ಬೆಂಗಳೂರು; ದಿನಸಿ ಪದಾರ್ಥ ಖರೀದಿಸಲು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯಲ್ಲಿದ್ದ ನಾಗರಿಕರಿಂದ ತಲಾ 50 ರು. ವಸೂಲಿಗೆ ಮುಂದಾಗಿದ್ದನ್ನು ಪ್ರಶ್ನಿಸಿದ್ದ ಹೈಕೋರ್ಟ್ ವಕೀಲರೊಬ್ಬರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಲ್ಲದೆ ಲಾಯರ್‌ಗಳು ಸೂ…..ಮಕ್ಕಳು ಎಂದು ಅವಾಚ್ಯವಾಗಿ ನಿಂದಿಸಿರುವ ಪ್ರಕರಣ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಉಸ್ತುವಾರಿ ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ವರದಿಯಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಹೈಕೋರ್ಟ್ ವಕೀಲ ಮಂಜುನಾಥ್ ಬೈರಾಳ್ ಅವರು ಚನ್ನಗಿರಿ ವೃತ್ತ ನಿರೀಕ್ಷಕರೂ ಸೇರಿದಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವರಿಗೆ 2021ರ ಮೇ 8ರಂದು ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ತೆಂಗಿನಕಾಯಿ ವ್ಯಾಪಾರಿಯೊಬ್ಬರಿಗೆ ದಾವಣಗೆರೆಯ ಎಸ್ ಪಿ ಹನುಮಂತರಾಯ ಅವರು ಕಪಾಳಮೋಕ್ಷ ಮಾಡಿದ್ದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಎಂಬುವರು ದಿನಸಿ ಪದಾರ್ಥ ಖರೀದಿಸಲು ಬಂದಿದ್ದ ನಾಗರಿಕರ ಸುಲಿಗೆಗೆ ಮುಂದಾಗಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.
ಕೋವಿಡ್ 2ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಮಾರ್ಗಸೂಚಿಯಲ್ಲಿ ಕಾಲಾವಕಾಶದೊಳಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ನಾಗರಿಕರು ಮುಂದಾಗಿದ್ದರೂ ಪೊಲೀಸರು ಸರತಿಯಲ್ಲಿ ನಿಂತವರಿಂದಲೇ ತಲಾ 50 ರು. ವಸೂಲಿಗೆ ಮುಂದಾಗಿದ್ದರು ಎಂದು ಲಿಖಿತವಾಗಿ ದೂರು ಸಲ್ಲಿಕೆಯಾಗಿದೆ. ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಚನ್ನಗಿರಿ ವೃತ್ತ ನಿರೀಕ್ಷಕ ಮಧು ಅವರು ‘ದಿ ಫೈಲ್’ಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಕೆಯಾದ ಬೆನ್ನಲ್ಲೇ ದೂರುದಾರ ಹೈಕೋರ್ಟ್ ವಕೀಲ ಮಂಜುನಾಥ ಬೈರಾಳ್ ಅವರ ಬಳಿ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಎಂಬುವರು ಸಂಧಾನಕ್ಕೆ ತೆರಳಿದ್ದರು. ಪ್ರಕರಣದ ಬಗ್ಗೆ ಕ್ಷಮೆಯಾಚಿಸಬೇಕು ಎಂದು ದೂರುದಾರರು ಹೇಳಿದ್ದಕ್ಕೆ ಒಪ್ಪದ ಸಬ್ ಇನ್ಸ್‌ಪೆಕ್ಟರ್ ಅವರು ಬರಿಗೈಯಲ್ಲಿ ಹಿಂದಿರುಗಿದರು ಎಂದು ಗೊತ್ತಾಗಿದೆ.
ದಿನಸಿ ಖರೀದಿಸಲು ಸರತಿಯಲ್ಲಿ ನಿಂತಿದ್ದ ಹೈಕೋರ್ಟ್ ವಕೀಲ ಮಂಜುನಾಥ್ ಬೈರಾಳ್ ಅವರು ಗುರುತಿನ ಪತ್ರವನ್ನು ತೋರಿಸಿದ್ದರೂ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ಲಾಯರ್‌ಗಳು ಸೂ….ಮಕ್ಕಳು ಎಂದು ಸಾರ್ವಜನಿಕವಾಗಿ ನಿಂದಿಸಿದರು ಎಂದು ದೂರಿನಲ್ಲಿ ಅವರು ವಿವರಿಸಿದ್ದಾರೆ.
ಸರತಿಯಲ್ಲಿ ನಿಂತಿದ್ದ ಇತರ ನಾಗರಿಕರು ಮಂಜುನಾಥ್ ಬೈರಾಳ್ ಅವರ ಪರಿಚಯ ಹೇಳಿದರೂ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರು ಅವಾಚ್ಯವಾಗಿ ನಿಂದಿಸುತ್ತಿದ್ದರು. ‘ಲಾಯರ್‌ಗಳು ಕಳ್ಳ ನನ್ನ ಮಕ್ಕಳು. ಇವರನ್ನೆಲ್ಲ ಒದ್ದು ಒಂದು ದಿನ ಒಳಗೆ ಹಾಕಿ 5ರಿಂದ 6 ಕೇಸ್‌ನಲ್ಲಿ ಫಿಟ್ ಮಾಡಿದರೆ ಗೊತ್ತಾಗುತ್ತೆ. ಲಾಯರ್‌ಗಳು ಆದರೆ ಏನ್ ಎರಡು ಕೊಂಬು ಇರುತ್ತಾ? ನನಗೆ ರೂಲ್ಸ್ ಹೇಳೋಕೆ ಬರ್ತಾರೆ ,’ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಹಣ ಸುಲಿಗೆ, ಹಲ್ಲೆ, ಅವಾಚ್ಯವಾಗಿ ನಿಂದನೆ ಮತ್ತು ವಕೀಲರ ಅವಹೇಳನ ಮಾಡಿರುವ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಕೀಲ ಮಂಜುನಾಥ ಬೈರಾಳ ಅವರು ಒತ್ತಾಯಿಸಿದ್ದಾರೆ.