ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿರ್ಬಂಧಿಸಲು ನಿರ್ಧಾರ; ಶೀಘ್ರದಲ್ಲೇ ಆದೇಶ

ಬೆಂಗಳೂರು; ಕಲಿಕಾ ಮಟ್ಟ, ಪಾಲ್ಗೊಳ್ಳುವಿಕೆ ಮತ್ತು ಗ್ರಹಿಕೆಯ ಸಾಮರ್ಥ್ಯವನ್ನು ಪರಿಗಣಿಸಿ ಎಲ್‌ಕೆಜಿಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸುವುದು ಸೂಕ್ತವಲ್ಲ ಎಂದು ನಿಮ್ಹಾನ್ಸ್‌ ತಜ್ಞರ ಸಲಹೆಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದೆ. ಈ ಸಂಬಂಧ ಸದ್ಯದಲ್ಲೇ ಆದೇಶ ಹೊರಬೀಳಲಿದೆ.


ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ, ಐಸಿಎಸ್‌ಇ/ಸಿಬಿಎಸ್‌ಇ, ಅಂತಾರಾಷ್ಟ್ರೀಯ ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಬೋಧನೆ ಮಾಡಬಾರದು ಒಂದು ವೇಳೆ ಈಗಾಗಲೇ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದ್ದಲ್ಲಿ ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಆದೇಶಿಸಲು ನಿರ್ಧರಿಸಿದೆ.


ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 1ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌/ಆಫ್‌ಲೈನ್‌ ತರಗತಿ ನಡೆಸುವ ಕುರಿತು 2020ರ ಜೂನ್‌ 10ರಂದು ನಡೆದ ಸಭೆಯ ನಂತರ ಈ ನಿರ್ಧಾರ ಕೈಗೊಂಡಿದೆ. ಸಭೆ ನಡವಳಿಗಳು ‘ದಿ ಫೈಲ್‌’ ಗೆ ಲಭ್ಯವಾಗಿದೆ.
ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಹೊರತುಪಡಿಸಿ ಸಮೂಹ ಮಾಧ್ಯಮಗಳು, ತಂತ್ರಜ್ಞಾನಾಧರಿತ ಬೋಧನೆ ಅಳವಡಿಸಿಕೊಳ್ಳಲು ಕುರಿತು ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರ ತಜ್ಞರ ಸಮಿತಿಗೆ ಸೂಚಿಸಿದೆ.


‘1ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಆನ್‌ಲೈನ್‌ ಬೋಧನೆ ಹೆಸರಿನಲ್ಲಿ ಯಾವುದೇ ಶುಲ್ಕ ವಸೂಲು ಮಾಡುವಂತಿಲ್ಲ.6ರಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವಲ್ಲಿ ಮಾರ್ಗಸೂಚಿಗಳನ್ನು ರಚಿಸಬೇಕು,’ ಎಂದು ಡಾ ಎಂ ಕೆ ಶ್ರೀಧರ್‌ ನೇತೃತ್ವದಲ್ಲಿರುವ ಸಮಿತಿಗೆ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.


ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಬೇಕು, ಸಾಂಪ್ರದಾಯಕ ತರಗತಿಗಳಿಗೆ ಪರ್ಯಾಯ ಎನ್ನುವ ಭಾವನೆ ಮೂಡದಂತೆ ಮಕ್ಕಳ ಕಲಿಕೆಗೆ ಪ್ರೇರೇಪಣೆ ಹಾಗೂ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ತಂತ್ರಜ್ಞಾನ ಬಳಕೆ ಹೇಗಿರಬೇಕು ಎಂಬ ಬಗ್ಗೆಯೂ ಸಾಧಕ ಬಾಧಕಗಳನ್ನು ಚರ್ಚಿಸಿ ಮಾರ್ಗಸೂಚಿ ರಚಿಸಲು ಸರ್ಕಾರ ಆದೇಶಿಸಿದೆ ಎಂದು ಗೊತ್ತಾಗಿದೆ.


‘ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿ, ಪೋಷಕರ ಸಾಮಾಜಿಕ ಸ್ಥಿತಿಗತಿಗಳ ಅಂತರದ ಹಿನ್ನೆಲೆಯಲ್ಲಿ ಈ ರೀತಿಯ ನೀತಿ ನಿರೂಪಣೆಗಳ ಕಾರಣ ಯಾವುದೇ ವಿದ್ಯಾರ್ಥಿಯು ಕಲಿಕೆಯಿಂದ ವಂಚಿತರಾಗದೆ ಮುಖ್ಯ ವಾಹಿನಿಯಲ್ಲಿ ಒಳಗೊಳ್ಳುವುದು ಮತ್ತು ದೂರದರ್ಶನ, ಸಮೂಹ ಮಾಧ್ಯಮಗಳ ಮುಖಾಂತರವಾದ ಬೋಧನೆ, ಕಲಿಕಾ ಮಾನದಂಡಗಳ ಅನುಪಾಲನೆಯೂ ಸೇರಿದಂತೆ ಕೋವಿಡ್‌ ಸಂದರ್ಭದಲ್ಲಿನ ಪರ್ಯಾಯ ಬೋಧನಾ ಕ್ರಮದ ಸಾಧಕ ಬಾಧಕಗಳನ್ನು ಚರ್ಚಿಸಬೇಕು,’ ಎಂದು ತಜ್ಞರ ಸಮಿತಿಗೆ ಸೂಚಿಸಿದೆ.


ಪೂರ್ವ- ಪ್ರಾಥಮಿಕ ವಿದ್ಯಾರ್ಥಿಗಳಿಗೆ ಯಾವುದೇ ಆನ್‌ಲೈನ್‌ ತರಗತಿ ನಡೆಸಬಾರದು ಎಂದು 2020ರ ಜೂನ್‌ 4ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರ, 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಬಾರಿ ಮಾತ್ರ(ಶನಿವಾರದಂದು ಆದ್ಯತೆ) ಆನ್‌ಲೈನ್‌ ಮುಖಾಂತರ ನೇರ ತರಗತಿಗಳನ್ನು ಪೋಷಕರ ಸಮ್ಮುಖದಲ್ಲಿ ನಡೆಸಬೇಕು. ಪ್ರತಿ ತರಗತಿಗಳಲ್ಲಿ ಪ್ರತಿ ಅವಧಿಯಲ್ಲಿ 30ರಿಂದ 40 ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಹೇಳಿತ್ತು.


3ನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ಸೂಕ್ತವಲ್ಲ ಎಂದು ನಿಮ್ಹಾನ್ಸ್‌ ತಜ್ಞರು 2020ರ ಜೂನ್‌ 2ರಂದು ನಡೆದಿದ್ದ ಸಭೆಯಲ್ಲಿ ಸಲಹೆ ನೀಡಿದ್ದರು. 4ನೇ ತರಗತಿಯ ನಂತರ ಸೀಮಿತ ಅವಧಿಗೆ ಮಾತ್ರ ಆನ್‌ಲೈನ್‌ ತರಗತಿಗಳು ನಡೆಸಬಹುದು. ವಿದ್ಯಾರ್ಥಿಗಳಿಗೆ ಆನ್‌ಲೈನ್‌/ಆಫ್‌ಲೈನ್‌ನಲ್ಲಿ ಪಾಠಗಳನ್ನು ಒದಗಿಸಬಹುದು. ಅಲ್ಲದೆ ಮುದ್ರಿತ ಪಾಠಗಳನ್ನು ಒದಗಿಸುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯಿಸಿದ್ದ ನಿಮ್ಹಾನ್ಸ್‌ ತಜ್ಞರು, ಪ್ರೌಢಶಾಲಾ ಹಂತದವರೆಗೆ ವಿದ್ಯಾರ್ಥಿಗಳು ಪೋಷಕರ ಮೇಲ್ವಿಚಾರಣೆಯಲ್ಲಿ ಆನ್‌ಲೈನ್‌ ತರಗತಿಗಳಲ್ಲಿ ಪಾಲ್ಗೊಳ್ಳಬಹುದು ಎಂದು ಅಭಿಪ್ರಾಯಿಸಿದ್ದರು.


ಇನ್ನು ಗ್ರಾಮೀಣ ಭಾಗಗಳಲ್ಲಿ ಭೌತಿಕ ತರಗತಿಗಳನ್ನು ನಡೆಸುವುದು ಹೆಚ್ಚು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯಿಸಿದ್ದ ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನದ ಇಂದು ಪ್ರಸಾದ್‌ ಮತ್ತು ಉಮಾಶಂಕರ್‌ ಪೆರಿಯೋಡಿ ಅವರು ನಗರ ಪ್ರದೇಶಗಳಲ್ಲಿ ಪರಿಸ್ಥಿತಿಗನುಗುಣವಾಗಿ ಶಾಲೆಗಳು ನಡೆಯದೇ ಹೋದಲ್ಲಿ ಮಾತ್ರ ಆನ್‌ಲೈನ್‌ ಶಿಕ್ಷಣ ಒದಗಿಸಬಹುದಲ್ಲದೆ ಕಡ್ಡಾಯಗೊಳಿಸಬಾರದು ಎಂದು ಶಿಫಾರಸ್ಸು ಮಾಡಿದ್ದರು ಎಂಬ ಸಂಗತಿ ನಡವಳಿಯಿಂದ ತಿಳಿದು ಬಂದಿದೆ.

‘ಆನ್‌ಲೈನ್‌ ಶಿಕ್ಷಣ ನೀಡುತ್ತಿರುವ ಶಾಲಾ ಪ್ರತಿನಿಧಿಗಳು ಆನ್‌ಲೈನ್‌ ಶಿಕ್ಷಣ ನೀಡಲು ಶಿಕ್ಷಕರಿಗೆ APP ಬಳಕೆ ಕುರಿತು ತರಬೇತಿ ಮತ್ತು ಆನ್‌ಲೈನ್‌ ತರಗತಿ ನಿರ್ವಹಿಸಲು ಸಹ ಶಿಕ್ಷಕರಿಗೆ ತರಬೇತಿ ನೀಡಬೇಕಲ್ಲದೆ ಬಳಕೆದಾರರ ಸುರಕ್ಷತೆಗಾಗಿ ತಮ್ಮದೇ ಡೊಮೈನ್‌ ಸಿದ್ಧಪಡಿಸಿಕೊಳ್ಳಬೇಕು. ಇದಕ್ಕೆಲ್ಲಾ ಸಾಕಷ್ಟು ವೆಚ್ಚ ಭರಿಸಬೇಕಾಗುತ್ತದೆ,’ ಎಂದು ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನ ಸರ್ಕಾರಕ್ಕೆ ಸಲಹೆ ನೀಡಿತ್ತು.


ಸಲಹೆಗಳನ್ನು ಆಲಿಸಿದ್ದ ಸರ್ಕಾರ ಕೋವಿಡ್‌-19 ಹಿನ್ನೆಲೆಯ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿ ಎಂದಿನಂತೆ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಅನಿಶ್ಚತತೆ ಇರುವ ಕಾರಣ ಪರ್ಯಾಯ ಮಾರ್ಗವಾಗಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂದು ನಿರ್ಧರಿಸಿತ್ತು.


‘ಪಠ್ಯವಸ್ತುವಿನಲ್ಲಿ ಅತ್ಯಂತ ಪ್ರಮುಖವಾದ ಅಂಶಗಳನ್ನು ಆನ್‌ಲೈನ್‌ ತರಗತಿಗಳಲ್ಲಿ ಬೋಧಿಸಿ, ಇನ್ನುಳಿದ ಅಂಶಗಳನ್ನು ಪೋಷಕರ ಸಹಾಯದಿಂದ ಸ್ವಯಂ ಕಲಿಕೆಗೆ ಒಳಪಡಿಸಲು ಸೂಕ್ತ ಸೂಚನೆ ನೀಡಬೇಕಲ್ಲದೆ, ಪಠ್ಯವಸ್ತುವನ್ನು ಆಧರಿಸಿ ಭಾಷಾ ಬೆಳವಣಿಗೆಗೆ ಒತ್ತು ನೀಡಬೇಕು,’ ಎಂದು ತೀರ್ಮಾನಿಸಿತ್ತು.

the fil favicon

SUPPORT THE FILE

Latest News

Related Posts