ಬೆಂಗಳೂರು; ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಹಾಗೂ ಅಜೀವ ಟ್ರಸ್ಟಿಯ ನೇಮಕಗೊಳಿಸುವ ಪ್ರಸ್ತಾವನೆಗೆ ಅನುಮೋದಿಸಿರುವ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನು ಲೋಕಾಯುಕ್ತ ಸಂಸ್ಥೆಯು ಕಳೆದ 2 ವರ್ಷದ ಹಿಂದೆಯೇ ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಈ ದೂರನ್ನು ವಿಚಾರಣೆ ನಡೆಸಿದ್ದ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು (11) ನೀಡಿದ್ದ ಅಂತಿಮ ಪರಿಶೀಲನಾ ಟಿಪ್ಪಣಿಯನ್ನು ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಅನುಮೋದಿಸಿದ್ದಾರೆ.
ಬಿಎಂಎಸ್ ಎಜುಕೇಷನಲ್ ಟ್ರಸ್ಟ್ಗೆ ಸಂಬಂಧಿಸಿದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೂ ಸಹ ಎಚ್ ಡಿ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿತ್ತು. ‘ಬಿಜೆಪಿ ನಾಯಕರನ್ನು ತಬ್ಬಾಡುತ್ತಿರುವ ಕುಮಾರಸ್ವಾಮಿ ಅವರು ಅದೇ ಬಿಜೆಪಿ ನಾಯಕರ ಬಗ್ಗೆ ಈ ಹಿಂದೆ ಆಡಿದ ಮಾತುಗಳು, ಮಾಡಿದ ಆರೋಪ ಒಂದೇ ಎರಡೇ, ಮಾಜಿ ಸಚಿವ ಅಶ್ವತ್ ನಾರಾಯಣ ಅವರು ಬಿಎಂಎಸ್ ಇಂಜಿನಿಯರಿಂಗ್ ಟ್ರಸ್ಟ್ ನಲ್ಲಿ ತಿಂದು ತೇಗಿದ್ದಾರೆ ಎಂದಿದ್ದು ಈಗ ಅವರ ಜೊತೆ ಪಾಲುದಾರಿಕೆಯಲ್ಲಿ ಮಗ್ನರಾಗಿದ್ದಾರೆ,’ ಎಂದು ಟ್ವೀಟ್ ಮಾಡಿತ್ತು.

ಈ ಬೆಳವಣಿಗೆಗಳ ನಡುವೆಯೇ ಇದೇ ಟ್ರಸ್ಟ್ ಡೀಡ್ ತಿದ್ದುಪಡಿ ಹಿಂದೆ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ಸಂಸ್ಥೆಯು ಮುಕ್ತಾಯಗೊಳಿಸಿರುವುದು ಮುನ್ನೆಲೆಗೆ ಬಂದಿದೆ.
ಲೋಕಾಯುಕ್ತ ಸಂಸ್ಥೆಯು ಪ್ರಾಥಮಿಕ ಹಂತದಲ್ಲೇ ದೂರನ್ನು ಮುಕ್ತಾಯಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬಿಎಂಎಸ್ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆಯೇ ಕಾನೂನುಬಾಹಿರವಾಗಿದೆ ಎಂದು ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ತಿರಸ್ಕರಿಸಿದ್ದರು. ಆ ನಂತರ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಇದೇ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.
ಈ ಅನುಮೋದನೆ ಹಿಂದೆ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿಯಾಗಿದ್ದ ಬಿ ಎಸ್ ಮಲ್ಲಿಕಾರ್ಜುನಯ್ಯ ಅವರು ಲೋಕಾಯುಕ್ತಕ್ಕೆ ದಾಖಲೆ ಸಹಿತ 2022ರಲ್ಲೇ ದೂರು ಸಲ್ಲಿಸಿದ್ದರು.
ಈ ದೂರಿನಲ್ಲಿ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಡಾ ಸಿ ಎನ್ ಅಶ್ವಥ್ ನಾರಾಯಣ್, ಹಾಲಿ ಲೋಕಸಭೆ ಸದಸ್ಯ ಜಿ ಕುಮಾರ್ ನಾಯಕ್, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಸೇರಿದಂತೆ ಒಟ್ಟು 6 ಮಂದಿ ಅಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಿದ್ದರು.

ಈ ದೂರನ್ನು ಸತತ 2 ವರ್ಷಗಳ ಕಾಲ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು 2024ರಲ್ಲಿ ಮುಕ್ತಾಯಗೊಳಿಸಿರುವುದು ಗೊತ್ತಾಗಿದೆ.

ಈ ದೂರಿನ ಕುರಿತು ಅಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರಿಂದ ಸ್ಪಷ್ಟನೆ ಪಡೆದಿತ್ತು. ಈ ಸ್ಪಷ್ಟನೆಯನ್ನಾಧರಿಸಿ ದೂರನ್ನು ಮುಕ್ತಾಯಗೊಳಿಸಿರುವುದು ತಿಳಿದು ಬಂದಿದೆ.
ದೂರು ಮುಕ್ತಾಯಗೊಳಿಸಿದ್ದೇಕೆ?
ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಸಿ.ಎನ್. ಅಶ್ವಥನಾರಾಯಣ್ ಮತ್ತು ಅವರು (ಪ್ಯಾರಾ 169 ರಲ್ಲಿ) ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ. ಪ್ರಸ್ತಾವಿತ ತಿದ್ದುಪಡಿಯು ಸರ್ಕಾರದ ಯಾವುದೇ ಅಡಚಣೆಯನ್ನು ಉಂಟುಮಾಡುವುದಿಲ್ಲ. ಪ್ರಸ್ತಾವಿತ ತಿದ್ದುಪಡಿ ಅಂದರೆ “ದಾನಿಯು ಟ್ರಸ್ಟಿಗೆ ಅಜೀವ ಟ್ರಸ್ಟಿಯನ್ನು ನೇಮಿಸುವ ಹಕ್ಕಿದೆ. ಮತ್ತು ಅಜೀವ ಟ್ರಸ್ಟಿಗೆ ಅವನ/ಅವಳ ಉತ್ತರಾಧಿಕಾರಿಯನ್ನು ನೇಮಿಸಲು ಅಧಿಕಾರ ನೀಡುತ್ತದೆ”. ನಂತರ ಈ ವಿಷಯವನ್ನು (ಪ್ರತಿವಾದಿ ಸಂಖ್ಯೆ 3) ಕರ್ನಾಟಕದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದನ್ನು ಅನುಮೋದಿಸಿದ್ದಾರೆ.

ಈ ಕಾರ್ಯವಿಧಾನವು ಕಾನೂನುಬಾಹಿರವಾಗಿದೆ ಮತ್ತು ಮೇಲೆ ಹೇಳಲಾದ ಟ್ರಸ್ಟ್ನ ತಿದ್ದುಪಡಿಯನ್ನು ಅನುಮೋದಿಸುವುದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯಿದೆ ಎಂದು ದೂರುದಾರರು ಆರೋಪಿಸುತ್ತಿದ್ದಾರೆ. ಕೇವಲ ಆರೋಪಗಳನ್ನು ಹೊರತುಪಡಿಸಿ, ಮೇಲೆ ಹೇಳಲಾದ ಟ್ರಸ್ಟ್ನ ತಿದ್ದುಪಡಿಯನ್ನು ಅನುಮೋದಿಸುವುದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ತೋರಿಸಲು ಯಾವುದೇ ಆಧಾರಗಳಿಲ್ಲ ಎಂದು ಹೆಚ್ಚುವರಿ ನಿಬಂಧಕರು ತಮ್ಮ ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಟ್ರಸ್ಟ್ ಡೀಡ್ನ ಒಡಂಬಡಿಕೆಗಳನ್ನು ಪರಿಶೀಲಿಸಿದ ನಂತರ ಮೂಲ ಟ್ರಸ್ಟ್ ಡೀಡ್ನ ಪ್ಯಾರಾ VI (xii) ಗೆ ಹೇಳಲಾದ ನಿಬಂಧನೆಯನ್ನು ಗಮನದಲ್ಲಿಟ್ಟುಕೊಂಡಿದೆ. ಡೀಡ್ನ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗೆ ಒಪ್ಪಿಗೆ ನೀಡುವ ಅಧಿಕಾರವನ್ನು ಸರ್ಕಾರ ಹೊಂದಿದೆ. ದೂರುದಾರರು ಸಲ್ಲಿಸಿದ ದಾಖಲೆಗಳು, ಟ್ರಸ್ಟ್ ಡೀಡ್ನ ತಿದ್ದುಪಡಿಗೆ ಅನುಮೋದನೆ ನೀಡುವ ಮೊದಲು ಸರ್ಕಾರವು ಕಾನೂನು ಇಲಾಖೆಯ ಅಭಿಪ್ರಾಯವನ್ನು ತೆಗೆದುಕೊಂಡಿದೆ ಎಂದು ತೋರಿಸುತ್ತದೆ ಎಂದು ಆದೇಶದಲ್ಲಿ ವಿವರಿಸಿದೆ.

ಆಡಳಿತಾತ್ಮಕ ನಿರ್ಧಾರಗಳ ತನಿಖೆ ನಡೆಸಲಾಗದು
‘ಹೀಗಾಗಿ ಈ ಪ್ರಾಧಿಕಾರವು ಪ್ರತಿವಾದಿಗಳು ತೆಗೆದುಕೊಂಡ ಆಡಳಿತಾತ್ಮಕ ನಿರ್ಧಾರಗಳನ್ನು ತನಿಖೆ ಮಾಡಲು ಸಾಧ್ಯವಿಲ್ಲ. ದೂರುದಾರರು ಹೇಳಲಾದ ತಿದ್ದುಪಡಿಯಿಂದ ತೊಂದರೆಗೊಳಗಾಗಿದ್ದರೆ, ಅವರು ಅದನ್ನು ಸೂಕ್ತ ವೇದಿಕೆಯ ಮುಂದೆ ಪ್ರಶ್ನಿಸಬೇಕಾಗುತ್ತದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ದೂರಿನಲ್ಲಿ ಮಾಡಲಾದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ/ವಿಚಾರಣೆಯನ್ನು ಮುಂದುವರಿಸಲು ಸಾಕಷ್ಟು ಆಧಾರಗಳಿಲ್ಲ. ಈ ಕಾರಣಗಳಿಗಾಗಿ ಪ್ರಸ್ತುತ ದೂರನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆ 9(5)(b) ಸೆಕ್ಷನ್ನಲ್ಲಿ ಮುಕ್ತಾಯಗೊಳಿಸಬಹುದು. ,’ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಭ್ರಷ್ಟಾಚಾರ ಸಾಬೀತುಪಡಿಸಲು ಆಧಾರಗಳಿರಲಿಲ್ಲವೇ?
ಈ ದೂರನ್ನು ಮುಕ್ತಾಯಗೊಳಿಸಲು ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಸಲ್ಲಿಸಿದ್ದ ಅಂತಿಮ ಪರಿಶೀಲನಾ ಟಿಪ್ಪಣಿಯನ್ನು ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಅವಲೋಕಿಸಿದ್ದಾರೆ. ಆ ನಂತರ ಹೆಚ್ಚುವರಿ ನಿಬಂಧಕರ ಅಂತಿಮ ಪರಿಶೀಲನಾ ಟಿಪ್ಪಣಿಯನ್ನು ಅನುಮೋದಿಸಿರುವುದು ಆದೇಶದಿಂದ ಗೊತ್ತಾಗಿದೆ.
ವಿಶೇಷವಾಗಿ ಟ್ರಸ್ಟ್ನ ಷರತ್ತು VI (xii) ರ ನಿಬಂಧನೆಯನ್ನು ಉಲ್ಲೇಖಿಸಿ. ಡೀಡ್, ಇದರಲ್ಲಿ ಡೀಡ್ ಅನ್ನು ಬದಲಾಯಿಸುವ ಕಾರ್ಯವಿಧಾನ ಅಥವಾ ತಿದ್ದುಪಡಿಯನ್ನು ಹೇಳಲಾಗಿದೆ. ಮತ್ತು ಹೇಳಿದ ಷರತ್ತಿನ ಪ್ರಕಾರ, ಡೀಡ್ ಅನ್ನು ಬದಲಾಯಿಸುವ ಅಥವಾ ಅದರ ಯಾವುದೇ ಷರತ್ತುಗಳ ತಿದ್ದುಪಡಿಯನ್ನು ಒಳಗೊಂಡ ಟ್ರಸ್ಟಿಗಳ ಯಾವುದೇ ನಿರ್ಣಯಗಳು ದಾನಿ “1” ಒಪ್ಪಿಗೆ ನೀಡದ ಹೊರತು ಮತ್ತು ಮೈಸೂರು ಸರ್ಕಾರವು ಅನುಮೋದಿಸದ ಹೊರತು ಕಾರ್ಯನಿರ್ವಹಿಸುವುದಿಲ್ಲ.

ಪರಿಶೀಲನಾ ಟಿಪ್ಪಣಿಯ (ಕಂಡಿಕೆ 40 ರಲ್ಲಿ)ಯಲ್ಲಿ ಪ್ರಸ್ತಾವಿತ ತಿದ್ದುಪಡಿಯನ್ನು ಅನುಮೋದಿಸುವ ಮೊದಲು ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಸಹ ಉಲ್ಲೇಖಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಬೇರೆ ರೀತಿಯಲ್ಲಿ ಮಾಡಿದ ತಿದ್ದುಪಡಿ ಕಾನೂನುಬದ್ಧವಾಗಿದೆಯೇ ಅಥವಾ ಸಮರ್ಥನೀಯವಾಗಿದೆಯೇ ಎಂಬುದು ಈ ಪ್ರಾಧಿಕಾರದಿಂದ ತನಿಖೆಗೆ ಒಳಪಡುವ ವಿಷಯವಾಗಿರಲು ಸಾಧ್ಯವಿಲ್ಲ. ಆದರೆ ಈ ತಿದ್ದುಪಡಿಯ ಹಿಂದೆ ಯಾವುದೇ ಭ್ರಷ್ಟಾಚಾರ ನಡೆದಿದೆಯೇ ಎಂಬುದು ಪರಿಗಣನೆಯ ಅಗತ್ಯವಿರುವ ವಿಷಯವಾಗಿದೆ ಎಂದು ಲೋಕಾಯುಕ್ತರು ಆದೇಶದಲ್ಲಿ ಷರಾ ಹಾಕಿರುವುದು ಗೊತ್ತಾಗಿದೆ.

ತನಿಖೆಗೆ ಸಮರ್ಥಿಸಲಾಗುವುದಿಲ್ಲವೆಂದಿದ್ದ ಲೋಕಾಯುಕ್ತ
ಪರಿಶೀಲನಾ ಟಿಪ್ಪಣಿಯಲ್ಲಿ ಸರಿಯಾಗಿ ಹೇಳಿದಂತೆ ತಿದ್ದುಪಡಿಯ ಅನುಮೋದನೆಯ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂಬ ವಾದವನ್ನು ಬೆಂಬಲಿಸಲು ಯಾವುದೇ ಆಧಾರಗಳಿಲ್ಲ. ಕೇವಲ ಆರೋಪಗಳನ್ನು ಹೊರತುಪಡಿಸಿ, ಅದನ್ನು ದೃಢೀಕರಿಸಲು ಯಾವುದೇ ಆಧಾರಗಳಿಲ್ಲ.

ಟ್ರಸ್ಟ್ನ ಯಾವುದೇ ಬದಲಾವಣೆಗೆ ಅನುಮೋದನೆ ನೀಡುವ ಅಧಿಕಾರ ಸರ್ಕಾರಕ್ಕೆ ಇದೆ. ಯಾವುದೇ ತಿದ್ದುಪಡಿಯನ್ನು ಕೈಗೊಳ್ಳುವುದು ಅಥವಾ ಒಪ್ಪಂದವನ್ನು ಮಾಡುವುದು ಸರ್ಕಾರಕ್ಕೆ ಅಧಿಕಾರವಿದೆ. ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಸುವುದನ್ನು ಸಮರ್ಥಿಸಲಾಗುವುದಿಲ್ಲ.

ಏಕೆಂದರೆ ಯಾವುದೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತೋರಿಸಲು ಯಾವುದೇ ಆಧಾರವನ್ನು ಒದಗಿಸಲಾಗಿಲ್ಲ. ಆದ್ದರಿಂದ, ಅಂತಿಮ ಪರಿಶೀಲನಾ ಟಿಪ್ಪಣಿಯನ್ನು ಅನುಮೋದಿಸಲಾಗಿದೆ ಮತ್ತು ಈ ದೂರನ್ನು ಮುಕ್ತಾಯಗೊಳಿಸಲಾಗಿದೆ ಎಂದು ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಪ್ರಕರಣದ ವಿವರ
ಅಂದಾಜು 2,000 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಹಾಗೂ ಅಜೀವ ಟ್ರಸ್ಟಿಯ ನೇಮಕಾತಿಯ ಪ್ರಸ್ತಾವನೆಯನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ತಿರಸ್ಕೃತಗೊಳಿಸಿದ್ದದ್ದರು. ಆ ನಂತರ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಇದೇ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.
ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ನಡೆದಿರುವ ಪ್ರಕ್ರಿಯೆಗಳು ಕಾನೂನುಬಾಹಿರ ಪ್ರಕ್ರಿಯೆಗಳಾಗಿವೆ ಎಂದು ಹಲವು ಪುರಾವೆಗಳೊಂದಿಗೆ ಬೆಂಗಳೂರಿನ ಕಾನೂನು ಸಲಹೆಗಾರ ಸಂಸ್ಥೆ ಜಿ ಕೆ ಅಸೋಸಿಯೇಟ್ಸ್ ಸೇರಿದಂತೆ ಹಲವು ಸಾರ್ವಜನಿಕರು ಸರ್ಕಾರಕ್ಕೆ ಸಲ್ಲಿಸಿದ್ದ ದೂರುಗಳನ್ನು ಸಲ್ಲಿಸಿದ್ದರು. ಆದರೆ ಅವುಗಳನ್ನು ಕಡೆಗಣಿಸಲಾಗಿತ್ತು.
ಅಲ್ಲದೇ ಇದೇ ಶಿಕ್ಷಣ ದತ್ತಿಗೆ ಅಜೀವ ಟ್ರಸ್ಟಿ ನೇಮಕಾತಿ ಪ್ರಸ್ತಾವನೆ ಸಂಬಂಧ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಹಿಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾನೂನುಬಾಹಿರವಾಗಿದೆ ಎಂದು ತಿರಸ್ಕರಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಿದ್ದರು. ಆದರೆ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇದನ್ನು ಬದಿಗೆ ಸರಿಸಿ ಅನುಮೋದಿಸಿದ್ದರು.
ಅಲ್ಲದೆ ಹೆಚ್ ಡಿ ಕುಮಾರಸ್ವಾಮಿ ಅವರು ತಿರಸ್ಕರಿಸಿದ್ದ ಕಡತದಲ್ಲಿ ಹಲವಾರು ಸಾರ್ವಜನಿಕರು ಸಲ್ಲಿಸಿದ್ದ ಆಕ್ಷೇಪಣೆಗಳು, ದಾಖಲಾತಿಗಳು, ಯಡಿಯೂರಪ್ಪ ಅವರಿಂದ ಅನುಮೋದನೆ ಪಡೆದುಕೊಂಡ ಕಡತದಲ್ಲಿ ಮರೆಮಾಚಲಾಗಿತ್ತು.
ಬಿಎಂಎಸ್ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಸಂಬಂಧಿಸಿದಂತೆ 2018ರಲ್ಲಿಯೇ ಕಡತ (ED 124TEC 2018) ಸೃಷ್ಟಿಯಾಗಿತ್ತು. ಇದೇ ಕಡತದಲ್ಲಿ ಪ್ರಸ್ತಾವನೆಯು ಕಾನೂನುಬಾಹಿರವಾಗಿದೆ ಎಂದು ಲಿಖಿತ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಹಿಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.

ತಿರಸ್ಕರಿಸಲು ಕಾರಣವೇನು?
ಬಿಎಂಎಸ್ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಅನುಮೋದಿಸುವ ವಿಚಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಕಂಡಿಕೆ 71ರಿಂದ 79ರವರೆಗಿನ ಆದೇಶದಲ್ಲಿ ಪರಿಶೀಲನೆ ನಡೆಸಿ ತಿದ್ದುಪಡಿಗಳನ್ನು ತಿರಸ್ಕರಿಸಲು ಆದೇಶಿಸಿದ್ದರು. ಇದಕ್ಕೆ ಅವರು ನೀಡಿದ್ದ ಕಾರಣಗಳನ್ನು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು.
ಡೋನರ್ ಟ್ರಸ್ಟಿ ರಾಗಿಣಿ ನಾರಾಯಣ್ ಮತ್ತು ಅವರ ನಂತರ ಡೋನರ್ ಟ್ರಸ್ಟಿ ಸ್ಥಾನಕ್ಕೆ ನಾಮಕರಣ ಮಾಡಲ್ಪಡುವ ಯಾವುದೇ ಕುಟುಂಬದ ಸದಸ್ಯರು ತಮ್ಮ ಇಡೀ ಜೀವನಾವಧಿಯಲ್ಲಿ ದತ್ತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬೇಕೆಂದು ತಿದ್ದುಪಡಿಯಿಂದ ನಿಗದಿಮಾಡಲಾಗುತ್ತಿದೆ. ದತ್ತಿಯ ಮೂಲ ದಾಖಲೆ ಕಂಡಿಕೆ V(x)ರಂತೆ ಟ್ರಸ್ಟಿಗಳು ಸೂಕ್ತ ವ್ಯಕ್ತಿಯನ್ನು ಆಡಳಿತದ ನಿರ್ವಹಣೆಗಾಗಿ ಕಾರ್ಯದರ್ಶಿ ಸ್ಥಾನದಲ್ಲಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದ್ದು ಟ್ರಸ್ಟೀಗಳ ಅಧಿಕಾರವನ್ನು ಶಾಶ್ವತವಾಗಿ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ.

ಡೋನರ್ ಟ್ರಸ್ಟಿಯವರ ಕುಟುಂಬದಿಂದ ನೇಮಕವಾಗುವ ಯಾವುದೇ ವ್ಯಕ್ತಿಯ ವಯಸ್ಸು ಮತ್ತು ಅರ್ಹತೆಯನ್ನು ಲಕ್ಷಿಸದೇ ದತ್ತಿಯ ಸದಸ್ಯ ಕಾರ್ಯದರ್ಶಿ ಪದವಿಯನ್ನು ನಿರ್ವಹಿಸುವವರಾಗುತ್ತಾರೆ. ಇದರಿಂದ ಸಾರ್ವಜನಿಕ ದತ್ತಿಯ ರೂಪದಲ್ಲಿರುವ ಬಿಎಂಎಸ್ ಶಿಕ್ಷಣ ದತ್ತಿಯ ನಿರ್ವಹಣೆಯ ಅಧಿಕಾರ ಸೂತ್ರವನ್ನು ಒಂದೇ ಕುಟುಂಬದಲ್ಲಿ ಕೇಂದ್ರೀಕರಿಸಲಾಗುತ್ತದೆ. ಇದರಿಂದ ಡೋನರ್ ಟ್ರಸ್ಟಿ ಸ್ಥಾನದ ಅಧಿಕಾರವು ಹೆಚ್ಚುವುದಲ್ಲದೇ ಮೂಲ ದತ್ತಿಯಲ್ಲಿ ಅಡಕವಾಗಿರುವ ಇತರ ಟ್ರಸ್ಟಿಗಳ ಅಧಿಕಾರವನ್ನು ಕುಂಠಿತಗೊಳಿಸಿದಂತಾಗುತ್ತದೆ.
ಮೂಲ ಡೋನರ್ ಟ್ರಸ್ಟಿ ಹಾಗೂ ಅವರ ಪತ್ನಿಯ ನಂತರ ಡೋನರ್ ಟ್ರಸ್ಟಿ ಪದವಿಗೆ ನಾಮಕರಣ ಮಾಡುವ ಅಧಿಕಾರವನ್ನು ಕುಟುಂಬದ ಇತರರು ಪಡೆಯುವಂತೆ ತಿದ್ದುಪಡಿ ಮಾಡುವುದರಿಂದ ಮೇಲ್ಕಂಡಂತೆ ಒಂದೇ ಕುಟುಂಬದ ವ್ಯಕ್ತಿಯಲ್ಲಿ ಅಧಿಕಾರ ಕೇಂದ್ರೀಕೃತವಾಗುವ ಪರಂಪರೆ ಮುಂದುವರೆಯುತ್ತದೆ.
ದತ್ತಿನ ಸದ್ಯದ ರಚನೆಯಂತೆ ಡೋನರ್ ಟ್ರಸ್ಟಿಯಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಇತರ ಮೂರು ಟ್ರಸ್ಟಿಗಳ ನಾಮನಿರ್ದೇಶನ ಆಗಬೇಕಾಗುತ್ತದೆ. ಈಗ ಸೂಚಿಸಿರುವ ತಿದ್ದುಪಡಿಯ ಪ್ರಕಾರ ಸದ್ಯದ ಡೋನರ್ ಟ್ರಸ್ಟಿಯಿಂದ ಯಾವುದೇ ಒಬ್ಬ ವ್ಯಕ್ತಿಯನ್ನು ಅಜೀವ ಟ್ರಸ್ಟಿಯನ್ನಾಗಿ ನಾಮನಿರ್ದೇಶನ ಮಾಡಬಹುದಾಗಿದೆ ಮತ್ತು ಅಂತಹ ಅಜೀವ ಟ್ರಸ್ಟಿಯು ಯಾವುದೇ ವ್ಯಕ್ತಿಯ್ನು ತನ್ನ ನಂತರ ಅಜೀವ ಟ್ರಸ್ಟಿಯಾಗಿ ನೇಮಿಸಬಹುದಾಗಿದ್ದು ಅಂತಹ ಮುಂದಿನ ಅಜೀವ ಟ್ರಸ್ಟಿಗಳು ಸಹ ತಮ್ಮ ಸ್ಥಾನಕ್ಕೆ ಯಾವುದೇ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದಾಗಿರುತ್ತದೆ.
ಈ ತಿದ್ದುಪಡಿಯು ಸದ್ಯದ ದತ್ತಿಯ ರಚನೆಯಲ್ಲಿ ಡೋನರ್ ಟ್ರಸ್ಟಿ ಮತ್ತು ಸರ್ಕಾರದ ಹೊರತಾಗಿ ಮೂರನೇ ವ್ಯಕ್ತಿಯೊಬ್ಬರಿಗೆ ಶಾಶ್ವತವಾದ ಟ್ರಸ್ಟಿ ಸ್ಥಾನವನ್ನು ಕಲ್ಪಿಸುತ್ತದೆ. ಇಂತಹ ಮೂಲಭೂತ ಬದಲಾವಣೆಯನ್ನು ಮಾಡಲು ಕಾರಣಗಳೇನು ಎಂದು ಪ್ರಸ್ತಾವನೆಯಲ್ಲಿ ತಿಳಿಸಿರುವುದಿಲ್ಲ. ಆದ್ದರಿಂದ ದತ್ತಿಯ ಸಮರ್ಪಕ ಆಡಳಿತಕ್ಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿತ್ತು.
ಪ್ರಸ್ತಾವಿತ ತಿದ್ದುಪಡಿಯಂತೆ ಅಜೀವ ಟ್ರಸ್ಟಿಯಾಗಿ ಯಾವ ಕಾರಣಗಳಿಗಾಗಿ ಯಾವ ವ್ಯಕ್ತಿಯನ್ನು ನೇಮಿಸಲು ಉದ್ದೇಶಿಸಿದೆಯೆಂಬ ಬಗ್ಗೆ ದತ್ತಿಯ ನಡವಳಿಕೆಯಲ್ಲಿ ಮಾಹಿತಿ ಇಲ್ಲದಿರುವುದರಿಂದ ಮೇಲ್ಕಂಡ ತಿದ್ದುಪಡಿಯನ್ನು ಅನುಮೋದಿಸಲು ಸಮರ್ಥನೆ ಇರುವುದಿಲ್ಲ. ಇದರಿಂದ ದತ್ತಿಯನ್ನು ಶಾಶ್ವತವಾಗಿ ಮೂರನೇ ವ್ಯಕ್ತಿಗಳಿಗೆ ವರ್ಗಾಯಿಸಲು ಅಥವಾ ಲಾಭದ ಉದ್ದೇಶಕ್ಕಾಗಿ ಪರಭಾರೆ ಮಾಡಲು ಅವಕಾಶವಾಗುತ್ತದೆ.
ಸದ್ಯದ ದತ್ತಿಯ ರಚನೆಯಲ್ಲಿ ಡೋನರ್ ಟ್ರಸ್ಟಿಯವರ ನೇರ ವಂಶಿಕರು ಲಭ್ಯವಿಲ್ಲದಿರುವಾಗ ಸರ್ಕಾರದವರೇ ಎಲ್ಲಾ ಟ್ರಸ್ಟಿಗಳನ್ನು ನೇಮಕ ಮಾಡಲು ಇರುವ ಅವಕಾಶವನ್ನು ಪ್ರಸ್ತಾವಿತ ತಿದ್ದುಪಡಿಗಳಿಂದ ಸಂಪೂರ್ಣವಾಗಿ ಕೈಬಿಡಲು ಉದ್ದೇಶಿಸಿರುವುದರಿಂದ ದತ್ತಿಯ ಆಡಳಿತದಲ್ಲಿ ಸರ್ಕಾರದ ಪಾತ್ರವನ್ನು ಗಣನೀಯವಾಗಿ ಮತ್ತು ಶಾಶ್ವತವಾಗಿ ಮೊಟಕುಗೊಳಿಸಿದಂತಾಗುತ್ತದೆ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿತ್ತು.
ಮುಖ್ಯಮಂತ್ರಿಗಳ ಆದೇಶದಂತೆ ಟ್ರಸ್ಟ್ನ ಡೋನರ್ ಟ್ರಸ್ಟಿಯಾಗಿರುವ ರಾಗಿಣಿ ನಾರಾಯಣ್ ಅವರಿಗೆ ಸರ್ಕಾರದಿಂದ ಹಿಂಬರಹ ನೀಡಿ ಈ ತಿದ್ದುಪಡಿಗಳನ್ನು ಸರ್ಕಾರವು ತಿರಸ್ಕರಿಸಿದೆಯಂದು (ದಿನಾಂಕ 1.1.2019) ತಿಳಿಸಿತ್ತು ಎಂಬುದು ಟಿಪ್ಪಣಿಹಾಳೆಯಿಂದ ತಿಳಿದು ಬಂದಿದೆ.

ಆದರೆ ಈ ಕಡತಕ್ಕೆ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಡಾ ಸಿ ಎನ್ ಅಶ್ವಥ್ನಾರಾಯಣ್ ಅವರ ಅವಧಿಯಲ್ಲಿ ಕಾನೂನು ಇಲಾಖೆಯು ಸಕಾರಾತ್ಮಕ ಅಭಿಪ್ರಾಯ ನೀಡಿತ್ತು.
‘2018ರ ಮಾರ್ಚ್ 10ರ ಸಭೆಯಲ್ಲಿ ಅಂಗೀಕರಿಸಿದ ತಿದ್ದುಪಡಿಗಳಲ್ಲಿದ್ದ ಅನೇಕ ಆಕ್ಷೇಪಾರ್ಹ ಅಂಶಗಳನ್ನು ಹೊರತುಪಡಿಸಿ ಈಗ ಕೇವಲ ಒಂದು ತಿದ್ದುಪಡಿಯನ್ನು ಮಾತ್ರ (7-6-2019) ಟ್ರಸ್ಟ್ನ ಸಭೆಯಲ್ಲಿ ಅಂಗೀಕರಿಸಿರುವುದರಿಂದ ಈ ತಿದ್ದುಪಡಿಯನ್ನು ಅಂದರೆ ‘the donor trustee has the right to appoint a life trustee and empowers the life trustee to appoint his /her successor’ ಎಂಬ ತಿದ್ದುಪಡಿಯನ್ನು ಅನುಮೋದಿಸಿದಲ್ಲಿ ಸರ್ಕಾರದ ಅಧಿಕಾರಿಗಳಿಗೆ ಯಾವುದೇ ಚ್ಯುತಿ ಉಂಟಾಗುವುದಿಲ್ಲವೆಂದು ಭಾವಿಸಲಾಗಿದೆ ಎಂದ ಕಾನೂನು ಇಲಾಖೆಯು ಅಭಿಪ್ರಾಯ ನೀಡಿತ್ತು.

ಇದನ್ನಾಧರಿಸಿ ತಿದ್ದುಪಡಿಗೆ ಸರ್ಕಾರದ ಅನುಮೋದನೆ ನೀಡಬಹುದು ಎಂದು ಅಭಿಪ್ರಾಯಪಟ್ಟು ಮುಖ್ಯಮಂತ್ರಿಗಳ ಆದೇಶವನ್ನು ಡಾ ಸಿ ಎನ್ ಅಶ್ವಥ್ನಾರಾಯಣ್ ಅವರು ಕೋರಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಇದಾದ ನಂತರ ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಅನುಮೋದನೆ ನೀಡಿದ್ದರು.

ಆ ನಂತರ ಕೂಡಲೇ ಆದೇಶವನ್ನು ಹೊರಡಿಸುವುದು ಎಂದು ಡಾ ಸಿ ಎನ್ ಅಶ್ವಥ್ನಾರಾಯಣ್ ಅವರು ಟಿಪ್ಪಣಿ ಹೊರಡಿಸಿದ್ದರು.

ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಕುಮಾರನಾಯಕ್ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹಾಲಿ ಉಪ ಕಾರ್ಯದರ್ಶಿ ವೆಂಕಟೇಶಯ್ಯ (ಹಿಂದಿನ ಅಧೀನ ಕಾರ್ಯದರ್ಶಿ) ಕಡತದಲ್ಲಿದ್ದ ಲಿಖಿತ ಆಕ್ಷೇಪಣೆಗಳನ್ನು ಕಸದಬುಟ್ಟಿಗೆ ಎಸೆದಿದ್ದರು. ಅಲ್ಲದೆ 2019ರಲ್ಲಿ (ED 124TEC P1 2018) ಕಡತವನ್ನು ತೆರೆದಿದ್ದರು. ಹಾಗೆಯೇ ಈ ಕಡತವನ್ನು 2020ರ ಮಾರ್ಚ್ 17ರಂದು ಉನ್ನತ ಶಿಕ್ಷಣ ಸಚಿವರ ಕಚೇರಿಗೆ ರವಾನಿಸಲಾಗಿತ್ತು. ಬಳಿಕ ಒಂದು ವರ್ಷದ ನಂತರ ಅಂದರೆ ಯಡಿಯೂರಪ್ಪ ಅವರ ಅಧಿಕಾರದ ಕೊನೆಯ ದಿನಗಳಲ್ಲಿ ಈ ಕಡತಕ್ಕೆ ( ED 124TEC P1 2018) ಅನುಮೋದನೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ 2021ರ ಮಾರ್ಚ್ 31ರಂದು ಡಾ ಬಿ ಎಸ್ ರಾಗಿಣಿ ನಾರಾಯಣ್ ಅವರಿಗೆ ಪತ್ರವನ್ನೂ ಬರೆಯಲಾಗಿತ್ತು.

ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿಗಾಗಲೀ, ಟ್ರಸ್ಟಿಗಳ ನೇಮಕಾತಿಯಾಗಲೀ ಮಾಡಲು ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಈ ವಿಷಯಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗಿದ್ದರೂ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಕಾರ್ಯವ್ಯಾಪ್ತಿ ಮೀರಿ ಅಧಿಕಾರ ದುರ್ಬಳಕೆಪಡಿಸಿಕೊಂಡು ಸಾರ್ವಜನಿಕ ದತ್ತಿಯನ್ನು ಖಾಸಗಿ ದತ್ತಿಯನ್ನಾಗಿ ಪರಿವರ್ತಿಸಲು ನೆರವಾಗಿರುವುದು (ಸರ್ಕಾರದ ಪತ್ರ ED 128 TEC 2018, 31-03-2021) ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗೆಯೇ ಈ ಪತ್ರದ ಬಗ್ಗೆ ಹಲವಾರು ಲಿಖಿತ ದೂರುಗಳಿದ್ದರೂ ಸರ್ಕಾರವು ಇದುವರೆಗೂ ಯಾವುದೇ ಕ್ರಮತೆಗೆದುಕೊಳ್ಳದಿರುವುದು ಅಚ್ಚರಿ ಮೂಡಿಸಿತ್ತು.
ಬಿಎಂಎಸ್ ಶಿಕ್ಷಣ ದತ್ತಿ ಅಡಿಯಲ್ಲಿರುವ ಎರಡು ಅನುದಾನಿತ ಸಂಸ್ಥೆಗಳಿಗೆ ಸರ್ಕಾರವು 1952ರಿಂದ ಇಲ್ಲಿಯವರೆಗೆ ಸುಮಾರು 800 ಕೋಟಿ ರು ಗೂ ಅಧಿಕ ಅನುದಾನ ನೀಡಿದೆ ಎಂದು ತಿಳಿದು ಬಂದಿದೆ. ಹೈಕೋರ್ಟ್ (ಮೊಕದ್ದಮೆ ಸಂಖ್ಯೆ RFA 788/2009) ಮಾಡಿದ್ದ ಆದೇಶದ ಪ್ರಕಾರ ಬಿಎಂಎಸ್ ಶಿಕ್ಷಣ ದತ್ತಿಗೆ ಟ್ರಸ್ಟಿಗಳ ನೇಮಕಾತಿ ಬಗ್ಗೆ ನಿರ್ದಿಷ್ಟ ನಿಯಮಾವಳಿಗಳನ್ನು ಸೂಚಿಸಿತ್ತು. ಮತ್ತು ಬಿಎಂಎಸ್ ಶಿಕ್ಷಣ ದತ್ತಿಯು ಆದಾಯ ತೆರಿಗೆ ಇಲಾಖೆಯಿಂದ 80 ಜಿ ವಿನಾಯಿತಿ ಹೊಂದಿರುವುದರಿಂದ ಯಾವುದೇ ಟ್ರಸ್ಟ್ ಡೀಡ್ಗೆ ತಿದ್ದುಪಡಿಯಾಗಲೀ ಅಥವಾ ಟ್ರಸ್ಟಿಗಳ ನೇಮಕಾತಿಯಾಗಲೀ ಆದಾಯ ತೆರಿಗೆ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಇದನ್ನು ಪಡೆದಿರಲಿಲ್ಲ.
ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ 2022ರ ಸೆ.22ರಂದೇ ವರದಿ ಪ್ರಕಟಿಸಿತ್ತು.
ಬಿಎಂಎಸ್ ಶಿಕ್ಷಣ ದತ್ತಿ; ಹೆಚ್ಡಿಕೆ ತಿರಸ್ಕರಿಸಿದ್ದ ಟ್ರಸ್ಟ್ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಅನುಮೋದನೆ
ಈ ವರದಿ ಪ್ರಕಟಿಸಿದ ನಂತರ ವಿಧಾನಸಭೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರೂ ಸಹ ಈ ಪ್ರಕರಣದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರು.
‘ಇದು ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಟ್ರಸ್ಟ್ ಆಸ್ತಿಯನ್ನು ಹೊಡೆದುಕೊಳ್ಳುವ ಭಾರೀ ಹಗರಣ. ಈಗಾಗಲೇ ಬಹಳಷ್ಟು ಅಕ್ರಮಗಳು ನಡೆದು ಹೋಗಿವೆ. ರಾಜ್ಯ ಬಿಜೆಪಿ ಸರಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರ ಬಂದರೆ ಈ ಸರಕಾರದ ಬುಡಕ್ಕೇ ಬರುತ್ತದೆ ಎಂಬ ಭಯ ಅವರದ್ದು. ಯಾಕೆಂದರೆ, ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಸರಕಾರವು ತನಿಖೆಗೆ ಸುತರಾಂ ಒಪ್ಪುತ್ತಿಲ್ಲ,’ ಎಂದು ದೂರಿದ್ದರು.
‘ನಾನು ಪ್ರಸ್ತಾಪಿಸಿರುವುದು 100 ಪರ್ಸೆಂಟ್ ಕಮೀಷನ್ ಪ್ರಕರಣವನ್ನು. ಇದಕ್ಕಾಗಿಯೇ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ. ಬಿಎಂಎಸ್ ಟ್ರಸ್ಟ್ ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದಂತೆ ತಿದ್ದುಪಡಿ ಮಾಡಿದ್ದಾರೆ. ಈ ಸರಕಾರವು ಮುಂದುವರಿಯಲು ಯಾವ ನೈತಿಕತೆ ಉಳಿಸಿಕೊಂಡಿಲ್ಲ. ಬಹಳ ಉದ್ದಟತನ ತೋರುತ್ತಿದೆ. ಇದರಲ್ಲಿ ಹಲವರ ಕೈವಾಡವಿದೆ,’ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.
ಬಿಎಂಎಸ್ ಟ್ರಸ್ಟ್ಡೀಡ್ ತಿದ್ದುಪಡಿ; ಅಧಿವೇಶನದಲ್ಲಿ ಬಹಿರಂಗಗೊಳ್ಳುವ ಮುನ್ನವೇ ಹೊರಗೆಳೆದಿದ್ದು ‘ದಿ ಫೈಲ್’
ಭ್ರಷ್ಟಾಚಾರ ಆರೋಪಗಳನ್ನು ತನಿಖೆ ನಡೆಸಲು ಲೋಕಾಯುಕ್ತಕ್ಕೆ ಪೊಲೀಸ್ ಅಧಿಕಾರ ನೀಡಲಾಗಿದೆ. ದೂರುದಾರರು ತಮಗೆ ಲಭ್ಯವಿದ್ದ ಸರ್ಕಾರಿ ದಾಖಲೆಗಳನ್ನೇ ನೀಡಿದ್ದಾದ ಮೇಲೆ ಹೆಚ್ಚಿನ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಯೇ ನಡೆಸಬೇಕು. ಆದರೆ ಈ ಪ್ರಕರಣದಲ್ಲಿ ಆಡಳಿತಾತ್ಮಕ ನಿರ್ಧಾರಗಳನ್ನು ತನಿಖೆಗೊಳಪಡಿಸುವುದು ಸಮರ್ಥನೀಯವಲ್ಲ ಎಂದು ಹೇಳಲಾಗಿದೆ. ಆದರೆ ಪ್ರತಿ ಭ್ರಷ್ಟಾಚಾರದ ಹಿಂದೆಯೂ ಆಡಳಿತಾತ್ಮಕ ನಿರ್ಧಾರವೇ ಕಾರಣವಾಗಿರುತ್ತದೆ. ಇಂತಹ ಪ್ರಾಥಮಿಕ ಸಂಗತಿಯ್ನೇ ಲೋಕಾಯುಕ್ತ ಸಂಸ್ಥೆಯು ನಗಣ್ಯವಾಗಿಸಿದೆ. ಬಲಾಢ್ಯರ ವಿಷಯದಲ್ಲಿ ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರವನ್ನು ಪೋಷಿಸುವುದು ತನ್ನ ಆದ್ಯತೆಗಳನ್ನಾಗಿಸಿಕೊಂಡಿರುವುದು ದುರಂತ. ಲೋಕಾಯುಕ್ತವು ಮುಕ್ತಾಯಗೊಳಿಸಿರುವ ದೂರನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು,’ ಎಂದು ದೂರುದಾರ ಬಿ ಎಸ್ ಮಲ್ಲಿಕಾರ್ಜುನಯ್ಯ ಅವರು ದಿ ಫೈಲ್ಗೆ ಪ್ರತಿಕ್ರಿಯೆ ನೀಡಿದ್ದಾರೆ.









