ಒಂದು ಸರ್ಕಾರದಲ್ಲಿ ಸಾಮಾನ್ಯವಾಗಿ ಅಧಿಕಾರಶಾಹಿ ಅಂಕಿಅಂಶಗಳನ್ನು ಆಧರಿಸಿ ಮೆದುಳಿನಿಂದ ಕೆಲಸ ಮಾಡುತ್ತದೆ. ಹೀಗಾಗಿ ಯಾವುದೇ ಜನಪರ ನಿರ್ಧಾರ ಕೈಗೊಳ್ಳಬೇಕಾದರೆ ಮುಖ್ಯಮಂತ್ರಿಗೆ ತಾಯಿಯ ಹೃದಯ ಇರಬೇಕು. ಎಲ್ಲರನ್ನೂ ಸಮಾನವಾಗಿ ಸಲಹುವ ಗುಣ ಇರಬೇಕು. ಕೇವಲ ನಿಯಮಾವಳಿ, ಕಾನೂನಿನ ನೆಪದಲ್ಲಿ ಯಾವುದೇ ಸಂದರ್ಭದಲ್ಲೂ ಅಸಹಾಯಕತೆ ಪ್ರದರ್ಶಿಸಬಾರದು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು ಸಾಮಾಜಿಕ ನೆಲೆಯಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಹುಡುಕಬೇಕು.
ಹಾಗಿಲ್ಲವಾದಾಗಲೇ ಈಗಿನ ಸಾರಿಗೆ ಬಿಕ್ಕಟ್ಟಿನಂಥ ಸಮಸ್ಯೆಗಳು ಹುಟ್ಟಿಕೊಳ್ಳುವುದು. ಸಾರಿಗೆ ಸಿಬ್ಬಂದಿ ಸುಮ್ಮನೆ, ನಿಷ್ಕಾರಣವಾಗಿ, ಯಾರದೋ ಪಿತೂರಿಗೆ ಒಳಗಾಗಿ ಹೀಗೆ ಮುಷ್ಕರ ನಡೆಸುವುದು ಸಾಧ್ಯವೇ? ಸಕಾರಣಗಳಿಲ್ಲದಿದ್ದರೆ ಇಷ್ಟೊಂದು ಸಂಘಟಿತವಾಗಿ ಹೋರಾಟ ನಡೆಸುವುದು ಈ ಕಾಲಘಟ್ಟದಲ್ಲಿ ಖಂಡಿತ ಸಾಧ್ಯವೇ ಇಲ್ಲ. ಮೋದಿ ಭಕ್ತರು, ಯಡಿಯೂರಪ್ಪ ಅಭಿಮಾನಿಗಳು, ಸಿದ್ದರಾಮಯ್ಯ ಹಿಂಬಾಲಕರು, ದೇವೇಗೌಡರನ್ನು ಪ್ರೀತಿಸುವವರು….ಹೀಗೆ ನಾನಾ ರೀತಿಯ ಸಂಬಂಧ, ಸಂವೇದನೆಗಳಿರುವ ಒಂದು ಬೃಹತ್ ಸಂಸ್ಥೆಯ ಸಿಬ್ಬಂದಿಯನ್ನು ಒಂದೆಡೆ ಕಟ್ಟಿಹಾಕಿ ಒಕ್ಕೊರಲಿನಲ್ಲಿ ಸರ್ಕಾರದ ವಿರುದ್ಧ ಹರಿಹಾಯುವಂತೆ ಮಾಡುವುದಕ್ಕೆ ಯಾವುದೇ ಸಂಚು ಸಹಾಯಕವಾಗದು.
ನಿಜ ಸಮಸ್ಯೆಗಳಿರುವುದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣವಾಗಿರುವುದು. ಮೊದಲೇ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ, ತಮ್ಮ ಮಕ್ಕಳನ್ನು ಇತರರಂತೆ ವೈದ್ಯರು, ಇಂಜಿನಿಯರ್ ಗಳು, ಅಧಿಕಾರಿಗಳಾಗಿ ನೋಡುವುದೂ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಗೋಳಾಡುವ ಸಿಬ್ಬಂದಿಯಾಗಲೀ ಅವರ ಕುಟುಂಬ ಸದಸ್ಯರಾಗಲೀ ರಿಹರ್ಸಲ್ ಮಾಡಿಕೊಂಡು ನಾಟಕವಾಡುವುದು ಸಾಧ್ಯವೇ? ಇದಕ್ಕೆಲ್ಲ ಕೋಡಿಹಳ್ಳಿ ಚಂದ್ರಶೇಖರ್ ಚಿತಾವಣೆ, ವಿಪಕ್ಷಗಳ ಕೈವಾಡ ಎಂದು ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸಮರ್ಥನೀಯವಲ್ಲ. ಸಿಬ್ಬಂದಿಯ ಎಂಟು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ, ಆದರೆ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿಯ ವೇತನ ಏರಿಕೆ ಸಾಧ್ಯವೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿ ಕೈ ತೊಳೆದುಕೊಂಡಿದ್ದಾರೆ.
ಮಹಿಳಾ ಸಿಬ್ಬಂದಿಗೆ ಮೊದಲ ಪಾಳಿ ಅಥವಾ ಹಗಲಿನ ಪಾಳಿಯಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು ಎನ್ನುವುದು ಕೂಡ ಸಾರಿಗೆ ಸಿಬ್ಬಂದಿಯ ಬೇಡಿಕೆಗಳಲ್ಲಿ ಒಂದು. ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಬಾರದು ಎಂಬುದು ಕೇವಲ ಬೇಡಿಕೆಯಲ್ಲ. ಅದು ಅವರ ಹಕ್ಕು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬಲ್ಲೆ ಎಂದು ಸಮ್ಮತಿಸುವ ಮಹಿಳಾ ಸಿಬ್ಬಂದಿಯನ್ನು ಮಾತ್ರ ರಾತ್ರಿ ಪಾಳಿಗೆ ಪರಿಗಣಿಸಬೇಕು. ಈ ಬಗ್ಗೆ ಸರ್ಕಾರ ಸಮ್ಮತಿ ಸೂಚಿಸಿದೆ ಎಂದ ಮಾತ್ರಕ್ಕೆ ಮಹತ್ಕಾರ್ಯ ಮಾಡಿದಂತೆ ಬೀಗುವಂತಿಲ್ಲ. ಇಂಥ ನಿರ್ಧಾರಗಳಿಗೆ ಸರ್ಕಾರವೇ ಏಕೆ ಬೇಕು? ಸಂಸ್ಥೆಯಲ್ಲಿ ಸಂಬಂಧಪಟ್ಟ ಕಡತ ನೋಡಿಕೊಳ್ಳುವ ಮನುಷ್ಯತ್ವ ಇರುವ ಗುಮಾಸ್ತ ಇದ್ದರೆ ಸಾಕು!
ಈ ಎಂಟು ಬೇಡಿಕೆಗಳೆಲ್ಲ ಇಂಥದ್ದೇ ಸಣ್ಣಪುಟ್ಟದ್ದೇ. ಟಿಕೆಟ್ ಇಲ್ಲದೇ ಪ್ರಯಾಣಿಸಿದ ಪ್ರಯಾಣಿಕನನ್ನು ಗುರುತಿಸಿಲ್ಲ, ಪ್ರಯಾಣಿಕನಿಂದ ಹಣ ಪಡೆದೂ ಟಿಕೆಟ್ ಕೊಟ್ಟಿಲ್ಲ …ಮೊದಲಾದ ಕಣ್ತಪ್ಪಿನ ಕಾರಣಗಳನ್ನಿಟ್ಟುಕೊಂಡು ಶಿಸ್ತು ಕ್ರಮ ಕೈಗೊಳ್ಳಬಾರದು ಎನ್ನುವುದೂ ಇನ್ನೊಂದು ಬೇಡಿಕೆ.ಕಣ್ಣು ತಪ್ಪಿಸಿ ಟಿಕೆಟ್ ರಹಿತ ಪ್ರಯಾಣ ಮಾಡುವ ಕಿಲಾಡಿಯೋ, ಟಿಕೆಟ್ ಕೊಳ್ಳಲೂ ಆಗದ ಅಸಹಾಯಕನೋ ಸಿಕ್ಕಿ ಬಿದ್ದಾಗಲೂ ಶಿಕ್ಷೆ ಅನುಭವಿಸುವುದು ನಿರ್ವಾಹಕರೇ. ಸಿಕ್ಕಿ ಬಿದ್ದವನಿಗೆ ನಾಮಕಾವಾಸ್ತೆ ದಂಡ ವಿಧಿಸಿದರೂ ವೃತ್ತಿ ಜೀವನದಲ್ಲಿ ಪೆಟ್ಟು ತಿನ್ನುವುದು ನಿರ್ವಾಹಕನೇ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ಯಾರದ್ದೂ ತಕರಾರಿರಲಾರದು. ಆದರೆ ಯಾವ್ಯಾವುದೋ ಕಾರಣಗಳಿಂದ ಸಿಬ್ಬಂದಿಗೆ ಕಿರುಕುಳ ಕೊಡುವ ಸಲುವಾಗಿಯೇ ಇಂಥ ಪ್ರಕರಣಗಳಲ್ಲಿ ಸಿಲುಕಿಸುವುದು ಸರಿಯಲ್ಲ ಎನ್ನುವುದು ಬಹುತೇಕ ಸಿಬ್ಬಂದಿಯ ಅಭಿಮತವಾಗಿದೆ.
ಎಂಟು ಬೇಡಿಕೆ ಈಡೇರಿಸಿದ್ದೇವೆ ಎಂದು ಪದೇ ಪದೇ ಮುಖ್ಯಮಂತ್ರಿ, ಸಾರಿಗೆ ಸಚಿವರು ಹೇಳಿದಾಗೆಲ್ಲ ಸಾರ್ವಜನಿಕರಿಗೆ “ಇಷ್ಟೆಲ್ಲ ಮಾಡಿರುವಾಗ ಪ್ರತಿಭಟನೆ ಏಕೆ ಬೇಕಿತ್ತು?” ಅನ್ನಿಸಿಬಿಡಬಹುದು. ಈ ಎಂಟೂ ನಿರ್ಧಾರಗಳು ಸಿಬ್ಬಂದಿಯ ಬದುಕು ಕಟ್ಟಿಕೊಡುವ ಆಥವಾ ಭವಿಷ್ಯ ರೂಪಿಸುವ ಮಹಾನ್ ನಿರ್ಧಾರಗಳೇನಲ್ಲ ಎಂದು ಮೇಲೆಯೇ ಹೇಳಿದ್ದೇನೆ. ಬಹುಸಂಖ್ಯಾತರು ಬಹುವಾಗಿ ಬಳಸುವ ಸಾರಿಗೆ ವ್ಯವಸ್ಥೆ ಕೈಕೊಟ್ಟಾಗ ಸಿಬ್ಬಂದಿ ಮೇಲೆ ಸಿಟ್ಟು ಬರುವುದು ಸಹಜ. ಆದರೆ ಈ ಸಿಟ್ಟು ಸಮಸ್ಯೆ ಬಗೆಹರಿಸಲು ವಿಫಲವಾದ ಸರ್ಕಾರದ ಮೇಲಿರಬೇಕು.
ಯಾಕೆಂದರೆ ಈ ಸಾರಿಗೆ ಸಿಬ್ಬಂದಿಯೂ ನಮ್ಮ ಬದುಕಿನ ಬಹು ಮುಖ್ಯ ಭಾಗವಷ್ಟೇ ಅಲ್ಲದೇ ಬ್ಯಾಂಕ್, ವಿಮಾ ಸಿಬ್ಬಂದಿಯಂತೆ ವರ್ಷವರ್ಷವೂ ಬೇಕಾಬಿಟ್ಟಿ ಬೇಡಿಕೆಗಳನ್ನೇನೂ ಇರಿಸಿಲ್ಲ. ಅವರೇನೂ ಬೇರೆ ಲೋಕದಿಂದ ಬಂದವರೂ ಅಲ್ಲ, ಬೇರೆ ರಾಜ್ಯದವರೂ ಅಲ್ಲ. ಅವರೂ ನಮ್ಮವರೇ. ನೆಮ್ಮದಿಯ ಬದುಕಿಗಾಗಿ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಏರಿಕೆ ಮಾಡಿ ಎಂದು ಗೋಗರೆದು ಗೋಗರೆದೂ ಸಾಕಾಗಿ ಪ್ರತಿಭಟನೆಯ ಮಾರ್ಗ ಹಿಡಿದಿದ್ದಾರೆ. ಯಾವುದೇ ನಾಯಕನಿಲ್ಲದಿದ್ದರೂ ಸಿಬ್ಬಂದಿ ಅನಿವಾರ್ಯವಾಗಿ ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ. ಈ ಹೋರಾಟಕ್ಕೊಂದು ಬಲ ಬರಲಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಸ್ತ್ರವಾಗಿ ಇರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಏನು ಸಂಬಂಧ ಎಂದು ಪ್ರಶ್ನಿಸುವುದು, ಕೋಡಿಹಳ್ಳಿ ಮಾತು ಕೇಳಿಕೊಂಡು ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಖಂಡಿತ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಕೋಡಿಹಳ್ಳಿ ಸ್ಪ್ಯಾನರ್ ಹಿಡಿದಿದ್ದಾರಾ, ಟಯರ್ ಬದಲಾವಣೆ ಮಾಡುವುದು ಗೊತ್ತಾ ಎಂದು ಹಗುರವಾಗಿ ಪ್ರಶ್ನಿಸುವುದು ಸುಲಭ. ಯಾವುದೇ ಹೋರಾಟವನ್ನು ಪ್ರಭಾವಶಾಲಿಯಾಗಿ, ಪರಿಣಾಮಕಾರಿಯಾಗಿ ಮುನ್ನಡೆಸಲು ಒಳ್ಳೆ ಮನಸ್ಸಿದ್ದರೆ ಸಾಕು. ಅದು ಕೋಡಿಹಳ್ಳಿ ಅಲ್ಲದೇ ಇನ್ಯಾರೇ ಆಗಿರಬಹುದು. ಸದ್ಯ ಕೋಡಿಹಳ್ಳಿ ನಾಯಕತ್ವ ವಹಿಸಿಕೊಂಡಿದ್ದಾರಷ್ಟೇ.
ಸಿಬ್ಬಂದಿಯ ಸಮಸ್ಯೆ ಆಲಿಸಿ ಪರಿಹಾರ ಹುಡುಕುವುದು ಮುಖ್ಯವೇ ಹೊರತು ಯಾರು ನಾಯಕತ್ವ ವಹಿಸಿಕೊಂಡಿದ್ದಾರೆ ಅನ್ನುವುದಲ್ಲ.
ಕಳೆದ ಡಿಸೆಂಬರ್ ನಲ್ಲಿ ಮೊದಲ ಸುತ್ತಿನ ಪ್ರತಿಭಟನೆ ನಡೆದಾಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು. ಆದರೆ ಆ ಸಂದರ್ಭದಲ್ಲೂ ಮುಖ್ಯಮಂತ್ರಿಯಾಗಲೀ, ಸಾರಿಗೆ ಸಚಿವರಾಗಲೀ, ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿಯಾಗಲೀ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ನೋವು ಆಲಿಸಲು ಮುಂದಾಗಲಿಲ್ಲ. ತಾವು ಕುಳಿತಲ್ಲಿಗೇ ಮೂರ್ನಾಲ್ಕು ಪ್ರತಿನಿಧಿಗಳನ್ನು ಕರೆಸಿಕೊಂಡು ಬೆಣ್ಣೆ ಮಾತುಗಳನ್ನಾಡಿ ಪ್ರತಿಭಟನೆ ಕೊನೆಗೊಳ್ಖವಂತೆ ಮಾಡಿದ್ದರು. ಅದಾಗಿ ಮೂರು ತಿಂಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದ್ದರಿಂದ ಮತ್ತೆ ಮುಷ್ಕರ ಆರಂಭವಾಗಿದೆ.
ಸಮಸ್ಯೆ ಪರಿಹರಿಸುವ ಬದಲು ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಿರುವ ಸರ್ಕಾರ ಸಾರಿಗೆ ಸಿಬ್ಬಂದಿ ಪಾಲಿಗೆ ಭಯೋತ್ಪಾದಕನಾಗಿಬಿಟ್ಟಿದೆ. ಮುಷ್ಕರನಿರತ ಸಿಬ್ಬಂದಿಯನ್ನು ಸರ್ಕಾರಿ ವಸತಿ ಸಮುಚ್ಛಯ ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೆಲವು ನೌಕರರನ್ನು ಅಮಾನತಿನಲ್ಲಿಡಲಾಗಿದೆ. ಮಾರ್ಚ್ ತಿಂಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಸಿಬ್ಬಂದಿಯ ವೇತನ ತಡೆ ಹಿಡಿಯಲಾಗಿದೆ. ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಅಮಾನತುಗೊಂಡು ಮನೆಯಲ್ಲಿರುವ ಸಿಬ್ಬಂದಿಯನ್ನು ಮತ್ತೆ ಕರ್ತವ್ಯ ನಿರ್ವಹಣೆಗೆ ಕರೆತರಲಾಗುತ್ತಿದೆ.
ಹೀಗೆ ಈ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ನೀಡುವ ಸರ್ಕಾರ ತಪ್ಪುಗಳನ್ನೂ ಪರೋಕ್ಷವಾಗಿ ಪೋಷಿಸುತ್ತಿದೆ. ಈ ಮೂಲಕ ಮುಷ್ಕರನಿರತರ ವಿರುದ್ಧ ಅಮಾನತ್ತಿನಲ್ಲಿದ್ದ ಸಿಬ್ಬಂದಿಯನ್ನು ಎತ್ತಿಕಟ್ಟುತ್ತಿದೆ. ಎಲ್ಲ ನಿಯಮಗಳನ್ನು ಗಾಳಿಗೆತೂರಿ ಮತ್ತೆ ಕರೆತರುತ್ತಿರುವ ಸರ್ಕಾರವೇ ಪ್ರತಿಭಟನೆಯನ್ನು ಅಮಾನವೀಯವಾಗಿಯಾದರೂ ಬಗ್ಗುಬಡಿಯಲೇ ಬೇಕೆಂದು ಎಲ್ಲ ನಿಯಮಗಳನ್ನು ಹೊಸಕಿ ಹಾಕಿ ಸಿಬ್ಬಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ನೀಡುತ್ತಿದೆ. ಸಾರಿಗೆ ಸಿಬ್ಬಂದಿಯ ಕತ್ತಿನಪಟ್ಟಿ ಹಿಡಿದು ಒದೆಯಿರಿ ಎನ್ನುವ ಶಾಸಕ, ಹೋರಾಟಗಾರರನ್ನು ಹೇಗೆ ಹೆಡೆಮುರಿ ಕಟ್ಟಬೇಕೆನ್ನುವುದು ಗೊತ್ತಿದೆ ಎನ್ನುವ ಸಚಿವನಿರುವ ಸರ್ಕಾರ ಇನ್ನೇನು ತಾನೇ ಮಾಡಬಹುದು?
ತಮ್ಮ ವೇತನ , ವಿವಿಧ ಭತ್ಯೆ ಏರಿಕೆಯನ್ನು ಒಂದಿಷ್ಟೂ ಚರ್ಚೆಗೂ ಅವಕಾಶವಿಲ್ಲದಂತೆ ನಿರ್ಣಯ ಕೈಗೊಳ್ಳುವ ಜನಪ್ರತಿನಿಧಿಗಳು ಸರ್ಕಾರದ ಭಾಗವಾಗಿರುವ ಸಾರಿಗೆ ಸಿಬ್ಬಂದಿ ಶೋಷಣೆ ವಿಚಾರದಲ್ಲಿ ಜಾಣ ಮೌನಕ್ಕೆ ಶರಣಾಗಿದ್ದಾರೆ. ವಿವಿಧ ಜಾತಿ ಮಠಗಳಿಗೆ ಬೇಡಿಕೆ ಇಲ್ಲದಿದ್ದರೂ ಕೋಟಿ ಕೋಟಿ ಬಿಡುಗಡೆ ಮಾಡುವ ಸರ್ಕಾರ ತನ್ನದೇ ಸಿಬ್ಬಂದಿಯ ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತದೆ ಎಂದು ಸಬೂಬು ಹೇಳುತ್ತಿದೆ. ಸಾರಿಗೆ ಸಿಬ್ಬಂದು ವಿಷಯದಲ್ಲಿ ಬೊಕ್ಕಸಕ್ಕೆ ಹೊರೆ ಎಂಬ ಅಧಿಕಾರಿಶಾಹಿಯ ಮಾತು ಕೇಳುವ ಮುಖ್ಯಮಂತ್ರಿ ಮಠಗಳು, ಜಾತಿ ಅಭಿವೃದ್ಧಿ ಮಂಡಳಿಗಳ ವಿಚಾರದಲ್ಲಿ ತಾವೇ ನಿರ್ಧಾರ ಕೈಗೊಳ್ಳುತ್ತಾರೆ.
ಅಂದ ಹಾಗೇ ಒಂದು ಖಾಸಗಿ ಬಸ್ ಹೊಂದಿರುವ ಮಾಲೀಕ ಕೆಲವೇ ವರ್ಷಗಳಲ್ಲಿ ಇನ್ನಷ್ಟು ಬಸ್ ಖರೀದಿಸಿ ತನ್ನ ಲಾಭದ ಸಂಸ್ಥೆಯಾಗಿ ಪರಿವರ್ತಿಸುವುದು ಸಾಧ್ಯವಾದರೆ ಎಲ್ಲ ಸೌಲಭ್ಯಗಳಿರುವ ಸರ್ಕಾರಿ ಬಸ್ ಗಳಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಾಗಲೀ, ಬಿಎಂಟಿಸಿಯಾಗಲೀ ನಷ್ಟದಲ್ಲಿರುವುದು ಹೇಗೆ? ಈವರೆಗೆ ಸರ್ಕಾರ ನಡೆಸಿದ ಎಲ್ಲರ ವೈಫಲ್ಯವೂ ಇದಕ್ಕೆ ಕಾರಣ. ಆದರೆ ಇದಕ್ಕೆಲ್ಲ ಸಿಬ್ಬಂದಿಯನ್ನೇ ಹೊಣೆಯಾಗಿಸಿ ಖಾಸಗೀಕರಣಕ್ಕೆ ಮಣೆ ಹಾಕುವ ಪ್ರಯತ್ನವೂ ಇಲ್ಲಿರಬಹುದು.
ಸರ್ಕಾರದ ಉದ್ದೇಶ ಮತ್ತು ಗುರಿ ಇದೇ ಎನ್ನುವಂತೆ ಕಾಣುತ್ತಿದೆ. ರಾಜ್ಯದ ಸಂಸದರೊಬ್ಬರು ಈ ಬಗ್ಗೆ ಸೂಚ್ಯವಾಗಿ ಎಚ್ಚರಿಸಿದ್ದಾರೆ. ಒಂದು ವೇಳೆ ಸಾರಿಗೆ ಸಂಸ್ಥೆ ನಡೆಸುವುದು ತನ್ನಿಂದ ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದರೆ ಅದನ್ನು ಸಿಬ್ಬಂದಿ ಉಸ್ತುವಾರಿಗೇ ಬಿಟ್ಟು ಕೊಡುವುದು ಒಳಿತು. ಇದರ ಆರ್ಥಿಕ ಲೆಕ್ಕಾಚಾರಗಳನ್ನು ಪರಿಗಣಿಸದೇ ಹೀಗೊಂದು ಸಾಧ್ಯತೆ ಬಗ್ಗೆ ಯೋಚಿಸುತ್ತಿದ್ದೇನೆ. ನಿಮಗೆ ಏನನ್ನಿಸುತ್ತದೆ? ಗೆಳೆಯನೂ ಆಗಿರುವ ಬಿಎಂಟಿಸಿ ನಿರ್ವಾಹಕರೊಬ್ಬರನ್ನು ಸುಮ್ಮನೆ ಕೇಳಿದೆ. ” ಈ ಪ್ರತಿಭಟನೆ ಬೇಕಿತ್ತಾ?” “ಊಟಕ್ಕೆ ಕರೆದು ಖಾಲಿತಟ್ಟೆಯನ್ನೋ, ಒಂದರೆರಡು ಅಗುಳು ಇರುವ ತಟ್ಟೆಯನ್ನೋ ತೋರಿಸಿದರೆ ನಿಮಗೇನನ್ನಿಸುತ್ತದೆ?” ಎಂದು ಮರು ಪ್ರಶ್ನೆ ಹಾಕಿದರು. ನಿರ್ದಯೀ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ನನ್ನಲ್ಲಿ ಉತ್ತರವಿರುವುದಾದರೂ ಹೇಗೆ ಸಾಧ್ಯವಿತ್ತು?