ಟೆಂಡರ್‌ ಜಟಾಪಟಿ; ಗೃಹ ಕಾರ್ಯದರ್ಶಿಗೆ ಅಧಿಕೃತ ಆಹ್ವಾನವಿದ್ದರೂ ತಕರಾರು ಎತ್ತಿದ್ದೇಕೆ?

ಬೆಂಗಳೂರು; ಸೇಫ್‌ ಸಿಟಿ ಯೋಜನೆಯ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಮಾಲೋಚಕ ಸಂಸ್ಥೆಯೊಂದಿಗೆ ರಾಜ್ಯ ಗೃಹ ಕಾರ್ಯದರ್ಶಿ ರೂಪ ಮೌದ್ಗಿಲ್‌ ಅವರು ಕಾನೂನುಬದ್ಧವಾಗಿಯೇ ಸಂಪರ್ಕಿಸಿದ್ದರು. ಇದೇ ಯೋಜನೆಗೆ ಸಂಬಂಧಿಸಿದಂತೆ ನವೆಂಬರ್‌ ತಿಂಗಳಲ್ಲಿ ನಡೆದಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ರೂಪ ಮೌದ್ಗಿಲ್‌ ಅವರಿಗೆ ಅಧಿಕೃತ ಆಹ್ವಾನವೂ ಇತ್ತು.

ಟೆಂಡರ್ ಪ್ರಕ್ರಿಯೆ ಸಂಬಂಧಿಸಿದಂತೆ ಜಟಾಪಟಿ ಬೀದಿಗೆ ಬಂದು ನಿಂತಿರುವ ಬೆನ್ನಲ್ಲೇ ಹೊರಬಿದ್ದಿರುವ ಅಧಿಕೃತ ಆಹ್ವಾನ ಪತ್ರ ಮುನ್ನೆಲೆಗೆ ಬಂದಿದೆ. ಗೃಹ ಕಾರ್ಯದರ್ಶಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಟೆಂಡರ್‌ ಪ್ರಕ್ರಿಯೆ ನಡವಳಿಗಳಲ್ಲಿ ಭಾಗವಹಿಸಿದ್ದರು ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್‌ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಸಭಾ ಸೂಚನಾ ಪತ್ರವೇ ನಿರೂಪಿಸಿದಂತಾಗಿದೆ.

ಸೇಫ್‌ ಸಿಟಿ ಯೋಜನೆ ಅನುಷ್ಠಾನಗೊಳಿಸುವ ಕುರಿತಂತೆ ಕೆ ಸ್ವ್ಯಾನ್‌ 2020ರ ನವೆಂಬರ್‌ 5ರಂದು ಆಯೋಜಿಸಿದ್ದ ಸಭೆಗೆ ರಾಜ್ಯ ಗೃಹ ಕಾರ್ಯದರ್ಶಿ ರೂಪ ಮೌದ್ಗಿಲ್‌ ಅವರು ಭಾಗವಹಿಸುವಂತೆ ಸಭಾ ಸೂಚನಾ ಪತ್ರ ಕಳಿಸಲಾಗಿತ್ತು. ಇದೇ ಸಭೆಯಲ್ಲಿ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಬೆಂಗಳೂರು ನಗರದ ಪೊಲೀಸ್‌ ಆಯುಕ್ತರೂ ಭಾಗವಹಿಸಿದ್ದರು.

ಸಭೆಯಲ್ಲಿ ಡಿಜಿಐಜಿಪಿ ಮತ್ತು ಆಯುಕ್ತರು ಭಾಗವಹಿಸಿದ್ದಾರಾದರೂ ಹೇಮಂತ್‌ ನಿಂಬಾಳ್ಕರ್‌ ಅವರು ತಕರಾರು ಎತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಡಿಜಿಐಜಿಪಿ ಮತ್ತು ಆಯುಕ್ತರು ಸಹ ಈ ಕುರಿತು ಮೌನ ವಹಿಸಿರುವುದು ಸಹ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ನಿರ್ಭಯ ಅನುದಾನದಡಿಯ 612 ಕೋಟಿ ರು.ವೆಚ್ಚದಲ್ಲಿ ಸೇಫ್‌ ಸಿಟಿ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪಗಳು ನಡೆದಿವೆ ಎಂಬ ದೂರುಗಳು ಕಳೆದ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲೇ ಸರ್ಕಾರಕ್ಕೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಆದರೆ ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಹಿಂದಿನ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಅವರು ಯಾವುದೇ ಕ್ರಮ ವಹಿಸಿರಲಿಲ್ಲ ಎಂಬುದನ್ನು ಸ್ಮರಿಸಬಹುದು.

ಸಚಿವ ಸಂಪುಟವನ್ನು ಬದಿಗಿರಿಸಿ ನಿರ್ಭಯ ಅನುದಾನದಡಿಯಲ್ಲಿ 612 ಕೋಟಿ ರು.ಮೊತ್ತದಲ್ಲಿ ಸಿಸಿಟಿವಿ ಅಳವಡಿಸಲು ಮರು ಟೆಂಡರ್‌ ಕರೆಯಲು ಮುಂದಾಗಿದ್ದನ್ನು ಕಳೆದ ನವೆಂಬರ್‌ನಲ್ಲಿ ‘ದಿ ಫೈಲ್‌’ ಹೊರಗೆಡವಿತ್ತು. ಇದಾದ 1 ತಿಂಗಳ ನಂತರ ಪ್ರಕರಣ ಮುನ್ನೆಲೆಗೆ ಬಂದಿದೆ.

ಪ್ರಕರಣ ಹಿನ್ನೆಲೆ

ಬೆಂಗಳೂರು ನಗರದಲ್ಲಿ ನಿರ್ಭಯ ಯೋಜನೆಯಡಿ ಸೇಫ್‌ ಸಿಟಿ ಪ್ರಾಜೆಕ್ಟ್‌ನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು 667.00 ಕೋಟಿ ರು.ಗೆ ಮಂಜೂರಾತಿ ನೀಡಿತ್ತು. ಇದರಲ್ಲಿ ಕೇಂದ್ರದ ಪಾಲಿನ 167.26 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 111.56 ಕೋಟಿ ಒಟ್ಟು 278.76 ಕೋಟಿ ರು. ಅನುದಾಕ್ಕೆ ಮಂಜೂರಾತಿ ದೊರೆತಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಸಭೆ ನಡೆದಿತ್ತು. ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲು 2019ರ ಸೆಪ್ಟಂಬರ್‌ 7ರಂದು ಟೆಂಡರ್‌ ಆಹ್ವಾನ ಸಮಿತಿ, ಟೆಂಡರ್‌ ಪರಿಶೀಲನಾ ಸಮಿತಿ ಮತ್ತು ಅಂಗೀಕಾರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಪೈಕಿ ಟೆಂಡರ್‌ ಆಹ್ವಾನ ಮತ್ತು ಪರಿಶೀಲನಾ ಸಮಿತಿಗೆ ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.

ಪ್ರಧಾನಿ ಕಚೇರಿ ಮೆಟ್ಟಿಲೇರಿತ್ತು ಟೆಂಡರ್‌ ಪ್ರಕರಣ

ಈ ಯೋಜನೆಗೆ ಆರಂಭದಲ್ಲಿ ಪೊಲೀಸ್‌ ಇಲಾಖೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಮತ್ತು ಕಂಪನಿಯನ್ನು ಅಯ್ಕೆ ಮಾಡಿದ್ದ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಪ್ರಧಾನಿ ಕಚೇರಿಗೆ 2020ರ ಜೂನ್‌ 29ರಂದು ದೂರು ಸಲ್ಲಿಸಿತ್ತು. ಟೆಂಡರ್‌ನಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ಲಾರ್ಸನ್‌ ಅಂಡ್‌ ಟೋಬ್ರೋ (ಎಲ್‌ ಅಂಡ್‌ ಟಿ), ಮಾಟ್ರಿಕ್ಸ್‌ ಸೆಕ್ಯುರಿಟಿ ಅಂಡ್‌ ಸರ್ವೇಲೆಯನ್ಸ್‌ ಪ್ರೈವೈಟ್‌ ಲಿಮಿಟೆಡ್‌, ಎನ್‌ಸಿಸಿ ಲಿಮಿಟೆಡ್‌ ಭಾಗವಹಿಸಿದ್ದವು.

ಹಿತಾಸಕ್ತಿ ಸಂಘರ್ಷ ಆರೋಪ

ಟೆಂಡರ್‌ನಲ್ಲಿ ಭಾಗವಹಿಸಿದ್ದ ಮ್ಯಾಟ್ರಿಕ್ಸ್‌ ಮತ್ತು ಎನ್‌ಸಿಸಿ ನಿರ್ದೇಶಕರೊಬ್ಬರು ಎರಡೂ ಕಂಪನಿಯಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಷೇರು ಹೊಂದಿದ್ದರು. ಹೀಗಾಗಿ ಎರಡೂ ಕಂಪನಿಗಳಿಗೆ ಅವಕಾಶಕೊಟ್ಟಲ್ಲಿ ಇದು ಹಿತಾಸಕ್ತಿ ಸಂಘರ್ಷವಾಗಲಿದೆ. ಹಾಗೆಯೇ ಆರ್‌ಎಫ್‌ಪಿ ಷರತ್ತುಗಳನ್ನು ನೇರವಾಗಿ ಉಲ್ಲಂಘಿಸಿದೆ ಎಂದು ಬಿಇಎಲ್‌ ಕಂಪನಿ ಪ್ರಧಾನಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿತ್ತು ಎಂಬುದು ತಿಳಿದು ಬಂದಿದೆ.

ಅನರ್ಹಗೊಂಡಿದ್ದ ಎನ್‌ಸಿಸಿ

ಆರ್‌ಎಫ್‌ಪಿ ಪ್ರಕಾರ ದಾಖಲೆಗಳನ್ನು ನೀಡದ ಕಾರಣ ಟೆಂಡರ್‌ ಸಮಿತಿಯು ಎನ್‌ಸಿಸಿ ಲಿಮಿಟೆಡ್‌ನ್ನು ಅನರ್ಹಗೊಳಿಸಿತ್ತು. ಹೀಗಾಗಿ ಮ್ಯಾಟ್ರಿಕ್ಸ್‌ ಕಂಪನಿಯನ್ನು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು ಎಂಬುದು ದೂರಿನಿಂದ ಗೊತ್ತಾಗಿದೆ.

ಚೀನಾ ಉತ್ಪನ್ನ ನಮೂದಿಸಿದ್ದ ಮ್ಯಾಟ್ರಿಕ್ಸ್‌

ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದ ಮ್ಯಾಟ್ರಿಕ್ಸ್‌ ಕಂಪನಿಯು ಚೀನಾ ತಯಾರಿಸಿರುವ ಕ್ಯಾಮರಾ, ಸರ್ವರ್‌, ಸಂಗ್ರಹಣಾ ಕೋಶ ಉಪಕರಣಗಳ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ನಮೂದಿಸಿತ್ತು. ಟೆಂಡರ್‌ ಮೌಲ್ಯಮಾಪನ ಸಮಿತಿ ಮುಂದೆ ಇದೇ ಉಪಕರಣಗಳ ಮಾದರಿಯನ್ನು ಪ್ರದರ್ಶಿಸಿತ್ತು.

ಚೀನಾ ತಯಾರಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿದಲ್ಲಿ ಸಾರ್ವಜನಿಕ ಭದ್ರತೆ, ಸುರಕ್ಷತೆಗೆ ಧಕ್ಕೆ ಆಗಲಿದೆ ಎಂದು ದೂರಿದ್ದ ಬಿಇಎಲ್‌, ನಿವಾಸಿಗಳ ದತ್ತಾಂಶವೂ ಸೋರಿಕೆಯಾಗಲಿದೆ. ಹಾಗೆಯೇ ಖಾಸಗಿತನದ ಮಹತ್ವ ಕಳೆದುಕೊಳ್ಳಲಿದೆ. ಹೀಗಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವ ಮೂಲಕ ಟೆಂಡರ್‌ ಪ್ರಾಧಿಕಾರವು ಮ್ಯಾಟ್ರಿಕ್ಸ್‌ ಕಂಪನಿಯನ್ನು ಅನರ್ಹಗೊಳಿಸಲು ಟೆಂಡರ್‌ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ದೂರಿನಲ್ಲಿ ಕೋರಿತ್ತು.

ಆದರೆ ಇದನ್ನು ಮರೆಮಾಚಿದ್ದ ಅಧಿಕಾರಿಗಳ ಗುಂಪೊಂದು 667 ಕೋಟಿ ಮೊತ್ತದ ಟೆಂಡರ್‌ ಪ್ರಕ್ರಿಯೆಯನ್ನು ಸಚಿವ ಸಂಪುಟದ ಗಮನಕ್ಕೂ ತಂದಿರಲಿಲ್ಲ ಎನ್ನಲಾಗಿದೆ. ಇಡೀ ಟೆಂಡರ್‌ ಪ್ರಕ್ರಿಯೆಯನ್ನು ಹಿರಿಯ ಐಪಿಎಸ್‌ ಅಧಿಕಾರಿಗಳ ಹಂತದಲ್ಲೇ ನಡೆಸಲು ಪೂರ್ಣಗೊಳಿಸಲು ಮುಂದಾಗಿತ್ತು.

ಈ ಹಿಂದೆ ಇದೇ ಯೋಜನೆಗೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಧಾನಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ನೀಡಿದ್ದರಿಂದ ಮರು ಟೆಂಡರ್‌ ಪ್ರಕ್ರಿಯೆ ನಡೆದಿದೆ. ಯೋಜನೆ ಮೊತ್ತ 10 ಕೋಟಿ ರು. ಮೀರಿರುವುದರಿಂದ ಸಚಿವ ಸಂಪುಟಕ್ಕೆ ಟೆಂಡರ್‌ ಪ್ರಕ್ರಿಯೆಗಳನ್ನು ಮಂಡಿಸಬೇಕು. ಈ ಕುರಿತು ರಾಜ್ಯ ಸರ್ಕಾರವು ಈ ಹಿಂದೆ ಆದೇಶ ಹೊರಡಿಸಿತ್ತು.

ಆದರೆ ಟೆಂಡರ್‌ ಆಹ್ವಾನ ಸಮಿತಿಯ ಅಧ್ಯಕ್ಷ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಸಚಿವ ಸಂಪುಟಕ್ಕೆ ಮಂಡಿಸದೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು.

ಅಲ್ಲದೆ ಐಎಂಎ ವಂಚನೆ ಪ್ರಕರಣದಲ್ಲಿ ಗುರುತರ ಆರೋಪ ಮತ್ತು ಸಿಬಿಐ ವಿಚಾರಣೆಗೊಳಪಟ್ಟಿರುವ ಹೇಮಂತ್‌ ನಿಂಬಾಳ್ಕರ್‌ ಅವರನ್ನೇ ಟೆಂಡರ್‌ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವುದಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳ ವಲಯದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು.

the fil favicon

SUPPORT THE FILE

Latest News

Related Posts