ಆಕ್ಸಿಜನ್‌ ಉಪಕರಣಕ್ಕೂ ದುಪ್ಪಟ್ಟು ದರ; ಕೇರಳದಲ್ಲಿ 2.86 ಲಕ್ಷ, ಕರ್ನಾಟಕದಲ್ಲಿ 4.26 ಲಕ್ಷ

ಬೆಂಗಳೂರು; ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಳವೆ ಮೂಲಕ ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಸಾಧನಗಳನ್ನೂ (ಎಚ್‌ಎಫ್‌ಎನ್‌ಸಿ ಥೆರಪಿ ಡಿವೈಸ್‌) ದುಪ್ಪಟ್ಟು ದರದಲ್ಲಿ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟ ಮಾಡಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.


ಕೋವಿಡ್-19ರ ಹಿನ್ನೆಲೆಯಲ್ಲಿ ಖರೀದಿಸಿರುವ ವೈದ್ಯಕೀಯ ಪರಿಕರಗಳು ಮತ್ತು ಮಾಡಿರುವ ವೆಚ್ಚಕ್ಕೆ ಸಂಬಂಧಿಸಿದಂತೆ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಈ ಪ್ರಕರಣ ಹೊರಬಿದ್ದಿದೆ. ಉಪಕರಣಗಳ ಖರೀದಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಗುರುತರ ಆರೋಪಗಳನ್ನು ಈ ಪ್ರಕರಣ ಮತ್ತಷ್ಟು ಬಲಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.


ಕೋವಿಡ್‌-19ರ ತುರ್ತು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಸರಬರಾಜುದಾರರು ಸರ್ಕಾರವನ್ನೂ ವಂಚಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.


ಕೋವಿಡ್‌-19ರ ಸಂದರ್ಭದಲ್ಲೇ ಎಚ್‌ಎಫ್‌ಎನ್‌ಸಿ ಥೆರಪಿ ಡಿವೈಸ್‌ಗಳನ್ನು ಕರ್ನಾಟಕ ಮತ್ತು ಕೇರಳ ಸರ್ಕಾರ ಖರೀದಿಸಿದೆ. ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್ಸ್‌ ಮತ್ತು ವೇರ್ ಹೌಸಿಂಗ್‌ ಸೊಸೈಟಿ ಖರೀದಿಸಿರುವ 300 ಡಿವೈಸ್‌ಗಳ ದರಕ್ಕೂ ಮತ್ತು ಕೇರಳ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ ಖರೀದಿಸಿರುವ 15 ಡಿವೈಎಸ್‌ಗಳ ದರದ ಮಧ್ಯೆ ಸಾಕಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ.

ಅಲ್ಲದೆ ಈ ಪ್ರಕರಣವು ಹಲವು ಆಯಾಮಗಳನ್ನೊಳಗೊಂಡಿವೆ. ಈ ಉಪಕರಣಗಳ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳಿಗೆ ನಿಗದಿಪಡಿಸಿದ್ದ ವಾರ್ಷಿಕ ವಹಿವಾಟಿನ ಮೊತ್ತವು ಆ ನಂತರ ನಡೆದಿರುವ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತಿದ್ದುಪಡಿಯಾಗಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಪೂರ್ವ ನಿರ್ಧರಿತವಾದಂತಿದೆ ಎಂಬುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.


ಈ ಪ್ರಕರಣದಲ್ಲಿ ಉಪಕರಣಗಳನ್ನು ಸರಬರಾಜು ಮಾಡಿರುವ ಬೆಂಗಳೂರು ಮೂಲದ ಶ್ರೀ ವೆಂಕಟೇಶ್ವರ ಎಂಟರ್‌ಪ್ರೈಸೆಸ್‌ ಮತ್ತು ಹೋಂಮೆಡಿಕ್ಸ್‌ ಕಂಪನಿಯು ಟೆಂಡರ್‌ ಕ್ಲಾಸ್‌ 3.1.7 ಪ್ರಕಾರ ಬಿಲ್‌ ಆಫ್‌ ಎಂಟ್ರಿಯನ್ನು ಇಲಾಖೆಗೆ ನೀಡಿಲ್ಲ ಮತ್ತು ಅಧಿಕಾರಿಗಳೂ ಇದನ್ನು ಕೇಳಿಲ್ಲ ಎಂಬ ಬಲವಾದ ಆರೋಪಗಳೂ ಕೇಳಿ ಬಂದಿವೆ. ಕಂಪನಿಯ ಮೂಲ ದರ ಮತ್ತು ಶೇ. 20ರಷ್ಟು ಲಾಭಾಂಶ ಪಡೆದೂ ಉಪಕರಣವೊಂದನ್ನು ಹೆಚ್ಚುವರಿ ದರದಲ್ಲಿ ಮಾರಾಟ ಮಾಡಿರುವ ಸರಬರಾಜುದಾರರಿಂದಲೂ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವುಂಟಾಗಿದೆ ಎಂದು ಗೊತ್ತಾಗಿದೆ.

 

4.17 ಕೋಟಿ ರು. ಹೆಚ್ಚುವರಿ ದರ ?


ಅಮೇರಿಕ ಮೂಲದ ಫಿಶರ್‌ ಅಂಡ್‌ ಪೇಕೇಲ್‌ ಹೆಲ್ತ್‌ ಕೇರ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ನಿಂದ ಒಟ್ಟು 15 ಎಚ್‌ಎಫ್‌ಎನ್‌ಸಿ ಥೆರಪಿ ಡಿವೈಸ್‌ಗಳನ್ನು ಕೇರಳ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌, ಉಪಕರಣವೊಂದಕ್ಕೆ 2,86,961 ರು. 43.00 ಲಕ್ಷ ರು. ದರದಲ್ಲಿ (15 ಉಪ ಸಲಕರಣೆ-ತೆರಿಗೆ ಸೇರಿ) ಖರೀದಿಸಿದೆ.

ಸರಬರಾಜುದಾರನಿಂದ 6.00 ಕೋಟಿ ನಷ್ಟ?


ಚೀನಾ ಮೂಲದ ಎಚ್‌ಎಫ್‌ಎನ್‌ಸಿ ಥೆರಪಿ ಡಿವೈಸ್‌ಗಳನ್ನು ಸರಬರಾಜು ಮಾಡಿದ್ದಾರೆ ಎಂದು ಹೇಳಲಾಗಿರುವ ಬೆಂಗಳೂರು ಮೂಲದ ಶ್ರೀ ವೆಂಕಟೇಶ್ವರ ಎಂಟರ್‌ಪ್ರೈಸೆಸ್‌ ಮತ್ತು ಹೋಂಮೆಡಿಕ್ಸ್‌ನಿಂದಲೇ ಸರ್ಕಾರಕ್ಕೆ ಅಂದಾಜು 6.00 ಕೋಟಿ ರು. ನಷ್ಟವುಂಟಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಲಭ್ಯವಿರುವ ದಾಖಲೆ ಪ್ರಕಾರ ಈ ಉಪಕರಣಕ್ಕೆ 1,46,000 ರು. ಮೂಲ ದರವಿದೆ. ಸಾಗಾಣಿಕೆ ಮತ್ತು ತೆರಿಗೆ ವೆಚ್ಚ ಒಂದು ಯೂನಿಟ್‌ಗೆ ಅಂದಾಜು 30,000 ರು. ಸೇರಿದಂತೆ ಒಟ್ಟು 1,76,300 ರು.ಆಗಲಿದೆ.

ಇದಕ್ಕೆ ಉಪ ಸಲಕರಣೆ ದರ ಅಂದಾಜು 12,000 ರು. ಸೇರಿ ಒಟ್ಟು 1,88,300 ಆಗಲಿದೆ. ಸರಬರಾಜುದಾರನಿಗೆ ಲಾಭಾಂಶ ಶೇ.20ರಷ್ಟು ಎಂದಿಟ್ಟುಕೊಂಡರೆ ಉಪಕರಣವೊಂದಕ್ಕೆ 2,25,960 ರು. ಆಗಲಿದೆ. ಆದರೆ ಸರಬರಾಜುದಾರರು ಶೇ.20ರಷ್ಟು ಲಾಭಾಂಶವನ್ನಿಟ್ಟುಕೊಂಡೂ ಉಪಕರಣವೊಂದನ್ನು 4.26 ಲಕ್ಷ ರು. ಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಉಪಕರಣವೊಂದಕ್ಕೆ 2,04,440 ರು. ಹೆಚ್ಚುವರಿ ದರದಂತೆ 300 ಉಪಕರಣಗಳಿಂದ ಒಟ್ಟು 6.00 ಕೋಟಿ ರು. ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಒಂದು ವೇಳೆ ಈ ಉಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದರೂ ಟೆಂಡರ್‌ ಕ್ಲಾಸ್‌ ಪ್ರಕಾರ ಕಂಪನಿಯ ಮೂಲ ದರ ಮತ್ತು ಶೇ 20ರ ಲಾಭಾಂಶದ ಹೊರತಾಗಿಯೂ ಪಡೆದಿರುವ ಹೆಚ್ಚುವರಿ ದರವನ್ನು ಸರಬರಾಜುದಾರನಿಂದಲೇ ವಸೂಲು ಮಾಡಲು ಅವಕಾಶಗಳಿವೆ ಎಂದು ಹೇಳಲಾಗಿದೆ.


ಟೆಂಡರ್‌ನಲ್ಲಿ ಗೋಲ್ಮಾಲ್‌?


300 ಎಚ್‌ಎಫ್‌ಎನ್‌ಸಿ ಥೆರಪಿ ಡಿವೈಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳಿಗೆ ವಾರ್ಷಿಕ ವಹಿವಾಟು 20,40,00,000.00 ರು. ಇರಬೇಕು ಎಂದು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ 2020ರ ಮೇ 22ರಂದು ನಿಗದಿಪಡಿಸಿತ್ತು. ಆದರೆ ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳ ವಾರ್ಷಿಕ ವಹಿವಾಟು 10.00 ಕೋಟಿ ರು.ಇರಬೇಕು ಎಂದು ಕೆಎಸ್‌ಡಿಡಬ್ಲ್ಯೂಎಸ್‌ಯ 34ನೇ ಆಡಳಿತ ಮಂಡಳಿ ಸಭೆಯಲ್ಲೇ ನಿಗದಿಯಾಗಿತ್ತು ಎಂಬ ಅಂಶ 2020ರ ಮೇ 29ರಂದು ಹೊರಡಿಸಿದ್ದ ತಿದ್ದುಪಡಿ ಆದೇಶದಿಂದ ತಿಳಿದು ಬಂದಿದೆ.

ಹೀಗಿದ್ದರೂ ನಿರ್ದಿಷ್ಟ ಕಂಪನಿಗಳಿಗಷ್ಟೇ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ವಾರ್ಷಿಕ ವಹಿವಾಟಿನ ಮೊತ್ತವನ್ನು 20.00 ಕೋಟಿ ರು. ಎಂದು ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 2020ರ ಮೇ ತಿಂಗಳಲ್ಲಿ ಸಭೆ ನಡೆದಿದೆ ಎಂದು ಹೇಳಲಾಗಿದ್ದರೂ ಯಾವ ದಿನಾಂಕದಂದು ಸಭೆ ನಡೆದಿದೆ ಎಂಬುದು ನಮೂದಾಗಿಲ್ಲ. ಅಲ್ಲದೆ ನಡವಳಿಗೆ ಮುಖ್ಯ ಪರಿವೀಕ್ಷಕರಾದಿಯಾಗಿ ಯಾರೊಬ್ಬರ ಸಹಿಯೂ ಇಲ್ಲದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.


ಇನ್ನು, 20.00 ಕೋಟಿ ರು. ವಾರ್ಷಿಕ ವಹಿವಾಟು ನಿಗದಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರಿ-ಬಿಡ್ಡಿಂಗ್‌ ಸಭೆಯಲ್ಲಿ ಹೆಸರಿಗಷ್ಟೇ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು ಎಂದು ಹೇಳಲಾಗಿದೆ. ಆದರೆ ಟೆಂಡರ್‌ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕಕ್ಕೆ ಒಂದು ದಿನದ ಮೊದಲು ವಾರ್ಷಿಕ ವಹಿವಾಟಿನ ಮೊತ್ತವನ್ನು 10.00 ಕೋಟಿ ರು. ಎಂದು ತಿದ್ದುಪಡಿ ಮಾಡಿರುವುದು ಮತ್ತು ಉಳಿದ ಕಂಪನಿಗಳಿಗೆ ಯಾವುದೇ ಕಾಲಾವಕಾಶ ನೀಡದಿರುವುದು ಅಕ್ರಮ ನಡೆದಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ.

‘ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಕೋವಿಡ್‌-19 ನಿಯಂತ್ರಣಕ್ಕೆ ಬಹುತೇಕ ಇದೇ ನಿರ್ದಿಷ್ಟತೆಯುಳ್ಳ ಉಪಕರಣಗಳನ್ನು ಖರೀದಿಸಿರುತ್ತವೆ. ಹಾಗಾಗಿ ಈಗ ನಮ್ಮ ರಾಜ್ಯದಲ್ಲಿ ಖರೀದಿಸಲ್ಪಟ್ಟ ಸಾಮಾಗ್ರಿಗಳಿಗೆ ಕೊಟ್ಟಿರುವ ಬೆಲೆಯನ್ನು ಇನ್ನಿತರೆ ರಾಜ್ಯಗಳೂ ಅದೇ ಉಪಕರಣಗಳಿಗೆ ಪಾವತಿಸಿರುವ ಬೆಲೆಯನ್ನು ಹೋಲಿಕೆ ತುಲನೆ ಮಾಡಬೇಕಿದೆ. ಗಣನೀಯ ವ್ಯತ್ಯಾಸ ಕಂಡು ಬಂದಲ್ಲಿ ಅಲ್ಲಿ ಭ್ರಷ್ಟಾಚಾರ , ಅಕ್ರಮ ನಡೆದಿದೆ ಎನ್ನುವುದು ಅದೊಂದರಿಂದಲೇ ಸಾಬೀತಾಗುತ್ತದೆ. ಹಾಗೆಯೇ ಟೆಂಡರ್ ಪ್ರಕ್ರಿಯೆಯಲ್ಲಿ ಬೇಕಾದವರಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೆ ಕೊನೆ ನಿಮಿಷದಲ್ಲಿ ಸೃಷ್ಟಿಸುವ ದಾಖಲೆಗಳು ಅಥವಾ ನಿಯಮಗಳಿಂದ ಲಾಭ ಮಾಡಿಕೊಂಡಿರುವ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.

SUPPORT THE FILE

Latest News

Related Posts