ಬೆಂಗಳೂರು; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ನಿಧಿಯಡಿ ಕೇವಲ 189 ಕೋಟಿ ಮಾತ್ರ ಇದೆ. ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ ಆವರ್ತ ನಿಧಿಗೆ 2,500 ಕೋಟಿ ಬಾಕಿ ಬರಬೇಕಿದೆ.
ರೈತರು ಬೆಳೆದಿರುವ ಉತ್ಪನ್ನ ಖರೀದಿ ಮಾಡುವ ಸಂಬಂಧ ವಿಳಂಬ ಆಗಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸುತ್ತಿರುವ ಬೆನ್ನಲ್ಲೇ ಆವರ್ತ ನಿಧಿಗೆ ನಾಫೆಡ್, ಆಹಾರ ನಿಗಮ ಸೇರಿದಂತೆ ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ 2,500 ಕೋಟಿ ರು. ಬಾಕಿ ಬರಬೇಕಿರುವ ವಿಚಾರ ಮುನ್ನೆಲೆಗೆ ಬಂದಿದೆ.
ರೈತರ ಉತ್ಪನ್ನಗಳನ್ನು ಖರೀದಿ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಕೃಷಿ ಬೆಲೆ ಆಯೋಗವು ಸರ್ಕಾರದ ಗಮನಕ್ಕೆ ತಂದಿದ್ದರೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಈವರೆವಿಗೂ ಗಮನಹರಿಸಿಲ್ಲ.
ಕೃಷಿ ಮಾರಾಟ ಇಲಾಖೆಯೂ ಸೇರಿದಂತೆ ಸಹಕಾರ ಇಲಾಖೆಯಡಿ ಬರುವ ವಿವಿಧ ಸ್ವ ಸಹಾಯ ಸಂಘಗಳು, ಸಹಕಾರ ಬ್ಯಾಂಕ್‌ಗಳು, ಬೆಂಬಲ ಬೆಲೆ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 21ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಆವರ್ತ ನಿಧಿಗೆ 2,500 ಕೋಟಿ ರು. ಬಾಕಿ ಬರಬೇಕಿದೆ ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. ಈ ಸಭೆಯ ನಡವಳಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ನಿಧಿಯಡಿ ಪ್ರಸ್ತುತ 189 ಕೋಟಿಗಳಿದ್ದು, ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ ಆವರ್ತ ನಿಧಿಗೆ ಬರಬೇಕಾಗಿರುವ ಬಾಕಿ 2,500 ಕೋಟಿಗಳಿರುತ್ತವೆ,’ ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಕರಿಗೌಡ ಅವರು ಸಭೆಗೆ ಮಾಹಿತಿ ಒದಗಿಸಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.
ಕೃಷಿಗೆ ಹಾನಿ ಉಂಟಾದಾಗ ಕೃಷಿಕರಿಗೆ ಪ್ರಯೋಜನವಾಗಲು ಆವರ್ತ ನಿಧಿ ಪ್ರಾರಂಭಿಸಲಾಗಿತ್ತು. ಆವರ್ತ ನಿಧಿ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಮುಂತಾದ ಅಂಶಗಳನ್ನು ಸಮಗ್ರ ಖರೀದಿ ನೀತಿಯಲ್ಲಿ ಅಳವಡಿಸಿಕೊಳ್ಳಲು ಕೃಷಿ ಬೆಲೆ ಆಯೋಗವು ಇತ್ತೀಚೆಗಷ್ಟೇ ಶಿಫಾರಸು ಮಾಡಿತ್ತು.
ರೈತರ ಉತ್ಪನ್ನ ಖರೀದಿಗಾಗಿಯೇ ಇಟ್ಟಿದ್ದ ಆವರ್ತ ನಿಧಿ ಎಲ್ಲಿ ಹೋಯಿತು? ಅದನ್ನು ಯಾತಕ್ಕೆ ಬಳಕೆ ಮಾಡಲಾಯಿತು ಎಂದು ಇತ್ತೀಚೆಗಷ್ಟೇ ರೈತ ಸಂಘದ ಮುಖಂಡರು ಪ್ರಶ್ನೆ ಮಾಡಿದ್ದರು. ರೈತರು ಬೆಳೆದಿರುವ ಉತ್ಪನ್ನ ಖರೀದಿ ಮಾಡದಿದ್ದರೆ ಹೇಗೆ? ಈಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಮಾರಿದ್ದಾರೆ. ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೂ ಪರವಾಗಿಲ್ಲ, ರೈತರ ಖಾತೆಗೆ ನೇರವಾಗಿ ಹಣವನ್ನಾದರೂ ಜಮಾ ಮಾಡಿ ಎಂದು ಒತ್ತಾಯಿಸಿದ್ದರು.
ಸೂರ್ಯಕಾಂತಿ ಹಾಗೂ ಶೇಂಗಾ ಎಣ್ಣೆಕಾಳುಗಳ ಬೆಲೆ ಕುಸಿತಕ್ಕೊಳಾಗಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಬೇಕು ಎಂದು 2021ರ ಸೆಪ್ಟಂಬರ್ 18ರಂದು ಕರ್ನಾಟಕ ಕೃಷಿ ಬೆಲೆ ಆಯೋಗವು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.
ಇನ್ನು, ಕಾಯಕ ಯೋಜನೆಯನ್ನು ಸ್ವಸಹಾಯ ಗುಂಪುಗಳ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಬಡವರ ಬಂಧು ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅಂತ್ಯಗೊಳಿಸಲಾಗಿದೆ. ಹೀಗಾಗಿ ಹಳೇ ಬಿಲ್ಲುಗಳಿಗೆ ಮಾತ್ರ ಅನುದಾನವನ್ನು ಬಡವರ ಬಂಧು ಯೋಜನೆಯಡಿ ಬಿಡುಗಡೆ ಮಾಡುತ್ತಿರುವುದು ನಡವಳಿಯಿಂದ ಗೊತ್ತಾಗಿದೆ.
ಅದೇ ರೀತಿ ಸಹಕಾರಿ ಸಂಸ್ಥೆಗಳಲ್ಲಿ ವಿವಿಧ ವರ್ಗದ ಜನರಿಗೆ ಸದಸ್ಯರನ್ನಾಗಿ ನೋಂದಾಯಿಸಲು ಒಟ್ಟು 100 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಷೇರು ಬಂಡವಾಳ ಹೂಡಿಕೆ ಯೋಜನೆಯಡಿ 210 ಲಕ್ಷ ರು. ಬಿಡುಗಡೆಯಾಗಿದೆ. ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ತಲಾ 10 ಲಕ್ಷ ರು. ಬಿಡುಗಡೆ ಮಾಡಲು ಇಲಾಖೆ ಕ್ರಮ ವಹಿಸಿದೆ.
ಈರುಳ್ಳಿ, ಟೊಮ್ಯಾಟೋ, ಆಲೂಗಡ್ಡೆ ಇತ್ಯಾದಿ ಉತ್ಪನ್ನಗಳನ್ನು ಗೋದಾಮಿನಲ್ಲಿ ಶೇಖರಣೆ ಮಾಡುವ ಬದಲು ಶಾಲಾ ಮಕ್ಕಳ ಉಪಯೋಗಕ್ಕಾಗಿ ಬಳಸಿಕೊಳ್ಳುವ ಸಂಬಂಧ ಪರಿಶೀಲಿಸಿ ಯೋಜನೆ ರೂಪಿಸಲು ಕೃಷಿ ಮಾರಾಟ ಇಲಾಖೆಗೆ ಸಭೆಯಲ್ಲಿ ಸೂಚಿಸಿದೆ ಎಂದು ತಿಳಿದು ಬಂದಿದೆ.