ಸುಳ್ಳು ಮಾಹಿತಿ ನೀಡಿ ಗೌ ಡಾ ಪಡೆದರೆ ಮಳವಳ್ಳಿ ಶಿವಣ್ಣ?; ತನಿಖೆಗೆ ವಿಧಾನಪರಿಷತ್‌ ಸದಸ್ಯ ಪತ್ರ

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬಿ ಎಸ್‌ ಶಿವಣ್ಣ ಅವರಿಗೆ ಅಲೆಯನ್ಸ್‌ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್‌ ಇದೀಗ ವಿವಾದಕ್ಕೊಳಗಾಗಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಗೌರವ ಡಾಕ್ಟರೇಟ್‌ ಪದವಿ ಪಡೆದಿರುವ ಶಿವಣ್ಣ ಅವರು ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ಸುಳ್ಳು ಮಾಹಿತಿ ನೀಡಿ ಅಲೆಯನ್ಸ್‌ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದಿದ್ದಾರೆ. ಅಲ್ಲದೆ ಈ ಬಗ್ಗೆ ಪರಿಶೀಲಿಸದ ವಿಶ್ವವಿದ್ಯಾಲಯದ ಆಯ್ಕೆ ಸಮಿತಿಯು ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಿ ರಾಜ್ಯಪಾಲರ ಸುತ್ತೋಲೆಯನ್ನೂ ಉಲ್ಲಂಘಿಸಿದೆ ಎಂಬ ದೂರಿನ ಕುರಿತು ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ಅವರು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರಿಗೆ 2020ರ ನವೆಂಬರ್‌ 23ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುವ ಸಂಬಂಧ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸಿರುವುದಿಲ್ಲ. ಈ ವಿಷಯದಲ್ಲಿ ರಾಜ್ಯಪಾಲರಿಗೆ ವಂಚನೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಪರಿಷತ್‌ ಕೂಡ ವರದಿ ಸಲ್ಲಿಸಿದೆ. ಹೀಗಾಗಿ ಈ ಕುರಿತು ಸೂಕ್ತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು,’ ಎಂದು ಪತ್ರದಲ್ಲಿ ಪರಿಷತ್‌ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ಅವರು ಕೋರಿದ್ದಾರೆ.

ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಅವರು ದೂರು ಸಲ್ಲಿಸುವ ಮುನ್ನವೇ ಜಯಲಿಂಗೇಗೌಡ ಎಂಬುವರು ಸಹ ಉನ್ನತ ಶಿಕ್ಷಣ ಇಲಾಖೆಗೆ ಈ ಸಂಬಂಧ ದೂರು ದಾಖಲಿಸಿದ್ದರು. ಇದನ್ನಾಧರಿಸಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್‌ ಅವರ ಆಪ್ತ ಕಾರ್ಯದರ್ಶಿ ಡಿ ಎಂ ಸತೀಶ್‌ಕುಮಾರ್‌ ಅವರು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2020ರ ಜೂನ್‌ 4ರಂದು ಪತ್ರ ಬರೆದಿದ್ದರು.

ಆದರೆ ಈ ಎರಡೂ ಪತ್ರಗಳನ್ನಾಧರಿಸಿ ಉನ್ನತ ಶಿಕ್ಷಣ ಇಲಾಖೆ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಅಲೆಯನ್ಸ್ ವಿಶ್ವವಿದ್ಯಾಲಯಕ್ಕೆ ಇಲಾಖೆ ಹಲವು ಬಾರಿ ಬರೆದಿದ್ದ ಪತ್ರ ಮತ್ತು ನೆನಪೋಲೆಗಳಿಗೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಕೂಡ ಯಾವುದೇ ಪ್ರತಿಕ್ರಿಯೆಯನ್ನಾಗಲಿ ಉತ್ತರವನ್ನಾಗಲಿ ಬರೆದಿಲ್ಲ ಎಂದು ಗೊತ್ತಾಗಿದೆ.

2019ರ ಡಿಸೆಂಬರ್‌ 15 ಮತ್ತು 2020ರ ಜನವರಿ 30ರಂದು ಉನ್ನತ ಶಿಕ್ಷಣ ಪರಿಷತ್‌ ಈ ಕುರಿತು ಸಲ್ಲಿಸಿದೆ. ಆರೋಪಿತರ ವಿರುದ್ಧ ದೂರುದಾರರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಇದು ಗುರುತರ ಆರೋಪವಾಗಿದ್ದು ಸೂಕ್ತ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಲು ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಬೇಕು. ಅಲ್ಲದೆ ವಿವಿಧ ಕೋನಗಳಿಂದ ತನಿಖೆ ನಡೆಸುವುದು ಸೂಕ್ತ ಎಂದು ಉನ್ನತ ಶಿಕ್ಷಣ ಪರಿಷತ್‌ ವರದಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ಉನ್ನತ ಶಿಕ್ಷಣ ಪರಿಷತ್‌ ವರದಿ ಅನುಸಾರ ಸಿಒಡಿ, ಎಸಿಬಿ ಅಥವಾ ಸೂಕ್ತ ತನಿಖಾ ಸಂಸ್ಥೆಗಳಿಂದ ತನಿಖೆಗೆ ಒಳಪಡಿಸುವುದು ಅಗತ್ಯವಾಗಿರುತ್ತದೆ ಎಂದು ಇಲಾಖೆ ಅಧಿಕಾರಿಗಳು (ಕಡತ ಸಂಖ್ಯೆ; ಇಡಿ 43 ಯುಆರ್‌ಸಿ 2020) ಸಚಿವರ ಆದೇಶ ಪಡೆಯಲು ಕಡತವನ್ನು ಮಂಡಿಸಿದ್ದರು ಎಂದು ಗೊತ್ತಾಗಿದೆ. ಆದರೆ ಅಶ್ವಥ್‌ನಾರಾಯಣ್‌ ಅವರು ಈವರೆವಿಗೂ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲು ರಾಜ್ಯಪಾಲರು ಸುತ್ತೊಲೆ ಹೊರಡಿಸಿದ್ದಾರೆ. ವಿಶ್ವವಿದ್ಯಾಲಯದ ಕಾಯ್ದೆ 69ರ ಪ್ರಕಾರ ವಿಜ್ಞಾನ, ಕಾನೂನು, ಸಮಾಜಸೇವೆ ಸೇರಿದಂತೆ ಇನ್ನಿತರೆ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಬೇಕು. ಅಲ್ಲದೆ ವಿಶ್ವವಿದ್ಯಾಲಯ ಆಯ್ಕೆ ಸಮಿತಿ ಮೂಲಕ ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಬೇಕು. ಸಮಿತಿಯು ಆಯ್ಕೆ ಮಾಡಿದ 45 ದಿನಗಳ ಒಳಗೆ ಅಭ್ಯರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮೂವರ ಸದಸ್ಯರ ಸಮಿತಿಯು ಪರಿಶೀಲನೆ ನಡೆಸಬೇಕು. ಆದರೆ ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಆಯ್ಕೆ ಸಂದರ್ಭದಲ್ಲಿ ಸಿಂಡಿಕೇಟ್‌ನ ಪರಿಶೀಲನಾ ಸಮಿತಿ ಮತ್ತು ಆಯ್ಕೆ ಸಮಿತಿಯೂ ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಿ ಎಸ್‌ ಶಿವಣ್ಣ ಅವರನ್ನು ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಇವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇತ್ತು. ಆದರೂ ಇವರನ್ನು ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುವ ಹಿಂದಿನ ದಿವಸ ಅವರ ವಿರುದ್ಧ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಮುಕ್ತಗೊಳಿಸಿತ್ತು. ರಾಜ್ಯಪಾಲರು ಹೊರಡಿಸಿರುವ ಸುತ್ತೋಲೆ ಪ್ರಕಾರ ಬಿ ಎಸ್‌ ಶಿವಣ್ಣ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲು ಯಾವ ನಿಯಮದಲ್ಲೂ ಅವಕಾಶಗಳಿರಲಿಲ್ಲ. ಆದರೂ ಅವರನ್ನು ಗೌ ಡಾ ಗೆ ಆಯ್ಕೆ ಮಾಡಲಾಗಿದೆ ಎನ್ನುತ್ತಾರೆ ದೂರುದಾರ ಜಯಲಿಂಗೇಗೌಡ.

the fil favicon

SUPPORT THE FILE

Latest News

Related Posts