ವಸತಿ ಇಲಾಖೆಯ 6,516 ಕೋಟಿ ಟೆಂಡರ್‌ನಲ್ಲಿ ಅವ್ಯವಹಾರ?; ಭ್ರಷ್ಟರ ‘ಕೊಳಗೇರಿ’ ಮಂಡಳಿ

ಬೆಂಗಳೂರು; ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕಡುಬಡವರಿಗಾಗಿ ನಿರ್ಮಿಸಲಿರುವ 97,134 ಮನೆಗಳ ನಿರ್ಮಾಣ ಕಾಮಗಾರಿಗೆ 2020ರ ಜುಲೈ 24ರಂದು ಕರೆದಿದ್ದ 6,516.17 ಕೋಟಿ ಮೊತ್ತದ ಟೆಂಡರ್‌ನಲ್ಲಿ ಭಾರೀ ಅಕ್ರಮದ ವಾಸನೆ ಹರಡಿದೆ. ಟೆಂಡರ್‌ ಪ್ರೀಮಿಯಂ ಮೊತ್ತವನ್ನು ಕಡಿಮೆಗೊಳಿಸುವ ಸಂಬಂಧ ಎಲ್‌-1 ಬಿಡ್‌ದಾರರ ಜತೆ ಸಂಧಾನ ನಡೆಸದ ಕಾರಣ ನಿರ್ಮಾಣ ವೆಚ್ಚವೂ ಕರ್ನಾಟಕ ಕೊಳಗೇರಿ ಮಂಡಳಿ ಹೆಗಲಿಗೆ ಬಿದ್ದಿದೆ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉದ್ಧೇಶಿತ ವಸತಿ ಸಮುಚ್ಛಯ ನಿರ್ಮಾಣ ಗುತ್ತಿಗೆ ಪಡೆದಿರುವ ಕಂಪನಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ್‌ ಮರಡಿ ಎಂಬುವರು ಸುಲಿಗೆ ಮಾಡಿದ್ದಾರೆ ಎಂಬ ಆರೋಪ ವಿಧಾನಸಭೆ ಅಧಿವೇ‍ಶನದಲ್ಲಿ ಸದ್ದು ಮಾಡಿದ್ದರ ಬೆನ್ನಲ್ಲೇ ವಿ ಸೋಮಣ್ಣ ಅವರು ಸಚಿವರಾಗಿರುವ ವಸತಿ ಇಲಾಖೆಯಲ್ಲಿಯೂ ನಡೆದಿದೆ ಎನ್ನಲಾಗಿರುವ ಟೆಂಡರ್‌ ಅಕ್ರಮ ಮುನ್ನೆಲೆಗೆ ಬಂದಿದೆ.

97,134 ಮನೆಗಳ ನಿರ್ಮಾಣ

ವಸತಿ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 97,134 ಮನೆಗಳ ನಿರ್ಮಾಣಕ್ಕಾಗಿ ಕೈಗೆತ್ತಿಕೊಳ್ಳಲಿರುವ ಕಾಮಗಾರಿಗಳಿಗೆ ಎಸ್‌ಎಲ್‌ಎಂಸಿ ಸಭೆಗಳಲ್ಲಿ ಅನುಮೋದನೆ ಪಡೆಯದೇ ಬದಲಾಯಿಸಿಕೊಂಡು ಟೆಂಡರ್‌ ಕರೆದಿರುವುದು ಅಕ್ರಮ ನಡೆದಿದೆ ಎಂಬುದಕ್ಕೆ ನಿದರ್ಶನ ಒದಗಿಸಿದೆ.

ತರಾತುರಿಯ ಅನುಮೋದನೆಗೆ ಮಂಡಿಸಿದ್ದೇಕೆ?

ಇ-ಪ್ರೊಕ್ಯೂರ್‌ಮೆಂಟ್‌ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್‌ಗೆ ಅನುಮೋದನೆ ಪಡೆದುಕೊಳ್ಳಲು ಎಸ್‌ಎಲ್‌ಎಂಸಿ ಸಭೆಯ ಮುಂದೆ ತರಾತುರಿಯಲ್ಲಿ 2020ರ ಸೆಪ್ಟಂಬರ್‌ 16ರಂದು ಮಂಡಿಸಿದೆ ಎಂದು ತಿಳಿದು ಬಂದಿದೆ. ಕೊಳಗೇರಿ ಮಂಡಳಿಯಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದ್ದ ಗುತ್ತಿಗೆದಾರರೊಂದಿಗೆ ಮಂಡಳಿಯ ಅಧಿಕಾರಿಗಳ ಮಧ್ಯೆ ಶೇ. 08ರಷ್ಟು ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

ಟೆಂಡರ್‌ ಪ್ರೀಮಿಯಂ ಮೊತ್ತ ಕಡಿಮೆಯಾಯಿತೇ?

ಅಲ್ಲದೆ ಟೆಂಡರ್ ಪ್ರಕ್ರಿಯೆಗಳನ್ನು ಅಲ್ಪಾವಧಿಯಲ್ಲಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ಎಸ್‌ಎಲ್‌ಎನ್‌ಎ 2020ರ ಸೆ.10ರಂದು ನಡೆಸಿದ್ದ ಪರಿಶೀಲನೆ ವೇಳೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಎಲ್‌ 1 ಬಿಡ್‌ದಾರರು ನಮೂದಿಸಿದ್ದ ಟೆಂಡರ್‌ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು ಸಂಧಾನ ನಡೆಸಬೇಕು ಎಂದು ಸೂಚಿಸಿತ್ತು. ಹಾಗೆಯೇ ವಾಸ್ತವ ಟೆಂಡರ್‌ ಪ್ರೀಮಿಯಂ ಮೊತ್ತ ಅಥವಾ ಶೇ. 6ರಷ್ಟು ಟೆಂಡರ್‌ ಪ್ರೀಮಿಯಂ ಮೊತ್ತವನ್ನು ನಮೂದಿಸುವ ಬಿಡ್‌ದಾರರಿಗೆ ಟೆಂಡರ್‌ ನೀಡಬೇಕು ಎಂದು ಸಮಿತಿ ನೀಡಿದ್ದ ನಿರ್ದೇಶನ ಪಾಲನೆಯಾಗಿಲ್ಲ ಎಂದು ದಾಖಲೆಯಿಂದ ಗೊತ್ತಾಗಿದೆ.

ಆದರೆ 6 ದಿನಗಳ ಅಂತರದಲ್ಲಿ ಅಂದರೆ ಸೆ. 16ರಂದು ಮುಖ್ಯ ಕಾರ್ಯದರ್ಶಿ ನಡೆಸಿರುವ ಸಭೆಯಲ್ಲಿ ಟೆಂಡರ್‌ ಅನುಮೋದನೆ ಪಡೆದುಕೊಳ್ಳಲು ನಡೆಸಿದ್ದ ಅಧಿಕಾರಿಗಳ ತರಾತುರಿ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಮರು ಟೆಂಡರ್‌ ಕರೆಯಲಿಲ್ಲವೇಕೆ?

ಬೆಂಗಳೂರು ಮತ್ತು ಧಾರವಾಡ ವೃತ್ತದ ವ್ಯಾಪ್ತಿಯಲ್ಲಿರುವ ಕೆ ಆರ್‌ ನಗರ ಮತ್ತು ಕುಷ್ಟಗಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ಕೇವಲ ಒಂದು ಕಂಪನಿ ಮಾತ್ರ ಬಿಡ್‌ನಲ್ಲಿ ಭಾಗವಹಿಸಿದ್ದ ಕಾರಣ ಮರು ಟೆಂಡರ್‌ ಕರೆಬೇಕು ಎಂದು ಎಸ್‌ಎಲ್‌ಎನ್‌ಎ ಸಭೆಯಲ್ಲಿ ಮಂಡಳಿಗೆ ಸೂಚಿಸಿತ್ತು. ಆದರೆ ಮರು ಟೆಂಡರ್‌ ಕರೆಯಲು ಮುಂದಾಗಿಲ್ಲ ಎಂದು ಗೊತ್ತಾಗಿದೆ.

ಹಾಗೆಯೇ ಎಲ್‌ 1 ಬಿಡ್‌ದಾರರು 6 ಪ್ಯಾಕೇಜ್‌ಗಳಿಗೂ ಹೆಚ್ಚು ಮೊತ್ತವನ್ನು ಬಿಡ್‌ನಲ್ಲಿ ನಮೂದಿಸಿದ್ದಾರೆ. ಇದೇ ಎಲ್‌ 1 ಬಿಡ್‌ದಾರರಿಗೆ 83,119 ಮನೆ ನಿರ್ಮಾಣಕ್ಕೆ ಟೆಂಡರ್‌ ನೀಡಲಾಗಿದೆ. ಆದರೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಇದನ್ನು ಮರು ಪರಿಶೀಲನೆಗೆ ಒಳಪಡಿಸಿಲ್ಲ. ಬಿಡ್‌ದಾರರ ಸಾಮರ್ಥ್ಯವನ್ನು ಪ್ರಕರಣವಾರು ಮರು ಪರಿಶೀಲಿಸದಿರುವುದು ಅಕ್ರಮ ನಡೆದಿದೆ ಎಂಬ ಸಂಶಯಗಳನ್ನು ಬಲಪಡಿಸಿದೆ.

ಫಲಾನುಭವಿಗಳ ಪಟ್ಟಿ ಒದಗಿಸಿಲ್ಲ

ಇನ್ನು ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿದಾರರೇ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದರೂ ಫಲಾನುಭವಿಗಳ ಪಟ್ಟಿ, ಅಂದಾಜು ವೆಚ್ಚ ವೈಯಕ್ತಿಕ ಮನೆ ನಕ್ಷೆಯನ್ನೂ ಒದಗಿಸಿಲ್ಲ ಎಂಬ ಅಂಶ ಎಸ್‌ಎಲ್‌ಎನ್‌ಎ ಅವಲೋಕನದಿಂದ ತಿಳಿದು ಬಂದಿದೆ.

30 ದಿನಗಳ ಅವಧಿಗೆ ಅಲ್ಪಾವಧಿ ಟೆಂಡರ್‌ ಕರೆಯಬೇಕಿತ್ತು ಎಂದು ಎಸ್‌ಎಲ್‌ಎನ್‌ಎ ಅಭಿಪ್ರಾಯಪಟ್ಟಿತ್ತು. ಆದರೆ ಮಂಡಳಿ 11 ಮತ್ತು 25 ದಿನಗಳ ಅವಧಿಗೆ ಅಲ್ಪಾವಧಿ ಟೆಂಡರ್‌ ಕರೆದಿತ್ತು. ಈ ಕುರಿತು ಎಸ್‌ಎಲ್‌ಎನ್‌ಎ ಸ್ಪಷ್ಟನೆಯನ್ನೂ ಕೇಳಿತ್ತು ಎಂಬುದು ಗೊತ್ತಾಗಿದೆ.

 

ಬೆಂಗಳೂರಿನ ಕೆ ಆರ್‌ ಪುರಂ (500 ಮನೆಗಳು), ಗೋವಿಂದರಾಜನಗರ (500) ಚಿಟಗುಪ್ಪ (545), ಔರಾದ್‌ (350), ಬೀದರ್‌ (750), ಹುಮನಾಬಾದ್‌ (500), ಚಿಂಚೋಳಿ (1263), ಸೇಡಂ (467), ಆಲಂದ (1314), ಶಹಬಾದ್‌ ( 1473), ಕಲ್ಬುರ್ಗಿ (1447) ಗುರುಮಿಠಕಲ್‌ ( 200) ಶೋರಾಪುರ್‌ (300) ಸಿಂಧನೂರು ಪಟ್ಟಣ (200) ರಾಯಚೂರು (1400) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಪ್ರದೇಶಗಳಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಒಟ್ಟು 97,134 ಮನೆಗಳ ನಿರ್ಮಾಣಕ್ಕೆ ಕೊಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಕೇಂದ್ರ ಸರ್ಕಾರ 1457.01 ಕೋಟಿ, ರಾಜ್ಯ ಸರ್ಕಾರ 1903.34 ಕೋಟಿ, ಇತರೆ 3,155.92 ಕೋಟಿ ರು. ಸೇರಿದಂತೆ ಒಟ್ಟು 6,516.27 ಕೋಟಿಯ ಯೋಜನಾ ವೆಚ್ಚಕ್ಕೆ ಅನುಮೋದನೆ ಪಡೆದುಕೊಳ್ಳಲು ಮುಂದಾಗಿದೆ ಎಂದು ಗೊತ್ತಾಗಿದೆ. ಇದರಲ್ಲಿ ಈಗಾಗಲೇ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆಗೊಂಡು ಆಡಳಿತಾತ್ಮಕ ಅನುಮೋದನೆ ನಿರೀಕ್ಷೆಯಲ್ಲಿರುವ 97,134 ಮನೆಗಳ ಪೈಕಿ 31,353 ಮನೆಗಳ ಸ್ಥಳಗಳನ್ನು ಅವಶ್ಯವಿರುವ ಬೇರೆ ನಗರ/ಪಟ್ಟಣಗಳ ಸ್ಥಳಗಳಿಗೆ ಬದಲಾಯಿಸಿ ಅನುಮೋದಿತ ಯೋಜನಾ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗದಂತೆ ಮನೆಗಳ ನಿರ್ಮಾಣ ಮಾಡುವ ಪರಿಷ್ಕೃತ ಪ್ರಸ್ತಾವನೆಗೆ ಘಟನೋತ್ತರ ಅನುಮೋದನೆ ಪಡೆಯಲು ಸೆ.16ರಂದು ನಡೆದ ಸಭೆ ಮುಂದೆ ಮಂಡಿಲಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ವಿಶೇಷವೆಂದರೆ ಮಂಡಳಿಯು ಈ ಹಿಂದೆ ಅನುಷ್ಠಾನಗೊಳಿಸಲು ರೂಪಿಸಿದ್ದ ಇದೇ ಯೋಜನೆಗೆ ಸಂಬಂಧಿಸಿದಂತೆ 2,500 ಕೋಟಿ ಅವ್ಯವಹಾರ ನಡೆದಿದೆ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಅಂದು ಪ್ರತಿಪಕ್ಷ ಬಿಜೆಪಿ ಕೂಗೆಬ್ಬಿಸಿತ್ತು. ಪ್ರತಿಪಕ್ಷದ ಅಂದಿನ ನಾಯಕರಾಗಿದ್ದ ಜಗದೀಶ್‌ ಶೆಟ್ಟರ್‌(ಈಗ ಕೈಗಾರಿಕೆ ಸಚಿವರು), ಆರ್‌ ಅಶೋಕ್‌( ಹಾಲಿ ಕಂದಾಯ ಸಚಿವ), ವಿಧಾನಪರಿಷತ್‌ನಲ್ಲಿ ಅಂದು ಪ್ರತಿಪಕ್ಷ ನಾಯಕರಾಗಿದ್ದ ಕೆ ಎಸ್‌ ಈಶ್ವರಪ್ಪ( ಹಾಲಿ ಗ್ರಾಮೀಣಾಭಿವೃದ್ಧಿ ಪಂ.ರಾಜ್‌ ಸಚಿವ) ಗದ್ದಲ ಎಬ್ಬಿಸಿದ್ದರಲ್ಲದೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದರು.

ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಕೂಗೆಬ್ಬಿಸಿದ್ದ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಯು, ಈಗ ತನ್ನದೇ ಅಧಿಕಾರದ ಅವಧಿಯಲ್ಲಿ 6,516 ಕೋಟಿ ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾರದರ್ಶಕ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಗುರಿಯಾಗಿರುವುದು ವಿಶೇಷ.

SUPPORT THE FILE

Latest News

Related Posts