ಬೆಂಗಳೂರು; ವಿಧಾನಪರಿಷತ್ ಸದಸ್ಯ ಕೆ ಪಿ ನಂಜುಂಡಿ ಅವರು ನಿರ್ದೇಶಕರಾಗಿರುವ ಲಕ್ಷ್ಮಿ ಗೋಲ್ಡ್ ಖಜಾನ ಪ್ರೈ ಲಿಮಿಟೆಡ್ ಕಂಪನಿಯು ಅಪೆಕ್ಸ್ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸ್ವತ್ತಿನ ಮೌಲ್ಯಮಾಪನವನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಿಸಿತ್ತು. ಅಲ್ಲದೆ ಆದಾಯ ಇಲಾಖೆಯ ಜಫ್ತಿಗೊಳಪಟ್ಟಿದ್ದ ಸ್ವತ್ತನ್ನು ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನಾಗಿರಿಸಿತ್ತು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
2018-19ನೇ ಸಾಲಿಗೆ ಅಪೆಕ್ಸ್ ಬ್ಯಾಂಕ್ ನಡೆಸಿರುವ ಸಾಲದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೃಷಿಯೇತರ ಮುಂಗಡ ನೀಡಿರುವುದನ್ನೂ ಬೆಳಕಿಗೆ ತಂದಿದೆ. ಸ್ವತ್ತಿನ ಸಂಖ್ಯೆಯನ್ನು ಮೌಲ್ಯೀಕರಿಸುವುದರಲ್ಲಿ ಆಗಿರುವ ಲೋಪ ಮತ್ತು ಸಾಲದ ಭದ್ರತೆಯನ್ನು ಪಡೆಯದ ಬ್ಯಾಂಕ್‌ನ ಕರ್ತವ್ಯ ಲೋಪವನ್ನೂ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದೆ.
ಬೆಂಗಳೂರಿನ ಚಿಕ್ಕಮಾರನಹಳ್ಳಿ (ವಾರ್ಡ್ ನಂ 100)ರಲ್ಲಿ ಐಟಿಐ ನೌಕರರ ಸಹಕಾರಿ ಗೃಹ ನಿರ್ಮಾಣ ಸಹಕಾರ ಸಂಘದ ಸ್ವತ್ತಿನ(ಸಂಖ್ಯೆ 7ಎ) ಸರಾಸರಿ ಮೌಲ್ಯ 12.02 ಕೋಟಿ ಮತ್ತು ಗೋಕುಲ ಮೊದಲನೇ ಹಂತ 1ನೇ ಘಟ್ಟದಲ್ಲಿರುವ ಸ್ವತ್ತು (ಸಂಖ್ಯೆ 7) ಸರಾರಸರಿ ಮೌಲ್ಯ 16.36 ಕೋಟಿ ಎಂದು ಮೌಲ್ಯಮಾಪನ ಮಾಡಿತ್ತು.
ಹೆಚ್ಚುವರಿ ಮೌಲ್ಯಮಾಪನ
ಸ್ವತ್ತಿನ ಮೌಲ್ಯ ಹಾಗೂ ಕಾನೂನು ಅಭಿಪ್ರಾಯ ನೀಡಿರುವ ಆನಂದ್ ಇಂಜಿನಿಯರಿಂಗ್ ಮತ್ತು ಕನ್ಸ್‌ಟ್ರಕ್ಷನ್ಸ್ ಮತ್ತು ಡಿ ಕೆ ಅಸೋಸಿಯೇಟ್ಸ್ ಸ್ವತ್ತನ್ನು ಹೆಚ್ಚುವರಿಯಾಗಿ ಮೌಲ್ಯೀಕರಿಸಲಾಗಿದೆ. ಪ್ರತಿ ಚದರ ಅಡಿಗೆ 19,000 ರು. ಬದಲಿಗೆ 24,000ರು. ಎಂದು ಪರಿಗಣಿಸಿದೆ. ಚದರ ಅಡಿ ದರವನ್ನು ತಪ್ಪಾಗಿ ಲೆಕ್ಕ ಹಾಕಿರುವುದರಿಂದ ಸ್ವತ್ತಿನ ಮೌಲ್ಯಮಾಪನದಲ್ಲಿ 5,200 ಚದರ ಅಡಿಗಳಿಗೆ 2.60 ಕೋಟಿ ಹೆಚ್ಚುವರಿ ಮೌಲ್ಯಮಾಪನ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ.
ಅಲ್ಲದೆ ಮೌಲ್ಯಮಾಪನ ವರದಿಯಲ್ಲಿ ಕಟ್ಟಡ ಭಾಗ 10,000 ಚದರ ಅಡಿ ಎಂದು ನಮೂದಾಗಿದೆ. ಆಧರೆ ಕಾನೂನು ಸಲಹೆಗಾರರ ವರದಿಯಲ್ಲಿ 7,000 ಚದರ ಅಡಿ ಎಂದು ದಾಖಲಾಗಿದೆ. ಅಂದರೆ 3,900 ಚದರ ಅಡಿಗಳನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಲಾಗಿದೆ. ಇದರಿಂದ ಮೌಲ್ಯಮಾಪನ ಬೆಲೆಯಲ್ಲಿ 3,900 ಚದರ ಅಡಿಗೆ 1.17 ಕೋಟಿ ರು.ಗಳಾಗಿದೆ. ಒಟ್ಟಾರೆಯಾಗಿ 3.77 ಕೋಟಿ ರು. ಹೆಚ್ಚಿನ ಮೌಲ್ಯಮಾಪನ ಮಾಡಲಾಗಿದೆ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಬ್ಯಾಂಕ್‌ನ ನಿಯಮಗಳ ಪ್ರಕಾರ ಸ್ವತ್ತಿನ ಮಾರುಕಟ್ಟೆ ಮೌಲ್ಯ ಹಾಗೂ ಸರ್ಕಾರಿ ಮೌಲ್ಯದ ಸರಾಸರಿ ಮೌಲ್ಯವನ್ನು ಸಾಲ ಮುಂಗಡಕ್ಕೆ ಪರಿಗಣಿಸಬೇಕು. ಆದರೆ ಸ್ವತ್ತಿನ ಮೌಲ್ಯಮಾಪನ ವರದಿ ಪ್ಕರಾರ ಸ್ವತ್ತಿನ ಬೆಲೆ 26.50 ಕೋಟಿ ರು.ಗಳಾಗಿದೆ. ಆದರೆ ಸಾಲ ಮಂಜೂರಾತಿಯು 28.00 ಕೋಟಿ ರು.ಗಳಾಗಿವೆ. ಇದು ಬ್ಯಾಂಕ್‌ನ ನಿಯಮದ ಉಲ್ಲಂಘಿಸಲಾಗಿದೆ ಎಂಬ ಸಂಗತಿ ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಹಾಗೆಯೇ 2019ರ ಫೆ.20ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯ ತೀರ್ಮಾನದ ಪ್ರಕಾರ ಕಂಪನಿಯು ನೀಡಿರುವ ಭದ್ರತೆ ಜತೆ ಹೆಚ್ಚುವರಿ ಭದ್ರತೆ ಅಂದರೆ ಮಂಉಊರಾತಿ ಮೊತ್ತಕ್ಕೆ ಶೇ.150ರ್ಟು ಭದ್ರತೆ ಪಡೆಯಲು ಸೂಚಿಸಲಾಗಿತ್ತು. ಅದರಂತೆ 2019ರ ಫೆ;.26ರಂದು ಮಂಜೂರಾತಿ ಪತ್ರದಲ್ಲಿ ಎರಡು ಸ್ವತ್ತಿನ ಭದ್ರತೆಯ ಅವಶ್ಯಕತೆ ಬಗ್ಗೆ ತಿಳಿಸಲಾಗಿತ್ತು. 2019ರ ಮಾರ್ಚ್ 12ರಂದು ಕಡತದಲ್ಲಿ ದಾಖಲಾಗಿರುವ ಟಿಪ್ಪಣಿ ಪ್ರಕಾರ ಕಂಪನಿಯು ತಿಳಿಸಿರುವ ಎರಡು ಸ್ವತ್ತುಗಳ ಜತೆಯಲ್ಲಿ ಹೆಚ್ಚುವರಿ ಸ್ವತ್ತನ್ನು ಭದ್ರತೆಯಾಗಿ ಒದಗಿಸುವಂತೆ ದಾಖಲಾಗಿದೆ.
ಕಂಪನಿಯು ಹೆಚ್ಚುವರಿಯಾಗಿ ನೀಡಿರುವ ಸ್ವತ್ತು ಆದಾಯ ಇಲಾಖೆಯ ಜಫ್ತಿಗೊಳಪಟ್ಟಿರುತ್ತದೆ. ಇದು ಸಾಲದ ಶೇ.150ರಷ್ಟು ಭದ್ರತೆಯನ್ನು ಬ್ಯಾಂಕ್ ಪಡೆದಿರುವುದಿಲ್ಲ. ಹೀಗಾಗಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೆಶನವನ್ನು ಬ್ಯಾಂಕ್ ಪಾಲಿಸಿಲ್ಲ. ಅಲ್ಲದೆ ಕಂಪನಿಯು ಸಾಲಕ್ಕೆ ಯಾವುದೇ ಮೊತ್ತವನ್ನೂ ಪಾವತಿಸಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.
ಬೃಹತ್ ಮತ್ತು ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್ ಲಿಮಿಟೆಡ್, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಾಗಿರುವ ಹರ್ಷ ಷುಗರ್ಸ್ ಲಿಮಿಟೆಡ್ ಅಪೆಕ್ಸ್ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.
ಅಪೆಕ್ಸ್ ಬ್ಯಾಂಕ್ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್ ಬ್ಯಾಂಕ್ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.
ಮಾಜಿ ಶಾಸಕ ಪ್ರಕಾಶ್ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್ ಬ್ಯಾಂಕ್ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.
ಬಾಲ್ಕೇಶ್ವರ ಷುಗರ್ಸ್ ಲಿಮಿಟೆಡ್‌ಗೆ ಅಪೆಕ್ಸ್ ಬ್ಯಾಂಕ್, ಪಿಎನ್‌ಬಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪ್ ಬ್ಯಾಂಕ್, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್ ಬ್ಯಾಂಕ್ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.
ಕಣ್ವ ಫ್ಯಾಷನ್ಸ್ ಕಂಪನಿಗೆ ಸಂಬಂಧದಪಟ್ಟ ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್ ಮತ್ತು ಹೋಟೆಲ್ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿತ್ತು. ಅಲ್ಲದೆ 2018ರ ಜೂನ್ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್ ಪ್ರೈ ಲಿಮಿಟೆಡ್ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.