ಕೆ ಜೆ ಹಳ್ಳಿ ಗಲಭೆ ವರದಿ; ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಹೆಸರು ಬಳಸಿದ್ದಕ್ಕೆ ಹಿರೇಮಠ್‌ ಕಿಡಿ

ಬೆಂಗಳೂರು; ‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಪೂರ್ವ ಯೋಜಿತ ಮತ್ತು ಸಂಘಟಿತವಾಗಿದ್ದು, ಹಿಂದುಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಸತ್ಯಶೋಧನೆ ವರದಿ ನೀಡಿರುವ ನಿವೃತ್ತ ನ್ಯಾಯಾಧೀಶ ಶ್ರೀಕಾಂತ್‌ ಡಿ. ಬಬಲಾಡಿ ನೇತೃತ್ವದ ಸಮಿತಿಯು 46 ವರ್ಷಗಳ ಹಿಂದೆಯೇ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರು ಸ್ಥಾಪಿಸಿ ನೋಂದಾಯಿಸಿದ್ದ ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಸಂಘಟನೆ ಹೆಸರನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಸಂಘಟನೆ ಹೆಸರನ್ನು ಬಳಸಿಕೊಂಡು ಸತ್ಯಶೋಧನೆ ವರದಿ ಸಲ್ಲಿಸಿರುವುದಕ್ಕೆ ಸಿಎಫ್‌ಡಿಯ ಹಾಲಿ ಅಧ್ಯಕ್ಷ ಎಸ್‌ ಆರ್‌ ಹಿರೇಮಠ್‌ ಅವರು ಬಲವಾಗಿ ಆಕ್ಷೇಪಿಸಿದ್ದಾರೆ. ಅಲ್ಲದೆ ಈ ಕೂಡಲೇ ಸಿಟಿಜನ್ಸ್‌ ಫಾರ್ ಡೆಮಾಕ್ರಸಿ ಹೆಸರನ್ನು ಕೈಬಿಟ್ಟು ತಮ್ಮದೇ ಆದ ಸಂಘಟನೆಯನ್ನು ರೂಪಿಸಿ ಅದರ ಹೆಸರಿನಲ್ಲಿಯೇ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಎಸ್‌ ಆರ್‌ ಹಿರೇಮಠ್‌ ಅವರು ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧದ ಕಾನೂನು ಹೋರಾಟ ಮಾತ್ರ ನಡೆಸಿಲ್ಲ. ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಅಮೇರಿಕಾದಲ್ಲಿ ಹೋರಾಟ ನಡೆಸಿದ್ದರು. ಪರಿಸರ ಹೋರಾಟವೂ ಸೇರಿದಂತೆ ಸಂವಿಧಾನಾತ್ಮಕ ಹಕ್ಕುಗಳ ಕುರಿತಾದ ಹಲವು ಮಹತ್ತರ ಹೋರಾಟ, ಚಳವಳಿ ರೂಪಿಸಿದ್ದರು. ಈ ಎಲ್ಲಾ ಹಿನ್ನೆಲೆಗಳ ಹಿನ್ನೆಲೆಯಲ್ಲಿ ಸಿಎಫ್‌ಡಿಗೆ ಅವರನ್ನು ಅಧ್ಯಕ್ಷರನ್ನಾಗಿಸಲಾಗಿದೆ.

ಸಿಎಫ್‌ಡಿಗಿದೆ ಸುದೀರ್ಘ ಇತಿಹಾಸ

ದೆಹಲಿಯಲ್ಲಿ 1974ರ ಏಪ್ರಿಲ್‌ 13ರಂದು ಸ್ಥಾಪಿತವಾಗಿದ್ದ ಸಿಟಿಜನ್‌ ಫಾರ್‌ ಡೆಮಾಕ್ರಸಿ (ಸಿಎಫ್‌ಡಿ)ಗೆ ಜಯಪ್ರಕಾಶ್‌ ನಾರಾಯಣ್ ಮೊದಲ ಅಧ್ಯಕ್ಷರಾಗಿದ್ದರು. ಅವರ ನಂತರ ಬಾಂಬೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರೂ ಮತ್ತು ಕೇಂದ್ರ ಮಂತ್ರಿಯೂ ಆಗಿದ್ದ ಎಂ ಸಿ ಚಾಗ್ಲಾ, ಪ್ರೊ ವಿ ವಿ ಜಾನ್‌, ನಾಗರಿಕ ಹಕ್ಕುಗಳ ಕಾರ್ಯಕರ್ತ ಹಾಗೂ ಹೆಸರಾಂತ ವಕೀಲರೂ ಆಗಿದ್ದ ವಿ ಎಂ ತಾರ್ಕುಂಡೆ, ಖ್ಯಾತ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರು ಈ ಸಮಿತಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಂಘಟನೆಗೆ ಸದ್ಯ ಕರ್ನಾಟಕದಲ್ಲಿ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟವನ್ನು ಈಗಲೂ ಮುಂದುವರೆಸಿರುವ ಎಸ್‌ ಆರ್‌ ಹಿರೇಮಠ್‌ ಅವರು ಸಿಎಫ್‌ಡಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೇ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಸಂಘಟನೆಯು ಐತಿಹಾಸಿಕ ಪಾತ್ರ ವಹಿಸಿತ್ತು. ಮುಂದಿನ ದಶಕಗಳಲ್ಲಿ ಈ ದಿಸೆಯೊಳಗೆ ಮಹತ್ತರ ಕೆಲಸಗಳನ್ನು ಮುಂದುವರೆಸಿರುವ ಸಿಟಿಜನ್ ಫಾರ್‌ ಡೆಮಾಕ್ರಸಿ ಹೆಸರನ್ನು ನಿವೃತ್ತ ನ್ಯಾಯಾಧೀಶರು, ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಗಂಭೀರವಾದದ್ದು. ತಕ್ಷಣವೇ  ಸಿಟಿಜನ್ಸ್‌ ಫಾರ್ ಡೆಮಾಕ್ರಸಿ ಹೆಸರನ್ನು ಕೈಬಿಟ್ಟು ತಮ್ಮದೇ ಆದ ಸಂಘಟನೆಯನ್ನು ರೂಪಿಸಿ ಅದರ ಹೆಸರಿನಲ್ಲಿಯೇ ವರದಿ ಸಲ್ಲಿಸಬೇಕು. ಈ ಅಧಿಕಾರಿಗಳು ಕೂಡಲೇ ಅಗಿರುವ ಮಹಾ ಪ್ರಮಾದವನ್ನು ಸರಿಪಡಿಸಬೇಕು. ಈ ಬಗ್ಗೆ ಸಂಘಟನೆ ಕೂಡಲೇ ಎಚ್ಚರಿಕೆ ಪತ್ರವನ್ನು ಬರೆಯಲಿದೆ’
ಎಸ್‌ ಆರ್‌ ಹಿರೇಮಠ್‌, ಸಿಎಫ್‌ಡಿ ಅಧ್ಯಕ್ಷ

ಸಂವಿಧಾನ ತಿದ್ದುಪಡಿಗಳ ವಿರುದ್ಧ ಹೋರಾಟ ನಡೆಸಿದ್ದ ಈ ಸಂಘಟನೆಯು ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಬಿಹಾರ, ಒಡಿಶಾ ಮತ್ತು ಪಂಜಾಬ್‌ಗಳಲ್ಲಿ ನಡೆದಿದ್ದ ಎನ್‌ಕೌಂಟರ್‌ಗಳ ವಿರುದ್ಧವೂ ದನಿ ಎತ್ತಿತ್ತು. ಅಲ್ಲದೆ ಈ ಪ್ರಕರಣಗಳ ಕುರಿತು ಸಿಎಫ್‌ಡಿ ಬಿಡುಗಡೆ ಮಾಡಿದ್ದ ವರದಿಗಳನ್ನಾಧರಿಸಿ ಆಂಧ್ರಪ್ರದೇಶ ಸರ್ಕಾರ ನ್ಯಾಯಾಧೀಶ ಭಾರ್ಗವ ಅಧ್ಯಕ್ಷತೆಯಲ್ಲಿ ಆಯೋಗವನ್ನು ನೇಮಿಸಿತ್ತು.

ಅದೇ ರೀತಿ ಚುನಾವಣಾ ಪದ್ಧತಿ, ಕಾರಾಗೃಹಗಳಲ್ಲಿ ಸುಧಾರಣೆಗೂ ಕಾರಣವಾಗಿದ್ದ ಸಿಎಫ್‌ಡಿಯು ಭ್ರಷ್ಟಾಚಾರದ ವಿರುದ್ಧವೂ ಸಮರ ಸಾರಿತ್ತು. ಅಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ಆಕ್ಷೇಪಿಸಿತ್ತು. ಸಾರ್ವಜನಿಕ ಆಡಳಿತದಲ್ಲಿ ಹಲವು ಬದಲಾವಣೆ ಮತ್ತು ಸುಧಾರಣೆಗಳಿಗೆ ಕಾರಣವಾಗಿದ್ದ ಜೆ ಪಿ ಸಂಸ್ಥಾಪಿತ ಸಿಟಿಜನ್‌ ಫಾರ್‌ ಡೆಮಾಕ್ರಸಿ ಸಂಘಟನೆಯ ಹೆಸರನ್ನು ನಿವೃತ್ತ ನ್ಯಾಯಾಧೀಶರು, ಐಎಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಅಧಿಕಾರಿಗಳು ಬಳಸಿಕೊಂಡಿರುವುದು ಮೂಲ ಸಂಘಟನೆಯ ಧೈಯೋದ್ಧೇಶಕ್ಕೆ ಅಪಖ್ಯಾತಿ ತಂದಿದೆ ಎಂದು ಹೇಳಲಾಗುತ್ತಿದೆ.

ಜೆ ಪಿ ಸಂಸ್ಥಾಪಿಸಿದ್ದ ಸಮಿತಿ ಹೆಸರು ಬಳಸಿಕೊಂಡಿದ್ದೇಕೆ?

ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರು 1974ರಲ್ಲಿ ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಈ ಸಂಘಟನೆ ದೇಶದಾದ್ಯಂತ ಈಗಲೂ ಚಟುವಟಿಕೆಗಳನ್ನು ನಡೆಸುತ್ತಿದೆ. ಹಾಗೆಯೇ ಸಿಟಿಜನ್‌ ಫಾರ್‌ ಡೆಮಾಕ್ರಸಿ ಹೆಸರಿನಲ್ಲಿಯೇ 1975ರಲ್ಲೇ ನೋಂದಣಿ (ನೋಂದಣಿ ಸಂಖ್ಯೆ 7567) ಮಾಡಿಸಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಅಧ್ಯಕ್ಷರಾಗಿರುವ ಸತ್ಯಶೋಧನೆ ಸಮಿತಿಯು ಜೆ ಪಿ ಸಂಸ್ಥಾಪಿತ ಮೂಲ ಸಂಘಟನೆಯ ಹೆಸರನ್ನು ಬಳಸುವ ಮೂಲಕ ವಿವಾದಕ್ಕೀಡಾಗಿದೆ. ಮೂಲ ಸಂಘಟನೆ ಹಸರು ಬಳಸಿಕೊಂಡು ಚ್ಯುತಿ ತಂದಂತಾಗಿದೆ.

ನಾಗರಿಕ ಹಕ್ಕುಗಳು, ಸಂವಿಧಾನತ್ಮಾಕ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು, ದೀನ ದಲಿತ ಮತ್ತು ದಮನಿತರ ಪರವಾಗಿ ಹೋರಾಟ ನಡೆಸಿರುವ ಧೀಮಂತ ಇತಿಹಾಸವಿದೆ. ಅಂತಹ ಹೆಸರುವಾಸಿಯಾದ ಸಂಸ್ಥೆಯ ಹೆಸರನ್ನೇ ಇಟ್ಟುಕೊಳ್ಳುವ ಮೂಲಕ ಮೂಲ ಸಂಘಟನೆ ಹೆಸರನ್ನೇ ದಾರಿತಪ್ಪಿಸುವಂತಿದೆ.

ಸಿಟಿಜನ್‌ ಫಾರ್‌ ಡೆಮಾಕ್ರಸಿ ಸಂಘಟನೆಯು ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್‌ ಡಿ. ಬಬಲಾಡಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್, ನಿವೃತ್ತ ಐಎಫ್‌ಎಸ್ ಅಧಿಕಾರಿಗಳಾದ ಡಾ. ರಾಜು, ಡಾ. ಪ್ರಕಾಶ್‌, ನಿವೃತ್ತ ಡಿಜಿಪಿ ಎಂ.ಎನ್‌.ಕೃಷ್ಣಮೂರ್ತಿ, ಪತ್ರಕರ್ತ ಆರ್‌.ಕೆ.ಮಟ್ಟೂ, ಸಂತೋಷ್‌ ತಮ್ಮಯ್ಯ ಮುಂತಾದವರು ಇದ್ದಾರೆ.

ಸಮಿತಿಯಲ್ಲಿದ್ದ ಪತ್ರಕರ್ತ ಸಂತೋಷ್‌ ತಮ್ಮಯ್ಯ ಅವರು ಹಿಂದಿನ ಕಾಂಗ್ರೆಸ್‌ ಸರ್ಕಾರ ನಡೆಸಿದ್ದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿದ್ದರಲ್ಲದೆ ಧರ್ಮ ನಿಂದನೆ ಎಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಗೋಣಿಕೊಪ್ಪದಲ್ಲಿ 2018ರ ನವೆಂಬರ್‌ 13ರಂದು ಬಂಧನಕ್ಕೊಳಗಾಗಿದ್ದರು. ಈ ಸಂಬಂಧ ಪೊನ್ನಂಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

SUPPORT THE FILE

Latest News

Related Posts