ಬೆಂಗಳೂರು; ಮಧ್ಯಮಾವಧಿ ದೀರ್ಘಾವಧಿ ಕೃಷಿ ಸಾಲ ನೀಡುವ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಎಲ್ಲಾ ಬಗೆಯ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಅವಕಾಶ ಇರುವುದರಿಂದ ಆಸಾಮಿ ಸಾಲಗಳಿಗೆ ಬಡ್ಡಿ ಸಹಾಯ ಧನ ನೀಡಲು ಪ್ರತ್ಯೇಕ ಯೋಜನೆ ಬೇಡಿಕೆಯನ್ನು ಸಹಕಾರ ಇಲಾಖೆ ತಿರಸ್ಕರಿಸಿದೆ.
ತೋಟಗಾರಿಕೆ ಉದ್ದೇಶಗಳ ಬಗ್ಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಕೃಷಿಕರಿಗೆ ನೀಡುತ್ತಿರುವ ಆಸಾಮಿ ಸಾಲ/ಬಳಕೆ ಸಾಲ/ಕೃಷಿ ಅಲ್ಪಾವಧಿ ಸಾಲ ಮತ್ತಿತಿರೆ ಸಾಲಗಳನ್ನು ಕೃಷಿ ಸಾಲಗಳೆಂದು ಪರಿಗಣಿಸುವ ಬಗ್ಗೆ ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಕುರಿತು 2020ರ ಸೆ.14ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಸರ್ಕಾರದ ಶೇ.3ರ ಬಡ್ಡಿ ದರದಲ್ಲಿ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ನೀಡುವ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಎಲ್ಲಾ ಬಗೆಯ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಅವಕಾಶವಿದೆ. ಹೀಗಾಗಿ ಆಸಾಮಿ ಸಾಲಗಳಿಗೆ ಬಡ್ಡಿ ಸಹಾಯ ಧನ ನೀಡಲು ಪ್ರತ್ಯೇಕ ಯೋಜನೆ ಜಾರಿಗೆ ಅವಶ್ಯಕತೆ ಇಲ್ಲ,’ ಎಂದು ಹೇಳಿರುವುದು ಪತ್ರದಿಂದ ತಿಳಿದು ಬಂದಿದೆ.
ಒಂದು ವೇಳೆ ಈ ಸಾಲಗಳಿಗೆ ಬಡ್ಡಿ ಸಹಾಯ ಧನ ನೀಡಿದ್ದಲ್ಲಿ ಪ್ರತಿ ವರ್ಷ 447 ಕೋಟಿ ರು. ಮೇಲೆ 44 ಕೋಟಿ (ಶೇ.10ರ ಬಡ್ಡಿ ದರ) ಬಡ್ಡಿ ಸಹಾಯಧನದ ಹೆಚ್ಚಿನ ಹೊರೆ ಬೀಳುತ್ತದೆ. ಹಾಗೆಯೇ ಇಂತಹ ಸಾಲಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬಡ್ಡಿ ಮನ್ನಾ ಮಾಡಿದಲ್ಲಿ ಈ ಪ್ಯಾಕ್ಸ್‌ಗಳಲ್ಲಿ 20 ಕೋಟಿ ಸುಸ್ತಿಯಾಗಿದ್ದು, ಅಂದಾಜು 20 ಕೋಟಿ ರು.ಗಳ ಬಡ್ಡಿ ಹೊರೆ ಬೀಳುತ್ತದೆ ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.
ಡಿಸಿಸಿ ಬ್ಯಾಂಕ್‌ನ ನೇತೃತ್ವದ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಇಯಲ್ಲಿ ಮತ್ತು ನಬಾರ್ಡ್ ಯುನಿಟ್ ಕಾಸ್ಟ್ ಪ್ರಕಾರ ಡಿಸಿಸಿ ಬ್ಯಾಂಕ್ ಅಲ್ಪಾವಧಿ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡುತ್ತಿವೆ. ಈ ಸಾಲದ ನಿಯಮಾವಳಿಗಳ ಪ್ರಕಾರ ರೈತರಿಗೆ ಹೆಚ್ಚಿನ ಸಾಲ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಸಾಮಿ ಸಾಲದ ರೂಪದಲ್ಲಿ ಪ್ಯಾಕ್ಸ್‌ಗಳು ತಮ್ಮ ಸ್ವಂತ ಬಂಡವಾಳದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಾಲ ನೀಡುತ್ತಿದೆ. ಈ ಸಾಲಗಳನ್ನು ಕೃಷಿ ಸಾಲಗಳೆಂದು ಪರಿಗಣಿಸಿದಲ್ಲಿ ಬಡ್ಡಿ ಸಹಾಯಧನ, ಬಡ್ಡಿ ಮನ್ನಾ, ಸಾಲ ಮನ್ನಾ ಯೋಜನೆಗಳು ಅನ್ವಯವಾಗುವುದರಿಂದ ಈ ಬೇಡಿಕೆ ಇರುತ್ತದೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಆಸಾಮಿ ಸಾಲದ ವಿಷಯವು ಡಿಸಿಸಿ ಬ್ಯಾಂಕ್, ಪ್ಯಾಕ್ಸ್, ನಬಾರ್ಡ್ ಮತ್ತು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಇತ್ಯರ್ಥವಾಗಬೇಕಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್, ಕೃಷಿ ಇಲಾಖೆ, ಡಿಸಿಸಿ ಬ್ಯಾಂಕ್, ಪ್ಯಾಕ್ಸ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು ಎಂದೂ ನಿಬಂಧಕರು ಹೇಳಿದ್ದಾರೆ.
2020-21ನೇ ಸಾಲಿನಲ್ಲಿ ಮಾರುಕಟ್ಟೆ ಸಹಕಾರ ಸಂಘಗಳೂ ಸಹ ರೈತರಿಗೆ 2 ಲಕ್ಷದವರೆಗಿನ ದೀರ್ಘಾವಧಿ ಕೃಷಿ ಸಾಲವನ್ನು ಶೇ.5ರ ಬಡ್ಡಿ ಸಹಾಯಧನದೊಂದಿಗೆ ನೀಡಲಾಗುವುದು ಎಂದು ಆಯವ್ಯಯದಲ್ಲಿ ಹೇಳಲಾಗಿದೆ. ಈ ಕುರಿತು ಸರ್ಕಾರಿ ಆದೇಶ ಹೊರಡಿಸಲು ಪ್ರಸ್ತಾವನೆ ಸಲ್ಲಿಸಿರುವುದು ಪತ್ರದಿಂದ ಗೊತ್ತಾಗಿದೆ.