ಸೈನ್ಸ್‌ ಕಾಂಗ್ರೆಸ್‌ ಸಮಾವೇಶಕ್ಕೆ ದೇಣಿಗೆ; ಸಂಗ್ರಹವಾದ 2 ಕೋಟಿಗೆ ವಿ.ವಿ.ಯಲ್ಲಿ ಲೆಕ್ಕವೇ ಇಲ್ಲ!

ಬೆಂಗಳೂರು; ಇಂಡಿಯನ್‌ ಸೋಷಿಯಲ್‌ ಸೈನ್ಸ್‌ ಕಾಂಗ್ರೆಸ್‌ಗೆ ಹರಿದು ಬಂದ ಪ್ರಾಯೋಜಿತ ದೇಣಿಗೆ ಮತ್ತು ಖರ್ಚಾಗಿರುವ ಮೊತ್ತದ ವಿವರಗಳು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಬಳಿಯೇ ಇಲ್ಲ. ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಸುಮಾರು 42 ಖಾಸಗಿ ಕಾಲೇಜುಗಳು ಸಮಾವೇಶ ನಡೆಸಲು ಪ್ರಾಯೋಜನೆ ಭಾಗವಾಗಿ ನೀಡಿದ್ದ ಲಕ್ಷಾಂತರ ರು. ಮೊತ್ತದ ಚೆಕ್‌ಗಳನ್ನು ಹಿಂದಿರುಗಿಸಿದ್ದಾರೆ ಎನ್ನಲಾಗಿರುವ ಸಮಾವೇಶದ ಸಂಘಟನಾ ಸಮಿತಿಯಲ್ಲಿದ್ದ ಪ್ರಾಧ್ಯಾಪಕರು ನಗದು ರೂಪದಲ್ಲಿ ಲಕ್ಷಾಂತರ ರು.ಗಳನ್ನು ಕಬಳಿಸಿದ್ದಾರೆ ಎಂಬ ಬಲವಾದ ಆರೋಪಗಳೂ ಕೇಳಿ ಬಂದಿವೆ.

ಸಮಾವೇಶದ ಆಯೋಜನೆಗೆ 42 ಕಾಲೇಜುಗಳು ಅಂದಾಜು 2 ಕೋಟಿ ರು.ಗಳನ್ನು ನೀಡಿವೆ. ಆದರೆ ಈ ಹಣ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ಜಮಾ ಅಗಿಲ್ಲ ಮತ್ತು ಹಣ ಬಂದಿರುವ ಬಗ್ಗೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೂ ಯಾವುದೇ ಮಾಹಿತಿ ಮತ್ತು ದಾಖಲೆಗಳೂ ಇಲ್ಲ. ಜಮಾ ಮತ್ತು ಖರ್ಚಿನ ಕುರಿತು ವಿಶ್ವವಿದ್ಯಾಲಯದ ಕುಲಪತಿ ಕಚೇರಿಯೇ ನೇರವಾಗಿ ವ್ಯವಹರಿಸಿತ್ತು ಎಂದು ತಿಳಿದು ಬಂದಿದೆ.

ಇಂಡಿಯನ್‌ ಸೋಷಿಯಲ್‌ ಸೈನ್ಸ್‌ ಕಾಂಗ್ರೆಸ್‌ ಹೆಸರಿನಲ್ಲಿ ಸಂಗ್ರಹವಾಗಿರುವ ಹಣ ಮತ್ತು ಖರ್ಚಾಗಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಸಿಂಡಿಕೇಟ್‌ ಒತ್ತಡದ ಮೇರೆಗೆ ನಿವೃತ್ತ ಐಎಎಸ್‌ ಅಧಿಕಾರಿ ಜಯರಾಮರಾಜೇ ಅರಸ್‌ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ನೇಮಿಸಿದೆ. ಈ ಸಮಿತಿ ಈಗಾಗಲೇ ತನಿಖೆ ಆರಂಭಿಸಿದೆ ಎಂದು ಗೊತ್ತಾಗಿದೆ.

ಜನವರಿ 2020ರ 17ರಿಂದ 4 ದಿನಗಳವರೆಗೆ ಬೆಂಗಳೂರಿನಲ್ಲಿ ನಡೆದಿದ್ದ ಇಂಡಿಯನ್‌ ಸೋಷಿಯಲ್‌ ಸೈನ್ಸ್‌ ಕಾಂಗ್ರೆಸ್‌ನಲ್ಲಿ ವಿವಿಧ ರಾಜ್ಯಗಳಿಂದ 6,000 ಪ್ರತಿನಿಧಿಗಳು ಭಾಗವಹಿಸಿದ್ದರಲ್ಲದೆ 250 ಪ್ರಬಂಧಗಳನ್ನು ಮಂಡಿಸಿದ್ದರು. ಈ ಸಮಾವೇಶವನ್ನು ನಡೆಸಲು ಕುಲಪತಿ ಜಾಫೆಟ್‌ ಅವರು ಸಂಘಟನಾ ಸಮಿತಿಯನ್ನು ನೇಮಿಸಿದ್ದರು. ಹಣಕಾಸಿನ ವ್ಯವಹಾರಗಳಲ್ಲಿ ಕುಲಪತಿಗಳು ನೇರವಾಗಿ ಭಾಗವಹಿಸದಿದ್ದರೂ ಅವರ ಕಚೇರಿಯೇ ನೇರವಾಗಿ ಭಾಗವಹಿಸಿತ್ತು ಎಂದು ತಿಳಿದು ಬಂದಿದೆ.

ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಒಂದೊಂದು ಖಾಸಗಿ ಕಾಲೇಜು 10,000 ರು.ನಿಂದ ಗರಿಷ್ಠ 5 ಲಕ್ಷ ರು.ವರೆಗೆ ದೇಣಿಗೆ ಮೂಲಕ ಪ್ರಾಯೋಜಿಸಿತ್ತು. ಇದರ ಒಟ್ಟಾರೆ ಮೊತ್ತ ಅಂದಾಜು 2 ಕೋಟಿ ಎಂದು ಹೇಳಲಾಗಿದೆ. ಇದೇ ಸಮಾವೇಶಕ್ಕೆ ಯುಜಿಸಿ ಕೂಡ 25 ಲಕ್ಷ ರು.ಗಳನ್ನು ನೆರವು ರೂಪದಲ್ಲಿ ನೀಡಲಿತ್ತು. ಸಮಾವೇಶಕ್ಕೆ ತಗಲಿರುವ ವೆಚ್ಚ ಮತ್ತು ಬಳಕೆ ಪ್ರಮಾಣಪತ್ರಗಳನ್ನು ನೀಡಿದ ನಂತರ ಯುಜಿಸಿ 25 ಲಕ್ಷ ರು.ಗಳನ್ನು ನೀಡಲಿದೆ. ಆದರೆ ಸಂಘಟನಾ ಸಮಿತಿ ಈವರೆವಿಗೂ ಖರ್ಚಿನ ಬಾಬತ್ತು ಮತ್ತು ಬಳಕೆ ಪ್ರಮಾಣಪತ್ರಗಳನ್ನು ನೀಡದ ಕಾರಣ ಯುಜಿಸಿಯಿಂದ ಈವರೆವಿಗೂ ನೆರವಿನ ಮೊತ್ತ ಬಿಡುಗಡೆಯಾಗಿಲ್ಲ ಎಂದು ಗೊತ್ತಾಗಿದೆ.

ಪ್ರಾಯೋಜಿತ ಹಣ ವಿ ವಿ ಬೊಕ್ಕಸಕ್ಕೆ ಜಮಾ ಆಗಿಲ್ಲ

ಮಾನ್ಯತೆ ಪಡೆದಿರುವ ಖಾಸಗಿ ಕಾಲೇಜುಗಳು ಸಮಾವೇಶವನ್ನು ಪ್ರಾಯೋಜಿಸಬೇಕು ಎಂದು ವಿಶ್ವವಿದ್ಯಾಲಯ ಮನವಿ ಮಾಡಿಕೊಂಡಿತ್ತು. ಹೀಗಾಗಿ ಖಾಸಗಿ ಕಾಲೇಜುಗಳು ತಮ್ಮ ಆರ್ಥಿಕ ಮಿತಿಯೊಳಗೆ ಲಕ್ಷಾಂತರ ರು.ಗಳನ್ನು ದೇಣಿಗೆ ರೂಪದಲ್ಲಿ ಪ್ರಾಯೋಜಿಸಿದ್ದವು. ಆದರೆ ಈ ಹಣ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ಜಮಾ ಆಗಿಲ್ಲ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ. ನಿಯಮಗಳ ಪ್ರಕಾರ ವಿಶ್ವವಿದ್ಯಾಲಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಮತ್ತು ಕಾರ್ಯಕ್ರಮಕ್ಕೆ ದೇಣಿಗೆ ನೀಡಿದರೆ ಅದು ನೇರವಾಗಿ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ಜಮಾ ಆಗಬೇಕು. ಆ ನಂತರ ರಿಜಿಸ್ಟ್ರಾರ್‌ ಮತ್ತು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಮೂಲಕ ಹಣ ಬಿಡುಗಡೆ ಆಗಬೇಕು. ಆದರೆ ಈ ಪ್ರಕ್ರಿಯೆ ಸೈನ್ಸ್‌ ಕಾಂಗ್ರೆಸ್‌ ಸಮಾವೇಶದಲ್ಲಿ ನಡೆದಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಚೆಕ್‌ ಹಿಂದಿರುಗಿಸಿದ್ದೇಕೆ?

ಸಮಾವೇಶಕ್ಕೆ ಖಾಸಗಿ ಕಾಲೇಜುಗಳು ದೇಣಿಗೆಯನ್ನು ಚೆಕ್‌ ಮೂಲಕ ಸಂಘಟನಾ ಸಮಿತಿಗೆ ತಲುಪಿಸಿದ್ದವು. ಸಮಿತಿಯಲ್ಲಿದ್ದ ಪ್ರಾಧ್ಯಾಪಕರುಗಳು ಚೆಕ್‌ಗಳನ್ನು ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕಿತ್ತು. ಚೆಕ್‌ ಅವಧಿ ಪೂರ್ಣಗೊಳ್ಳುವವರೆಗೂ ತಮ್ಮ ಬಳಿಯೇ ಇಟ್ಟುಕೊಂಡು ಅವಧಿ ಪೂರ್ಣಗೊಂಡ ನಂತರ ಚೆಕ್‌ಗಳನ್ನು ಆಯಾ ಕಾಲೇಜುಗಳಿಗೆ ಮರಳಿಸಿ, ದೇಣಿಗೆ ಮೊತ್ತವನ್ನು ಅನಧಿಕೃತವಾಗಿ ನಗದು ರೂಪದಲ್ಲಿ ಪಡೆದು ಕಬಳಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

‘ಖಾಸಗಿ ಕಾಲೇಜುಗಳಿಂದ ಸಂಗ್ರಹವಾಗಿರುವ ಚೆಕ್‌ಗಳು ವಿಶ್ವವಿದ್ಯಾಲಯದ ಬ್ಯಾಂಕ್‌ ಅಕೌಂಟ್‌ಗೆ ಜಮಾ ಆಗಿಲ್ಲ. ಅದರ ಲೆಕ್ಕವನ್ನೂ ಇಟ್ಟಿಲ್ಲ. ಸಮಾವೇಶಕ್ಕೆ ಲಕ್ಷಾಂತರ ರು.ಖರ್ಚಾಗಿದೆ. ಆದರೆ ಕೆಲವೇ ಲಕ್ಷಗಳನ್ನಷ್ಟೇ ವೆಚ್ಚದ ರೂಪದಲ್ಲಿ ತೋರಿಸಲಾಗಿದೆ.ಯಾವ್ಯಾವ ಕಾಲೇಜುಗಳು ಎಷ್ಟೆಷ್ಟು ಮೊತ್ತವನ್ನು ಸಮಾವೇಶಕ್ಕೆ ನೀಡಿವೆ,’ ಎಂಬುದು ಪರಿಶೋಧನೆ ಮಾಡಬೇಕಿದೆ ಎನ್ನುತ್ತಾರೆ ಸಿಂಡಿಕೇಟ್‌ ಸದಸ್ಯರೊಬ್ಬರು.

SUPPORT THE FILE

Latest News

Related Posts