ಬೆಂಗಳೂರು; ಕೃಷಿಗೆ ಸಂಬಂಧಿಸಿದಂತೆ 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಕೆಲ ಯೋಜನೆಗಳನ್ನು ಸಹಕಾರ ಇಲಾಖೆ ವ್ಯಾಪ್ತಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಂಪನ್ಮೂಲದಿಂದಲೇ ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.
ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದಾಗಿ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದಲ್ಲಿ ದೊಡ್ಡಮಟ್ಟದಲ್ಲಿ ಖೋತಾ ಆಗಲಿದೆ ಎಂದು ಅಧಿಕಾರಿಗಳು ವಾಸ್ತವತೆಯನ್ನು ತೆರೆದಿಟ್ಟಿದ್ದರೂ ಆರ್ಥಿಕ ಸಂಕಷ್ಟದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಬಿಜೆಪಿ ಸರ್ಕಾರವು ಸಂಪನ್ಮೂಲವನ್ನು ಹೇಗೆ ಕ್ರೋಢೀಕರಣ ಮಾಡಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಬರೆದಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಬೈಯಪ್ಪನಹಳ್ಳಿಯಲ್ಲಿ 8 ಎಕರೆ ವಿಸ್ತೀರ್ಣದ ಜಮೀನಿನಲ್ಲಿ 50 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ಮತ್ತು ಸಿಂಗೇನ ಅಗ್ರಹಾರ ಹಣ್ಣು ಮಾರುಕಟ್ಟೆಗೆ ಹೊಂದಿಕೊಂಡಿರುವ ಗುಳಿಮಂಗಲ ಗ್ರಾಮದ 42 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕವನ್ನು 4 ಕೋಟಿ ರು.ವೆಚ್ಚದಲ್ಲಿ ಸ್ಥಾಪಿಸುವ ಯೋಜನೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಂಪನ್ಮೂಲದಿಂದ ಜಾರಿಗೊಳಿಸಲು ಮುಂದಾಗಿರುವುದು ಅನಧಿಕೃತ ಟಿಪ್ಪಣಿಯಿಂದ ತಿಳಿದು ಬಂದಿದೆ.
ಎಪಿಎಂಸಿಗಳ ಆರ್ಥಿಕ ಪರಿಸ್ಥಿತಿ ಏನಾಗಿದೆ?
ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಕಾಯಿದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಬಿಜೆಪಿ ಸರ್ಕಾರ ನಿರ್ಧರಿಸುವ ಮುನ್ನವೇ ಸಂಗ್ರಹವಾಗಿರುವ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕವೂ ಖೋತಾ ಆಗಲಿದೆ ಎಂದು ಅಧಿಕಾರಿಗಳು ಲೆಕ್ಕಾಚಾರ ಮಾಡಿದ್ದರು. ಅವರ ಪ್ರಕಾರ ‘ಕಾಯ್ದೆಯ ಕಲಂ 8 ರಡಿ ರಾಜ್ಯದ ಮಾರುಕಟ್ಟೆ ಸಮಿತಿಗಳು ಎಪಿಎಂಸಿ ಪ್ರಾಂಗಣಕ್ಕೆ ತಮ್ಮ ನಿಯಂತ್ರಣವನ್ನು ಮಿತಿಗೊಳಿಸಿದಲ್ಲಿ ಈಗಾಗಲೇ ಸಂಗ್ರಹಿಸಿರುವ 618 ಕೋಟಿ ರು. ಖೋತಾ ಆಗಬಹುದು,’ ಎಂದು ಅಧಿಕಾರಿಗಳು ಅಂದಾಜಿಸಿದ್ದರು.
ಈ ಕುರಿತು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2020ರ ಜೂನ್ 25ರಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದರು. ‘2019-20ನೇ ಸಾಲಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ 618 ಕೋಟಿ ರು. ಮೊತ್ತದ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗಿದ್ದು, ಕಾಯ್ದೆಯ ಕಲಂ 8 ರಡಿ ರಾಜ್ಯದ ಮಾರುಕಟ್ಟೆ ಸಮಿತಿಗಳು ಎಪಿಎಂಪಿ ಪ್ರಾಂಗಣಕ್ಕೆ ತಮ್ಮ ನಿಯಂತ್ರಣವನ್ನು ಮಿತಿಗೊಳಿಸಿದಲ್ಲಿ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದ ಸಂಗ್ರಹಣೆಯಲ್ಲಿ ಖೋತಾ ಉಂಟಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ,’ ಎಂದು ಪತ್ರದಲ್ಲಿ ವಿವರಿಸಿದ್ದರು.
ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ ವಿಧೇಯಕವು ಎಪಿಎಂಸಿಗಳ ಸಂಪನ್ಮೂಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾಂಭಿಸಿದೆ. ಇದರ ನಡುವೆಯೇ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಸಂಪನ್ಮೂಲ ಖೋತಾ ಆಗಲಿದೆ ಎಂದು ಗೊತ್ತಿದ್ದರೂ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಎಪಿಎಂಸಿ ಸಂಪನ್ಮೂಲದಿಂದಲೇ ಜಾರಿಗೊಳಿಸಬೇಕು ಎಂದು ಆರ್ಥಿಕ ಇಲಾಖೆ ವ್ಯಕ್ತಪಡಿಸಿರುವ ಅಭಿಪ್ರಾಯವು ಆಡಳಿತ ಇಲಾಖೆಗೆ ತಲೆನೋವಾಗಿ ಪರಿಣಿಮಿಸಿದೆ.