ಕೊರೊನಾ ವೈರಸ್‌; ಕೆಂಪೇಗೌಡ ವಿಮಾನ ನಿಲ್ದಾಣದ ಶಿಷ್ಟಾಚಾರ ಅಧಿಕಾರಿ, ಸಿಬ್ಬಂದಿಯೇ ಅಸುರಕ್ಷಿತ?

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಶಿಷ್ಟಾಚಾರ ವಿಭಾಗದ ಅಧಿಕಾರಿ ಸಿಬ್ಬಂದಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಗುಣಮಟ್ಟದ ಮಾಸ್ಕ್‌ಗಳನ್ನು ನೀಡಿಲ್ಲ ಎಂಬ ಆತಂಕದ ಸುದ್ದಿ ಹೊರಬಿದ್ದಿದೆ. 

ಮಾರಣಾಂತಿಕ ಕೊರೊನಾ ವೈರಸ್‌ನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ 200 ಕೋಟಿ ರು.ಮೀಸಲಿರಿಸಿದೆ ಎಂದು ಪ್ರಚಾರ ಗಿಟ್ಟಿಸಿಕೊಂಡಿರುವ ರಾಜ್ಯ ಸರ್ಕಾರ, ಪ್ರತಿನಿತ್ಯ ವಿವಿಧ ದೇಶಗಳಿಂದ ವಿವಿಧ  ಕಾರಣಗಳಿಗಾಗಿ ಬೆಂಗಳೂರಿಗೆ ಬಂದಿಳಿಯುವ ರಾಯಭಾರಿಗಳು, ವಿದೇಶಿ ಪ್ರತಿನಿಧಿಗಳು, ಹೊರ ರಾಜ್ಯದ ಪ್ರವಾಸಿಗರು, ಸಂದರ್ಶಕರ ಪ್ರಮಾಣ ಪತ್ರಗಳನ್ನು ಪರಿಶೀಲಿಸಲು ನೆರವಾಗುವ ಸಿಬ್ಬಂದಿಗೇ ನಿರ್ದಿಷ್ಟ ಸಂಖ್ಯೆಯಲ್ಲಿ ಗುಣಮಟ್ಟದ ಮಾಸ್ಕ್‌ಗಳನ್ನು ನೀಡದೆ ಹೊಣೆಗೇಡಿತನವನ್ನು ಪ್ರದರ್ಶಿಸಿದೆ. 

ಮಾರಣಾಂತಿಕ ಕೊರೊನಾ ವೈರಸ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತ್ಯೇಕ ಸಹಾಯ ಕೇಂದ್ರ ತೆರೆದಿರುವ ರಾಜ್ಯ ಸರ್ಕಾರ, ರಾಜ್ಯ ಆತಿಥ್ಯ ಸಂಸ್ಥೆ ಮತ್ತು ಶಿಷ್ಟಾಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಗುಣಮಟ್ಟದ ಮಾಸ್ಕ್‌ಗಳನ್ನು ವಿತರಿಸಲು ಭಂಡ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ. 

ಕಳೆದ 15 ದಿನದ ಹಿಂದೆ 20 ಮಾಸ್ಕ್‌ಗಳನ್ನು ಇಲ್ಲಿನ ಶಿಷ್ಟಾಚಾರ ವಿಭಾಗದ ಸಿಬ್ಬಂದಿಗೆ ವಿತರಿಸಲಾಗಿತ್ತಾದರೂ ಅವುಗಳು ಈಗಾಗಲೇ ಬಳಕೆ ಆಗಿವೆ. 3  ಗಂಟೆಗಳ  ಅವಧಿಗಷ್ಟೇ  ಈ  ಮಾಸ್ಕ್‌ಗಳನ್ನು ಬಳಸಬಹುದು. ಒಂದು ಪಾಳಿಗೆ ( 8 ಗಂಟೆಗಳ ಕಾಲವಾಧಿ) ಒಬ್ಬರಿಗೆ 3  ಮಾಸ್ಕ್‌ಗಳು ಬೇಕು. ಒಂದು ಪಾಳಿಯಲ್ಲಿ 5 ರಿಂದ  6 ಮಂದಿ ಅಧಿಕಾರಿ,  ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಇದರ ಪ್ರಕಾರ ದಿನವೊಂದಕ್ಕೆ 60 ಮಾಸ್ಕ್‌ ಗಳ ಅವಶ್ಯಕತೆ  ಇರುತ್ತೆ. ಆದರೆ  ಕುಮಾರಕೃಪಾ ಅತಿಥಿ ಗೃಹ ಈವರೆವಿಗೆ ಕೇವಲ 20 ಮಾಸ್ಕ್‌ಗಳನ್ನು ನೀಡಿ ಕೈತೊಳೆದುಕೊಂಡಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು. 

ಶಿಷ್ಟಾಚಾರ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇಲ್ಲಿನ ವಿಮಾನ ನಿಲ್ದಾಣದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಮೇಲುಸ್ತುವಾರಿ ಮಾಡುವುದಷ್ಟೇ ಅಲ್ಲದೆ ಪ್ರಯಾಣಿಕರ ಮೇಲೂ ನಿಗಾ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಶಿಷ್ಟಾಚಾರ ವಿಭಾಗದ ಅಧಿಕಾರಿ, ಸಿಬ್ಬಂದಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಾಸ್ಕ್‌ಗಳ ಅವಶ್ಯಕತೆ ಇದೆ.

ಮಾಸ್ಕ್‌ಗಳನ್ನು ಒದಗಿಸಬೇಕು ಎಂದು ಶಿಷ್ಟಾಚಾರ ವಿಭಾಗದ ಉಪ ಕಾರ್ಯದರ್ಶಿಯೂ ಸೇರಿದಂತೆ ಅಲ್ಲಿನ ಸಿಬ್ಬಂದಿ, ಕುಮಾರಕೃಪಾ ಅತಿಥಿ ಗೃಹದ ವಿಶೇಷ ಅಧಿಕಾರಿಗೆ ಹಲವು ಬಾರಿ ಪತ್ರ ಬರೆದರೂ ಈವರೆವಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ‘ದಿ ಫೈಲ್‌’ಗೆ ಮಾಹಿತಿ ನೀಡಿದ್ದಾರೆ.

‘ಕರೋನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರೆಡ್‌ ಅಲರ್ಟ್‌ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಘೋಷಿಸಿದೆ.ವಿದೇಶಿ ಸೇರಿದಂತೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆ ಜವಾಬ್ದಾರಿ ಹೊತ್ತಿರುವ ಇಲ್ಲಿನ ಶಿಷ್ಟಾಚಾರ ವಿಭಾಗದ ಸಿಬ್ಬಂದಿಯ ಸುರಕ್ಷತೆ ನೀಡುವ ಯಾವ ಕ್ರಮವನ್ನೂ ಕೈಗೊಂಡಿಲ್ಲ,’ ಎಂದು ಅಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ರಂಗಪ್ಪ ಜಾಲಹಳ್ಳಿ ಅವರು  ಸಂಬಂಧಿಸಿದ ಅಧಿಕಾರಿಗೆ ಇ-ಮೈಲ್‌ ಮೂಲಕ  ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ. 

ಅಲ್ಲದೆ, ‘ ಮಾಸ್ಕ್‌ಗಳ ಗುಣಮಟ್ಟದ  ಬಗ್ಗೆ  ಇಲ್ಲಿನ ಸಿಬ್ಬಂದಿಗೆ ತಾಂತ್ರಿಕ ಮತ್ತು ವೈದ್ಯಕೀಯ ಮಾನದಂಡಗಳ ಅರಿವು ಇರುವುದಿಲ್ಲ. ಶಿಷ್ಟಾಚಾರ ವಿಭಾಗದಲ್ಲಿ ಸಿ ಮತ್ತು ಡಿ ಗ್ರೂಪ್‌ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸರ್ಜಿಕಲ್‌ ಮಾಸ್ಕ್‌ಗಳನ್ನು ವಿಳಂಬವಿಲ್ಲದೆ ತಕ್ಷಣವೇ ಒದಗಿಸಬೇಕು,’ ಎಂದು ಕಳೆದ ಕೆಲ ದಿನಗಳಿಂದ ನೆನಪೋಲೆಗಳನ್ನು ಬರೆಯತ್ತಿದ್ದರೂ ಸಂಬಂಧಿಸಿದ ಅಧಿಕಾರಿವರ್ಗ ಇತ್ತ ತಲೆಹಾಕಿಲ್ಲ ಎಂದು ಗೊತ್ತಾಗಿದೆ. 

ವಿದೇಶಿ ಪ್ರತಿನಿಧಿಗಳು, ರಾಯಭಾರಿಗಳು ಮತ್ತು ಹೊರರಾಜ್ಯದಿಂದ ವಿವಿಧ ಉದ್ದೇಶಗಳಿಗಾಗಿ ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರ ವಲಸೆ  ಪ್ರಮಾಣ ಪತ್ರ  ಪರಿಶೀಲಿಸುವಲ್ಲಿ ಶಿಷ್ಟಾಚಾರ ಸಿಬ್ಬಂದಿ ಸಹಕರಿಸುತ್ತಾರೆ. ಒಂದೊಂದು ಪಾಳಿಯಲ್ಲಿ ಕನಿಷ್ಠ 60ರಿಂದ 70 ಮಂದಿ ಸೇರಿ ಅಂದಾಜು 200 ಮಂದಿ ಶಿಷ್ಟಾಚಾರ ವಿಭಾಗದಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ. ಪಾಳಿಯೊಂದರಲ್ಲಿ ಕನಿಷ್ಠ 10 ಮಂದಿ ವಿದೇಶಿ ಪ್ರತಿನಿಧಿಗಳನ್ನು ಪರಿಶೀಲಿಸುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿದೇಶಗಳಿಂದ ಭಾರತಕ್ಕೆ ಬಂದಿಳಿಯುವ ಪ್ರಯಾಣಿಕರ ಮೇಲೆ ನಿಗಾ ಇಡುವ ಜತೆಯಲ್ಲೇ ವೈರಸ್‌ನಿಂದ ಹೆಚ್ಚು ಜನ ಮೃತಪಟ್ಟಿರುವ ಚೀನಾದ ವುಹಾನ್‌, ಹ್ಯೂಬಿಯಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಇಂತಹ ಹೊತ್ತಿನಲ್ಲಿ ಸಂದರ್ಶಕರು, ರಾಯಭಾರಿಗಳು, ವಿದೇಶಿ ಪ್ರತಿನಿಧಿಗಳ ಮೇಲೆ ನಿಗಾ ಇಡುವ ಶಿಷ್ಟಾಚಾರ ಸಿಬ್ಬಂದಿಗೆ ಮಾಸ್ಕ್‌ ಸೇರಿದಂತೆ ಇನ್ನಿತರೆ ಸುರಕ್ಷತೆ ಕ್ರಮಕೈಗೊಳ್ಳದಿರುವುದು ಸರ್ಕಾರದ ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

the fil favicon

SUPPORT THE FILE

Latest News

Related Posts