ಪರಿಶಿಷ್ಟರಿಗಿಟ್ಟಿದ್ದ 300 ಕೋಟಿ ಅನ್ಯ ಉದ್ದೇಶಕ್ಕೆ ಖರ್ಚು; ಪೇಶ್ವೆಗೆ ಆಯೋಗದಿಂದ ನೋಟೀಸ್‌ ಜಾರಿ

ಬೆಂಗಳೂರು; ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಪಂಗಡಗಳ ಅಭಿವೃದ್ಧಿಗೆ ಭೂ ಸ್ವಾಧೀನ ವೆಚ್ಚಗಳ ಶೀರ್ಷಿಕೆಯಡಿ ಮತ್ತು ಟಿಎಸ್‌ಪಿ ಅನುದಾನ ಸೇರಿ ಒಟ್ಟು 300 ಕೋಟಿ ರು. ಅನುದಾನವನ್ನು ಮೂಲ ಉದ್ದೇಶಕ್ಕೆ ಹಂಚಿಕೆ ಮಾಡದೇ ಬೇರೊಂದು ಉದ್ದೇಶದ ಕಾಮಗಾರಿಗಳಿಗೆ ಖರ್ಚು ಮಾಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ. ಈ ಸಂಬಂಧ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣರಾವ್‌ ಪೇಶ್ವೆ ಅವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗವು ನೋಟೀಸ್‌ ಜಾರಿಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಕಾಲದೊಳಗೆ ಉತ್ತರವನ್ನು ನೀಡದಿದ್ದಲ್ಲಿ ಆಯೋಗದ ಆಧಿನಿಯಮದ ಮೇರೆಗೆ ಸಿವಿಲ್‌ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆಯೋಗದ ಮುಂದೆ ಖುದ್ದಾಗಿ ಅಥವಾ ಪ್ರತಿನಿಧಿಯ ಮೂಲಕ ಹಾಜರಾಗಬೇಕು ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ. 2021ರ ಸೆಪ್ಟಂಬರ್‌ 24ರಂದು ನೀಡಿರುವ ನೋಟೀಸ್‌ನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ

ಕೃಷ್ಣ ಭಾಗ್ಯ ಜಲನಿಗಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಭೂ ಸ್ವಾಧೀನ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಕಾಮಗಾರಿಗಳಿಗೆ ಒಟ್ಟು 201.17 ಕೋಟಿ ರು. ಮತ್ತು ಟಿಎಸ್‌ಪಿ ಯೋಜನೆಯಡಿ 98.83 ಕೋಟಿ ರು. ಸೇರಿದಂತೆ ಒಟ್ಟು 300 ಕೋಟಿ ಅನುದಾನ ಮೀಸಲಿರಿಸಿತ್ತು. ಈ ಅನುದಾನದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ -1 ಮತ್ತು ಹಂತ-2ರಲ್ಲಿ ಮುಳುಗಡೆಯಾಗಿರುವ ಗ್ರಾಮಗಳ ಪುನರ್‌ ವಸತಿ ಕೇಂದ್ರಗಳ ಪೈಕಿ ಕೆಲ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿತ್ತು.

ಅಲ್ಲದೆ ಮನೆ ನಿರ್ಮಾಣ ಮಾಡದೇ ಇರುವ ಎಸ್‌ ಸಿ ಎಸ್‌ ಟಿ ಸಂತ್ರಸ್ತರನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಕಾರ್ಯಕ್ರಮಕ್ಕೆ 2017-18ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಪರಿಷತ್‌ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರಲ್ಲಿ ಬಾಧಿತರಾಗುವ 20 ಗ್ರಾಮಗಳ ಪೈಕಿ ಆದ್ಯತೆ ಮೇರೆಗೆ 9 ಗ್ರಾಮಗಳಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳ ಕುಟುಂಬಗಳನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲು ತೀರ್ಮಾನಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ಉದ್ದೇಶಕ್ಕೆ 2017-18ನೇ ಸಾಲಿನಲ್ಲಿ ಎಸ್‌ಸಿಪಿ ಶೀರ್ಷಿಕೆಯಡಿ 201.17 ಕೋಟಿ ಮತ್ತು ಟಿಎಸ್‌ಪಿ ಅಡಿಯಲ್ಲಿ 98.83 ಕೋಟಿ ರು ಸೇರಿ ಒಟ್ಟು 300 ಕೋಟಿ ರು. ಅನುದಾನವನ್ನು ಭೂ ಸ್ವಾಧೀನ ವೆಚ್ಚಗಳ ಶೀರ್ಷಿಕೆಯಡಿಯಲ್ಲಿ ಬಳಸಲು ಅನುಮೋದನೆ ಕೋರಿ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ 2018ರ ಜೂನ್‌ 30 ಮತ್ತು ಜುಲೈ 3ರಂದು ಪತ್ರ ಬರೆದಿದ್ದರು.

ಆದರೆ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗಕ್ಕೆ ಬರೆದಿದ್ದ ಉಲ್ಲೇಖ 2 ರ ಪತ್ರವದಲ್ಲಿ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಂದ ಯಾವುದೇ ನಿರ್ದೇಶನಗಳನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದ್ದರು ಎಂದು ಗೊತ್ತಾಗಿದೆ.

ಅನುದಾನ ಬಳಕೆ ಕುರಿತು ಸರ್ಕಾರದಿಂದ ಯಾವುದೇ ನಿರ್ದೇಶನ ಬರದಿರುವುದನ್ನೇ ಮುಂದಿಟ್ಟುಕೊಂಡು ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು 7(ಡಿ) ಅಡಿಯಲ್ಲಿ ನಿಯಮ ಉಲ್ಲೇಖಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಸಂವಿಧಾನಬದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಅಭಿವೃದ್ಧಿಗೆ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಲಾಗಿದೆ. ಶೋಷಿತ ಸಮುದಾಯಗಳ ಅಭಿವೃದ್ದಿಗೆ ಮೀಸಲಿರಿಸಿದ್ದ ಒಟ್ಟು 300 ಕೋಟಿ ರು.ಗಳ ಅನುದಾನವನ್ನು ಎಸ್‌ ಸಿ ಎಸ್‌ ಟಿ ಸಮುದಾಯಗಳ ಅಭಿವೃದ್ಧಿಗೆ ಸಂಬಂಧಪಡದ ಕಾಮಗಾರಿಗಳಿಗೆ ಅಕ್ರಮವಾಗಿ ಕಾನೂನುಬಾಹಿರವಾಗಿ ಲೆಕ್ಕ ಶೀರ್ಷಿಕೆಯನ್ನೇ ಬದಲಾವಣೆ ಮಾಡಲಾಗಿದೆ ಎಂದು ಗೊತ್ತಾಗಿದೆ.

‘ಇದು ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಯೂ ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಅನ್ಯಾಯ ಮಾಡಲಾಗಿದೆಯಲ್ಲದೆ ಕಾನೂನಿನಡಿ ಗುರುತರ ಅಪರಾಧವನ್ನು ಎಸಗಿದ್ದಾರೆ,’ ಎಂದು ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಅವರು ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts