ಶ್ರೀಗಂಧ; ಕಾಂಗ್ರೆಸ್‌ ಸರ್ಕಾರ ರದ್ದುಗೊಳಿಸಿದ್ದ ಆದೇಶ ಮರುಪರಿಶೀಲನೆಗೆ ಶ್ರೀ ಕೃಷ್ಣಮಠ ಒತ್ತಡ

ಬೆಂಗಳೂರು; ಪ್ರವರ್ಗ ಎ ಮತ್ತು ಬಿ ಪಟ್ಟಿಯಲ್ಲಿಲ್ಲದ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ವಾರ್ಷಿಕ 10.00 ಕೆ ಜಿ ಶ್ರೀಗಂಧ ಮಂಜೂರು ಮಾಡಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಮಾಡಿದ್ದ ಶಿಫಾರಸ್ಸನ್ನು ಬದಿಗಿರಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಪ್ರತಿ ತಿಂಗಳು 50 ಕೆ ಜಿ ಯಂತೆ ವಾರ್ಷಿಕ 6 ಕ್ವಿಂಟಾಲ್‌ ಶ್ರೀಗಂಧವನ್ನು ಪ್ರತಿ ವರ್ಷ ಒದಗಿಸಲು ಮುಂದಾಗಿದೆ. ಅಲ್ಲದೆ ಈ ಮಠಕ್ಕೆ ಶ್ರೀಗಂಧವನ್ನು ನೀಡುವುದನ್ನು ರದ್ದುಗೊಳಿಸಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಆದೇಶವನ್ನು ಮರು ಪರಿಶೀಲಿಸಲು ಒಲವು ತೋರಿದೆ.

ಶ್ರೀಗಂಧ ಮಂಜೂರು ಮಾಡುವ ಸಂಬಂಧ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಠದ ಆಡಳಿತಾಧಿಕಾರಿ ಪತ್ರಗಳನ್ನು ಬರೆದಿದ್ದರು. ಆದರೆ ಮಂಜೂರಾತಿ ವಿಳಂಬ ಆಗುತ್ತಿದ್ದಂತೆ ಉಡುಪಿ ಶಾಸಕ ರಘುಪತಿ ಭಟ್‌ ಅವರು ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಶ್ರೀಗಂಧ ಮಂಜೂರಾತಿ ಸಂಬಂಧ ಮಠವು ಸರ್ಕಾರದ ಮೇಲೆ ಒತ್ತಡವನ್ನು ಮುಂದುವರೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಶ್ರೀಗಂಧ ಮಂಜೂರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಹೊರಡಿಸುವ ಸಂಬಂಧ ಮಾಹಿತಿ ಕೋರಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು 2021ರ ನವೆಂಬರ್‌ 9ರಂದು ಅರಣ್ಯ ಪಡೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಶ್ರೀ ಕೃಷ್ಣಮಠಕ್ಕೆ ಶ್ರೀಗಂಧ ಒದಗಿಸುವ ಸಂಬಂಧ ಉಡುಪಿ ಶಾಸಕ ಕೆ ರಘುಪತಿ ಭಟ್‌ ಅವರು ಸಚಿವ ಉಮೇಶ್‌ ಕತ್ತಿ ಅವರಿಗೆ 2021ರ ಸೆಪ್ಟಂಬರ್‌ 22ರಂದು ಪತ್ರ ಬರೆದಿದ್ದರು. ‘ಉಡುಪಿ ಶ್ರೀ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ದೇವರ ಪೂಜಾ ಕೈಂಕರ್ಯಗಳಿಗಾಗಿ ಉಪಯೋಗಿಸುತ್ತಿದ್ದ ಶ್ರೀಗಂಧ ಹಿಂದಿನ ಕಾಲದಲ್ಲಿ ರಾಜರಿಂದ ಬಳುವಳಿಯಾಗಿ ಬಂದ ಪ್ರದೇಶದಿಂದ ದೊರಕುತ್ತಿತ್ತು. ನಂತರ ಬ್ರಿಟೀಷರ ಕಾಲಘಟ್ಟದಲ್ಲೂ ಪ್ರತಿ ವರ್ಷ 1090 ಕೆ ಜಿ. ಶ್ರೀಗಂಧವನ್ನು ಸರ್ಕಾರವೇ ಒದಗಿಸುತ್ತಿತ್ತು.

ಆದರೆ 2017ರಲ್ಲಿ ಸರ್ಕಾರವು ರದ್ದುಗೊಳಿಸಲು ಆದೇಶಿಸಿದೆ. ಈ ಆದೇಶವನ್ನು ಮರು ಪರಿಶೀಲಿಸಿ ಕೃಷ್ಣ ಮಠಕ್ಕೆ ಶ್ರೀಗಂಧ ಒದಗಿಸಲು ಸೂಕ್ತ ಆದೇಶ ಹೊರಡಿಸಬೇಕು,’ ಎಂದು ರಘುಪತಿ ಭಟ್‌ ಅವರು ಪತ್ರ ಬರೆದಿದ್ದರು.

ಈ ಪತ್ರವನ್ನಾಧರಿಸಿ ಕಾನೂನಾತ್ಮಕವಾಗಿ ಪರಿಶೀಲಿಸಿ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಉಮೇಶ್‌ ಕತ್ತಿ ಅವರು 2021ರ ಸೆಪ್ಟಂಬರ್‌ 28ರಂದು ಅರಣ್ಯ ಪರಿಸರ, ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಅರಣ್ಯ ಪಡೆ ಮುಖ್ಯಸ್ಥರು ಈ ಸಂಬಂಧ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ಹೀಗಾಗಿ 2021ರ ನವೆಂಬರ್‌ 9ರಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪುನಃ ಪತ್ರ ಬರೆದಿದ್ದಾರೆ. ‘ಶ್ರೀಗಂಧವನ್ನು ಯಾವ ಆಧಾರ/ಮಾನದಂಡದ ಮೇಲೆ ದೇವಸ್ಥಾನಗಳಿಗೆ ಹಂಚಿಕೆ ಮಾಡಲಾಗುವುದು, ಕರ್ನಾಟಕ ಅರಣ್ಯ ನಿಯಮಗಳು 1979ರ ನಿಯಮ 98ರ ಅನ್ವಯ ದೇವಸ್ಥಾನಗಳು ಸಲ್ಲಿಸುವ ಬೇಡಿಕೆಗೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ದೃಢೀಕರಿಸಬೇಕಾಗಿದ್ದು ಈ ಪ್ರಕ್ರಿಯೆ ನಡೆದಿದೆಯೇ,’ ಎಂಬ ಮಾಹಿತಿಯನ್ನು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

ಅದೇ ರೀತಿ ಪ್ರಸ್ತಾಪಿತ ವರ್ಗದ ಒಟ್ಟು ಲಭ್ಯತೆಯ ಪ್ರಮಾಣವೆಷ್ಟು, ಈ ಉದ್ದೇಶಕ್ಕಾಗಿ ಮೀಸಲಿಡಬೇಕಿರುವ ಶ್ರೀಗಂಧ ಪ್ರಮಾಣ ಎಷ್ಟು ಎಂಬ ಮಾಹಿತಿಯನ್ನು ಕೋರಿರುವುದು ಪತ್ರದಿಂದ ಗೊತ್ತಾಗಿದೆ.

ಪ್ರವರ್ಗ ಎ ಮತ್ತು ಬಿ ಪಟ್ಟಿಯಲ್ಲಿ ನಮೂದಿಸಿದ ದೇವಸ್ಥಾನ ಹಾಗೂ ಸಂಸ್ಥೆಗಳಿಗೆ ಕ್ರಮವಾಗಿ 20 ಕೆ ಜಿ ಹಾಗೂ 10 ಕೆ ಜಿ ಶ್ರೀಗಂಧವನ್ನು ಮಂಜೂರು ಮಾಡಲು ಅವಕಾಶವಿದೆ. ಉಡುಪಿಯ ಶ್ರೀ ಕೃಷ್ಣ ಮಠವು ಈ ಎರಡೂ ಪಟ್ಟಿಯಲ್ಲಿ ಸೇರಿಲ್ಲ. ಒಂದು ವೇಳೆ ಇವೆರಡೂ ಪ್ರವರ್ಗಕ್ಕೆ ಒಳಗೊಂಡಿಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಶಿಫಾರಸ್ಸಿನ ಆಧಾರದ ಮೇಲೆ ವಾರ್ಷಿಕವಾಗಿ 10.00 ಕೆ ಜಿ ಶ್ರೀಗಂಧವನ್ನು ದೇವಸ್ಥಾನ ಹಾಗೂ ಸಂಸ್ಥೆಗಳಿಗೆ ಬೇಡಿಕೆ ಇವುಗಳಲ್ಲಿ ಯಾವುದು ಪ್ರಮಾಣ ಕಡಿಮೆ ಇರುತ್ತದೆಯೋ ಅದನ್ನು ಪರಿಗಣಿಸಬಹುದು ಎಂದು ಸರ್ಕಾರ ಆದೇಶಿಸಿತ್ತು.

ಆದರೆ ಈ ಆದೇಶವನ್ನೇ ಅರಣ್ಯ, ಪರಿಸರ ಇಲಾಖೆಯು ಬದಿಗಿರಿಸಿ ಪ್ರತಿ ಮಾಹೆ 10 ಕೆ ಜಿ ಯಂತೆ ವಾರ್ಷಿಕ 120 ಕೆ ಜಿ ಶ್ರೀಗಂಧವನ್ನು ಪ್ರತಿ ವರ್ಷ ಒದಗಿಸು ಹಾಗೂ ಶ್ರೀಗಂಧದ ಲಭ್ಯತೆ ಮೇರೆಗೆ ಈ ಪ್ರಮಾಣವನ್ನು ಹೆಚ್ಚಿಸಲು ಪತ್ರ ವ್ಯವಹಾರವನ್ನು ಮುಂದುವರೆಸಿದೆ.

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ದೇವರಿಗೆ ವಿಶೇಷವಾಗಿ ಗಂಧವನ್ನು ಸಮರ್ಪಿಸಿ ಭಕ್ತರಿಗೆ ಪ್ರಸಾದ ರೂಪವಾಗಿ ನೀಡಲು ತಿಂಗಳಿಗೆ ಪ್ರತಿ ಮಾಹೆ 50 ಕೆ ಜಿ ಯಂತೆ ವಾರ್ಷಿಕವಾಗಿ 6 ಕ್ವಿಂಟಾಲ್‌ ಶ್ರೀಗಂಧ ಒದಗಿಸಬೇಕು ಎಂದು ಕೃಷ್ಣಮಠ ಪರ್ಯಾಯ ಆದಮಾರು ಮಠವು ಸರ್ಕಾರಕ್ಕೆ ಕೋರಿತ್ತು.

ಸ್ವಾತಂತ್ರ್ಯ ಪೂರ್ವದಿಂದಲೂ ಶ್ರೀ ಕೃಷ್ಣನ ಪೂಜಾ ಕೈಂಕರ್ಯಗಳಿಗಾಗಿ ರಾಜರಿಂದ ಬಳವಳಿಯಾಗಿ ಬಂದ ಪ್ರದೇಶದಿಂದ ಶ್ರೀಗಂಧ ದೊರಕುತ್ತಿತ್ತು. ಆ ನಂತರ ಬ್ರಿಟಿಷರ ಕಾಲದಿಂದ ಪ್ರತಿ ವರ್ಷವೂ 1090 ಕೆ ಜಿ ಶ್ರೀಗಂಧವನ್ನು ಭೂಮಿ ನೋಡಿಕೊಂಡು ಸರ್ಕಾರವೇ ಒದಗಿಸುತ್ತಿತ್ತು. ಆದರೆ 2017ರಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಇದನ್ನು ರದ್ದುಗೊಳಿಸಿತ್ತು.

ಇದನ್ನು ಪರಿಶೀಲಿಸಿ ಪುನಃ ಶ್ರೀಗಂಧವನ್ನು ಒದಗಿಸಿ ಅದನ್ನು ಭಕ್ತರಿಗೆ ವಿನಿಯೋಗಿಸಲು ಅನುಕೂಲ ಮಾಡಿಕೊಟ್ಟು ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಶ್ರೀಕೃಷ್ಣಮಠ ಪರ್ಯಾಯ ಶ್ರೀ ಆದಮಾರು ಮಠದ ವ್ಯವಸ್ಥಾಪಕರು ಮತ್ತು ಕೃಷ್ಣಾಪುರ ಮಠದ ದಿವಾನರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2021ರ ಆಗಸ್ಟ್‌ 17 ಮತ್ತು 2021ರ ಅಕ್ಟೋಬರ್‌ 12ರಂದು ಪತ್ರ ಬರೆದಿತ್ತು.

ಹಾಗೆಯೇ ಮಠವು 2021ರ ಏಪ್ರಿಲ್‌ 23ರಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಪತ್ರ ಬರೆದಿತ್ತು. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರತಿ ವರ್ಷವೂ ಉಚಿತವಾಗಿ ಶ್ರೀಗಂಧವನ್ನು ಪೂರೈಕೆ ಮಾಡಬೇಕು ಎಂದು ಕೋರಿಕೊಂಡಿತ್ತು. ಶ್ರೀಗಂಧವನ್ನು ಪಡೆಯಲು ಮಠವು ಕಾನೂನುಬದ್ಧವಾಗಿ ಹಕ್ಕು ಹೊಂದಿತ್ತಾದರೂ ಅದನ್ನು 2017ರ ಡಿಸೆಂಬರ್‌ 4ರಂದು ಹಿಂದಿನ ಕಾಂಗ್ರೆಸ್‌ ಸರ್ಕಾರವು ರದ್ದುಗೊಳಿಸಿತ್ತು.

‘ಉಚಿತವಾಗಿ ಶ್ರೀಗಂಧವನ್ನು ಪಡೆಯಲು ಮಠವು ಟೈಟಲ್‌ ಡೀಡ್‌ ಹೋಲ್ಡರ್‌ ಆಗಿದೆ. ಕರ್ನಾಟಕ ಅರಣ್ಯ ಸಂಹಿತೆ 97ರ ಪ್ರಕಾರ 29 ಧಾರ್ಮಿಕ ಸಂಸ್ಥೆಗಳಿಗೆ ಉಚಿತವಾಗಿ ಶ್ರೀಗಂಧವನ್ನು ಪೂರೈಕೆ ಮಾಡಬೇಕು. ಹೀಗಾಗಿ ಶ್ರೀಗಂಧವನ್ನು ಮಠಕ್ಕೆ ಪೂರೈಕೆ ಮಾಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ,’ ಎಂದು ಏಪ್ರಿಲ್‌ 2021ರಂದು ಬರೆದಿದ್ದ ಪತ್ರದಲ್ಲಿ ವಿವರಿಸಲಾಗಿತ್ತು.

SUPPORT THE FILE

Latest News

Related Posts