ಬೆಂಗಳೂರು; ಕೊರೋನಾ ಸೋಂಕಿನ ಎರಡನೇ ಅಲೆಯನ್ನು ತಡೆಗಟ್ಟುವುದು, ಸಿಕೆ, ಕೋವಿಡ್ ವಾರಿಯರ್ಸ್‌ಗಳಿಗೆ ಸಂಬಂಧಿಸಿದಂತೆ ವಿಧಾನಪರಿಷತ್‌ನ ಮೂವರು ಸದಸ್ಯರು ಕೇಳಿದ್ದ ಸರಳ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್ ಅವರು ತಿಂಗಳಾದರೂ ಉತ್ತರಿಸಿಲ್ಲ!
ವಿಧಾನಪರಿಷತ್ ಸದಸ್ಯ ಎನ್ ಅಪ್ಪಾಜಿಗೌಡ, ಪಿ ಆರ್ ರಮೇಶ್, ಧರ್ಮಸೇನ ಅವರು 2021ರ ಮಾರ್ಚ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗಳಿಗೆ ಸುಧಾಕರ್ ಅವರು ಗಡುವು ಮೀರಿದರೂ ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ. ವಿಧಾನಪರಿಷತ್‌ನ ಅಧಿಕೃತ ಜಾಲತಾಣದಲ್ಲಿ ಈ ಪ್ರಶ್ನೆಗಳಿಗೆ ಇದುವರೆಗೂ ಉತ್ತರಗಳನ್ನು ಅಪ್‌ಲೋಡ್ ಮಾಡಿಲ್ಲ.
ಕೋವಿಡ್‌ನ 2ನೇ ಅಲೆಯು ಅದರಲ್ಲೂ ರಾಜಧಾನಿ ಬೆಂಗಳೂರು ನಗರದಲ್ಲಿ ಯಾರ ಹಿಡಿತಕ್ಕೂ ಸಿಗುತ್ತಿಲ್ಲ. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕೋವಿಡ್ ಅಲೆಯನ್ನು ತಡೆಗಟ್ಟುವ ಸಂಬಂಧ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆಯೇ ಮುಗ್ಗುರಿಸಿ ಬಿದ್ದಿರುವ ರಾಜ್ಯ ಬಿಜೆಪಿ ಸರ್ಕಾರವು ಕೋವಿಡ್ ನಿಯಂತ್ರಣ ಸಂಬಂಧ ವಿಧಾನಪರಿಷತ್ ಸದಸ್ಯರು ಕೇಳಿರುವ ಸರಳ ಪ್ರಶ್ನೆಗಳಿಗೂ ಉತ್ತರಿಸದಿರುವುದು ಸರ್ಕಾರ ಮತ್ತು ಸಚಿವ ಸುಧಾಕರ್ ಅವರು ವಹಿಸಿರುವ ನಿರ್ಲಕ್ಷ್ಯಕ್ಕೆ ಕೈ ಗನ್ನಡಿಯಾಗಿದೆ.
ಎನ್ ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
2021ರ ಮಾರ್ಚ್ 15 ಚುಕ್ಕೆ ರಹಿತ ಪ್ರಶ್ನೆ (ಸಂಖ್ಯೆ 953(1285)
1. ರಾಜ್ಯದಲ್ಲಿ ಮುಂದಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಹರಡುವ ಮಾಹಿತಿಯು ಸರ್ಕಾರದ ಗಮನಕ್ಕೆ ಬಂದಿದೆಯೇ?
2. ಹಾಗಿದ್ದಲ್ಲಿ ಎರಡನೇ ಅಲೆಯನ್ನು ತಡೆಗಟ್ಟುವ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು ? (ವಿವರ ಒದಗಿಸುವುದು)
3. ಈ ಸಂಬಂಧ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದೆಯೇ (ಮಾಹಿತಿ ನೀಡುವುದು)
ಪಿ ಆರ್ ರಮೇಶ್ (2021 ಮಾರ್ಚ್ 22)
1. ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆಗೆ ಶ್ರಮಿಸಿದ ಕೋವಿಡ್ ವಾರಿಯರ್‌ಗಳ ಕುರಿತು
2. ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಣ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿ ಕೋವಿಡ್ ವಾರಿಯರ್‌ಗಳ ಸೇವೆಯನ್ನು ಸರ್ಕಾರದಿಂದ ಪಡೆಯಲಾಗಿದೆಯೇ(ಜಿಲ್ಲಾವಾರು/ತಾಲೂಕುವಾರು ಸಂಖ್ಯೆದಾರಿತ ಮಾಹಿತಿ ನೀಡುವುದು)
3. ಕೋವಿಡ್ ವಾರಿಯರ್‌ಗಳಿಗೆ ಅವರ ಸೇವೆಗಾಗಿ ಗೌರವ ಭತ್ಯೆ ಅಥವಾ ಇತರೆ ಭತ್ಯೆಯನ್ನು ಸರ್ಕಾರದಿಂದ ನೀಡಲಾಗಿದೆಯೇ; ನೀಡಿದ್ದಲ್ಲಿ ಅದರ ಸಂಪೂರ್ಣ ವಿವರ ನೀಡುವುದು ಮತ್ತು ಕೇಂದ್ರಸರ್ಕಾರದಿಂದ ಸದರಿ ಕಾರ್ಯಕ್ಕೆ ಒಟ್ಟು ಎಷ್ಟು ಮೊತ್ತದ ಅನುದಾನವನ್ನು ನೀಡಲಾಗಿದೆ (ವಿವರನೀಡುವುದು)
4.ಕ್ಷೇತ್ರಮಟ್ಟದಲ್ಲಿ ಬಹಳಷ್ಟು ಕೋವಿಡ್ ವಾರಿಯರ್‌ಗಳಿಗೆ ಇನ್ನೂ ಸಹಾ ಗೌರವ ಭತ್ಯೆ ಅಥವಾ ಇತರೆ ಭತ್ಯೆಯು ಸಂದಾಯವಾಗದಿರುವುದಕ್ಕೆ ಕಾರಣಗಳೇನು (ವಿವರ ನೀಡುವುದು)
5. ಯಾವ ಕಾಲಮಿತಿಯಲ್ಲಿ ಸಂದಾಯ ಮಾಡಲಾಗುವುದು (ವಿವರ ನೀಡುವುದು)
6. ರಾಜ್ಯದಲ್ಲಿ ಇಲ್ಲಿಯವರೆಗೂ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ತೆಗೆದುಕೊಂಡ ಕ್ರಮಗಳಿಗಾಗಿ ಎಷ್ಟು ಮೊತ್ತದ ಹಣ ಖರ್ಚಾಗಿದೆ (ಸಂಪೂರ್ಣ ವಿವರ ನೀಡುವುದು)
ಆರ್ ಧರ್ಮಸೇನ (2021 ಮಾರ್ಚ್ 22)
1. ರಾಜ್ಯದಲ್ಲಿ ಕೊರೋನಾ ಕಾಯಿಲೆ ಇನ್ನೂ ಮುಂದುವರೆಯುತ್ತಿದ್ದು ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕೆ ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ
2. ಕೊರೋನಾ ನಿಯಂತ್ರಣಕ್ಕೆ ವ್ಯಾಕ್ಸಿನ್ ತೆಗೆದುಕೊಳ್ಳುವ ಬಗ್ಗೆ ಜನರಲ್ಲಿ ಅನುಮಾನಗಳಿದ್ದು ಇದರ ಬಗ್ಗೆ ತಿಳಿವಳೀಕೆ ನೀಡಲು ಮತ್ತು ಸುರಕ್ಷತೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸರ್ಕಾರ ಯಾವಕ್ರಮ ಕೈಗೊಂಡಿದೆ?
3. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳನ್ನು ಕೊರೊನಾಪೀಡಿತರಿಂದ ಪಡೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?
ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸಲು ಕನಿಷ್ಠ 15ದಿನದಿಂದ ಗರಿಷ್ಠ 1 ತಿಂಗಳು ಕಾಲಾವಕಾಶ ಇದೆ. ನಿಗದಿತ ಅವಧಿಯೊಳಗೆ ಲಿಖಿತ ಉತ್ತರ ನೀಡಿದ ನಂತರ ಭರವಸೆ ಸಮಿತಿಯು ಕೈಗೆತ್ತಿಕೊಳ್ಳುತ್ತದೆ. ಇಲಾಖೆಯು ನೀಡುವ ಉತ್ತರಗಳಲ್ಲಿ ನೀಡಲಾಗಿರುವ ಭರವಸೆಗಳು ಈಡೇರಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಾಲಾಕಾಲಕ್ಕೆ ಸಭೆಗಳನ್ನು ಸಮಿತಿಯು ನಡೆಸುತ್ತದೆ.