ರಿಯಲ್‌ ಎಸ್ಟೇಟ್‌ ಕಂಪನಿಗಳಿಗೂ ಬೇಕಾಬಿಟ್ಟಿ ಸಾಲ; ದುಸ್ಥಿತಿಗೆ ತಲುಪಿತೇ ಅಪೆಕ್ಸ್‌ ಬ್ಯಾಂಕ್‌?

ಬೆಂಗಳೂರು; ರೈತ ಸಹಕಾರಿ ಸಂಸ್ಥೆಗಳು, ಸಹಕಾರಿ ಸಂಘ ಮತ್ತು ಸಹಕಾಅರ ಬ್ಯಾಂಕ್‍ಗಳಿಗೆ ಆರ್ಥಿಕ ನೆರವು ನೀಡಬೇಕಿದ್ದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಇನ್ನಿತರೆ ನಿರ್ದೇಶಕರು ಅನಗತ್ಯವಾಗಿ ಮತ್ತು ವ್ಯವಧಾನವಿಲ್ಲದೆ ಸಹಕಾರಿ ನಿಯಮಾವಳಿಗಳು, ಬ್ಯಾಂಕ್‌ನ ಉಪ ನಿಯಮಗಳನ್ನು ಉಲ್ಲಂಘಿಸಿದ್ದಾರೆ.  

ಖಾಸಗಿ ವ್ಯಕ್ತಿಗಳು, ವಾಣಿಜ್ಯ ಸಂಸ್ಥೆಗಳು, ಟ್ರಸ್ಟ್‌ಗಳಿಗೆ ಯಾವುದೇ ಜಾಮೀನು ಮತ್ತು ಭದ್ರತೆಯನ್ನು ಪಡೆಯದೇ ಕಟ್ಟಡ ನಿರ್ಮಾಣ ಕಂಪನಿ, ಸಕ್ಕರೆ ಕಾರ್ಖಾನೆ, ಚಿನ್ನದ ಅಂಗಡಿಗಳಿಗೂ ಬೇಕಾಬಿಟ್ಟಿಯಾಗಿ ನೂರಾರು ಕೋಟಿಗಳಷ್ಟು ಸಾಲ ನೀಡಿರುವುದನ್ನು ತನಿಖಾ ತಂಡ ಬಹಿರಂಗಗೊಳಿಸಿದೆ. 

ಈ ರೀತಿ ಸಾಲ ಪಡೆದ  ಪಡೆದ ಖಾಸಗಿ ವ್ಯಕ್ತಿಗಳು,  ವಾಣಿಜ್ಯ ಸಂಸ್ಥೆಗಳು, ಟ್ರಸ್ಟ್‌ಗಳು,  ಖಾಸಗಿ ಮತ್ತು ಸಹಕಾರಿ ಸಕ್ಕರೆ  ಕಾರ್ಖಾನೆಗಳು  ಯಾವ ಉದ್ದೇಶಕ್ಕೆ ಸಾಲ ಪಡೆದಿದ್ದವೋ ಆ ಉದ್ದೇಶಕ್ಕೆ ಸಾಲವನ್ನು ಉಪಯೋಗಿಸಿಲ್ಲ. ಬದಲಿಗೆ  ಸ್ವಂತಕ್ಕೆ  ಮತ್ತು ಇತರೆ  ವ್ಯವಹಾರಗಳಿಗೆ  ದುರುಪಯೋಗಪಡಿಸಿಕೊಂಡು  ನಿಗದಿಪಡಿಸಿದ ಕಾಲಾವಧಿಯಲ್ಲಿ ಅಸಲು ಮತ್ತು ಬಡ್ಡಿಯನ್ನು ಬ್ಯಾಂಕ್‌ಗೆ ಪಾವತಿಸಿಲ್ಲ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ ಡಿ ನರಸಿಂಹಮೂರ್ತಿ ನೇತೃತ್ವದ ತನಿಖಾ ತಂಡ ಹೊರಗೆಡವಿದೆ.

ಅಷ್ಟೇ ಅಲ್ಲ, ಸಹಕಾರ ಮತ್ತು ಸಹಕಾರೇತರ ಸಕ್ಕರೆ ಕಾರ್ಖಾನೆಗಳು ಅಪೆಕ್ಸ್ ಬ್ಯಾಂಕ್‍ನಿಂದ ಕೋಟ್ಯಂತರ ರು.ಗಳನ್ನು ಸಾಲ ಪಡೆದಿವೆಯಾದರೂ ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿಲ್ಲ. ಬದಲಿಗೆ ಸಾಲ ಕೊಟ್ಟಿರುವ ಅಪೆಕ್ಸ್ ಬ್ಯಾಂಕ್‍ನ್ನು ನ್ಯಾಯಾಲಯದ ಮೆಟ್ಟಿಲೇರಿಸಿವೆ. ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವ ಮುನ್ನ ಕಾರ್ಖಾನೆಗಳ ಸ್ಥಿರಾಸ್ತಿ, ಚರಾಸ್ತಿ ಮೌಲ್ಯವನ್ನು ಪರಿಗಣಿಸದೆಯೇ ಸಾಲ ನೀಡಿರುವ ಅಪೆಕ್ಸ್ ಬ್ಯಾಂಕ್, ಇದೀಗ ಆ ಕಂಪನಿಗಳಿಂದ ಸಾಲ ಮರುಪಾವತಿಯಾಗುವುದು ಅನುಮಾನ ವ್ಯಕ್ತಪಡಿಸಿದೆ.

ಮಾಜಿ ಕೈಗಾರಿಕೆ ಸಚಿವ ಹಾಲಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ , ವಿಧಾನ ಪರಿಷತ್‌ ಸದಸ್ಯ ಕೆ ಪಿ ನಂಜುಂಡಿ, ಮಾಜಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಶಾಸಕ ಜಿ ಟಿ ಪಾಟೀಲ್, ಆನಂದ್ ಎಸ್ ನ್ಯಾಮಗೌಡ, ಶಾಸಕ ಶ್ರೀಮಂತ ಪಾಟೀಲ್ ಅವರ ಒಡೆತನದ ಸಕ್ಕರೆ ಕಾರ್ಖಾನೆಗಳು ಮತ್ತು ಚಿನ್ನದ ಅಂಗಡಿಯೂ ಸಾಲ ಪಡೆದ ಫಲಾನುಭವಿಗಳ ಪಟ್ಟಿಯಲ್ಲಿವೆ.

ಇದಲ್ಲದೆ ಅಪೆಕ್ಸ್ ಬ್ಯಾಂಕ್‍ನ ಕಾರ್ಯಚಟುವಟಿಕೆಗಳಿಗೆ ಸಂಬಂಧವೇ ಇಲ್ಲದ ರಿಯಲ್ ಎಸ್ಟೇಟ್ ಕಟ್ಟಡ ನಿರ್ಮಾಣ ಕಂಪನಿ, ಟೆಕ್ಸ್‍ಟೈಲ್ಸ್ ಕಂಪನಿಗಳಿಗೂ ಕೋಟ್ಯಂತರ ರು.ಸಾಲ ಮಂಜೂರು ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್‍ಗೆ ಒಟ್ಟು 8500.00 ಲಕ್ಷ ರು, ಶ್ರೀ ಸಾಯಿ ಪ್ರಿಯಾ ಶುಗರ್ಸ್‍ಗೆ 3400.00 ಲಕ್ಷ ಎಂ ಆರ್ ಎನ್ ಕೇನ್ ಪವರ್ ಇಂಡಿಯಾ ಲಿಮಿಟೆಡ್‍ಗೆ 3500.00 ಲಕ್ಷ ರು ಸಾಲ ನೀಡಿದೆ. ನಿರಾಣಿ ಶುಗರ್ಸ್‍ನಿಂದ 2020ರ ಜನವರಿ 31ರ ಅಂತ್ಯಕ್ಕೆ ಸಾಲ ಅಸಲು, ಬಡ್ಡಿ ಸೇರಿ 186.35 ಲಕ್ಷ ರು. ಇದೆ. ಮಾಜಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಅವರು ಪ್ರತಿನಿದಿಸುವ ಭವಾನಿ ಖಂಡಸಾರಿ ಕಂಪನಿಗೆ 500.00 ಲಕ್ಷ ರು. ನೀಡಿದೆ. ಮಾಜಿ ಶಾಸಕ ಪ್ರಕಾಶ್ ಬಿ ಖಂಡ್ರೆ ಪ್ರತಿನಿಧಿಸುವ ಭಾಲ್ಕೇಶ್ವರ್ ಶುಗರ್ಸ ಲಿಮಿಟೆಡ್‍ಗೆ ಒಟ್ಟು 19015.0 ಲಕ್ಷ ರು. ಸಾಲ ನೀಡಿದೆ. ಈ ಕಂಪಣಿಯ ಅಸಲು ಮತ್ತು ಬಡ್ಡಿ ಸೇರಿ ಒಟ್ಟು 487.33 ಲಕ್ಷ ರು ಇರುವುದು ವರದಿಯಿಂದ ಗೊತ್ತಾಗಿದೆ.

ಕಾಂಗ್ರೆಸ್ ಶಾಸಕ ಆನಂದ್ ಎಸ್ ನ್ಯಾಮಗೌಡ ಪ್ರತಿನಿಧಿಸುವ ಜಮಖಂಡಿ ಶುಗರ್ಸ್‍ಗೆ 8500.00 ಲಕ್ಷ ರು., ಶ್ರೀಮಂತ ಪಾಟೀಲ್ ಒಡೆತನದ ಅಥಣಿ ಶುಗರ್ಸ್‍ಗೆ 8500.00 ಲಕ್ಷ ರು., ಸಾಲ ನೀಡಿದೆ. ಇದರ ಬಡ್ಡಿ ಮೊತ್ತ ಸೇರಿ ಒಟ್ಟು 11.16 ಲಕ್ಷ ರು. ಇದೆ.

ಹಾಗೆಯೇ ಕೆ ಪಿ ನಂಜುಂಡಿ ಒಡೆತನದ ಲಕ್ಷ್ಮಿ ಗೋಲ್ಡ್ ಖಜಾನ ಗೆ 2800.00 ಲಕ್ಷ ರು. ಸಾಲ ನೀಡಿದೆ. ಇದರ ಅಸಲು ಮತ್ತು ಬಡ್ಡಿ ಸೇರಿ 24.48 ಲಕ್ಷ ರು. ಇದೆ. ಈಗಾಗಲೇ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ನೋಟೀಸ್ ನೀಡಿದ್ದು, 2020ರ ಮಾರ್ಚ್ ಅಂತ್ಯದೊಳಗೆ ಸಾಲದ ಖಾತೆಯನ್ನು ಮುಕ್ತಾಯಗೊಳಿಸಲಾಗುವುದು ಬ್ಯಾಂಕ್‍ಗೆ ಭರವಸೆ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.

ಇನ್ನು, ಸನ್‍ಸ್ಮಿತ್ ಟೆಕ್ಸ್‍ಟೈಲ್ಸ್ ಇಂಡಿಯಾ ಪ್ರೈವೈಟ್ ಲಿಮಿಟೆಡ್‍ಗೆ 2011ರ ಫೆ.3ರಂದು ಸಾಲ ನೀಡಿದ್ದು ಓವರ್ ಡ್ಯೂ ರೂಪದಲ್ಲಿ ಒಟ್ಟು 5601.47 ಲಕ್ಷ ರು. ಬಾಕಿ ಉಳಿಸಿಕೊಂಡಿದೆ. ಹೊರಬಾಕಿಯನ್ನು ವಸೂಲಿ ಮಾಡಿಕೊಳ್ಳಲು ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿದೆ. ಅಲ್ಲದೆ ಸರ್‍ಫೇಸಿಯಾ ಕಾಯ್ದೆ ಅನುಸಾರ ಕಂಪನಿಗೆ ನೋಟೀಸ್ ನೀಡಿರುವುದು ಗೊತ್ತಾಗಿದೆ.

ಅದೇ ರೀತಿ ಖುಷ್ಬೂ ಎಲೆಕ್ಟ್ರಿಕಲ್ಸ್ ಆಟೋಮೇಷನ್ ಪ್ರೈವೈಟ್ ಲಿಮಿಟೆಡ್‍ಗೆ ಎರಡು ಸಾಲದ ಖಾತೆಗಳಲ್ಲಿ ಒಟ್ಟು ಪಡೆದಿರುವ ಸಾಲದ ಪೈಕಿ ಅಸಲು ಮತ್ತು ಬಡ್ಡಿ 2563.91 ಲಕ್ಷ ರು. ಇದೆ.

ಕನ್ಸಟ್ರಕ್ಷನ್ಸ್ ಸೊಲ್ಯೂಷನ್ಸ್ ಪ್ರೈವೈಟ್ ಲಿಮಿಟೆಡ್ ಪಡೆದಿರುವ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ಸೇರಿ ಒಟ್ಟು 2,544.57 ಲಕ್ಷ ರು. ಇದೆ. ಪೂನಂ ಪವರ್ಸ್ ಪ್ರೈವೈಟ್ ಲಿಮಿಟೆಡ್ ಪಡೆದಿರುವ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ಸೇರಿ 449.03 ಲಕ್ಷ ರು., ವೈಷ್ಣಿ ಇನ್ಫ್ರಾಸ್ಟಕ್ಚರ್ಸ ಪ್ರೈವೈಟ್ ಲಿಮಿಟೆಡ್ 9699,96 ಲಕ್ಷ ರು, ನಂದನವನ ಹೋಟೆಲ್ ರೆಸಾಟ್ರ್ಸ್ ಲಿಮಿಟೆಡ್ 190.00 ಲಕ್ಷ ರು. ಇದೆ.

ಕೆಎನ್‍ಎಸ್ ಇನ್ಫ್ರಾಸ್ಟಕ್ಚರ್ಸ್ ಲಿಮಿಟೆಡ್ 2477.26 ಲಕ್ಷ ರು., ಕೆಎನ್‍ಎಸ್ ಓವರ್‍ಸೀಸ್ ಲಿಮಿಟೆಡ್ ಅಸಲು ಮತ್ತು ಬಡ್ಡಿ ರೂಪದಲ್ಲಿ 2538.99 ಲಕ್ಷ ರು ಇದೆ. ಬ್ಯಾಂಕ್ ಈಗಾಗಲೇ ಈ ಎರಡೂ ಕಂಪನಿಗಳಿಗೆ ಸರ್‍ಫೇಸಿಯಾ ಕಾಯ್ದೆ ಪ್ರಕಾರ ನೋಟೀಸ್ ನೀಡಿದೆ.

ಸ್ಕೈರೀಚ್ ಬಿಲ್ಡರ್ಸ್ ಪ್ರೈವೈಟ್ ಲಿಮಿಟೆಡ್ 3631.00 ಲಕ್ಷ ರು., ಶಾಂತರಾವ್ ಸೆಂಟರ್ ಫಾರ್ ಫೈನ್ ಆಟ್ರ್ಸ 1.11 ಲಕ್ಷ ರು, ಕಣ್ವ ಗಾರ್ಮೆಂಟ್ಸ್ ಪ್ರೈವೈಟ್ ಲಿಮಿಟೆಡ್ 17.72 ಲಕ್ಷ ರು., ಎಸ್ ಅರ್ ಎಸ್ ಟ್ರಾವೆಲ್ಸ್ ಲಾಜಿಸ್ಟಿಕ್ಸ್ ಪ್ರೈ ಲಿ  60.22 ಲಕ್ಷ ರು. ಅಸಲು ಬಡ್ಡಿ ಹೊಂದಿರುವುದು ವರದಿಯಿಂದ ಗೊತ್ತಾಗಿದೆ. 

the fil favicon

SUPPORT THE FILE

Latest News

Related Posts