ಬೆಂಗಳೂರು; ವಿಧಾನಪರಿಷತ್‌ನಲ್ಲಿ ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭದಲ್ಲಿ ನಡೆದ ಕೋಲಾಹಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮಧ್ಯಂತರ ವರದಿಯಲ್ಲಿನ ಶಿಫಾರಸ್ಸಿನ ಪ್ರಕಾರ ಮಹಾಲಕ್ಷ್ಮಿ ಅವರನ್ನು ಪರಿಷತ್‌ನ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ವಿಧಿಸಬೇಕಿದ್ದ ಸಭಾಪತಿ ಅವರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ವೇತನ ಹಗರಣಕ್ಕೆ ಸಂಬಂಧಿಸಿದಂತೆ ಪರಿಷತ್ ಸಭಾಪತಿ ಹೊರಟ್ಟಿ ಮತ್ತು ಕಾರ್ಯದರ್ಶಿ ಮಹಾಲಕ್ಷ್ಮಿ ಅವರ ಮಧ್ಯೆ ಪತ್ರ ಸಮರ ನಡೆದಿರುವ ಬೆನ್ನಲ್ಲೇ ಮಧ್ಯಂತರ ವರದಿ ಶಿಫಾರಸ್ಸಿನಂತೆ ಹೊರಟ್ಟಿ ಅವರು ಕಾರ್ಯದರ್ಶಿ ಮಹಾಲಕ್ಷ್ಮಿ ಅವರ ವಿರುದ್ಧ 8 ತಿಂಗಳಾದರೂ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಮಧ್ಯಂತರ ವರದಿಯಲ್ಲೇನಿದೆ?
ವಿಧಾನಪರಿಷತ್ತಿನ ಕಾರ್ಯದರ್ಶಿಯವರಾದ ಕೆ ಆರ್ ಮಹಾಲಕ್ಷ್ಮಿ ಅವರು ನಡಾವಳಿ ನಿಯಮಗಳ ಪ್ರಕಾರ ಸದನದಲ್ಲಿ ನಿರ್ವಹಿಸಬೇಕಾದ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳಲ್ಲಿ ವಿಫಲರಾಗಿರುವುದರಿಂದ ಅಹಿತಕರ ಘಟನೆ ನಡೆದಿದ್ದು ಅದರ ಮೂಲಕ ಸದನದ ಮತ್ತು ಪೀಠದ ಗೌರವ ಮತ್ತು ಘನತೆಗೆ ಚ್ಯುತಿಯುಂಟಾಗಿರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಇವರ ನಡವಳಿಕೆಯನ್ನು ಸದನದ ನಿಂದನೆ ಎಂದು ಪರಿಗಣಿಸಿ ಸಮಿತಿಯು ಖಂಡಿಸುತ್ತದೆ. ಈ ಸದನ ಸಮಿತಿಯು ತನ್ನ ಅಂತಿಮ ವರದಿ ಸಲ್ಲಿಸುವವರೆಗೆ ಕಾರ್ಯದರ್ಶಿಯವರು ವಿಧಾನ ಪರಿಷತ್ತಿನ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಬೇಕು,’ ಎಂದು ಸದನ ಸಮಿತಿಯು ಶಿಫಾರಸ್ಸು ಮಾಡಿದೆ.
ಇಲಾಖೆ ವಿಚಾರಣೆ ಏಕಿಲ್ಲ?
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿ ಅವರ ಆಡಳಿತಾತ್ಮಕ ಕರ್ತವ್ಯ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನದ ವರ್ತನೆ ಕುರಿತು ಇಲಾಖೆ ವಿಚಾರಣೆ ನಡೆಸಬೇಕು ಎಂದು ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಅಲ್ಲದೆ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖೆ ವಿಚಾರಣೆ ನಡೆಸಬೇಕು ಎಂದೂ ಶಿಫಾರಸ್ಸು ಮಾಡಿತ್ತು. ಆದರ ವರದಿ ನೀಡಿ 8 ತಿಂಗಳು ಕಳೆದರೂ ಇಲಾಖೆ ವಿಚಾರಣೆ ನಡೆಸುವ ಸಂಬಂಧ ಪರಿಷತ್‌ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಅವಕಾಶ ನೀಡದಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಸಲ್ಲಿಸಿದ ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ಸಭಾಪತಿಗಳು ತಿರಸ್ಕರಿಸಿದ್ದರು. ಮೇಲೆ ಚರ್ಚೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡದಂತೆ ಸದನದಲ್ಲಿ ಕಾಂಗ್ರೆಸ್ ಒತ್ತಾಯಿಸಿತ್ತು.
ಡಿಸೆಂಬರ್ 7ರಂದು ಆರಂಭವಾಗಿದ್ದ ವಿಧಾನಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 10ರಂದು ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿತ್ತು. ಗೋಹತ್ಯೆ ವಿಧೇಯಕ ಮಸೂದೆ ಮಂಡನೆಗೆ ಅವಕಾಶ ಮಾಡಿಕೊಡದ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಮುಂದಾಗಿತ್ತು. ಆದರೆ ಅವಿಶ್ವಾಸ ನಿರ್ಣಯವನ್ನು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ಸಭಾಪತಿ ಅವರು ತಿರಸ್ಕರಿಸಿದ್ದರು. ಆಗ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿತ್ತು.
ವಿಧಾನಪರಿಷತ್ ಸಭಾಪತಿಯಾಗಿದ್ದ ಪ್ರತಾಪಚಂದ್ರಶೆಟ್ಟಿ ಅವರ ವಿರುದ್ಧ ಡಿಸೆಂಬರ್ 25 ರಂದು ಬಿಜೆಪಿ ಅವಿಶ್ವಾಸ ಮಂಡನೆ ನೋಟಿಸ್ ನೀಡಿತ್ತು. ನಿಯಮದ ಪ್ರಕಾರ 14 ದಿನಗಳ ಮೊದಲು ನೋಟಿಸ್ ನೀಡಬೇಕು. ಆದರೆ ಸಭಾಪತಿ ಚಳಿಗಾಲದ ಅಧಿವೇಶದ ಸಂದರ್ಭದಲ್ಲಿ ಅವಿಶ್ವಾಸನ ನಿರ್ಣಯ ಪ್ರಸ್ತಾವವನ್ನು ಮಂಡಿಸಲು ಅವಕಾಶ ನೀಡಿಲ್ಲ. ಅವಿಶ್ವಾಸನ ನಿರ್ಣಯದಲ್ಲಿ ಸಭಾಪತಿ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ನೋಟಿಸ್ ಸಂವಿಧಾನ ಬದ್ಧವಾಗಿಲ್ಲ ಎಂದು ಸಭಾಪತಿ ತಿರಸ್ಕಾರ ಮಾಡಿದ್ದರಲ್ಲದೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮತ್ತೊಮ್ಮೆ ಅಧಿವೇಶನ ನಡೆದಿತ್ತು. ವಿಧಾನ ಪರಿಷತ್‌ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಕಿತ್ತಾಟ, ತಳ್ಳಾಟ ನಡೆದಿತ್ತು.
ಹಿರಿಯರ ಮನೆ ಎಂದು ಕರೆಯಲ್ಪಡುವ ವಿಧಾನಪರಿಷತ್‌ನಲ್ಲಿ ಸದಸ್ಯರು ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಈ ಘಟನೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡಿತ್ತಲ್ಲದೆ ಹಾಗೂ ಸಮರ್ಥನೆಯನ್ನು ನೀಡಿತ್ತು. ಅಲ್ಲದೆ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದನ್ನು ಸ್ಮರಿಸಬಹುದು.