ಬೆಂಗಳೂರು; ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ನೀಡುವಲ್ಲಿ ಹಿನ್ನಡೆಯಿಂದಾಗಿಯೇ ಬೆಂಗಳೂರು ಮಹಾನಗರದಲ್ಲಿ ಕಂಡು ಬಂದಿರುವ ಸೋಂಕು ಮರಣ ಪ್ರಮಾಣವು ದೆಹಲಿ ಸೇರಿದಂತೆ ದೇಶದ ಒಟ್ಟು 6 ಮಹಾನಗರಗಳಕ್ಕಿಂತಲೂ ಹೆಚ್ಚಿದೆ. ಅಲ್ಲದೆ ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಕಾರಣ ಸೋಂಕು ಮರಣ ಪ್ರಮಾಣ ದರ ಹೇಗೆ ಹೆಚ್ಚಲಿದೆ ಎಂಬುದಕ್ಕೆ ಬೆಂಗಳೂರು ಮಹಾನಗರವು ಸಾಕ್ಷಿಯಾಗಿದೆ.
2020ರಲ್ಲಿ ಕಾಣಿಸಿಕೊಂಡ ಕೋವಿಡ್ ಮೊದಲ ಅಲೆ ಮತ್ತು 2021ರಲ್ಲಿನ 2ನೇ ಅಲೆಗೆ ಹೋಲಿಸಿದರೆ ಸೋಂಕು ಮರಣ ಪ್ರಮಾಣವು ಶೇಕಡವಾರು ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2020ರಲ್ಲಿ 10 ಸಾವಿರ ಜನಸಂಖ್ಯೆಗೆ 0.03ರಷ್ಟು ಸೋಂಕು ಮರಣ ಪ್ರಮಾಣವಿದ್ದರೆ 2021ರಲ್ಲಿ ಒಂದು ಸಾವಿರ ಜನಸಂಖ್ಯೆಗೆ 1.1ರಷ್ಟಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 4 ಪಟ್ಟು ಹೆಚ್ಚಾಗಿದೆ.
ಸೂಕ್ತ ಕಾಲದಲ್ಲಿ ಪರೀಕ್ಷೆ ನಡೆಸದ ಕಾರಣ ಬೆಂಗಳೂರು ನಗರದಲ್ಲಿ ಸಾವಿನ ದರವು ಏರುಗತಿಯಲ್ಲಿದೆ. ಪ್ರಾಥಮಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸುವುದು ಸಾಧ್ಯವಾಗಿದೆ. ಹೆಚ್ಚಿನವರಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಸಿಗುತ್ತಿದೆ. ಸೋಂಕು ಪತ್ತೆ ಪ್ರಮಾಣ ಗಣನೀಯವಾಗಿ ಇಳಿಕೆಯಾದರೂ ಕೋವಿಡ್ ಸೋಂಕಿತರ ಸಾವಿನ ದರ ಇಳಿಕೆಯಾಗದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
ಬಿಬಿಎಂಪಿ ಅಂಕಿ–ಅಂಶಗಳ ಪ್ರಕಾರ 2021ರ ಏಪ್ರಿಲ್ ಆರಂಭದಲ್ಲಿ ಕೋವಿಡ್ ಸೋಂಕಿತರ ಸಾವಿನ ದರ ಶೇ 0.37ರಷ್ಟಿತ್ತು. ಕೋವಿಡ್ ಪೀಡಿತರ ಸಾವಿನ ದರ ಏಪ್ರಿಲ್ ಅಂತ್ಯಕ್ಕೆ ಶೇ 0.56ಕ್ಕೇರಿತ್ತ. ನಗರದಲ್ಲಿ ಜೂನ್ 7 ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ ಕೋವಿಡ್‌ನಿಂದಾಗಿ ಒಟ್ಟು 15,074 ಮರಣಗಳು ಸಂಭವಿಸಿವೆ. ಈ ಪೈಕಿ ಮೇ ತಿಂಗಳಿನಲ್ಲಿ ಮೃತಪಟ್ಟವರ ಸಂಖ್ಯೆ 6,978ಕ್ಕೂ ಹೆಚ್ಚಿದೆ.
ಹಾಗೆಯೇ ಇದೇ ಅವಧಿಯಲ್ಲಿ ಒಟ್ಟು 2,653 ಮಂದಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಮೇ 28ರಂದು 192 ಮಂದಿ ಸಾವನ್ನಪ್ಪಿದ್ದರೆ ಜೂನ್ 3ರಂದು 347 ಮಂದಿ ಸಾವನ್ನಪ್ಪಿದ್ದರು. ಜೂನ್ 7ರಂದು 199 ಮಂದಿ ಮರಣ ಹೊಂದಿದ್ದರು. ಇದೇ 10 ದಿನದಲ್ಲಿ 1,37,332 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೇ 28ರಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 31,237 ಮಂದಿ ಬಿಡುಗಡೆಗೊಂಡಿದ್ದರೆ ಜೂನ್ 7ರಂದು 11,488 ಮಂದಿ ಬಿಡುಗಡೆಗೊಂಡಿದ್ದಾರೆ.
ಅದೇ ರೀತಿ ಕಳೆದ 10 ದಿನದಲ್ಲಿ (ಮೇ 28ರಿಂದ ಜೂನ್ 7) ಬೆಂಗಳೂರಿನಲ್ಲಿ 8,55,215 ಮಂದಿಗೆ ಲಸಿಕೆ ಹಾಕಲಾಗಿದೆ. ಮೇ 28ರಂದು 92,111 ಮಂದಿಗೆ ಲಸಿಕೆ ಹಾಕಿದ್ದರೆ ಜೂನ್ 7ರಂದು ಕೇವಲ 40,826 ಮಂದಿಗೆ ಲಸಿಕೆ ಹಾಕಲಾಗಿದೆ.
ಚೆನ್ನೈ ಮತ್ತು ಕೋಲ್ಕತ್ತಾ ನಗರದಲ್ಲಿಯೂ ಸೋಂಕು ಮರಣ ಪ್ರಮಾಣದ ದರದಲ್ಲಿ ಇಳಿಕೆಯಾಗುತ್ತಿಲ್ಲ. ಆ ಎರಡೂ ನಗರಗಳೂ ಮರಣ ಪ್ರಮಾಣ ದರವನ್ನು ಇಳಿಕೆ ಮಾಡಲು ಹರಸಾಹಸ ಪಡುತ್ತಿವೆ.
ದೆಹಲಿ ನಗರದಲ್ಲಿ ಸೋಂಕು ಮರಣ ಪ್ರಮಾಣವು 563ರಿಂದ 1,304ಕ್ಕೆ ಏರಿದೆ. ಇದರ ಪ್ರಮಾಣ 2.5ರಷ್ಟು ಹೆಚ್ಚಳವಾಗಿದೆ ಎಂಬುದು ಸಾಂಕ್ರಾಮಿಕ ರೊಗ ತಜ್ಞರ ಅಧ್ಯಯನದಿಂದ ಗೊತ್ತಾಗಿದೆ.