ಬೆಂಗಳೂರು; ಸಹಕಾರಿ ಕ್ಷೇತ್ರದ ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ‘ನಂದಿನಿ’ ಬ್ರ್ಯಾಂಡ್ ಹೆಸರಿನಲ್ಲಿ ಖನಿಜಯುಕ್ತ ಕುಡಿಯುವ ನೀರನ್ನು ಉತ್ಪಾದಿಸಿ ಪ್ಯಾಕೇಟ್ ಮಾಡಿ ಸರಬರಾಜು ಮಾಡುವ ಸಂಬಂಧ ಕರೆಯಲಾಗಿದ್ದ ಟೆಂಡರ್‌ನಲ್ಲಿ ಅಕ್ರಮಗಳು ನಡೆದಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.
ಬೆಂಗಳೂರು, ಮಂಗಳೂರು, ಧಾರವಾಡ, ಬಳ್ಳಾರಿ ಮತ್ತು ಕಲ್ಬುರ್ಗಿ ವಲಯಗಳಿಗೆ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಕುಡಿಯುವ ನೀರನ್ನು ಉತ್ಪಾದಿಸಿ ಪ್ಯಾಕೇಟ್ ಮಾಡಿ ಸರಬರಾಜು ಮಾಡಲು ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಬಿಡ್‌ದಾರರ ಪೈಕಿ ಒಬ್ಬ ಬಿಡ್‌ದಾರರ ತಾಂತ್ರಿಕ ಬಿಡ್‌ನ್ನು ತಿರಸ್ಕೃತವಾಗಿದ್ದರೂ 2ನೇ ಬಿಡ್‌ದಾರರ ಏಕ ಟೆಂಡರ್‌ನ್ನು ಅನುಮೋದಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಕಲ್ಬುರ್ಗಿ ವಲಯಕ್ಕೆ ಸಂಬಂಧಿಸಿದಂತೆ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕರೆದಿದ್ದ ಟೆಂಡರ್‌ನಲ್ಲಿ ಅಕ್ರಮ ನಡೆದಿರುವ ಪ್ರಕರಣವು ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಂತದಲ್ಲಿ 20212ರ ಸೆಪ್ಟಂಬರ್ 1 ಮತ್ತು 6ರಂದು ವಿಚಾರಣೆ ನಡೆದಿದೆ. ಈ ಸಂಬಂಧ ಸೆ.13ರಂದು ಅಂತಿಮ ಆದೇಶವೂ ಹೊರಬಿದ್ದಿದೆ. ವಿಚಾರಣೆಯ ನಡವಳಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ಹಿನ್ನೆಲೆ
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್)ವು ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಮಂಜಿರಾ ಇಂಜಿನಿಯರಿಂಗ್ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈವೈಟ್ ಲಿಮಿಟೆಡ್ ನ್ನು ತಾಂತ್ರಿಕ ಕಾರಣಗಳಿಂದ ಬಿಡ್‌ನ್ನು 2021ರ ಏಪ್ರಿಲ್ 23ರಂದು ತಿರಸ್ಕರಿಸಿತ್ತು.
ಬದಲಿಗೆ 2ನೇ ಬಿಡ್‌ದಾರ ವಿಜಯಪುರದ ಎಸ್ ಕೆ ಇಂಡಸ್ಟ್ರೀಸ್‌ನ ಟೆಂಡರ್‌ನ್ನು ಅನುಮೋದಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಂಜಿರಾ ಇಂಜಿನಿಯರಿಂಗ್ ಕನ್ಸ್‌ಟ್ರಕ್ಷನ್ಸ್ ಕಂಪನಿ ಪೈವೈಟ್ ಲಿಮಿಟೆಡ್ ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೆಟ್ಟಿಲು ಹತ್ತಿತ್ತು.
‘ಕುಡಿಯುವ ನೀರು ಸರಬರಾಜು ಮಾಡುವ ಸಂಬಂಧವಾಗಿ ಮೇಲ್ಮನವಿದಾರರು ಮತ್ತು 2ನೇ ಪ್ರತಿವಾದಿಯವರು ಸಲ್ಲಿಲಸಿದ್ದ ಟೆಂಡರ್‌ಗಳಲ್ಲಿ ಮೇಲ್ಮನವಿದಾರರು ಸಲ್ಲಿಸಿದ್ದ ಟೆಂಡರ್‌ನ ತಾಂತ್ರಿಕ ಬಿಡ್‌ನ್ನು ತಿರಸ್ಕರಿಸಿ, 2ನೇ ಪ್ರತಿವಾದಿಯವರ ತಾಂತ್ರಿಕ ಬಿಡ್‌ನ್ನು ಅನುಮೋದಿಸಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಲಾಗಿತ್ತು,’ ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದಿರುವ ಹಿಂಬರಹದಂತೆ ಮೆಲ್ಮನವಿದಾದರರ ಸಂಸ್ಥೆಯಿಂದ ನೀರಿನ ಮಲಿನ ಆಗುವುದಿಲ್ಲವೆಂಬ ಅಂಶವನ್ನು ಪರಿಗಣಿಸದೆ ತಾಂತ್ರಿಕ ಬಿಡ್‌ನ್ನು ತಿರಸ್ಕರಿಸಿದ್ದ ಕೆಎಂಎಫ್ ಕ್ರಮ ಅಸಮಂಜಸವಾಗಿತ್ತು.
ಜಿಲ್ಲಾ ವಲಯದ ಕೇಂದ್ರ ಸ್ಥಳದಿಂದ 100 ಕಿ ಮೀ. ಅಂತರದೊಳಗೆ ನೀರು ಸರಬರಾಜು ಮಾಡಲಿರುವ ಸಂಸ್ಥೆಯ ಜಲ ಸಂಗ್ರಹಗಾರವಿರಬೇಕು ಮತ್ತು ಸೂಪರ್ ಸ್ಟಾಕಿಸ್ಟ್ ಜಲಸಂಗ್ರಹಗಾರದ ನಡುವೆ 100 ಕಿ ಮೀ.ಗಳ ಅಂತರದೊಳಗೆ ಇರಬೇಕು ಎಂಬ ನಿಬಂಧನೆಯೇ ಅಸ್ಪಷ್ಟವಾಗಿತ್ತು. ಆದರೂ ಇದನ್ನೇ ನೆಪ ಮಾಡಿಕೊಂಡಿದ್ದ ಕೆಎಂಎಫ್ ತಾಂತ್ರಿಕ ಬಿಡ್‌ನ್ನು ತಿರಸ್ಕರಿಸಿತ್ತು ಎಂಬದು ನಡವಳಿಯಿಂದ ಗೊತ್ತಾಗಿದೆ.
ಪ್ರಶ್ನಿತ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಂದನೇ ಪ್ರತಿವಾದಿ ಟೆಂಡರ್ ಪ್ರಾಧಿಕಾರವು ನಿಗದಿಪಡಿಸಿರುವ ನಿಬಂಧನೆಗಳಿಗನುಸಾರವಾಗಿ ಮೇಲ್ಮನವಿದಾರರು ಟೆಂಡರ್ ಸಲ್ಲಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಏಕ ಬಿಡ್ ಟೆಂಡರ್ ಸ್ವೀಕೃತವಾದ ಸಂದರ್ಭಗಳಲ್ಲಿ ಏಕ ಬಿಡ್ ಟೆಂಡರ್‌ಗಳನ್ನು ತಿರಸ್ಕರಿಸಿ ಮರು ಟೆಂಡರ್ ಕರೆಯಬೇಕಿತ್ತು. ಆದರೆ ಈ ಪ್ರಕರಣದ ಪ್ರಶ್ನಿತ ಟೆಂಡರ್ ಪ್ರಕ್ರಿಯೆಯಲ್ಲಿ ಮೇಲ್ಮನವಿದಾರರ ತಾಂತ್ರಿಕ ಬಿಡ್‌ನ್ನು ತಿರಸ್ಕರಿಸಿದ ನಂತರ 2ನೇ ಪ್ರತಿವಾದಿಯ ಏಕ ಟೆಂಡರ್‌ನ್ನು ಅನುಮೋದಿಸಿರುವ ಕ್ರಮವು ಸರ್ಕಾರದ ಸುತ್ತೋಲೆಯಲ್ಲಿನ ಸ್ಪಷ್ಟೀಕರಣಕ್ಕೆ ವ್ಯತಿರಿಕ್ತವಾದ ಕ್ರಮವಾಗಿದೆ ಎಂಬ ಅಭಿಪ್ರಾಯವು ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.
‘ಮೇಲ್ಮನವಿದಾರರ ತಾಂತ್ರಿಕ ಬಿಡ್‌ನ್ನು ತಿರಸ್ಕರಿಸಿ ಸಮಂಜಸವಾಗಿದ್ದರೂ ಸಹ 2ನೇ ಪ್ರತಿವಾದಿಯವರ ಏಕ ಟೆಂಡರ್‌ನ್ನು ಅನುಮೋದಿಸಿರುವ ಕ್ರಮ ಸಮಂಜಸವಾದುದಲ್ಲ. ಹೀಗಾಗಿ ಟೆಂಡರ್ ಅನುಮೋದನೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಹಾಗೂ ಒಂದನೇ ಪ್ರತಿವಾದಿ ಮಹಾಮಂಡಳದ ಕಲ್ಬುರ್ಗಿ ವಲಯ ಘಟಕಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಂಬಂಧ ನಿಯಮಾನುಸಾರ ಮರು ಟೆಂಡರ್ ಕರೆಯಲು ಕ್ರಮ ವಹಿಸಬೇಕು,’ ಎಂದು ಸಹಕಾರ ಇಲಾಖೆಯ ಕಾರ್ಯದರ್ಶಿ ಎನ್ ಜಯರಾಮ್ ಅವರು ಆದೇಶದಲ್ಲಿ ಸೂಚಿಸಿದ್ದಾರೆ.
ಹಾಲು ಮತ್ತು ಅದರ ಉಪ ಉತ್ಪನ್ನಗಳ ಮಾರಾಟದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದಿರುವ ಕೆಎಂಎಫ್‌ನಿತ್ಯ ಸರಾಸರಿ 51.65 ಲಕ್ಷ ಲೀಟರ್ ಹಾಲು ಸಂಗ್ರಹಿಸುವುದರ ಜತೆಗೆ ರಾಜ್ಯದೆಲ್ಲೆಡೆ ಹಾಲು ಮಾರಾಟ ಕೇಂದ್ರಗಳನ್ನು (ಪಾರ್ಲರ್) ಹೊಂದಿದೆ. ಹಾಲು ಮತ್ತು ಹಾಲಿನ ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಅದರ ಜತೆಗೆ ಕುಡಿಯುವ ನೀರಿನ ಬಾಟಲಿಗಳನ್ನೂ ಮಾರಲು ಮುಂದಾಗಿತ್ತು.
ಪಾರ್ಲರ್‌ಗಳಿಗೆ ಬರುವ ಗ್ರಾಹಕರು ಕುಡಿಯುವ ನೀರಿನ ಬಾಟಲಿಗಳಿಗೂ ಬೇಡಿಕೆ ಇರಿಸಿದ್ದರು. ಈ ಕಾರಣದಿಂದ ಖಾಸಗಿಯವರ ನೀರಿನ ಬಾಟಲಿ ಮಾರಾಟ ಮಾಡುವುದಕ್ಕಿಂತ ತಮ್ಮದೇ ಬ್ರ್ಯಾಂಡ್‌ನ ನೀರು ಮಾರಾಟ ಮಾಡುವುದು ಉತ್ತಮ ಎಂದು ಈ ಹೊಸ ಪ್ರಯತ್ನಕ್ಕೆ ಮುಂದಾಗಿತ್ತು.
ತಮಿಳುನಾಡು ಸರ್ಕಾರ ಮತ್ತು ರೈಲ್ವೆ ಇಲಾಖೆ ನೀರು ಬಾಟಲಿಂಗ್ ಪ್ಲಾಂಟ್ ಹೊಂದಿರುವುದು ಬಿಟ್ಟರೆ ರಾಜ್ಯದಲ್ಲಿ ಬೇರೆ ಎಲ್ಲಿಯೂ ಸಹಕಾರಿ ಅಥವಾ ಸರ್ಕಾರಿ ಸ್ವಾಮ್ಯದಲ್ಲಿ ನೀರು ಶುದ್ಧೀಕರಣ ಮತ್ತು ಬಾಟಲಿಂಗ್ ಕೇಂದ್ರಗಳನ್ನು ಸ್ಥಾಪಿಸಿಲ್ಲ .ಮೊದಲ ಹಂತದಲ್ಲಿ ಒಂದು ಮತ್ತು ಎರಡು ಲೀಟರ್ ಬಾಟಲಿಯ ನೀರು ಸರಬರಾಜು ಮಾಡಲಾಗುವುದು. ಬೇಡಿಕೆ ನೋಡಿಕೊಂಡು ಅರ್ಧ ಲೀಟರ್ ನೀರಿನ ಬಾಟಲಿಯನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದೆ.
ನಂದಿನಿ ನೀರಿಗೆ ಉತ್ತಮ ಮಾರುಕಟ್ಟೆ ಸಿಕ್ಕ ನಂತರ ಸ್ವಂತ ಘಟಕ ಸ್ಥಾಪಿಸುವುದರ ಕಡೆಗೆ ಗಮನ ನೀಡಲಾಗುವುದು. ಹೇಗಿದ್ದರೂ ಬಾಟಲಿ ನೀರಿಗೆ ಕೊಳವೆ ಬಾವಿ ನೀರೇ ಬೇಕು. ವಿವಿಧ ಜಿಲ್ಲೆಗಳಲ್ಲಿ ಕೆಎಂಎಫ್ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸೇರಿದ ಹಲವು ಡೇರಿಗಳು ಇದ್ದು ಅಲ್ಲೇ ಕೊಳವೆಬಾವಿ ಕೊರೆಸಿ, ನೀರು ಶುದ್ಧೀಕರಣ ಮತ್ತು ಬಾಟಲಿಂಗ್ ಘಟಕಗಳನ್ನು ಸ್ಥಾಪಿಸುವ ಆಲೋಚನೆ ಇದೆ. ಅದೆಲ್ಲವನ್ನೂ ಯೋಜನೆಯ ಯಶಸ್ಸಿನ ಮೇಲೆ ನಿಂತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.