ಬೆಂಗಳೂರು; ದರ ಗುತ್ತಿಗೆ ಒಪ್ಪಂದ ಉಲ್ಲಂಘನೆ ಮತ್ತು ಗುಣಮಟ್ಟವಲ್ಲದ ಸ್ಯಾನಿಟೈಸರ್ ಸರಬರಾಜು ಮಾಡಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ನ್ನು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ಸೊಸೈಟಿಯು ಕಡೆಗೂ ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶಿಸಿದೆ.
ಸ್ಯಾನಿಟೈಸರ್ ಸೇರಿದಂತೆ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳ ಕುರಿತು ಕರ್ನಾಟಕ ರಾಷ್ಟ್ರಸಮಿತಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಅಲ್ಲದೆ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಕೂಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ವೇರ್‌ಹೌಸಿಂಗ್ ಸೊಸೈಟಿಯು ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ ಹೊರಡಿಸಿರುವ ಆದೇಶ ಮಹತ್ವ ಪಡೆದುಕೊಂಡಿದೆ. ಈ ಮೂಲಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ರಕ್ಷಣೆ ಪಡೆದುಕೊಳ್ಳುವ ಉದ್ದೇಶವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.
5 ವರ್ಷ ಕಪ್ಪುಪಟ್ಟಿ
ಕೋವಿಡ್-19ರ ನಿರ್ವಹಣೆಗಾಗಿ ಎಸ್ ಎಂ ಫಾರ್ಮಾಸ್ಯುಟಿಕಲ್ಸ್ ರಾಮನಗರ ಮತ್ತು ಕಲ್ಬುರ್ಗಿ ಜಿಲ್ಲೆಗೆ ಸರಬರಾಜು ಮಾಡಿದ್ದ ಸ್ಯಾನಿಟೈಸರ್ ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರ ವರದಿ ನೀಡಿತ್ತು. ಈ ವರದಿ ಸಲ್ಲಿಕೆಯಾದ 2 ತಿಂಗಳ ನಂತರ 2025ರ ಜುಲೈ 30ರವರೆಗೆ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿ 2020ರ ಜುಲೈ 31ರಂದು ಸೊಸೈಟಿಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರು ಅದೇಶ ಹೊರಡಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕೆಡಿಎಲ್‌ಡಬ್ಲ್ಯೂಎಸ್ ಒಟ್ಟು 20.40 ಕೋಟಿ ಮೊತ್ತದಲ್ಲಿ ಸ್ಯಾನಿಟೈಸರ್ ಖರೀದಿಸಿತ್ತು. ಈ ಪೈಕಿ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ಗೆ ಅಂದಾಜು 5.00 ಕೋಟಿ ರು.ಮೊತ್ತದಲ್ಲಿ 5,000 ಎಂ ಎಲ್ (5 ಲೀಟರ್ ಕ್ಯಾನ್) ಸ್ಯಾನಿಟೈಸರ್‌ನ್ನು ಖರೀದಿಸಿತ್ತು. ಈ ಕಂಪನಿ ಈಗಾಗಲೇ 47,000 ಬಾಟಲ್‌ಗಳನ್ನು ಸರಬರಾಜು ಮಾಡಿದೆ ಎಂದು ಹೇಳಲಾಗಿದೆ.
ದರ ಗುತ್ತಿಗೆ ಒಪ್ಪಂದ ಉಲ್ಲಂಘನೆ
ಕೆಡಿಎಲ್‍ಡಬ್ಲಯೂಎಸ್ ಕರೆದಿದ್ದ ಟೆಂಡರ್‌ನಲ್ಲಿ ಮೂಲತಃ ಸ್ಯಾನಿಟೈಸರ್ ಉತ್ಪಾದಕರಾದ ಎಸ್ ಎಂ ಫಾರ್ಮಾಸ್ಯುಟಿಕಲ್ಸ್ (ಇಂಡೆಂಟ್ ನಂಬರ್ 628) 500 ಎಂಎಲ್‍ಗೆ 97.44 ರು. (ಜಿಎಸ್‍ಟಿ ಸೇರಿ) ನಮೂದಿಸಿ ಎಲ್ 1 ಆಗಿತ್ತು. ಖರೀದಿ ಆದೇಶ ಪಡೆದಿದ್ದ ಈ ಕಂಪನಿ ಸ್ಯಾನಿಟೈಸರ್‌ನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ ಟೆಂಡರ್ ಷರತ್ತಿನ ಪ್ರಕಾರ ಎಲ್ 2 ರಮಣ್ ಅಂಡ್ ವೇಲ್ ಕಂಪನಿ (99 ರು.ಗೆ ಕೋಟ್ ಮಾಡಿತ್ತು) ಗೆ ಖರೀದಿ ಆದೇಶ ಕೊಡಬೇಕಿತ್ತು.
ಆದರೂ ಅಧಿಕಾರಿಗಳು ಪುನಃ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ಗೆ 500 ಎಂಎಲ್‍ಗೆ ದರ ಹೆಚ್ಚಳ ಮಾಡಿ 108 ರು. ಗೆ ಖರೀದಿ ಆದೇಶ ನೀಡಿದ್ದರು. ಆದರೆ ಕಂಪನಿ ಈ ದರದಲ್ಲೂ ಸರಬರಾಜು ಮಾಡಿರಲಿಲ್ಲ. ಪುನಃ 138 ರು.ಗೆ ಆದೇಶ ನೀಡಿದ್ದರೂ ಸರಬರಾಜು ಮಾಡಿರಲಿಲ್ಲ. ಕಡೆಗೆ 250 ರು.ಗೆ ಖರೀದಿ ಆದೇಶ ಹೊರಬೀಳುತ್ತಿದ್ದಂತೆ ಸ್ಯಾನಿಟೈಸರ್ ಸರಬರಾಜು ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ಇನ್ನು, ಈ ಕಂಪನಿ ಜತೆ ಮಾಡಿಕೊಂಡಿದ್ದ ದರ ಗುತ್ತಿಗೆ ಒಪ್ಪಂದ 15 ತಿಂಗಳವರೆಗೆ ಚಾಲ್ತಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿತ್ತು. ಕಪ್ಪು ಪಟ್ಟಿಗೆ ಸೇರಿಸಬೇಕಿದ್ದ ಸೊಸೈಟಿಯು ಇದೇ ಕಂಪನಿಯಿಂದ ದುಬಾರಿ ದರದಲ್ಲಿ ಸ್ಯಾನಿಟೈಸರ್‌ನ್ನು ಖರೀದಿಸಿತ್ತು.
152.56 ರು. ವ್ಯತ್ಯಾಸ
ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ಗೆ 500 ಎಂಎಲ್‍ಗೆ ದರ ಹೆಚ್ಚಳ ಮಾಡಿ 108 ರು. ಗೆ ಖರೀದಿ ಆದೇಶ ನೀಡಿತ್ತು. ಆದರೆ ಕಂಪನಿ ಈ ದರದಲ್ಲೂ ಸರಬರಾಜು ಮಾಡಿರಲಿಲ್ಲ. ಪುನಃ 138 ರು.ಗೆ ಆದೇಶ ಪಡೆದಿತ್ತು. ಆಗಲೂ ಸರಬರಾಜು ಮಾಡಿರಲಿಲ್ಲ. ಕಡೆಗೆ 250 ರು.ಗೆ ಖರೀದಿ ಆದೇಶ ಹೊರಬೀಳುತ್ತಿದ್ದಂತೆ ಸ್ಯಾನಿಟೈಸರ್ ಸರಬರಾಜು ಮಾಡಿತ್ತು. ದರ ಗುತ್ತಿಗೆ ಒಪ್ಪಂದದಲ್ಲಿ ನಮೂದಿಸಿದ್ದ ದರಕ್ಕೂ ಮತ್ತು ಹೆಚ್ಚುವರಿ ದರ ನೀಡಿದ್ದರ ಮಧ್ಯೆ ಒಟ್ಟು 152.56 ರು. ವ್ಯತ್ಯಾಸವಿರುವುದು ಕಂಡು ಬಂದಿತ್ತು.
ಕಳಪೆ ಸ್ಯಾನಿಟೈಸರ್
ಅಲ್ಲದೆ, ರಾಮನಗರ ಮತ್ತು ಕಲ್ಬುರ್ಗಿಗೆ ಇದೇ ಕಂಪನಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್ ಗುಣಮಟ್ಟದಿಂದ ಕೂಡಿಲ್ಲ ಎಂಬುದು ಔಷಧ ನಿಯಂತ್ರಣ ಪ್ರಾಧಿಕಾರದ ಪರೀಕ್ಷೆಯಿಂದಲೂ ದೃಢಪಟ್ಟಿತ್ತು. ಈ ಕುರಿತು ಔಷಧ ನಿಯಂತ್ರಣ ಪ್ರಾಧಿಕಾರದ ಸಹಾಯಕ ನಿಯಂತ್ರಕರು 2020ರ ಜೂನ್ 16ರಂದು ವರದಿ ನೀಡಿದ್ದರು.
ವರದಿಯಲ್ಲೇನಿತ್ತು?
ಸ್ಯಾನಿಟೈಸರ್‌ನಲ್ಲಿ 2 ಪ್ರೊಫಾನಲ್ 45 ಗ್ರಾಂ ಇರಬೇಕು. ಅದಕ್ಕಿಂತ ಹೆಚ್ಚಿರಬಾರದು. ‘ಎಸ್ ಎಂ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಮಾಡಿರುವ ಸ್ಯಾನಿಟೈಸರ್‌ನಲ್ಲಿ 56.20 ಗ್ರಾಂ 2 ಪ್ರೊಫನಾಲ್ ಇದೆ. ಅಲ್ಲದೆ 1 ಪ್ರೊಫನಾಲ್ 30 ಗ್ರಾಂ ಇರಬೇಕು. ಆದರೆ 39.71 ಗ್ರಾಂ ಇದೆ. ಮೆಕ್ಟ್ರೋನಿಯಂ, ಈಥೈಲ್ ಸಲ್ಫೈಡ್ ಪ್ರಮಾಣ 20 ಗ್ರಾಂ ಇರಬೇಕು. ಆದರೆ ಎಸ್ ಎಂ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಮಾಡಿರುವ ಸ್ಯಾನಿಟೈಸರ್‌ನಲ್ಲಿ 0.194 ಇದೆ,’ ಎಂದು ಪ್ರಯೋಗಾಲಯ ವಿಶ್ಲೇಷಕರಾದ ಎನ್ ಎಂ ವೀಣಾ ಅವರು ಹೊರಗೆಡವಿದ್ದರು.
ಹಾಗೆಯೇ ನಿರ್ದಿಷ್ಟ ಅನುಪಾತದ ಪ್ರಕಾರ ರಾಸಾಯನಿಕವೂ ಅದರಲ್ಲಿ ಇರಲಿಲ್ಲ ಎಂದು ಔಷಧ ನಿಯಂತ್ರಣ ಪ್ರಾಧಿಕಾರದ ಸಹಾಯಕ ನಿಯಂತ್ರಕರು ವರದಿ ನೀಡಿದ್ದರು. ನಿಗದಿಪಡಿಸಿದ ಫಾರ್ಮುಲಾ ಪ್ರಕಾರ ಇಲ್ಲದ ಈ ಸ್ಯಾನಿಟೈಸರ್‌ನ್ನು ಬಳಸಿದರೆ ಚರ್ಮಕ್ಕೆ ಹಾನಿಯುಂಟು ಮಾಡಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದರು.
ಕನಿಷ್ಠ 2 ಬ್ಯಾಚ್‌ನಲ್ಲಿ ಕಳಪೆ ಎಂದು ಕಂಡು ಬಂದರೆ ಟೆಂಡರ್ ಷರತ್ತುಗಳ ಪ್ರಕಾರ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸದೆಯೇ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯ ಆರೋಪಕ್ಕೆ ಗುರಿಯಾಗಿದ್ದರು. ಆದರೂ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಇಲಾಖೆಯ ಅಧಿಕಾರಿಗಳನ್ನು ಸಮರ್ಥಿಸಿಕೊಂಡಿದ್ದರು.
ಸ್ಯಾನಿಟೈಸರ್ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ 2020ರ ಮೇ 2, ಜೂನ್ 20, ಜುಲೈ 27ರಂದು ‘ದಿ ಫೈಲ್’ ಸರಣಿ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.