ಮುತ್ತಪ್ಪ ರೈ ಭದ್ರತೆ; ಕಾನೂನು ಸುವ್ಯವಸ್ಥೆ ಶಾಖೆಯಲ್ಲಿ ಶ್ರೀರಾಮುಲು ಶಿಫಾರಸ್ಸು ಪತ್ರವೇ ಇಲ್ಲ

ಬೆಂಗಳೂರು; ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್‌ ಮುತ್ತಪ್ಪ ರೈ ಅವರಿಗೆ ಭದ್ರತೆ ನೀಡುವ ಸಂಬಂಧ ಸಚಿವ ಬಿ ಶ್ರೀರಾಮುಲು ಅವರು ಗೃಹ ಇಲಾಖೆಗೆ ಬರೆದಿದ್ದ ಶಿಫಾರಸ್ಸು ಪತ್ರ, ಟಿಪ್ಪಣಿ ಹಾಳೆಯು ಕಾನೂನು ಸುವ್ಯವಸ್ಥೆ ಶಾಖೆಯಲ್ಲಿ ಲಭ್ಯವಿಲ್ಲ ಎಂದು ಒಳಾಡಳಿತ ಇಲಾಖೆಯು ಉತ್ತರಿಸಿದೆ.

ಬಹು ಕೋಟಿ ವಂಚನೆ ಆರೋಪಕ್ಕೆ ಗುರಿಯಾಗಿರುವ ಯುವರಾಜಸ್ವಾಮಿ ಮನೆ ಮೇಲೆ ಪೊಲೀಸರು ನಡೆಸಿದ್ದ ದಾಳಿ ವೇಳೆಯಲ್ಲಿ ಶ್ರೀರಾಮುಲು ಹೆಸರಿನಲ್ಲಿರುವ ಲೆಟರ್‌ ಹೆಡ್‌ ಪತ್ರದಲ್ಲಿ ಎನ್‌ ಮುತ್ತಪ್ಪ ರೈಗೆ ಗೃಹ ಇಲಾಖೆಯಿಂದ ಭದ್ರತೆ ನೀಡುವ ಸಂಬಂಧ ಇಂಗ್ಲೀಷ್‌ನಲ್ಲಿ ಟೈಪ್ ಮಾಡಿದ್ದ ಪತ್ರವು ದೊರೆತಿತ್ತು. ಇದನ್ನು ದೋಷಾರೋಪಣೆ ಪಟ್ಟಿಯಲ್ಲಿಯೂ ಉಲ್ಲೇಖಿಸಿತ್ತು.

ಶಿಫಾರಸ್ಸು ಪತ್ರ ದೊರೆತಿದ್ದನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದರೂ ಇದೀಗ ಇಂತಹ ಶಿಫಾರಸ್ಸು ಪತ್ರ ಅಥವಾ ಟಿಪ್ಪಣಿ ಹಾಳೆಯು ಲಭ್ಯವಿಲ್ಲ ಎಂದು ಉತ್ತರಿಸಿರುವ ಒಳಾಡಳಿತ ಇಲಾಖೆಯು ಮುಚ್ಚಿಡುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಯುವರಾಜಸ್ವಾಮಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಹಲವು ದಾಖಲಾತಿ, ವಿವಿಧ ಸಚಿವರ ಹೆಸರಿನಲ್ಲಿದ್ದ ಲೆಟರ್‌ಹೆಡ್‌ಗಳನ್ನು ವಶಪಡಿಸಿಕೊಂಡಿದ್ದರು.

ಇದರಲ್ಲಿ ಜಯ ಕರ್ನಾಟಕ ಸಂಘಟನೆಗೆ ಸೇರಿದ್ದ ಲೆಟರ್‌ಹೆಡ್‌ ಕೂಡ ಇತ್ತು. ಇದೇ ಲೆಟರ್‌ಹೆಡ್‌ನಲ್ಲಿ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈಗೆ ಭದ್ರತೆ ನೀಡುವ ಸಂಬಂಧ ಗೃಹ ಇಲಾಖೆಗೆ ಕೋರಿರುವ ಬಗ್ಗೆ ಲೆಟರ್‌ಹೆಡ್‌ನಲ್ಲಿ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಲಾಗಿತ್ತು. ಎಂಬುದು ದೃಢೀಕರಿಸಿದ ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿತ್ತು.

ಆರ್‌ಟಿಜಿಎಸ್‌ ಮೂಲಕ 18 ಲಕ್ಷ ವರ್ಗಾವಣೆ

ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್‌ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ನ ವಹಿವಾಟಿನ ದಾಖಲೆಯಿಂದ ತಿಳಿದು ಬಂದಿತ್ತು.

ಇದಲ್ಲದೆ ಯುವರಾಜಸ್ವಾಮಿ ಮನೆಯಲ್ಲಿ ವಶಪಡಿಸಿಕೊಂಡಿದ್ದ ದಾಖಲಾತಿಗಳಲ್ಲಿ ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ, ಟಿ ಶಾಮ್‌ಭಟ್‌ ಸೇರಿದಂತೆ ಹಲವು ಗಣ್ಯರ ಹೆಸರಿನಲ್ಲಿದ್ದ ಲೆಟರ್‌ಹೆಡ್‌ಗಳು ಮತ್ತು ದಾಖಲೆಗಳು ದೊರೆತಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts