ಜಾರಕಿಹೊಳಿ ಸೋದರರಿಗೆ ‘ಸಾಹುಕಾರ’ ಪದ ಬಳಕೆ; ಸುದ್ದಿ ವಾಹಿನಿಗಳಿಗೆ ನೋಟೀಸ್‌

ಬೆಂಗಳೂರು; ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ಇದ್ದಾರೆ ಎನ್ನಲಾದ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಾಹುಕಾರ’, ಗೋಕಾಕ ಸಾಹುಕಾರ’, ‘ಬೆಳಗಾವಿ ಸಾಹುಕಾರ’ ಎಂಬ ಶೀರ್ಷಿಕೆಗಳಲ್ಲಿ ಕಾರ್ಯಕ್ರಮ, ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸುದ್ದಿವಾಹಿನಿಗಳಿಗೆ ನೋಟೀಸ್‌ ಜಾರಿಯಾಗಿದೆ.

ಬೆಳಗಾವಿಯ ಸಂತೋಷ ಸಿದ್ದಯ್ಯಾ ಪೂಜಾರಿ, ಕೆದಾರಿ ರಾಮಪ್ಪ ಪವಾರ, ಮಹ್ಮದ್‌ ಫಾರುಕ ಅಬ್ದುಲ್‌ ರೆಹಮಾನ್‌, ಪೀರಜಾದೆ, ಬಾಬು ಹಸನಸಾಬ ಮುಲ್ಲಾ ಎಂಬುವರ ಪರವಾಗಿ ವಕೀಲ ಸಿ ಬಿ ಗಿಡ್ಡವರ ಎಂಬುವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ನ್ಯೂಸ್‌ 18, ಟಿ ವಿ 9, ದಿಗ್ವಿಜಯ, ಪ್ರಜಾ, ಪವರ್‌, ಟಿವಿ 5, ನ್ಯೂಸ್‌ ಫಸ್ಟ್‌ ಸೇರಿದಂತೆ ಹಲವು ಸುದ್ದಿವಾಹಿನಿಗಳಿಗೆ ನೋಟೀಸ್‌ ಜಾರಿಗೊಳಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ ಲಭ್ಯವಾಗಿದೆ.

ನೋಟೀಸ್‌ನಲ್ಲೇನಿದೆ?

‘ರಮೇಶ್‌ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ಕುರಿತು ಸುದ್ದಿಗಳನ್ನು ಬಿತ್ತರಿಸುವ ಸಂದರ್ಭದಲ್ಲಿ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎಂದು ಸಂಬೋಧಿಸುತ್ತಿರುವುದು ನಮ್ಮ ಮನಸ್ಸಿಗೆ ತುಂಬಾ ನೋವು ಹಾಗೂ ಖೇದ ಉಂಟು ಮಾಡಿದೆ. ಈ ಪದಗಳನ್ನು ವೈಭವೀಕರಿಸುತ್ತಿರುವುದು ನಮಗೆ ಮಾನಸಿಕ ಹಿಂಸೆ ಹಾಗೂ ತೇಜೋವಧೆ ಆಗುತ್ತಿದೆ,’ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

‘ಸಾಹುಕಾರ’ ಎಂಬ ಪದದ ಅರ್ಥ ಸಾಲದ ರೂಪದಲ್ಲಿ ಹಣ ನೀಡುವವರು ಅಥವಾ ಸಾಲ ಕೊಡುವವರು ಎಂದು ಅರ್ಥವಾಗುತ್ತದೆ.ಆದ್ದರಿಂದ ಗೋಕಾಕ್‌ನಲ್ಲಿ ಅಥವಾ ಬೆಳಗಾವಿಯಲ್ಲಿ ಅವರು ಯಾರಿಗೂ ಯಾವತ್ತೂ ಸಾಲ ವಗೈರೆ ಕೊಟ್ಟಿಲ್ಲ. ಅವರ ಹತ್ತಿರ ನಾವು ಯಾವುದೇ ಸಾಲ ವಗೈರೆ ಪಡೆದುಕೊಂಡಿಲ್ಲ. ಆದ್ದರಿಂದ ಅವರ ಹೆಸರಿನ ಮುಂದೆ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎಂಬ ಪದಗಳನ್ನು ಬಳಸುವುದು ಅನಾವಶ್ಯಕ,’ ಎಂದೂ ನೋಟೀಸ್‌ನಲ್ಲಿ ವಿವರಿಸಲಾಗಿದೆ.

ನೋಟೀಸ್‌ ತಲುಪಿದ ಕೂಡಲೇ ತಮ್ಮ ಮಾಧ್ಯಮದಲ್ಲಿ ಜಾರಕಿಹೊಳಿ ಸೋದರರನ್ನು ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎಂಬ ಪದಗಳನ್ನು ಬಳಸಿದ್ದಲ್ಲಿ ತಮ್ಮ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ನನ್ನ ಕಕ್ಷಿದಾರರಿಗೆ ಸಲಹೆ ನೀಡಬೇಕಾಗುತ್ತದೆ ಎಂದು ವಕೀಲ ಸಿ ಬಿ ಗಿಡ್ಡವರ ಅವರು ಮಾಧ್ಯಮಗಳ ಮುಖ್ಯಸ್ಥರಿಗೆ ನೋಟೀಸ್‌ನಲ್ಲಿ ತಿಳಿಸಿದ್ದಾರೆ.

ಜಮೀನ್ದಾರಿ ಪದ್ಧತಿ, ಮಹಲ್ವಾರಿ ಪದ್ಧತಿ, ರೈತವಾರ ಪದ್ಧತಿ, ಸಾಹುಕಾರಿ ಪದ್ಧತಿ, ಜೀತ ಪದ್ಧತಿ ಇವೆಲ್ಲವೂ ರದ್ದಾಗಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು ಲಭಿಸಿದೆ. ಹೀಗಾಗಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ಎಲ್ಲರನ್ನೂ ಅವರವರ ಹೆಸರಿನಿಂದ ಸಂಬೋಧಿಸುವುದು ಮಾಧ್ಯಮಗಳ ಸಂವಿಧಾನಿಕ ಕರ್ತವ್ಯ. ಆದರೆ ನಿಮ್ಮ ವಾಹಿನಿಯಲ್ಲಿ ಹಲವು ಬಾರಿ ಜಾರಕಿಹೊಳಿ ಸೋದರರನ್ನು ಸಂಬೋಧಿಸುವ ಸಂದರ್ಭದಲ್ಲಿ ಅನಾವಶ್ಯಕವಾಗಿ ಸಾಹುಕಾರ ಎಂದು ವೈಭವೀಕರಿಸಲಾಗುತ್ತಿದೆ. ಇದು ಮಾಧ್ಯಮ ಸಮೂಹಕ್ಕೆ ಶೋಭೆ ತರುವಂತದ್ದಲ್ಲ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಯಾರದ್ದೋ ಪ್ರತಿಷ್ಠೆ ಹೆಚ್ಚಿಸಲು ಇನ್ಯಾರಿಗೋ ಮನ ನೋಯಿಸುವ ರೀತಿಯಲ್ಲಿ ಪದಬಳಕೆ ಮಾಡುವುದು ಹಾಗೂ ವರದಿಗಳನ್ನು, ವಾರ್ತೆಗಳನ್ನು ಬಿತ್ತರಿಸಬಾರದು. ಹಾಗೆಯೇ ಯಾವುದೇ ಪದ ಬಳಕೆ ಮಾಡುವ ಮುನ್ನ ಅವರ ಪೂರ್ವಪರ ಇತಿಹಾಸ ತಿಳಿದುಕೊಂಡು ಸಾಕ್ಷ್ಯಾಧಾರ ಪಡೆದುಕೊಂಡು ಪದ ಪ್ರಯೋಗ ಮಾಡಬೇಕೇ ಹೊರತು ಅದು ಇನ್ನೊಬ್ಬರ ಮನನೋಯಿಸುವ ಕೃತ್ಯ ಆಗಬಾರದು. ಈ ರೀತಿಯಾದಂತಹ ಪದ ಬಳಕೆ ನಮ್ಮ ಕಕ್ಷಿದಾರರ ಸಮೂಹ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ನೋಟೀಸ್‌ ಮೂಲಕ ಸುದ್ದಿವಾಹಿನಿಗಳ ಮುಖ್ಯಸ್ಥರನ್ನು ಎಚ್ಚರಿಸಿದೆ.

SUPPORT THE FILE

Latest News

Related Posts