ಬೆಂಗಳೂರು; ಬಯೋ ಮೆಡಿಕಲ್ ಉಪಕರಣಗಳ ನಿರ್ವಹಣೆ ಸಂಬಂಧ ಕೆಡಿಎಲ್‌ಡಬ್ಲ್ಯೂಎಸ್‌ನ ಅಧಿಕಾರಿಗಳು ಹೆಜ್ಜೆ ಹೆಜ್ಜೆಯಲ್ಲೂ ಅಕ್ರಮ ನಡೆಸಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ. ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸ್ ಸಲ್ಲಿಸಿದ್ದ ಪ್ರೊಫ್ರಾಮಾ ಇನ್‌ವಾಯ್ಸ್‌ನಲ್ಲಿ ಒದಗಿಸಿದ್ದ ಜಿಎಸ್‌ಟಿ ನಂಬರ್ ನಕಲಿಯಾಗಿದ್ದರೂ ಪರಿಶೀಲಿಸದ ಅಧಿಕಾರಿಗಳಿಂದ ಸರ್ಕಾರಕ್ಕೆ ನಷ್ಟ ಉಂಟಾಗಿದೆ.
ಉಪಕರಣಗಳ ನಿರ್ವಹಣೆ ಗುತ್ತಿಗೆ ಪಡೆದಿರುವ ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸ್‌ಗೆ ನೀಡಿರುವ ಮುಂಗಡದಲ್ಲೂ ಅವ್ಯವಹಾರದ ವಾಸನೆ ಹಬ್ಬಿದೆ. ನೋಟಿಫಿಕೇಷನ್ ಅವಾರ್ಡ್‌ನ ಆಧಾರದ ಮೇಲೆ 5.41 ಕೋಟಿ ರು. ಮುಂಗಡ ನೀಡಿರುವ ಇಲಾಖೆ, ಕಂಪನಿ ನೀಡಿದ್ದ ಜಿಎಸ್‌ಟಿ ನಂಬರ್‌ನ್ನು ಪರಿಶೀಲಿಸದೆಯೇ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಇದರಿಂದ ಸರ್ಕಾರಕ್ಕೆ ಜಿಎಸ್‌ಟಿಯೂ ವಂಚನೆಯಾಗಿದೆ ಎಂದು ತಿಳಿದು ಬಂದಿದೆ.
ಆದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಕಾರ್ಯಕ್ರಮಾಧಿಕಾರಿ ಬಣಕರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳ ವಿರುದ್ಧ ಯಾವುದೆ ಕ್ರಮ ಜರುಗಿಸಿರಲಿಲ್ಲ. ಇಲಾಖೆಯ ಉನ್ನತ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವುದಕ್ಕೆ ಈ ಪ್ರಕರಣ ಇನ್ನಷ್ಟು ಪುಷ್ಠೀಕರಿಸಿದೆ.
ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸ್ ಕಂಪನಿಯು ನೀಡಿದ್ದ ಜಿಎಸ್‌ಟಿ ನಂಬರ್ ಬಗ್ಗೆಯೂ ಹಲವು ಅನುಮಾನಗಳಿವೆ. ಕಂಪನಿಯು GSTIN;29AACCT1412E2ZQ, PAN NO;AACCT1412E ನಂಬರ್‌ನ್ನು ನೀಡಿದೆ. ಆದರೆ ಜಿಎಸ್‌ಟಿಯ ಅಧಿಕೃತ ಜಾಲತಾಣದಲ್ಲಿ ಈ ನಂಬರ್‌ನ್ನು ಪರಿಶೀಲಿಸಿದರೆ ಇದು ಬೆಂಗಳೂರು ಮತ್ತು ಮೈಸೂರಿನ ವಿಳಾಸ ಇರುವುದು ಗೊತ್ತಾಗಿದೆ.
(ನಂ 201, ರೇಣುಕಾ ನಿಲಯ, ಕಿತ್ತಗಾನೂರು, ಕೆ ಆರ್ ಪುರಂ ಪೋಸ್ಟ್ ಬೆಂಗಳೂರು- ಪ್ಲಾಟ್ ನಂ 100-ಎ, ಬೆಳಗೊಳ ಕೈಗಾರಿಕೆ ಪ್ರದೇಶ, ಮೈಸೂರು) ಹಾಗೆಯೇ ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸ್ ಪ್ರೈ ಲಿಮಿಟೆಡ್ ಪ್ರೊಪ್ರಾಮಾ ಇನ್‌ವಾಯ್ಸ್‌ನಲ್ಲಿ ಮತ್ತೊಂದು ವಿಳಾಸವಿದೆ. (ನಂ 1132, 2ನೇ ಮಹಡಿ, ಆನಂದ್ ಎಂಬೆಸ್ಸಿ, 100 ಅಡಿ ರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾ ನಗರ, ಬೆಂಗಳೂರು)
ಪ್ರೊಫ್ರಾಮಾ ಇನ್‌ವಾಯ್ಸ್‌ನ ಆಧಾರದ ಮೇಲೆ ಕೆಡಿಎಲ್‌ಡಬ್ಲ್ಯೂಎಸ್ ಅಧಿಕಾರಿಗಳು 5,41,81,181 ರು.ಗಳನ್ನು ಪಾವತಿಸಿದ್ದಾರೆ. (ಜಿಎಸ್‌ಟಿ, ಟಿಡಿಎಸ್ (ಶೇ.2) ಮತ್ತು ಆರ್‌ಟಿಜಿಎಸ್, ಎನ್‌ಇಎಫ್‌ಟಿ ಶುಲ್ಕ 9,34,249 ಕಳೆದು) ಪ್ರೊಫ್ರಾಮಾ ಇನ್‌ವಾಯ್ಸ್‌ನಲ್ಲಿ ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸ್ ಸೂಚಿಸಿದ್ದ ನಕಲಿ ಜಿಎಸ್‌ಟಿ ಹೆಸರಿನಲ್ಲಿ ಸಿಜಿಎಸ್‌ಟಿ ಲೆಕ್ಕದಲ್ಲಿ 42.03 ಲಕ್ಷ ರು ಮತ್ತು ಎಸ್‌ಜಿಎಸ್‌ಟಿ/ಯುಜಿಎಸ್‌ಟಿ ಲೆಕ್ಕದಲ್ಲಿ 42.03 ಲಕ್ಷ ಸೇರಿ ಒಟ್ಟು 84.06 ಲಕ್ಷ ರು.ಗಳನ್ನು ಕೆಡಿಎಲ್‌ಡಬ್ಲ್ಯೂಎಸ್‌ನಿಂದಲೇ ಪಡೆದಿರುವುದು ಗೊತ್ತಾಗಿದೆ.
84.06 ಲಕ್ಷ ಜಿಎಸ್‌ಟಿಗೆ ಜಮಾ ಆಗಿದೆಯೇ, ಆಗಿದ್ದರೆ ಯಾರ ಹೆಸರಿನಲ್ಲಿ ಜಮಾ ಆಗಿದೆ ಎಂಬ ಬಗ್ಗೆ ಅಧಿಕಾರಿಗಳ ಬಳಿಯೇ ವಿವರಗಳಿಲ್ಲ. ಬಯೋ ಮೆಡಿಕಲ್ ಉಪಕರಣ ನಿರ್ವಹಣೆ ಕಾರ್ಯಾಕ್ರಮಾಧಿಕಾರಿ ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸ್ ಕಂಪನಿಗೆ ಪ್ರತಿ ತಿಂಗಳು ಹಣ ಪಾವತಿ ಮಾಡುತ್ತಿದ್ದಾರಾದರೂ ಪಾವತಿಗೆ ಮುನ್ನ ಕಂಪನಿಯಿಂದ ಪಡೆದುಕೊಂಡಿರುವ ಜಿಎಸ್‌ಟಿ ಹಣವನ್ನು ಜಿಎಸ್‌ಟಿ ಮಂಡಳಿಗೆ ಪಾವತಿಸುತ್ತಿದ್ದಾರೆಯೇ, ಪಾವತಿಸಿದ್ದರೆ ಯಾರ ಹೆಸರಿನಲ್ಲಿ ಪಾವತಿಸಲಾಗುತ್ತಿದೆ ಎಂದು ಖಾತರಿಪಡಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.