ಕುಣಿಗಲ್‌ ಸ್ಟಡ್‌ ಫಾರ್ಮ್‌ಗೆ ಟರ್ಫ್‌ ಕ್ಲಬ್‌ ಸ್ಥಳಾಂತರ; ವಿಶೇಷ ಸದನ ಸಮಿತಿಯಲ್ಲಿ ಚರ್ಚೆ

ಬೆಂಗಳೂರು; ನಗರದ ಹೃದಯಭಾಗದಲ್ಲಿರುವ ಬೆಂಗಳೂರು ಟರ್ಫ್‌ ಕ್ಲಬ್‌ನ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿಯೂ ಸೇರಿದಂತೆ ಹಲವು ಚುನಾಯಿತ ಜನಪ್ರತಿನಿಧಿಗಳು ಸಲಹೆಗಳನ್ನು ನೀಡುತ್ತಿರುವ ಮಧ್ಯೆಯೇ ಟರ್ಫ್‌ ಕ್ಲಬ್‌ನ್ನು ಕುಣಿಗಲ್‌ನಲ್ಲಿರುವ ಸ್ಟಡ್‌ ಫಾರಂಗೆ ವರ್ಗಾವಣೆ ಮಾಡಬೇಕು ಎಂದು ವಿಶೇಷ ಸದನ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ.

ರಾಜ್ಯದಲ್ಲಿರುವ ಹಾಗೂ ಬಿಬಿಎಂಪಿ ವ್ಯಾಪ್ತಯಲ್ಲಿರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಿರುವ ವಿಧಾನಪರಿಷತ್‌ ಸದಸ್ಯ ಡಾ ಕೆ ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿರುವ ವಿಶೇಷ ಸದನ ಸಮಿತಿಯು ವ್ಯಕ್ತಪಡಿಸಿರುವ ಅಭಿಪ್ರಾಯವು ಚರ್ಚೆಗೆ ಗ್ರಾಸವಾಗಿದೆ. 2021ರ ಜುಲೈ 19ರಂದು ನಡೆದಿದ್ದ ಸಭೆಯಲ್ಲಿ ಟರ್ಫ್‌ ಕ್ಲಬ್‌ನ್ನು ಕುಣಿಗಲ್‌ ಸ್ಟಡ್‌ ಫಾರಂಗೆ ವರ್ಗಾವಣೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಸಭೆ ನಡವಳಿಗಳಿಂದ ತಿಳಿದು ಬಂದಿದೆ. ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ಟರ್ಫ್‌ ಕ್ಲಬ್‌ ಬಗ್ಗೆ ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಆ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಕೆ ಗೋವಿಂದರಾಜು ಅವರು ‘ಬೆಂಗಳೂರು ಹೃದಯ ಭಾಗದಲ್ಲಿರುವ ಟರ್ಫ್‌ ಕ್ಲಬ್‌ನ್ನು ಕುಣಿಗಲ್‌ನಲ್ಲಿರುವ ಸರ್ಕಾರಕ್ಕೆ ಸೇರಿದ ಸ್ಟಡ್‌ ಫಾರಂಗೆ ವರ್ಗಾವಣೆ ಮಾಡುವ ಬಗ್ಗೆ ಕೋರ್ಟಿನ ಅನುಮತಿ ಕೇಳಿ,’ ಎಂದು ಹೇಳಿರುವುದು ನಡವಳಿಯಿಂದ ಗೊತ್ತಾಗಿದೆ.

ಈ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆದಿಲ್ಲವಾದರೂ ಟರ್ಫ್‌ ಕ್ಲಬ್‌ನ್ನು ಬೆಂಗಳೂರು ನಗರ ಹೊರವಲಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಹಲವು ಸಮಿತಿಗಳು ನೀಡಿದ್ದ ಶಿಫಾರಸ್ಸನ್ನು ವಿಶೇಷ ಸದನ ಸಮಿತಿಯು ವಿಸ್ತರಿಸಿದಂತಾಗಿದೆ.

ಕುಣಿಗಲ್‌ ಸ್ಟಡ್‌ ಫಾರಂ ಸುಮಾರು 430 ಎಕರೆ ವಿಶಾಲ ಪ್ರದೇಶದಲ್ಲಿದೆ. ಈ ಫಾರಂನಬಲ್ಇ ಥರೋಬ್ರೆಡ್‌ ತಳಿಯ 275ಕ್ಕೂ ಅಧಿಕ ಅಪರೂಪದ ರೇಸ್‌ ಕುದುರೆಗಗಳಿವೆ. 1970ರ ದಶಕದಲ್ಲಿ ಕಿಂಬರ್ಲಿ ಎಂಬ ಕುದುರೆ ಕಿಂಬರ್ಲಿ ವಿಶ್ವಕಪ್‌ನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದಾದ ನಂತರ ಕುಣಿಗಲ್‌ ಸ್ಟಡ್‌ ಫಾರಂನ ಕುದುರೆಗಳಿಗೆ ಬಹು ಬೇಡಿಕೆ ಬಂದಿತ್ತು ಎನ್ನಲಾಗಿದೆ.

ಮುಂಬೈ, ದೆಹಲಿ, ಹೈದರಾಬಾದ್‌, ಸಿಂಗಾಪುರ್‌, ಐರ್ಲೆಂಡ್‌, ಅಮೇರಿಕ, ಮಲೇಷಿಯಾ ರೇಸ್‌ ಕೋರ್ಸ್‌ಗಳಿಗೂ ಕುಣಿಗಲ್‌ ಸ್ಟಡ್‌ ಫಾರಂನ ಕುದುರೆಗಳೇ ಬೇಕು. ಅಲ್ಲದೆ ಥರೋಬ್ರೆಡ್‌ ತಳಿಯ ಕುದುರೆಗಳಿಗಾಗಿಯೇ ಇಲ್ಲಿ ಉತ್ಕೃಷ್ಟ ಗುಣಮಟ್ಟದ ಹುಲ್ಲನ್ನು ಬೆಳೆಯಲಾಗುತ್ತಿದೆ.

ಟಿಪ್ಪು ಸುಲ್ತಾನ್‌ ಯುದ್ಧ ಮತ್ತು ಸಾರಿಗೆ ವ್ಯವಸ್ಥೆಗೆ ಬಳಸುತ್ತಿದ್ದ ಕುದುರೆಗಳ ಸಾಕಣೆಗೆ ಉತ್ತಮ ವಾತಾವರಣ ಇರುವ ಕುಣಿಗಲ್‌ನಲ್ಲಿ ಕುದುರೆ ಸಾಕಣೆಗೆಂದು ಕೇಂದ್ರವೊಂದನ್ನು ತೆರೆಯಲಾಗಿತ್ತು. ಆ ಕೇಂದ್ರವೇ ಈಗಿನ ಸ್ಟಡ್‌ ಫಾರಂ (ಕುದುರೆ ಲಾಯ). ಟಿಪ್ಪು ಮರಣಾನಂತರ ಈ ಕುದುರೆ ಸಾಕಣೆ ಕೇಂದ್ರ ಬ್ರಿಟೀಷರು ವಶಪಡಿಸಿಕೊಂಡಿದ್ದರು. ಈ ಬಗ್ಗೆ 1906ರಲ್ಲಿ ಈ ಕುದುರೆ ಸಾಕಣೆ ಕೇಂದ್ರದ ಮುಖ್ಯಸ್ಥನಾಗಿದ್ದ ವಿಲಿಯಮ್ಸ್‌ ಇದನ್ನು ದಾಖಲಿಸಿರುವುದನ್ನು ಸ್ಮರಿಸಬಹುದು.

ಬೆಂಗಳೂರು ಟರ್ಫ್‌ ಕ್ಲಬ್‌ಗೆ ಗುತ್ತಿಗೆಯಲ್ಲಿದ್ದ ಈ ಫಾರಂ ಅನ್ನು ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉದ್ಯಮಿ ವಿಜಯ ಮಲ್ಯ ಅವರಿಗೆ ಗುತ್ತಿಗೆ ನೀಡಲಾಗಿತ್ತು. ಇದರ ಅವಧಿ 2022ಕ್ಕೆ ಪೂರ್ಣಗೊಳ್ಳಲಿದೆ.

ಸ್ಥಳಾಂತರ ವಿವಾದ

ಬೆಂಗಳೂರು ಟರ್ಫ್‌ ಕ್ಲಬ್‌ನ್ನು ಸ್ಥಳಾಂತರಿಸಬೇಕು ಎಂಬ ತೀರ್ಮಾನವನ್ನು ಕಳೆದ 52 ವರ್ಷದ ಹಿಂದೆಯೇ ಕೈಗೊಳ್ಳಲಾಗಿತ್ತು. ಅಂದಿನ ಆರ್ಥಿಕ ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರ ಅಧ್ಯಕ್ಷತೆಯಲ್ಲಿ 1968ರ ನವೆಂಬರ್‌ 2ರಂದು ನಡೆದಿದ್ದ ಸಭೆಯಲ್ಲೇ ಟರ್ಫ್‌ ಕ್ಲಬ್‌ನ್ನು ಸ್ಥಳಾಂತರಿಸಬೇಕು ಎಂದು ತೀರ್ಮಾನವಾಗಿತ್ತು.

1968ರಲ್ಲಿ ಕೈಗೊಂಡಿದ್ದ ತೀರ್ಮಾನ 2021ರ ಆಗಸ್ಟ್‌ ತಿಂಗಳು ಪೂರ್ಣಗೊಂಡರೂ ಟರ್ಫ್‌ ಕ್ಲಬ್‌ ಸ್ಥಳಾಂತರವಾಗಿಲ್ಲ. ಅಲ್ಲದೆ 2000 ಮಾರ್ಚ್‌ 27ರಂದು ಅಂದಿನ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರು ಮಂಡಿಸಿದ್ದ ಮುಂಗಡಪತ್ರದಲ್ಲಿಯೂ ಟರ್ಫ್‌ ಕ್ಲಬ್‌ನ್ನು ನಗರದ ಹೊರಗಡೆ ಸ್ಥಳಾಂತರಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಅಂದಿನಿಂದ ಇಂದಿನವರೆಗೆ ಬಹುತೇಕ ಎಲ್ಲಾ ಸರ್ಕಾರಗಳೂ ಬೆಂಗಳೂರು ಟರ್ಫ್‌ ಕ್ಲಬ್‌ನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಅಭಿಪ್ರಾಯಿಸಿದ್ದವು.

ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿರುವ 4ನೇ ವರದಿಯಲ್ಲಿ ಟರ್ಫ್‌ ಕ್ಲಬ್‌ ಸ್ಥಳಾಂತರದ ಪುರಾಣವನ್ನೇ ಬಿಚ್ಚಿಡಲಾಗಿತ್ತು. ಕ್ಲಬ್‌ನ್ನು ಸ್ಥಳಾಂತರಿಸುವುದರಿಂದ ಸಂಸ್ಥೆಯ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲೂ ಕುಂದು ಉಂಟಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಮಧ್ಯಂತರ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಆದರೆ ಇಲಾಖೆಯು ಈವರೆವಿಗೂ ಸ್ಥಳಾಂತರಿಸಲು ಕ್ರಮ ವಹಿಸಿರಲಿಲ್ಲ. ಅಲ್ಲದೆ ಈ ಹಿಂದೆಯೇ ಸಲ್ಲಿಕೆಯಾಗಿದ್ದ ಮಧ್ಯಂತರ ವರದಿಯಲ್ಲಿ ಮಾಡಿದ್ದ ಶಿಫಾರಸ್ಸುಗಳನ್ನು ಯಾವ ಸರ್ಕಾರಗಳೂ ಜಾರಿಗೊಳಿಸಿರಲಿಲ್ಲ.

ಉಳ್ಳವರ ಚಟುವಟಿಕೆಗೆ ರಿಯಾಯಿತಿ

1971ರಿಂದಲೂ ಟರ್ಫ್‌ ಕ್ಲಬ್‌ಗೆ ಗುತ್ತಿಗೆ ಹಣ 10 ಲಕ್ಷ ರು.ನಿಗದಿಪಡಿಸಲು ಸೂಕ್ತವೆಂದು ಮಧ್ಯಂತರ ವರದಿ ಹೇಳಿತ್ತು. ಆದರೆ ಉಳ್ಳವರ ಚಟುವಟಿಕೆಗಳಿಗೆ ಸರ್ಕಾರಗಳು ರಿಯಾಯಿತಿ ನೀಡುತ್ತ ಬಂದಿದೆ. ಹೀಗಾಗಿ ಸರ್ಕಾರಕ್ಕೆ ಬರಬೇಕಿದ್ದ ವರಮಾನ ಕಡಿಮೆ ಆಗಿತ್ತು. ಆದರೂ ಇಲಾಖೆಯು ಕಾಲಕಾಲಕ್ಕೆ ಗುತ್ತಿಗೆಯನ್ನು ನವೀಕರಿಸಿರಲಿಲ್ಲ. ಹೀಗಾಗಿ ಬೆಂಗಳೂರು ಟರ್ಫ್‌ ಕ್ಲಬ್‌ ಅನಧಿಕೃತವಾಗಿ ರೇಸ್‌ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಇಲಾಖಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿರಲಿಲ್ಲ. ಇಂತಹ ಪ್ರಕರಣಗಳು ಮರುಕಳಿಸಬಾರದೆಂಬ ದೃಷ್ಟಿಯಿಂದ ಅಂದು ಸೇವೆಯಲ್ಲಿದ್ದ ಅಧಿಕಾರಿಗಳನ್ನು ಕರ್ತವ್ಯ ಲೋಪದ ಅಡಿಯಲ್ಲಿ ಗುರಿಪಡಿಸಿ ಶಿಸ್ತು ಕ್ರಮ ಜರುಗಿಸಲು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಮಾದರಿಯಾಗದ ದೆಹಲಿ ಪಾಲಿಕಾ ಬಜಾರ್‌

ಬೆಂಗಳೂರು ಟರ್ಫ್‌ ಕ್ಲಬ್‌ ನಿವೇಶನವನ್ನು ಉದ್ಯಾನಕ್ಕಾಗಿ ಮೀಸಲಿರಿಸಿ ಮತ್ತು ದೆಹಲಿಯ ಪಾಲಿಕಾ ಬಜಾರ್‌ ಮಾದರಿಯಂತೆ ನೆಲಮಾಳಿಗೆ ಮಾರುಕಟ್ಟೆ ಹಾಗೂ ಅದರ ಮೇಲೆ ಉದ್ಯಾನ ನಿರ್ಮಿಸಬಹುದು ಎಂದು ಮಧ್ಯಂತರ ವರದಿ ಶಿಫಾರಸ್ಸು ಮಾಡಿದ್ದನ್ನು ಸ್ಮರಿಸಬಹುದು.

ಬಾಡಿಗೆ ಹೆಚ್ಚಳ ಮಾಡದ ಇಲಾಖೆ

ಕ್ಲಬ್‌ಗೆ ಸಂಬಂಧಿಸಿದಂತೆ ಯಥಾ ಸ್ಥಿತಿ ಕಾಯ್ದುಕೊಳ್ಳಲು ಸರ್ವೋಚ್ಛ ನ್ಯಾಯಾಲಯವು ಸೂಚಿಸಿತ್ತು. ಈ ಆದೇಶವು ಬಾಕಿ ಹಣ ವಸೂಲಾತಿಗಾಗಿ ಅನ್ವಯವಾಗಿರಲಿಲ್ಲ. ಆದರೆ ಇಲಾಖಾಧಿಕಾರಿಗಳು ಬೆಂಗಳೂರು ಟರ್ಫ್‌ ಕ್ಲಬ್‌ ಸಂಸ್ಥೆಯೊಂದಿಗೆ ಕೈಜೋಡಿಸಿ ಸರ್ಕಾರಕ್ಕೆ ಬರಬೇಕಿದ್ದ ಹಣವನ್ನು ವಸೂಲಾತಿ ಮಾಡದೇ ಕರ್ತವ್ಯ ಲೋಪ ಎಸಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲದೆ 2000ರ ಸೆ.5ರಂದು ಕ್ಲಬ್‌ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಆ ಅವಧಿಯ ಮುಂಚೆಯೇ 10.00 ಲಕ್ಷ ರು. ಬಾಡಿಗೆ ನಿಗದಿಪಡಿಸಲಾಗಿತ್ತು. ಆ ನಂತರ ನ್ಯಾಯಾಲಯವು ಯಥಾಸ್ಥಿತಿ ಕಾಪಾಡುವ ಆದೇಶ ನೀಡಿದ್ದರಿಂದ ಬಾಡಿಗೆಯನ್ನು ಹೆಚ್ಚಳವನ್ನೇ ಮಾಡಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿತ್ತು.

ಗುತ್ತಿಗೆ ಅವಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಸಂಬಂಧ ಯಥಾ ಸ್ಥಿತಿ ಕಾಯ್ದುಕೊಳ್ಳಲು ರಾಜ್ಯ ಅಡ್ವೋಕೇಟ್‌ ಜನರಲ್‌ ಅವರು ಲೋಕೋಪಯೋಗಿ ಇಲಾಖೆಯ ಸೂಚನೆ ಇಲ್ಲದೆಯೇ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು ಎಂಬ ಮಾಹಿತಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಹೊರಗೆಡವಿತ್ತು.

ಬೆಂಗಳೂರು ಟರ್ಫ್‌ ಕ್ಲಬ್‌ನಿಂದ 37.46 ಕೋಟಿ ಬಾಡಿಗೆ ಬಾಕಿ ಇರುವ ಬಗ್ಗೆಯೂ ಪಿಡಬ್ಲ್ಯೂಡಿ ಮತ್ತು ಕಾನೂನು ಇಲಾಖೆಯು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರದ ಕಾರಣ, ಪ್ರಕರಣವು ಇನ್ನೂ ಇತ್ಯರ್ಥಗೊಂಡಿಲ್ಲ ಎಂಬ ಅಂಶವನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಬಹಿರಂಗಗೊಳಿಸಿತ್ತು.

30 ವರ್ಷಗಳ ಗುತ್ತಿಗೆ ಅವಧಿಯು 2009ರಲ್ಲಿ ಪೂರ್ಣಗೊಂಡ ನಂತರ ಟರ್ಫ್‌ ಕ್ಲಬ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಕ್ಲಬ್‌ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಗುತ್ತಿಗೆ ಪ್ರಕರಣದಲ್ಲಿ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು 2010ರಲ್ಲಿದ್ದ ಅಡ್ವೋಕೇಟ್‌ ಜನರಲ್‌ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಆದರೆ ಈ ಮನವಿಯನ್ನು ಸಲ್ಲಿಸುವ ಮುನ್ನ ಅಡ್ವೋಕೇಟ್‌ ಜನರಲ್‌ ಅವರು ಲೋಕೋಪಯೋಗಿ ಇಲಾಖೆಯಿಂದ ಲಿಖಿತ ರೂಪದಲ್ಲಾಗಲಿ ಅಥವಾ ಮೌಖಿಕವಾಗಲಿ ಸೂಚನೆ ನೀಡಿರಲಿಲ್ಲ ಎಂದು ಸಮಿತಿಗೆ ಇಲಾಖೆಯ ಅಧಿಕಾರಿಗಳು ಉತ್ತರಿಸಿದ್ದರು.

ಅಡ್ವೋಕೇಟ್‌ ಜನರಲ್‌ ಅವರು ಸಲ್ಲಿಸಿದ್ದ ಮನವಿ ಹಿಂದೆ ಯಾವ ಒತ್ತಡ, ಪ್ರೇರಣೆ ಮತ್ತು ಪ್ರೋತ್ಸಾಹಕ್ಕಾಗಿ ಒಳಗಾಗಿ ವಕೀಲಿ ವೃತ್ತಿಯ ನೀತಿ ನಿಯಮಗಳನ್ನು ಮೀರಿ ಇಂತಹ ನಿರ್ಧಾರ ತೆಗೆದುಕೊಂಡಿದ್ದರು ಎಂಬ ಬಗ್ಗೆಯೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆ ನಡೆಸಿತ್ತು.

‘ಲೋಕೋಪಯೋಗಿ ಇಲಾಖೆಯಿಂದಾಗಲಿ ಅಥವಾ ಕಾನೂನು ಇಲಾಖೆಯಿಂದಾಗಲಿ ಯಥಾಸ್ಥಿತಿ ಕಾಪಾಡುವಂತೆ ಅಡ್ವೋಕೇಟ್‌ ಜನರಲ್‌ ಅವರಿಗೆ ಮನವಿ ಸಲ್ಲಿಸಲು ತಿಳಿಸದಿದ್ದರೂ ಸರ್ವೋಚ್ಛ ನ್ಯಾಯಾಲಯದ ಮುಂದೆ ಆ ರೀತಿ ಮನವಿ ಸಲ್ಲಿಸಿದ್ದರಿಂದ ಸರ್ಕಾರ ಮತ್ತು ಅಡ್ವೋಕೇಟ್‌ ಜನರಲ್‌ರ ನಡುವೆ ಸಮನ್ವಯದ ಕೊರತೆಯೇ ಪ್ರಕರಣ ಇಲ್ಲಿಯವರೆಗೂ ಇತ್ಯರ್ಥವಾಗದಿರಲು ಕಾರಣ,’ ಎಂದು ಸಮಿತಿ ವರದಿಯಲ್ಲಿ ಅಭಿಪ್ರಾಯಿಸಿತ್ತು.

ಈ ಪ್ರಕರಣದಲ್ಲಿ ಇನ್ನಾದರೂ ಸರ್ಕಾರವು ಅಡ್ವೋಕೇಟ್‌ ಜನರಲ್‌ ಅವರಿಗೆ ಪ್ರಕರಣದ ಶೀಘ್ರ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

ಇನ್ನು, ಬೆಂಗಳೂರು ಟರ್ಫ್‌ ಕ್ಲಬ್‌ ಸಂಸ್ಥೆಯು ಸ್ಥಳಾಂತರಗೊಂಡರೆ ಅಲ್ಲಿನ ಕೆಲಸಗಾರರಿಗೆ, ಕುದುರೆಗಳನ್ನು ನೋಡಿಕೊಳ್ಳುವವರಿಗೆ ತೊಂದರೆಯಾಗಲಿದೆ ಎಂದು ಸಂಸ್ಥೆಯು 2015ರಲ್ಲಿ ಸಿವಿಲ್‌ ಪ್ರಕರಣದ ದಾಖಲಿಸಿತ್ತು. ಹೀಗಾಗಿ ಪ್ರಕರಣವು ಇತ್ಯರ್ಥವಾಗಿಲ್ಲ ಎಂಬುದು ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಮಿತಿಗೆ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿತ್ತು.

‘ಕಾನೂನು ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಿದ್ದಲ್ಲಿ ಪ್ರಕರಣವು ಇಲ್ಲಿಯವರೆಗೂ ಮುಂದುವರೆಯುತ್ತಿರಲಿಲ್ಲ. ಬೆಂಗಳೂರು ಟರ್ಫ್‌ ಕ್ಲಬ್‌ನಿಂದ 37.46 ಕೋಟಿ ಬಾಡಿಗೆ ಬಾಕಿ ಇರುವ ಬಗ್ಗೆ 2010ರಲ್ಲೇ ಇಲಾಖೆಯು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದಿದ್ದರೆ ಪ್ರಕರಣವು ಇಷ್ಟರೊಳಗಾಗಿ ಮುಗಿಯುತ್ತಿತ್ತು,’ ಎಂದು ಸಮಿತಿಯು ಅಭಿಪ್ರಾಯಿಸಿತ್ತು.

ಹಾಗೆಯೇ ಟರ್ಫ್‌ ಕ್ಲಬ್‌ನಿಂದ ಬಾಕಿ ಇರುವ ಮೊತ್ತದ ಬಗ್ಗೆ ಅರಿವಿದ್ದರೂ ರೇಸ್‌ ಚಟುವಟಿಕೆಗಳನ್ನು ನಡೆಸಲು ಪರವಾನಗಿಯನ್ನು ಪ್ರತಿ ವರ್ಷವೂ ಆರ್ಥಿಕ ಇಲಾಖೆಯು ನವೀಕರಣಗೊಳಿಸುತ್ತಿರುವುದಕ್ಕೆ ಸಮಿತಿಯು ವಿಷಾದಿಸಿದೆ. ಅಲ್ಲದೆ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದ್ದಾಗ ಗುತ್ತಿಗೆ ಅವಧಿಯು ಪೂರ್ಣಗೊಂಡಿದ್ದರೂ ಯಥಾಸ್ಥಿತಿ ಕಾಪಾಡಿಕೊಳ್ಳುವ ಅದೇಶ ಮುಂದಿಟ್ಟುಕೊಂಡು ಕ್ಲಬ್‌ ಪರವಾನಗಿಯನ್ನು ನವೀಕರಣಗೊಳಿಸುತ್ತಿರುವುದು ಸಮಂಜಸವಲ್ಲ ಎಂದೂ ಅಭಿಪ್ರಾಯಿಸಿತ್ತು.

ಮೈಸೂರು ರೇಸ್‌ ಕೋರ್ಸ್‌ ಲೈಸೆನ್ಸಿಂಗ್‌ ಆಕ್ಟ್‌ 1952 ಮತ್ತು ಮೈಸೂರು ರೇಸ್‌ ಕೋರ್ಸ್‌ ಲೈಸೆನ್ಸಿಂಗ್‌ ರೂಲ್ಸ್‌ 1952ರ ನಿಯಮಗಳನ್ನು ಬೆಂಗಳೂರು ಟರ್ಫ್‌ ಕ್ಲಬ್‌ ಸಂಸ್ಥೆಯು ಸತತವಾಗಿ ಉಲ್ಲಂಘಿಸಿರುತ್ತಿದೆ. ಹೀಗಾಗಿ ಕ್ಲಬ್‌ನ ಪರವಾನಗಿಯನ್ನು ರದ್ದುಗೊಳಿಸಲು ಆರ್ಥಿಕ ಇಲಾಖೆಗೆ ಸಂಪೂರ್ಣ ಅಧಿಕಾರವಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿತ್ತು.

SUPPORT THE FILE

Latest News

Related Posts