ಬೆಂಗಳೂರು; ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಲು ನಿರ್ಣಯಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆಯನ್ನು ‘ದಿ ಫೈಲ್’ ನವೆಂಬರ್ 6ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು.
‘ದಿ ಫೈಲ್’ ವರದಿ ಮಾಡಿದ ಬೆನ್ನಲ್ಲೇ ವಿಜಯಕರ್ನಾಟಕ ಇಂದಿನ ಆವೃತ್ತಿಯಲ್ಲಿ ‘ನೀಲಗಿರಿ ನಿಷೇಧ ತೆರವಿಗೆ ತರಾತುರಿ’ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸುವ ಮೂಲಕ ನಮ್ಮ ವರದಿಯನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಸಹಭಾಗಿ ಪತ್ರಿಕೋದ್ಯಮವನ್ನು ಮುಂದುವರೆಸಿದೆ. ಪರಿಸರ ವಿರೋಧಿ ಮತ್ತು ಜನ ವಿರೋಧಿ ನಿರ್ಣಯಗಳನ್ನು ಕೈಗೊಳ್ಳುವ ಸರ್ಕಾರಗಳ ವಿರುದ್ಧ ಸಹಭಾಗಿ ಪತ್ರಿಕೋದ್ಯಮ ಇನ್ನಷ್ಟು ವಿಸ್ತರಣೆಯಾಗಬೇಕು ಎಂಬುದೇ ‘ದಿ ಫೈಲ್’ ಆಶಯ.
ನೀಲಗಿರಿ ನಿಷೇಧ ಆದೇಶ ಹಿಂತೆಗೆತಕ್ಕೆ ನಿರ್ಣಯ; ನಿರ್ಬಂಧ ತೆಗೆದರೆ ಮಲೆನಾಡಿಗೆ ಆಘಾತ
ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಹಿಂದಿನ ಕಾಂಗ್ರೆಸ್ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಅಂತರ್ಜಲ ಮಟ್ಟ ಹೆಚ್ಚಿರುವ ಮಲೆನಾಡಿನ ಪ್ರದೇಶಗಳಲ್ಲಿ ಈ ನಿರ್ಬಂಧನೆಯನ್ನು ತೆಗೆದು ಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇಲಾಖೆ ಅಧಿಕಾರಿಗಳಿಗೆ 4 ತಿಂಗಳ ಹಿಂದೆಯೇ ಹೊರಡಿಸಿದ್ದ ಆದೇಶವನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಂದಾಗಿದ್ಧಾರೆ.
ಎಂಪಿಎಂ ಘಟಕದ ಪುನರುಜ್ಜೀವನ ಮತ್ತು ಅನಾನುಕೂಲತೆ ಕುರಿತು 2020ರ ಜುಲೈ 14ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ನಡವಳಿ ಅಧರಿಸಿ ವರದಿ ಮಾಡಿದ್ದ ‘ದಿ ಫೈಲ್’ ಈ ಸಭೆಯಲ್ಲೇ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳುವ ಸಂಬಂಧ ನಡೆದಿದ್ದ ಚರ್ಚೆಯನ್ನು ಬಹಿರಂಗಗೊಳಿಸಿತ್ತು.
‘ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸುವ ಬಗ್ಗೆ ಇರುವ ಆದೇಶವನ್ನು ಹಿಂಪಡೆಯುವ ಬಗ್ಗೆ ಚರ್ಚಿಸಲಾಗಿದೆ. ಹೆಚ್ಚು ಮಳೆಯಾಗುವ ಮತ್ತು ಅಂತರ್ಜಲ ಮಟ್ಟ ಹೆಚ್ಚಿರುವ ಮಲೆನಾಡಿನ ಪ್ರದೇಶಗಳಿಗೆ ಈ ನಿರ್ಬಂಧನೆಯನ್ನು ತೆಗೆದುಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಹೊರಡಿಸಿದ್ದ ಆದೇಶವನ್ನು ಮುನ್ನೆಲೆಗೆ ತಂದಿತ್ತು.
‘ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಬಲವಾದ ಕಾರಣಗಳು ಇಲ್ಲದಿರುವ ಬಗ್ಗೆ ಹಾಗೂ ಕರ್ನಾಟಕವನ್ನು ಹೊರತುಪಡಿಸಿ ದೇಶದ ಇತರೆ ರಾಜ್ಯಗಳಲ್ಲಿ ಎಲ್ಲಿಯೂ ನೀಲಗಿರಿ ಬೆಳೆಸಲು ನಿಷೇಧವಿಲ್ಲ,’ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪವಾಗಿತ್ತು.
‘ನೀಲಗಿರಿ ಬೆಳೆಸುವುದರಿಂದ ಅಂತರ್ಜಲ ಮಟ್ಟಕ್ಕೆ ಯಾವುದೇ ಹಾನಿಯಾಗಿರುವ ಪ್ರಸಂಗಗಳು ಇಲ್ಲದಿರುವುದರಿಂದ ರಾಜ್ಯಾದ್ಯಂತ ನೀಲಗಿರಿ ಬೆಳೆಸಲು ಇರುವ ನಿಷೇಧ ತೆಗೆದುಹಾಕಲು ಒಮ್ಮತದಿಂದ ಅಭಿಪ್ರಾಯ ಕೈಗೊಳ್ಳಲಾಗಿದೆ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬರೆದಿರುವ ಪತ್ರವನ್ನು ಬಹಿರಂಗಗೊಳಿಸಿತ್ತು.