ಬೆಂಗಳೂರು; 1998ನೇ ಸಾಲಿನ ಕೆಎಎಸ್ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅರ್ಜಿಗಳನ್ನು 14 ವರ್ಷದವರೆಗೂ ವಿಚಾರಣೆ ನಡೆಸಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಕಾಯ್ದಿರಿಸಿರುವ ಆದೇಶವನ್ನು ಒಂದು ವರ್ಷ ಕಳೆದರೂ ಪ್ರಕಟಿಸಿಲ್ಲ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅರ್ಹ ಅಭ್ಯರ್ಥಿಗಳನ್ನು ಆಡಳಿತ ಸೇವೆಗೆ ಆಯ್ಕೆ ಮಾಡಬೇಕು ಎಂದು ಹೈಕೋರ್ಟ್ ಪ್ರಕಟಿಸಿದ್ದ ಆದೇಶವನ್ನೂ ಲೆಕ್ಕಿಸದೆಯೇ ಕಾಯ್ದರಿಸಿರುವ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಮಂಡಳಿಯ ಈ ಧೋರಣೆಯು ನ್ಯಾಯ ದಾನ ವಿಳಂಬಕ್ಕೆ ಸಾಕ್ಷಿಯಾಗಿದೆ.
ಇದೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕ ಸಂಬಂಧ ನ್ಯಾಯಾಲಯದ ಆದೇಶ ಪಾಲನೆ ಮಾಡದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಖುದ್ದು ಹಾಜರಿಗೆ ಹೈಕೋರ್ಟ್ ಆದೇಶಿಸಿರುವ ಬೆನ್ನಲ್ಲೇ, ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನ್ಯಾಯದಾನ ವಿಳಂಬವೂ ಚರ್ಚೆಗೊಳಗಾಗಿದೆ.
ಕಾಯ್ದರಿಸಿದ ಆದೇಶವನ್ನು ಪ್ರಕಟಿಸುವಂತೆ ಕೋರಿ ಕೆಲ ಅರ್ಜಿದಾರರು ಕೆಎಟಿಗೆ ಮೆಮೋ ಸಲ್ಲಿಸಿದ್ದರು. ಆದರೆ ಈ ಮೆಮೋವನ್ನು ತಿರಸ್ಕರಿಸಿರುವ ಮಂಡಳಿಯು ಆದೇಶ ಪ್ರಕಟ ಸಂಬಂಧ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ. ಮಂಡಳಿಯ ಈ ಧೋರಣೆಯಿಂದಾಗಿ ಅರ್ಜಿದಾರರು ನ್ಯಾಯದಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.
ಕಳೆದ 14 ವರ್ಷಗಳಿಂದಲೂ ಈ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದರೂ ಇನ್ನೂ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ. ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಭಕ್ತವತ್ಸಲ ಅವರು 2019ರ ನವೆಂಬರ್ 11ರಂದು ಆದೇಶವನ್ನು ಕಾಯ್ದರಿಸಿದ್ದರು. ಆದೇಶವನ್ನು ಕಾಯ್ದರಿಸಿ ಒಂದು ವರ್ಷವಾದರೂ ಆದೇಶವನ್ನು ಪ್ರಕಟಿಸಿಲ್ಲ ಎಂದು ತಿಳಿದು ಬಂದಿದೆ.
ಈ ನಡುವೆ ಭಕ್ತವತ್ಸಲ ಅವರ ಅವಧಿಯೂ ಇದೇ ಡಿಸೆಂಬರ್ 9ಕ್ಕೆ ಪೂರ್ಣಗೊಳ್ಳಲಿದೆ. ಆದರೂ ಕಾಯ್ದಿರಿಸಿದ ಆದೇಶವನ್ನು ಮಾತ್ರ ಪ್ರಕಟಿಸದಿರುವುದು ಅರ್ಜಿದಾರರ ಸಂಕಟವನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿಯೇ ಬೇರೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಪ್ರಕಟಿಸಿದೆ ಎಂದು ಗೊತ್ತಾಗಿದೆ.
ವಿಶೇಷವೆಂದರೆ ಅರ್ಜಿಯನ್ನು ಕೇವಲ 2 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿರುವ ಮಂಡಳಿಯು ಆದೇಶವನ್ನು ಪ್ರಕಟಿಸಿದ ನಿದರ್ಶನಗಳೂ ಇವೆ. ಆದರೆ ವಿಜಯಕುಮಾರ್, ಲಕ್ಷ್ಮಿನಾರಾಯಣ್ ಮತ್ತು ಖಲೀಲ್ ಅಹ್ಮದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು 14 ವರ್ಷಗಳ ನಂತರ ಪೂರ್ಣಗೊಳಿಸಿದೆಯಾದರೂ ಆದೇಶ ಕಾಯ್ದಿರಿಸಿ 1 ವರ್ಷವಾದರೂ ಆದೇಶ ಪ್ರಕಟಗೊಳ್ಳುತ್ತಿಲ್ಲ.
ಅರ್ಜಿದಾರರ ಪೈಕಿ ಹಲವರ ವಯೋಮಿತಿಯು ಪೂರ್ಣಗೊಳ್ಳುತ್ತಿದೆ. ಹೀಗಿದ್ದರೂ ಈ ಸಂಬಂಧ ಯಾವುದೇ ಆದೇಶ ಪ್ರಕಟಗೊಳ್ಳುತ್ತಿಲ್ಲ ಎಂದು ಅರ್ಜಿದಾರರೊಬ್ಬರು ‘ದಿ ಫೈಲ್’ನೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಹೈಕೋರ್ಟ್ ನೀಡಿದ್ದ ಆದೇಶದಲ್ಲೇನಿತ್ತು?
ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ಪೀಠವು ‘ಅರ್ಜಿದಾರರು ಕಳೆದ 22 ವರ್ಷದಿಂದಲೂ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಅವರ ಬಹುತೇಕ ಅರ್ಜಿಗಳು ವಿಲೇವಾರಿಯಾಗದೇ ಕೆಎಟಿಯಲ್ಲಿ ಇನ್ನೂ ಬಾಕಿ ಉಳಿದಿವೆ. ಈ ಬ್ಯಾಚ್‌ನಲ್ಲಿ ವಾಮಮಾರ್ಗದಿಂದ ಆಯ್ಕೆಯಾಗಿರುವ ಅಕ್ರಮ ಫಲಾನುಭವಿಗಳು ಕಾನೂನು ದುರುಪಯೋಗಪಡಿಸಿಕೊಂಡು ಮಂಡಳಿಯು ಆದೇಶ ಪ್ರಕಟಿಸದಂತೆ ನೋಡಿಕೊಳ್ಳುತ್ತಿದ್ದಾರೆ. ನ್ಯಾಯದಾನ ವಿಳಂಬವಾಗಿರುವ ಕಾರಣ ಈಗಲಾದರೂ ವಿಳಂಬ ಮಾಡದೇ ತ್ವರಿತವಾಗಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಮತ್ತು ಅರ್ಹ ಅಭ್ಯರ್ಥಿಗಳನ್ನು ಆಡಳಿತ ಸೇವೆಗೆ ಆಯ್ಕೆ ಮಾಡುವ ಕ್ರಮವನ್ನು ಪೂರ್ಣಗೊಳಿಸಬೇಕು ಎಂದು ಹೇಳಿತ್ತು.
ಹೈಕೋರ್ಟ್‌ನ ಈ ಆದೇಶ ಹೊರಬಿದ್ದು 3 ತಿಂಗಳಾದರೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿಗಳನ್ನು ವಿಲೇವಾರಿ ಮಾಡದೇ ಇನ್ನಷ್ಟು ಬಾಕಿ ಉಳಿಸುತ್ತಿದೆ. ಆದೇಶವನ್ನು ಲೆಕ್ಕಿಸದ ಕೆಎಟಿಯು ಕಾಯ್ದಿರಿಸಿದ ಆದೇಶವನ್ನು ಪ್ರಕಟಿಸದೆಯೇ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಅರ್ಜಿದಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ವಜಾಗೊಳಿಸಿ ಹೊಸ ಅಧಿಸೂಚನೆ ಹೊರಡಿಸಿ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು 2006ರಲ್ಲಿ ವಿಜಯಕುಮಾರ್, ಲಕ್ಷ್ಮಿನಾರಾಯಣ ಮತ್ತು ಖಲೀಲ್ ಅಹ್ಮದ್ ಸೇರಿದಂತೆ ಹಲವರು ಅರ್ಜಿಗಳನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಸಲ್ಲಿಸಿದ್ದರು.
2006ರ ಮಾರ್ಚ್, ಏಪ್ರಿಲ್ ಮತ್ತು ಜೂನ್‌ನಲ್ಲಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿಗಳನ್ನು ಪುರಸ್ಕರಿಸಿತ್ತು. 2006ರಲ್ಲಿ ಶುರುವಾಗಿದ್ದ ವಿಚಾರಣೆಯು 2019ಕ್ಕೆ ಪೂರ್ಣಗೊಂಡಿತ್ತು. ಶ್ರೀನಿವಾಸ ರೆಡ್ಡಿ, ಕಬ್ಬಿನ್, ಎ ಪಿ ಜೋಷಿ, ಶಾಂತಪ್ಪ, ಉಷಾ ಗಣೇಶ್, ಚಂದ್ರಶೇಖರ್ ಮತ್ತು ಭಕ್ತವತ್ಸಲ ಅವರು ಈ ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು.
1998ರಲ್ಲಿ ಕೆಎಎಸ್ ಅಧಿಕಾರಿಗಳಾಗಿ ನೇಮಕಗೊಂಡಿದ್ದವರ ಪೈಕಿ 20 ಅಧಿಕಾರಿಗಳು ಈಗಾಗಲೇ ಐಎಎಸ್‌ಗೆ ಪದನ್ನೋತಿ ಹೊಂದಿ ಸೇವೆಯಲ್ಲಿದ್ದಾರೆ. ಇದರಲ್ಲಿ ವೃಷಭೇಂದ್ರಸ್ವಾಮಿ ಎಂಬುವರು ಐಎಎಸ್ ಸೇವೆಯಲ್ಲಿದ್ದಾಗಲೇ ನಿವೃತ್ತಿಯಾಗಿದ್ದಾರೆ. ಇನ್ನೂ ಹಲವು ಅಧಿಕಾರಿಗಳ ಸೇವಾವಧಿಯೂ ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
1998ನೇ ಸಾಲಿನ ಕೆಎಎಸ್ ಅಭ್ಯರ್ಥಿಗಳ ನೇಮಕದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೂಡ ಹಲವು ಆದೇಶಗಳನ್ನು ಈಗಾಗಲೇ ಪ್ರಕಟಿಸಿದೆ. ಈ ಆದೇಶಗಳನ್ನು ಪಾಲಿಸದ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆಗೂ ಗುರಿಯಾಗಿದೆ. ಇತ್ತೀಚೆಗೆ ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದ ಪೀಠವು ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚುವುದೇ ಲೇಸು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.