಿಕ ವರ್ಷ ಬಹುತೇಕ ಪೂರ್ಣಗೊಳ್ಳುತ್ತಿದ್ದರೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಅತ್ಯಂತ ಕಡಿಮೆ ಸಾಧನೆ ಆಗಿದೆ.
ಹಾಗೆಯೇ ಔದ್ಯಮಿಕ ಸಮೂಹಗಳ ಸ್ಥಾಪನೆ, ಸುಧಾರಣೆ, ತೆಂಗು ಭಾಗ್ಯ, ಸಣ್ಣ, ಮಧ್ಯಮ ಉದ್ಯಮಗಳಿಗೆ ಕೈಗಾರಿಕೆ ಮೂಲಭೂತ ಸೌಕರ್ಯಗಳ ಯೋಜನೆಯಲ್ಲಿ ಪ್ರಗತಿ ಕುಂಠಿತಗೊಂಡಿದೆ. ಕಿದ್ವಾಯಿ ಆಸ್ಪತ್ರೆ ಅಭಿವೃದ್ಧಿ, ವಿವಿಧ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಯೋಜನೆಗಳಿನ್ನೂ ಚುರುಕುಗೊಳ್ಳದಿರುವುದು ಗೊತ್ತಾಗಿದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ, ಶೇ.40ರ ಗಡಿಯನ್ನೂ ದಾಟಿಲ್ಲ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಲಭ್ಯವಿದ್ದ 300 ಕೋಟಿ ರು.ಬಳಕೆಯಾಗದ ಕಾರಣ ಸರ್ಕಾರಕ್ಕೆ ಹಿಂದಿರುಗಲಿದೆ. 2019-20ನೇ ಸಾಲಿನಲ್ಲಿ ಮಂಜೂರಾಗಿದ್ದ ತಲಾ 2 ಕೋಟಿ ರು.ಗಳ ಅನುದಾನಕ್ಕೆ ಕಾಮಗಾರಿಗಳಿಗೆ ಬಹುತೇಕ ಜಿಲ್ಲಾಧಿಕಾರಿಗಳು ಅನುಮೋದಿಸಿಲ್ಲದಿರುವುದು ನಡವಳಿಯಿಂದ ತಿಳಿದು ಬಂದಿದೆ.
ವಿಶೇಷ ಅಭಿವೃದ್ಧಿ ಯೋಜನೆಯಡಿ ನಿಗದಿಪಡಿಸಿದ್ದ ಅನುದಾನದ ಪೈಕಿ ಒಟ್ಟು 3,538 ಕೋಟಿ ರು.ಗಳಲ್ಲಿ ಶೇ.50ರಷ್ಟು ಮಾತ್ರ ಖರ್ಚಾಗಿದೆ. ವಸತಿ ಇಲಾಖೆಯ ಆಶ್ರಯ, ಬಸವ ವಸತಿ ಯೋಜನೆ, ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮತ್ತು ಇತರೆ ರಸ್ತೆಗಳ ಅಭಿವೃದ್ಧಿ, ಪ್ರಾಥಮಿಕ ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಮೂಲಸೌಕರ್ಯ ಒದಗಿಸುವ ಯೋಜನೆ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೂ ಕಡಿಮೆ ಖರ್ಚಾಗಿದೆ.
ಅದೇ ರೀತಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕನ್ನಡ, ಸಂಸ್ಕೃತಿ, ವಾಣಿಜ್ಯ ಮತ್ತು ಕೈಗಾರಿಕೆ, ಪ್ರವಾಸೋದ್ಯಮ ಇಲಾಖೆಯಲ್ಲಿ ಕಳೆದ ಸಾಲಿಗಿಂತಲೂ ಕಡಿಮೆ ಪ್ರಗತಿ ಆಗಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಪ್ರಗತಿಯದ್ದೂ ಇದೇ ಕಥೆ.
ಇನ್ನು ಜಲಸಂಪನ್ಮೂಲ, ಲೋಕೋಪಯೋಗಿ, ಪಶು ಸಂಗೋಪನೆ, ತೋಟಗಾರಿಕೆ ಸೇರಿದಂತೆ ಇನ್ನಿತರೆ ಇಲಾಖೆಗಳು ಕಡಿಮೆ ಪ್ರಗತಿ ಸಾಧಿಸಿದೆ. ಬಾಹ್ಯ ಸಂಸ್ಥೆಗಳ ಅನುದಾನದಡಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕೈಗೆತ್ತಿಕೊಂಡಿರುವ ಕಾವೇರಿ ನೀರು ಸರಬರಾಜು ಹಂತ 4 ಮತ್ತು ಲೋಕೋಪಯೋಗಿ ಇಲಾಖೆ ಜೈಕಾ 2ನೇ ಹಂತದಡಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳು ತೆವಳುತ್ತಿರುವುದು ತಿಳಿದು ಬಂದಿದೆ.
ಮಹಿಳಾ ಉದ್ದೇಶಿತ ಆಯವ್ಯಯದ ಯೋಜನೆಗಳಿಗೆ ಸಂಬಂಧಿಸಿದಂತೆ ಮುಜರಾಯಿ, ಮಾಹಿತಿ ತಂತ್ರಜ್ಞಾನ, ಕಾನೂನು, ಒಳಾಡಳಿತ, ಸಣ್ಣ ಕೈಗಾರಿಕೆ, ಅರಣ್ಯ, ಉನ್ನತ ಶಿಕ್ಷಣ ಮತ್ತು ಸಹಕಾರ ಇಲಾಖೆಯಲ್ಲಿ ಪ್ರಗತಿಯ ಕುರುಹು ಕಂಡಿಲ್ಲ.