ಕಾರ್ಪೋರೇಟ್‌ ಆಸ್ಪತ್ರೆಗಳಿಗೆ ಪಿಎಂ ಕೇರ್ಸ್‌ನ 165 ವೆಂಟಿಲೇಟರ್‌; ಹಣ ದೋಚುವ ಹುನ್ನಾರ?

ಬೆಂಗಳೂರು; ಕೋವಿಡ್‌ 19ರ ಸೋಂಕಿತರ ಚಿಕಿತ್ಸೆಗಾಗಿ ಭಾರತ ಸರ್ಕಾರವು ಪಿಎಂ ಕೇರ್ಸ್‌ ಯೋಜನೆಯಡಿಯಲ್ಲಿ ಒದಗಿಸಿರುವ ವೆಂಟಿಲೇಟರ್‌ಗಳನ್ನು ಪೂರ್ಣಪ್ರಮಾಣದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಿ ಬಳಕೆ ಮಾಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವು 165 ವೆಂಟಿಲೇಟರ್‌ಗಳನ್ನು ನಾರಾಯಣ ಆಸ್ಪತ್ರೆ, ಎಂ ಎಸ್‌ ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಸೇರಿದಂತೆ ಒಟ್ಟು 17 ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆ ಮಾಡಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಕೇಂದ್ರ ಸರಕಾರ ಪಿಎಂ ಕೇರ್ಸ್ ಯೋಜನೆಯಡಿ ರಾಜ್ಯಕ್ಕೆ ಒದಗಿಸಿದ 2,913 ವೆಂಟಿಲೇಟರ್‌ಗಳ ಪೈಕಿ ಅರ್ಧದಷ್ಟು ಅಳವಡಿಕೆಯೇ ಆಗಿಲ್ಲ ಮತ್ತು ಆಸ್ಪತ್ರೆಗಳ ಗೋಡೌನ್‌ನಲ್ಲಿ ಧೂಳು ಹಿಡಿಯುತ್ತಿವೆ. ಅಳವಡಿಸಿರುವ ವೆಂಟಿಲೇಟರ್‌ಗಳಲ್ಲೂ ಹೆಚ್ಚಿನವು ಬಳಸಲಾಗದ ಸ್ಥಿತಿಯಲ್ಲಿವೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಹಂಚಿಕೆ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಈ ಪಟ್ಟಿಯಲ್ಲಿ ಕಾರ್ಪೋರೇಟ್‌ ವಲಯದ ಆಸ್ಪತ್ರೆಗಳೂ ಇರುವುದು ವಿಶೇಷ.

ಪಿ ಎಂ ಕೇರ್ಸ್‌ ಯೋಜನೆಯಡಿಯಲ್ಲಿ ಹಾಗೂ ಇತರೆ ಮೂಲಗಳಿಂದ ರಾಜ್ಯಕ್ಕೆ ಸರಬರಾಜಾಗಿರುವ ಹಾಗೂ ಸರಬರಾಜಾಗುತ್ತಿರುವ ವೆಂಟಿಲೇಟರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶ ಮತ್ತು ಕೋವಿಡ್‌ 19 ಸಾಂಕ್ರಾಮಿಕವು ಹತೋಟಿಗೆ ಬಂದ ನಂತರ ಈ ವೆಂಟಿಲೇಟರ್‌ಗಳನ್ನು ಸುಸ್ಥಿತಿಯಲ್ಲಿ ಹಿಂತಿರುಗಿಸುವ ಷರತ್ತಿನ ಮೇರೆಗೆ ಹಂಚಿಕೆ ಮಾಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಹಲವು ಆಕ್ಷೇಪಗಳು ವ್ಯಕ್ತವಾಗಿವೆ.

ಪಿಎಂ ಕೇರ್ಸ್‌ ವೆಂಟಿಲೇಟರ್‌ ಪಡೆದಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿ

ಎಂ ಎಸ್‌ ರಾಮಯ್ಯ ಮೆಡಿಕಲ್‌ ಕಾಲೇಜು ಆಸ್ಪತ್ರೆ – 40
ಈಸ್ಟ್‌ ಪಾಯಿಂಟ್‌ ಮೆಡಿಕಲ್‌ ಕಾಲೇಜ್‌- 05
ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು – 20
ಡಾ ಬಿ ಆರ್‌ ಅಂಬೇಡ್ಕರ್‌ ಮೆಡಿಕಲ್‌ ಕಾಲೇಜು – 15
ಕೊಲಂಬಿಯಾ ಏಷ್ಯಾ ಆಸ್ಪತ್ರೆ (ಹೆಬ್ಬಾಳ) – 02
ಕೊಲಂಬಿಯಾ ಏಷ್ಯಾ ಆಸ್ಪತ್ರೆ (ವೈಟ್‌ಫೀಲ್ಡ್‌ ) – 2
ಸುಗುಣ ಆಸ್ಪತ್ರೆ – 02
ಕಿಮ್ಸ್‌ ಬೆಂಗಳೂರು – 10
ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು – 05
ರಂಗದೊರೆ ಮೆಮೋರಿಯಲ್‌ ಆಸ್ಪತ್ರೆ – 02
ಪೀಪಲ್‌ ಟ್ರೀ ಆಸ್ಪತ್ರೆ – 05
ಮೀನಾಕ್ಷಿ ಆಸ್ಪತ್ರೆ – 02
ದಯಾನಂದ ಸಾಗರ್‌ ಮೆಡಿಕಲ್‌ ಕಾಲೇಜು – 05
ಎಂವಿಜೆ ಮೆಡಿಕಲ್‌ ಕಾಲೇಜು ಹೊಸಕೋಟೆ – 10
ಆಕಾಶ್‌ ಮೆಡಿಕಲ್‌ ಕಾಲೇಜು ದೇವನಹಳ್ಳಿ – 10
ಆದಿಚುಂಚನಗಿರಿ ಮೆಡಿಕಲ್‌ ಕಾಲೇಜು ಮಂಡ್ಯ -30
ನಾರಾಯಣ ಆಸ್ಪತ್ರೆ – 05

ಅಲ್ಲದೆ ಪಿಎಂ ಕೇರ್‌ನಿಂದ ಹಂಚಿಕೆಯಾಗಿ ಬಂದಿರುವ 50 ವೆಂಟಿಲೇಟರ್‌ಗಳನ್ನು ಮೈಸೂರಿಗೆ ನೀಡಿದೆ. ಹಾಗೆಯೇ ಸರ್ಕಾರಿ ಆಸ್ಪತ್ರೆಗಳ ಬೇಡಿಕೆಯ ನಂತರ ಸಂಭವನೀಯವಾಗಿ ಉಳಿತಾಯವಾಗುವ ವೆಂಟಿಲೇಟರ್‌ಗಳನ್ನು ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆಗಳಿಗೆ ಎಂಒಯು ಮೂಲಕ ಹಂಚಿಕೆ ಮಾಡಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿದ್ದ ಕಾರ್ಯಪಡೆ ಸಮಿತಿ ಸಭೆಯು 2021ರ ಏಪ್ರಿಲ್‌ 27ರಂದು ಅನುಮೋದನೆ ನೀಡಿದೆ.

ಖಾಸಗಿ ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗಳನ್ನು ಹಂಚಿಕೆ ಮಾಡಿರುವುದರಿಂದ ಸರ್ಕಾರಕ್ಕೆ ಅಥವಾ ಜನಸಾಮಾನ್ಯರಿಗೆ ಯಾವ ತರಹದ ಲಾಭವಾಗಿದೆ ಮತ್ತು ಚಿಕಿತ್ಸಾ ಶುಲ್ಕದಲ್ಲಿ ಕಡಿತವಾಗಿದೆ ಎನ್ನುವುದು ಎಂದಿಗೂ ಸಹ ಹೊರಗೆ ಬರುವುದೇ ಇಲ್ಲ. ಇದರ ಬಗ್ಗೆ ಲೆಕ್ಕಪತ್ರ ಪರಿಶೋಧನೆ ಮಾಡಲು ಹಲವು ವರ್ಷಗಳೇ ಹಿಡಿಯುತ್ತವೆ. ಹಾಗಾಗಿ ಪಿಎಂ ಕೇರ್ಸ್‌ಗೆ ಕೊಟ್ಟಿರುವ ದೇಣಿಗೆಯೇ ಬಹಳಷ್ಟು ಪ್ರಮಾಣದಲ್ಲಿ ನಿರರ್ಥಕ ಮತ್ತು ದುರ್ಬಳಕೆಗೆ ಹಾದಿಮಾಡಿಕೊಟ್ಟಿದೆ.

ರವಿಕೃಷ್ಣಾರೆಡ್ಡಿ, ಅಧ್ಯಕ್ಷರು

ಕರ್ನಾಟಕ ರಾಷ್ಟ್ರಸಮಿತಿ

ಕಾರಜೋಳರ ನಂತರ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಅಧ್ಯಕ್ಷರಾದ ನಂತರ ಮೇ 4ರಂದು ನಡೆಸಿದ್ದ ಸಮಿತಿ ಸಭೆಯು ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆಯಾಗಿರುವ ವೆಂಟಿಲೇಟರ್‌ಗಳ ಬಳಕೆ ಅವಧಿಯನ್ನು ಮೇ 4ರಿಂದ 6 ತಿಂಗಳ ಅವಧಿಗೆ ವೆಂಟಿಲೇಟರ್‌ಗಳನ್ನು ಯಾವುದೇ ಶುಲ್ಕವಿಲ್ಲದೇ ವಿಸ್ತರಿಸಲು ಅನುಮೋದಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

ಪಿಎಂ ಕೇರ್ ಫಂಡ್ ಮತ್ತು ಸರ್ಕಾರದ ಇನ್ನಿತರ ಅನುದಾನವನ್ನು ಬಳಸಿ ಖಾಸಗಿ ಆಸ್ಪತ್ರೆಗಳಿಗೆ ವಿತರಿಸಲಾಗಿರುವ ವೆಂಟಿಲೇಟರಗಳನ್ನು ಯಾವ ಯಾವ ನಿರ್ದಿಷ್ಟ ರೋಗಿಗಳಿಗೆ ಬಳಸಲಾಗಿದೆ ಎಂಬ ಮಾಹಿತಿ ಯನ್ನು ಖಾಸಗಿ ಆಸ್ಪತ್ರೆಗಳು ತಿಳಿಸಬೇಕು. ಸರ್ಕಾರದಿಂದ ನೀಡಲಾದ ವೆಂಟಿಲೇಟರಗಳನ್ನು ಬಳಸಿ ಒಟ್ಟು ಎಷ್ಟು ಬಾದಿತರನ್ನು ಆರೈಕೆ ಮಾಡಲಾಗಿದೆ ಮತ್ತು ಆ ಬಾದಿತರಿಗೆ ಸರ್ಕಾರ ವೆಂಟಿಲೇಟರಗಳನ್ನು ಬಳಸಿ ಆರೈಕೆ ಮಾಡಿದ್ದರಿಂದ ವೆಂಟಿಲೇಟರ್ ಚಾರ್ಜ್ ಪಡೆದಿಲ್ಲ ಎಂಬುದನ್ನು ಆಸ್ಪತ್ರೆಗಳ ಲೆಕ್ಕ ಪತ್ರ ನೋಡಿಕೊಳ್ಳುವ ವಿಭಾಗ ತಿಳಿಸಬೇಕು.

ಕೆಬಿಕೆ ಸ್ವಾಮಿ, ವಕೀಲರು

ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೆಂಟಿಲೇಟರ್‌ಗಳ ಬೇಡಿಕೆ ಹಿಂದೆಗಿಂತಲೂ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ತಾಲೂಕು ಮಟ್ಟದ ಆಸ್ಪತ್ರೆಗಳಿಗೆ 6 ವೆಂಟಿಲೇಟರ್‌ಗಳನ್ನು ಹಂಚಿಕೆ ಮಾಡಿರುವ ಸರ್ಕಾರವು ಜಿಲ್ಲಾಸ್ಪತ್ರೆಗಳಿಗೆ ಕನಿಷ್ಠ 20 ಹಾಗೂ ಜಿಲ್ಲಾಸ್ಪತ್ರೆಗಳ ಬೇಡಿಕೆ ಅನುಸಾರ ಹಂಚಿಕೆ ಮಾಡಿರುವುದು ತಿಳಿದು ಬಂದಿದೆ.

 

ವೆಂಟಿಲೇಟರ್ ಗಳನ್ನು ಸರ್ಕಾರ ಈ ಸಂದರ್ಭದಲ್ಲಿ ನಿಜವಾಗಿಯೂ ನೀಡಬೇಕಿರುವುದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ. ಅವುಗಳ ಬೇಡಿಕೆ ಪೂರೈಸಿದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸದೃಶವಾಗಿ ಕಟ್ಟುವ ದೂರದೃಷ್ಟಿ ಇಟ್ಟುಕೊಂಡು ಅವುಗಳಿಗೆ ವೆಂಟಿಲೇಟರ್ ಕೊಡಬಹುದಿತ್ತು. ಆದರೆ ಈ ಸರ್ಕಾರಕ್ಕೆ ಆ ಕುರಿತು ಕಾಳಜಿ ಇದ್ದಂತಿಲ್ಲ. ಬೆಣ್ಣೆಯಂತೆ ಮಾತನಾಡುವ ಕಾರ್ಪೊರೇಟ್ ಆಸ್ಪತ್ರೆಗಳ ಕುಳಗಳನ್ನೇ ಉನ್ನತ ಮಟ್ಟದ ಸಮಿತಿಗಳಿಗೆ ನೇಮಿಸಿದರೆ ಇನ್ನೇನಾಗಲು ಸಾಧ್ಯ?

ದಿನೇಶ್ ಕುಮಾರ್ ಎಸ್.ಸಿ.

ಮುಖ್ಯಸ್ಥರು, ಕರವೇ ಸಾಮಾಜಿಕ ಜಾಲತಾಣ

ಇನ್ನು ಆರು ತಿಂಗಳ ಅವಧಿಗೆ ಸರ್ಕಾರ ನೀಡಿದ ವೆಂಟಿಲೇಟರಗಳನ್ನು ಬಳಸಲು ಕಾಲಾವಕಾಶ ಮುಂದುವರಿಸಿರುವುದರಿಂದ ಆಸ್ಪತ್ರೆಗಳ ಬಿಲ್ ಪಾವತಿಸುವ ಕೌಂಟರ್ ಮತ್ತು ಆಸ್ಪತ್ರೆಗಳ ವೆಬ್ಸೈಟ್ ನಲ್ಲಿ ಉಚಿತ ವೆಂಟಿಲೇಟರ್ ಲಭ್ಯತೆ ಕುರಿತು ಸಾರ್ವಜನಿಕರಿಗೆ ಕಾಣುವಂತೆ ಮಾಹಿತಿ ಯನ್ನು ಪ್ರಕಟಿಸಬೇಕು. ಆರೋಗ್ಯ ಇಲಾಖೆ ಸರಿಯಾದ ನಿಗಾ ಮಾಡದೇ ಹೋದರೆ ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಪಡೆದ ವೆಂಟಿಲೇಟರಗಳನ್ನು ಬಳಸಿ ಬಾದಿತರಿಂದ ಹಣವನ್ನು ದೋಚಲು ಹಾತೊರೆಯುವುದು ಮುಂದುವರೆಯುತ್ತದೆ ಎನ್ನುತ್ತಾರೆ ವಕೀಲ ಕೆಬಿಕೆ ಸ್ವಾಮಿ.

ಸಾರ್ವಜನಿಕ‌ ಕ್ಷೇತ್ರದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ಕರ್ತವ್ಯವಾಗಬೇಕು. ಇವತ್ತಿಗೂ ಬಡಜನರಿಗೆ ಆರೋಗ್ಯ ಸೇವೆ ಸಿಗುವುದು ಸರ್ಕಾರಿ ಆಸ್ಪತ್ರೆಗಳಲ್ಲೇ. ಆದರೆ ಸರ್ಕಾರ ಪಿಎಂ ಕೇರ್ಸ್ ಮತ್ತು ಇತರ ಮೂಲಗಳಿಂದ ಬಂದ 165 ವೆಂಟಿಲೇಟರ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ತಾತ್ಕಾಲಿಕ ದಾನ ನೀಡಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಕೋಟಿಕೋಟಿ ದುಡಿದಿವೆ. ಸ್ವತಃ ವೆಂಟಿಲೇಟರ್ ಖರೀದಿಸಲು ಅವರ ಬಳಿ ಹಣ ಇಲ್ಲ ಎಂದೇನಿಲ್ಲ. ಕೋವಿಡ್ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರಪಟ್ಟಿಯನ್ನು ಯಾರೂ ಪಾಲಿಸುತ್ತಿಲ್ಲ. ಈ ದಂಧೆಯನ್ನು ತಡೆಯಬೇಕಾದ ಸರ್ಕಾರವೂ ಕಾರ್ಪೊರೇಟ್ ಆಸ್ಪತ್ರೆಗಳ ಲಾಬಿಗೆ ಮಣಿದಿದೆ ಎನ್ನುತ್ತಾರೆ ದಿನೇಶ್‌ಕುಮಾರ್‌.

ಪಿಎಂ ಕೇರ್ಸ್‌ ನಿಧಿಯೇ ಅತೀ ಅಪಾರದರ್ಶಕ ಹಾಗೂ ಹೊಣೆಗಾರಿಕೆಯಿಲ್ಲದ ನಿಧಿ. ಅದೇ ಕಾರಣಕ್ಕಾಗಿಯೇ ವೆಂಟಿಲೇಟರ್‌ ಹಂಚಿಕೆಯಲ್ಲಿಯೂ ಅತ್ಯಂತ ಅವೈಚಾರಿಕವಾದ, ಕಾಳಜಿ ರಹಿತ ಹಂಚಿಕೆಯನ್ನು ನಾವು ಕಾಣುತ್ತೇವೆ. ಕೋವಿಡ್‌ ರೋಗಿಗಳು ಹೆಚ್ಚು ಪ್ರಮಾಣದಲ್ಲಿ ಕಾಣಸಿಗುವ ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೆಂಟಿಲೇಟರ್‌ಗಳನ್ನು ನೀಡಿ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದ ಬಡ ರೋಗಿಗಳಿಗೆ ಇಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿತ್ತು ಎಂದು ಪ್ರತಿಪಾದಿಸುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

SUPPORT THE FILE

Latest News

Related Posts