ಬೆಂಗಳೂರು; ಕೋವಿಡ್ 2ನೇ ಅಲೆಯಲ್ಲಿ ಕೊರೊನಾ ವೈರಸ್‌ನ್ನು ತ್ವರಿತವಾಗಿ ಪತ್ತೆ ಹಚ್ಚಿ ತಕ್ಷಣವೇ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಭಾಗವಾಗಿ ನಡೆಸುವ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಪರಿಕರಗಳ ಖರೀದಿ ಪ್ರಕ್ರಿಯೆ ರಾಜ್ಯದಲ್ಲಿ ಇನ್ನೂ ತೆವಳುತ್ತಲೇ ಇದೆ. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಸಕಾಲದಲ್ಲಿ ಕಿಟ್‌ಗಳನ್ನು ಖರೀದಿಸದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 10 ಕೋಟಿ ರು.ಗಳ ಹೆಚ್ಚುವರಿ ಹೊರೆ ಬೀಳಲಿದೆ.
ಈ ಕುರಿತು ‘ದಿ ಫೈಲ್’ ದಾಖಲೆಗಳ ಸಮೇತ ಕಿಟ್ ಖರೀದಿ ಪ್ರಕರಣವನ್ನು ಹೊರಗೆಡವಿದೆ. ಅಲ್ಲದೆ ಕಿಟ್‌ಗಳಿಗೆ ನೆರೆ ರಾಜ್ಯಗಳಲ್ಲಿನ ದರದೊಂದಿಗೆ ಹೋಲಿಸಿ ಸರ್ಕಾರಕ್ಕೆ ಆಗಲಿರುವ ನಷ್ಟದ ಮೊತ್ತವನ್ನೂ ಮುನ್ನೆಲೆಗೆ ತಂದಿದೆ. ‘ದಿ ಫೈಲ್’ ಈ ಕುರಿತು ಸ್ವತಂತ್ರ ತನಿಖೆ ನಡೆಸಿದೆಯಲ್ಲದೆ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳ ಕರ್ತವ್ಯಲೋಪವನ್ನೂ ಬಹಿರಂಗಪಡಿಸಿದೆಯಲ್ಲದೆ ವಿವಿಧ ಹಂತಗಳಲ್ಲಿನ ದರವನ್ನು ಲೆಕ್ಕಾಚಾರ ಮಾಡಿ ಹೆಚ್ಚುವರಿ ಹೊರೆ ಅಥವಾ ನಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
30 ಲಕ್ಷ ಟೆಸ್ಟ್‌ಗಳನ್ನು 10.15 ಕೋಟಿ ರು.ನಲ್ಲಿ ನಡೆಸಲು ಅವಕಾಶವಿದ್ದರೂ ಅಧಿಕಾರಿಗಳ ಕರ್ತವ್ಯಲೋಪ ಅಥವಾ ಕಮಿಷನ್ ಆಸೆಗೆ 10.54 ಕೋಟಿಯನ್ನು( ಉತ್ತರಪ್ರದೇಶ ದರದ ಪ್ರಕಾರ 20.70 ಕೋಟಿ) ಹೆಚ್ಚುವರಿ ಹೊರೆ ಸರ್ಕಾರ ಹೇಗೆ ಹೊತ್ತುಕೊಳ್ಳಲಿದೆ ಎಂಬುದನ್ನು ಹೊರಗೆಡವಿದೆ.
30 ಲಕ್ಷ ಪರೀಕ್ಷೆ ನಡೆಸಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಖರೀದಿಗಾಗಿ 2021ರ ಏಪ್ರಿಲ್ 6ರಂದು ಮೊದಲು ದರ ಪಟ್ಟಿ ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಒಟ್ಟು 4 ಕಂಪನಿಗಳು ಭಾಗವಹಿಸಿದ್ದವು. ಸುದರ್ಶನ್ ಫಾರ್ಮಾ ತಲಾ ಟೆಸ್ಟ್‌ಗೆ 33.85 ರು. ನಮೂದಿಸಿತ್ತು. ಹಾಗೆಯೇ ಟ್ರಿವಿಟ್ರಾನ್ ಹೆಲ್ತ್ ಕೇರ್ ಪ್ರೈವೈಟ್ ಲಿಮಿಟೆಡ್ 34.60 ರು., ಓಸ್ಕರ್ 35.60 ರು., ಪಿ ಭೋಗಿಲಾಲ್ ಪ್ರೈವೈಟ್ ಲಿಮಿಟೆಡ್ 35.80 ರು ನಮೂದಿಸಿತ್ತು. ಇದರಲ್ಲಿ 33.85 ರು. ನಮೂದಿಸಿದ್ದ ಸುದರ್ಶನ್ ಫಾರ್ಮಾ ಕಂಪನಿಯು ಎಲ್-1 ಕಂಪನಿಯಾಗಿತ್ತು. ಎಲ್ 1 ಆಗಿ ಹೊರಹೊಮ್ಮಿದ್ದ ಕಂಪನಿಗೆ ಖರೀದಿ ಆದೇಶ ನೀಡಿದ್ದರೆ 10.15 ಕೋಟಿ ರು.ನಲ್ಲಿ 30 ಲಕ್ಷ ಟೆಸ್ಟ್‌ಗಳನ್ನು ನಡೆಸಬಹುದಿತ್ತು. ಆದರೆ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಈ ದರಪಟ್ಟಿಯನ್ನು ಅಂತಿಮಗೊಳಿಸಲಿಲ್ಲ.
ಬದಲಿಗೆ 19 ದಿನಗಳ ಅಂತರದಲ್ಲೇ 2021ರ ಏಪ್ರಿಲ್ 25 ರಂದು 2ನೇ ಬಾರಿ ದರಪಟ್ಟಿ ಆಹ್ವಾನಿಸಲಾಗಿತ್ತು. ಎರಡನೇ ಬಾರಿ ಕರೆದಿದ್ದ ದರಪಟ್ಟಿಯಲ್ಲಿಯೂ 4 ಕಂಪನಿಗಳು ಭಾಗವಹಿಸಿದ್ದವು. ಆದರೆ ಈ ಹೊತ್ತಿಗೆ ಕಂಪನಿಗಳು ದುಪ್ಪಟ್ಟು ದರವನ್ನು ನಮೂದಿಸಿದ್ದವು. ಪಿ ಭೋಗಿಲಾಲ್ ಪ್ರೈವೈಟ್ ಲಿಮಿಟೆಡ್ ಟೆಸ್ಟ್‌ವೊಂದಕ್ಕೆ 81.64 ರು. ನಮೂದಿಸಿದ್ದರೆ ಟ್ರಿವಿಟ್ರಾನ್ ಹೆಲ್ತ್ ಕೇರ್ ಪ್ರೈವೈಟ್ ಲಿಮಿಟೆಡ್ 83.77 ರು., ಮೆರಿಲ್ ಕಂಪನಿಯು 89.06 ರು., ಸಿಪ್ಲಾ ಕಂಪನಿಯು 134.4 ರು. ನಮೂದಿಸಿತ್ತು. ಈ ಪೈಕಿ ಭೋಗಿಲಾಲ್ ಪ್ರೈವೈಟ್ ಲಿಮಿಟೆಡ್ ಕಂಪನಿಯು 81.64 ರು. ನಮೂದಿಸಿ ಎಲ್ 1 ಆಗಿ ಹೊರಹೊಮ್ಮಿತ್ತು.
ವಿಶೇಷವೆಂದರೆ ಮೊದಲ ಬಾರಿ ಕರೆದಿದ್ದ ದರಪಟ್ಟಿಯಲ್ಲಿ 35.84 ರು ನಮೂದಿಸಿದ್ದ ಭೋಗಿಲಾಲ್ ಕಂಪನಿಯು ಎಲ್- 4 ಆಗಿದ್ದರೆ 34.60 ರು. ನಮೂದಿಸಿದ್ದ ಟ್ರಿವಿಟ್ರಾನ್ ಕಂಪನಿಯು ಎಲ್ 2 ಆಗಿತ್ತು. 2ನೇ ಬಾರಿ ಕರೆದಿದ್ದ ದರಪಟ್ಟಿಯಲ್ಲಿಯೂ ಈ ಎರಡೂ ಕಂಪನಿಗಳು ಭಾಗವಹಿಸಿದ್ದವು. ಮೊದಲ ದರಪಟ್ಟಿಯಲ್ಲಿ ಎಲ್ 4 ಆಗಿದ್ದ ಭೋಗಿಲಾಲ್ ಕಂಪನಿಯು 2ನೇ ದರಪಟ್ಟಿಯಲ್ಲಿ 81.64 ರು. ನಮೂದಿಸಿ ಎಲ್ 1 ಆಗಿತ್ತು. ಟ್ರಿವಿಟ್ರಾನ್ ಕಂಪನಿಯು 83.77 ರು. ನಮೂದಿಸಿ ಎಲ್ 2 ಆಗಿತ್ತು.
ಮೊದಲ ಬಾರಿ ಕರೆದಿದ್ದ ದರಪಟ್ಟಿಯಲ್ಲಿ ಎಲ್ 1 ಆಗಿದ್ದ ಕಂಪನಿಯನ್ನು ಅಂತಿಮಗೊಳಿಸಿ ಖರೀದಿ ಆದೇಶ ನೀಡಿದಿದ್ದರೆ 30 ಲಕ್ಷ ಟೆಸ್ಟ್‌ಗಳಿಗೆ 10.15 ಕೋಟಿ ರು.ವೆಚ್ಚವಾಗುತ್ತಿತ್ತು. ಅದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿಲ್ಲ. ಬದಲಿಗೆ 2ನೇ ಬಾರಿಗೆ ದರಪಟ್ಟಿಯನ್ನು ಆಹ್ವಾನಿಸಿತು. 2ನೇ ದರಪಟ್ಟಿಯಲ್ಲಿ ನಮೂದಾಗಿದ್ದ ಕಡಿಮೆ ದರ 81.64 ರು. ಪ್ರಕಾರ 30 ಲಕ್ಷ ಟೆಸ್ಟ್‌ಗಳಿಗೆ 24.49 ಕೋಟಿ ರು.ಆಗಲಿದೆ. ಮೊದಲ ಮತ್ತು ಎರಡನೇ ದರಪಟ್ಟಿಯಲ್ಲಿ ನಮೂದಿಸಿರುವ ಕಡಿಮೆ ದರದ ಪ್ರಕಾರ 14.33 ಕೋಟಿ ವ್ಯತ್ಯಾಸ ಕಂಡುಬಂದಿದೆ.
ಈ ಮಧ್ಯೆ ಅಧಿಕಾರಿಗಳು 2021ರ ಮೇ 4ರಂದು ಮತ್ತೊಂದು ಸಭೆ ನಡೆಸಿದ್ದರು. ಈ ಸಭೆಯಲ್ಲಿಯೂ ಎರಡನೇ ದರಪಟ್ಟಿಯನ್ನು ಅಂತಿಮಗೊಳಿಸಲಿಲ್ಲ. ಬದಲಿಗೆ ಉತ್ತರ ಪ್ರದೇಶದಲ್ಲಿರುವ ದರದೊಂದಿಗೆ ಹೋಲಿಕೆ ಮಾಡಿದರು. ಉತ್ತರ ಪ್ರದೇಶದಲ್ಲಿ ಒಂದು ಟೆಸ್ಟ್‌ಗೆ 69.00 ರು. ನಿಗದಿಪಡಿಸಿರುವುದನ್ನು ಸಭೆಯಲ್ಲಿ ಚರ್ಚಿಸಿದ್ದಾರೆ. ಒಂದು ವೇಳೆ 69 ರು.ಗೆ ಕಂಪನಿಯನ್ನು ಒಪ್ಪಿಸಿದ್ದಲ್ಲಿ 30 ಲಕ್ಷ ಟೆಸ್ಟ್‌ಗಳಿಗೆ 20.70 ಕೋಟಿ ರು.ಗಳಾಗಲಿದೆ.
ಮೊದಲ ದರಪಟ್ಟಿಯಲ್ಲಿ ನಮೂದಿಸಿದ್ದ (33.85 ರು.) ದರದೊಂದಿಗೆ ಉತ್ತರಪ್ರದೇಶದ ದರ ಹೋಲಿಸಿದರೆ 30 ಲಕ್ಷ ಟೆಸ್ಟ್‌ಗಳಿಗೆ ಕಿಟ್‌ಗಳ ಖರೀದಿ ಮೊತ್ತದಲ್ಲಿ 10.54 ಕೋಟಿ ರು. ವ್ಯತ್ಯಾಸವಿರವುದು ಕಂಡು ಬಂದಿದೆ. ಅದೇ ರೀತಿ 2ನೇ ಬಾರಿ ದರಪಟ್ಟಿಯಲ್ಲಿ ನಮೂದಿಸಿದ್ದ ದರ (81.64 ರು.) ಪ್ರಕಾರ 3.79 ಕೋಟಿ ವ್ಯತ್ಯಾಸವಿದೆ. ಆದರೆ ಅಧಿಕಾರಿಗಳು ಈವರೆವಿಗೂ 2ನೇ ದರಪಟ್ಟಿಯನ್ನೂ ಅಂತಿಮಗೊಳಿಸಿಲ್ಲ ಎಂದು ಗೊತ್ತಾಗಿದೆ.
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ನಮ್ಮ ದೇಹದಲ್ಲಿ ಕೊರೊನಾ ವೈರಸ್ಸಿನ ಸೋಂಕು ಇದೆಯೇ ಇಲ್ಲವೇ ಎಂದು ಕಂಡು ಹಿಡಿಯಲು ಬಳಸುತ್ತಾರೆ. ಮೂಗಿನ ದ್ರವವನ್ನು ಹತ್ತಿ ತುಂಡುಗಳಿಂದ ಸಂಪೂರ್ಣ ವೈದ್ಯಕೀಯ ಪರಿಸರದಲ್ಲಿ ಸಂಗ್ರಹಿಸಿ ಪರೀಕ್ಷೆಯನ್ನು ಮಾಡುತ್ತಾರೆ. ದ್ರವವನ್ನು ಸಂಗ್ರಹಿಸಿದ ಒಂದು ಗಂಟೆಯೊಳಗೆ ಈ ಪರೀಕ್ಷೆಯನ್ನು ಮಾಡಿಬಿಡಬೇಕು. ಹಾಗಾಗಿ ಜನವಸತಿ ಭಾಗಗಳಿಗೇ ಹೋಗಿ ಕೂಡ ಈ ಪರೀಕ್ಷೆಯನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಪರೀಕ್ಷೆಯ ಫಲಿತಾಂಶ ಅತಿ ಶೀಘ್ರವಾಗಿ ಅಂದರೆ ಮೂವತ್ತು ನಿಮಿಷಗಳ ಒಳಗೆ ದೊರಕುತ್ತದೆ. ಇದರಿಂದಾಗಿ ಕೊರೊನಾ ವೈರಸ್ಸನ್ನು ತ್ವರಿತವಾಗಿ ಪತ್ತೆ ಹಚ್ಚಿ, ತಕ್ಷಣವೇ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ.