ದ್ವೇಷ ಭಾಷಣ, ಅಪರಾಧ ತಡೆಗಟ್ಟುವ ವಿಧೇಯಕ; ಲೋಕಭವನದಿಂದ ರಾಷ್ಟ್ರಪತಿಗಳ ಅಂಗಳಕ್ಕೆ?

ಬೆಂಗಳೂರು;  ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡುವುದು ಅನುಮಾನ. ಈ ವಿಧೇಯಕವನ್ನು ರಾಷ್ಟ್ರಪತಿಗಳ ಪರ್ಯಾಯಲೋಚನೆಗೆ ಕಾಯ್ದರಿಸಲು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ!

 

ಈ ವಿಧೇಯಕಕ್ಕೆ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿದೆ. ಮಸೂದೆ ಅಂಗೀಕೃತವಾಗುತ್ತಿದ್ದಂತೆ ವಕೀಲ ಗಿರೀಶ್ ಭಾರದ್ವಾಜ್‌ ಅವರು ರಾಜ್ಯಪಾಲರ ಕಚೇರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತು ಈ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಬಾರದು ಎಂದು ಕಾನೂನಿನಲ್ಲಿರುವ ಹಲವು ಸಮರ್ಥನೀಯ ಅಂಶಗಳನ್ನು ಮುಂದೊಡ್ಡಿದ್ದರು.

 

ಗಿರೀಶ್ ಭಾರದ್ವಾಜ್‌ ಅವರು ರಾಜ್ಯಪಾಲರಿಗೆ ಪತ್ರ ಬರೆಯುತ್ತಿದ್ದಂತೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರೂ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದಾದ ನಂತರ ಸರಣಿ ರೂಪದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಿಜೆಪಿಯ ಹಲವು ಮುಖಂಡರು ಸಹ ವಿಧೇಯಕಕ್ಕೆ ಒಪ್ಪಿಗೆ ಸೂಚಿಸದಂತೆ ಮನವಿ ಮಾಡಿದ್ದರು.

 

 

ಈ ಎಲ್ಲ ಮನವಿ ಮತ್ತು ಆಕ್ಷೇಪಗಳ ಕುರಿತು ಕಾನೂನು ಆಯೋಗ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ ರಾಜ್ಯಪಾಲರು, ವಿಧೇಯಕವನ್ನು ರಾಷ್ಟ್ರಪತಿಗಳ ಅಂಗಳಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

 

ವಿಧೇಯಕದ ವಿಭಾಗ 4 ಮತ್ತು 5 ಕಾರ್ಯಾಂಗದಲ್ಲಿ ಅನಿಯಂತ್ರಿತ ಅಧಿಕಾರವನ್ನು ನೀಡುತ್ತವೆ. ಇದು ವಿಧಿ 19(1)(ಎ), ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಕಾನೂನು ಮತ್ತು ಮೂಲ ರಚನೆಯನ್ನು ಉಲ್ಲಂಘಿಸುತ್ತವೆ ಎಂದು ಗಿರೀಶ್ ಪ್ರತಿಪಾದಿಸಿದ್ದರು.

 

 

ಈ ಮಸೂದೆಯು ಕಾರ್ಯಾಂಗಕ್ಕೆ ಅತಿಯಾದ ಮತ್ತು ಅಸ್ಪಷ್ಟ ಅಧಿಕಾರವನ್ನು ನೀಡುತ್ತದೆ, 19(1)(a) ವಿಧಿಯ ಅಡಿಯಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುತ್ತದೆ ಮತ್ತು ಸ್ಪಷ್ಟ ವ್ಯಾಖ್ಯಾನಗಳನ್ನು ಹೊಂದಿಲ್ಲ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದ್ದರು.

 

ಜನಾಂಗೀಯ ನಿಂದನೆ, ಭಾಷೆ, ಜನಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದನ್ನು ತಡೆಗಟ್ಟಲು ಕಾಂಗ್ರೆಸ್‌ ಸರ್ಕಾರವು ಇದೀಗ ವಿಧೇಯಕವೊಂದನ್ನು ಸಿದ್ಧಪಡಿಸುತ್ತಿದೆ. ಮುಂಬರುವ ಅಧಿವೇಶನದಲ್ಲಿ ಈ ವಿಧೇಯಕವು ಕರಡು ಹಂತದಲ್ಲಿ ಇರುವಾಗಲೇ ಅಂದರೇ 2025ರ ಫೆ.6ರಂದೇ  ‘ದಿ ಫೈಲ್‌’,  ವರದಿ ಪ್ರಕಟಿಸಿತ್ತು.

 

ದ್ವೇ‍ಷ ಭಾಷಣ, ದ್ವೇಷ ಅಪರಾಧ ತಡೆಗಟ್ಟಲು ವಿಧೇಯಕ ರೂಪಿಸಿದ ಸರ್ಕಾರ; ಅಧಿವೇಶನದಲ್ಲಿ ಮಂಡನೆಗೆ ಸಿದ್ಥತೆ

 

ದ್ವೇಷ ಭಾಷಣವು ದೇಶದ ಜಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್‌  ವ್ಯಾಖ್ಯಾನಿಸಿತ್ತು.  ಜತೆಗೆ ಯಾವುದೇ ದೂರು ದಾಖಲಾಗದೆ ಇದ್ದರೂ ದ್ವೇಷ ಭಾಷಣ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.

 

ಈ ಸೂಚನೆ ಪಾಲಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ದ್ವೇಷ ಅಪರಾಧಗಳು ಮತ್ತು ದ್ವೇ‍ಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ಉದ್ದೇಶದಿಂದ ಈ ವಿಧೇಯಕವನ್ನು ರೂಪಿಸಿದೆ.

 

ಸಮಾಜದಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರ ಮಾಡುವುದು, ದ್ವೇಷ ಹುಟ್ಟಿಸುವಂತ ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಂತಹ ಅಪರಾಧಗಳಿಗೆ ದಂಡನೆಯನ್ನು ವಿಧಿಸಲಿದೆ.

 

 

 

 

 

ದ್ವೇಷ ಅಪರಾಧಗಳು ಮತ್ತು ದ್ವೇ‍ಷ  ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕ 2025ದ ಪ್ರಕಾರ ಅಪರಾಧಗಳ ಪಟ್ಟಿಯನ್ನು ವಿಧೇಯಕದಲ್ಲಿ ನಮೂದಿಸಿದೆ. ಇದರ ಪ್ರಕಾರ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ,  ವಾಸಸ್ಥಳ,  ಅಂಗವೈಕಲ್ಯ, ಬುಡಕಟ್ಟುವಿನ ಕುರಿತು ಪೂರ್ವಾಗ್ರಹಗಳನ್ನು ಒಳಗೊಳ್ಳುವುದು ಸಹ ದ್ವೇಷ ಭಾಷಣದ ವ್ಯಾಪ್ತಿಗೆ ಬರಲಿದೆ.

 

 

ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲಿದೆ. ಅಥವಾ 5 ಸಾವಿರ ರುವರೆಗೆ ದಂಡ ಮತ್ತು ಈ ಎರಡನ್ನೂ ವಿಧಿಸಲಿದೆ ಎಂದು ಕರಡು ವಿಧೇಯದಲ್ಲಿ ಪ್ರಸ್ತಾವಿಸಿತ್ತು.

 

 

 

 

 

 

 

ವಿಧಾನಮಂಡಲದಲ್ಲಿ ಅಂಗೀಕೃತವಾಗಿರುವ ವಿಧೇಯಕದ ಪ್ರಕಾರ ದ್ವೇ‍ಷ ಅಪರಾಧ ಎಸಗುವ ವ್ಯಕ್ತಿಗೆ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದೇ 7 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 50,000 ರು. ಗಳ ಜುಲ್ಮಾನೆ ವಿಧಿಸಲಾಗಿದೆ. ಹಾಗೆಯೇ ಇಂತಹ ಅಪರಾಧಗಳನ್ನು ಪುನರಾವರ್ತಿಸಿದಲ್ಲಿ 2 ವರ್ಷಗಳಿಗೆ ಕಡಿಮೆಯಿಲ್ಲದ ಮತ್ತು 10 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರು ದಂಡಕ್ಕೆ ಗುರಿಯಾಗಬೇಕಾಗುತ್ತದೆ.

 

 

ಅದೇ ರೀತಿ ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಹುಟ್ಟಿನ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವಂತೆ  ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು ಅಥವಾ ಸಮರ್ಥಿಸುವವರು, ವಕಾಲತ್ತು ವಹಿಸುವವರನ್ನೂ ಶಿಕ್ಷೆಗೆ ಗುರಿಪಡಿಸಲಿದೆ.

 

ಕರಡು ವಿಧೇಯಕದಲ್ಲಿ  ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಇದರಲ್ಲಿ ಒಳಗೊಂಡಿದೆ. ಇದರ ಮಾಹಿತಿಯು   ದತ್ತಾಂಶ, ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಅಥವಾ ಮೈಕ್ರೋಫಿಲ್ಮ್ ಅಥವಾ ಕಂಪ್ಯೂಟರ್ ರಚಿತ ಮೈಕ್ರೋಫಿಚೆಗಳನ್ನು ದ್ವೇ‍ಷ ಭಾಷಣ ಮತ್ತು ದ್ವೇ‍ಷ ಅಪರಾಧದ ವ್ಯಾಪ್ತಿಗೆ ಒಳಪಡಿಸಿತ್ತು.

 

 

 

ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿರುವ ವಿಧೇಯಕದಲ್ಲಿ ಸಂವಹನ ಪದವನ್ನು ಉಲ್ಲೇಖಿಸಿದೆ. ಇದರ ಪ್ರಕಾರ ಸಾರ್ವಜನಿಕರ ದೃಷ್ಟಿಗೆ ಬೀಳುವಂತೆ ಮೌಖಿಕ, ಮುದ್ರಣ, ಪ್ರಕಟಣೆ, ವಿದ್ಯುನ್ಮಾನ ವಿಧಾನಗಳ ಮೂಲಕ ಅಥವಾ ಅಂತಹ ಇತರ ವಿಧಾನಗಳ ಮೂಲಕ ಅಭಿವ್ಯಕ್ತಿಯ ಸಂವಹನವನ್ನು ತಿಳಿ ಹೇಳುವುದಕ್ಕಾಗಿ ಮಾಡಲಾಗುವ ಸಂವಹನವನ್ನೂ ಒಳಗೊಳ್ಳಲಿದೆ ಎಂದು ವ್ಯಾಖ್ಯಾನಿಸಿದೆ.

 

 

ಕರಡು ವಿಧೇಯಕದ ಪ್ರಕಾರ  ಯಾವುದೇ ನಿರ್ದಿಷ್ಟ ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿದಂತೆ ಮಧ್ಯವರ್ತಿ ಎಂದರೆ, ಇನ್ನೊಬ್ಬ ವ್ಯಕ್ತಿಯ ಪರವಾಗಿ ಆ ದಾಖಲೆಯನ್ನು ಸ್ವೀಕರಿಸುವ, ಸಂಗ್ರಹಿಸುವ ಅಥವಾ ರವಾನಿಸುವ ಅಥವಾ ಆ ದಾಖಲೆಗೆ ಸಂಬಂಧಿಸಿದಂತೆ ಯಾವುದೇ ಸೇವೆಯನ್ನು ಒದಗಿಸುವ ಯಾವುದೇ ವ್ಯಕ್ತಿ ಮತ್ತು ಪ್ರಸಾರ ಮಾಡುವ ವಾಹಿನಿಗಳು (ಚಾನೆಲ್‌ಗಳು)ನ್ನೂ ಸೇರಿಸಿತ್ತು.

 

ಹಾಗೆಯೇ  ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್‌ವರ್ಕ್ ಸೇವಾ ಪೂರೈಕೆದಾರರು, ಇಂಟರ್ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್-ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸಿತ್ತು.

 

 

 

 

 

 

ಅಂಗೀಕೃತಗೊಂಡಿರುವ ವಿಧೇಯಕದಲ್ಲಿ ದ್ವೇಷ ಅಪರಾಧದ ವಿಷಯ ವಸ್ತುಗಳನ್ನು ಬ್ಲಾಕ್‌ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವನ್ನೂ ನೀಡಲಾಗಿದೆ. ಯಾರೇ ಸೇವಾದಾತ, ಮಧ್ಯವರ್ತಿ, ವ್ಯಕ್ತಿ ಅಥವಾ ಸಂಸ್ಥೆಗೆ ವಿದ್ಯುನ್ಮಾನ ಮಾಧ್ಯಮವನ್ನೂ ಒಲಗೊಂಡಂತೆ ತನ್ನ ಡೊಮೈನ್‌ನಿಂದ ದ್ವೇಷ ಅಪರಾಧದ ವಿಷಯ ವಸ್ತುಗಳನ್ನು ಬ್ಲಾಕ್‌ ಮಾಡಲು ಅಥವಾ ತೆಗೆದು ಹಾಕಲು ನಿರ್ದೇಶಿಸುವ ಅಧಿಕಾರವನ್ನೂ ನೀಡಲಾಗಿದೆ.

 

ಧಾರ್ಮಿಕ ಸೌಹಾರ್ದತೆಗೆ ಧಕ್ಕೆ, ಕೋಮು ಸೌಹಾರ್ದವನ್ನು ಹಾಳುಗೆಡವುದು, ಸಾರ್ವಜನಿಕರಲ್ಲಿ ದ್ವೇಷ ಭಾವನೆ ಮೂಡಿಸಿರುವುದು, ಸುಳ್ಳು, ಪ್ರಚೋದಕ ಮತ್ತು ವಿಡಿಯೋ ತುಣುಕುಗಳನ್ನು ಬದಲಿಸಿ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವುದು ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿರುವಂತಹ ಗುರುತರ ಆರೋಪ ಮತ್ತು ಹಲವು ಗಂಭೀರ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿರುವ ಪ್ರಕರಣಗಳೂ ಸೇರಿದಂತೆ ಕಳೆದ ಒಂದೇ ವರ್ಷದಲ್ಲಿ ಒಟ್ಟು 330 ಪ್ರಕರಣಗಳನ್ನು  ಹಿಂದಿನ ಬಿಜೆಪಿ ಸರ್ಕಾರವು ಅಭಿಯೋಜನೆಯಿಂದಲೇ ಹಿಂಪಡೆದಿತ್ತು.

 

2013-14ರಿಂದ 2017-18ರವರೆಗೆ 600 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿತ್ತು. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಸೇರಿದ ಯಾರೊಬ್ಬರ ಪ್ರಕರಣವನ್ನು ಹಿಂಪಡೆದಿರುವುದಿಲ್ಲ ಎಂಬುದು ಆರ್‌ಟಿಐ ಅಡಿ ನೀಡಿರುವ ದಾಖಲೆಗಳಿಂದ ಗೊತ್ತಾಗಿದೆ. ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಒಂದೇ ಒಂದು ವರ್ಷದಲ್ಲಿ 330 ಪ್ರಕರಣಗಳನ್ನು ಹಿಂಪಡೆದಿತ್ತು.

 

ಹೆಚ್ಚಿನ ಪ್ರಕರಣಗಳಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಉತ್ತರ ಕನ್ನಡ ಹಿಂದೂ ಬಳಗ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳಾಗಿದ್ದಾರೆ. ಕಾವೇರಿ ನೀರಿನ ಗಲಾಟೆ, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಹಿಂಪಡೆದಿದ್ದಾರಾದರೂ ಈ ಸಂಖ್ಯೆ ಬೆರಳಣಿಕೆಯಷ್ಟಿದ್ದವು.

 

ರೈತರ, ನಕ್ಸಲರ, ಕನ್ನಡ ಪರ ಹೋರಾಟಗಾರರ ವಿರುದ್ಧ ಹಿಂದಿನ ಕಾಂಗ್ರೆಸ್‌ ಸರ್ಕಾರವು ಮೊಕದ್ದಮೆಗಳನ್ನು ಹಿಂಪಡೆಯಲಾಗಿತ್ತೇ ವಿನಃ ಕೋಮು ಸೌಹಾರ್ದ ಹಾಳುಗೆಡವಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿರಲಿಲ್ಲ. ಆದರೆ ಹಿಂದಿನ ಅವಧಿಯಲ್ಲಿ ಕೋಮು ಮತ್ತು ಧಾರ್ಮಿಕ ಸೌಹಾರ್ದ ಹಾಳುಗೆಡವಿರುವ ಪ್ರಕರಣಗಳನ್ನು ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿಯೋಜನೆಯಿಂದ ಹಿಂಪಡೆದಿತ್ತು.

 

ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ,ಹಿಂಸಾಚಾರ; ಒಂದೇ ವರ್ಷದಲ್ಲಿ 330 ಪ್ರಕರಣ ಹಿಂಪಡೆದ ಸರ್ಕಾರ

 

ಅದೇ ರೀತಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿಯೂ (2018ರ ಆಗಸ್ಟ್‌ 7) 98 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ, ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಸಂದರ್ಭದಲ್ಲಿ ಜೈ ಶ್ರೀರಾಮ್‌ ಎಂದು ಘೋಷಣೆಗಳೊಂದಿಗೆ ಕೋಳಿ ಅಂಗಡಿ (ಪುತ್ತೂರು)ಗೆ ನುಗ್ಗಿ, ಕಲ್ಲು ತೂರಾಟ ನಡೆಸಿದ್ದ ಪ್ರಕರಣವೂ ಈ ಪಟ್ಟಿಯಲ್ಲಿತ್ತು.

 

ಕನ್ನಯ್ಯಕುಮಾರ್‌ ಮತ್ತು ವೇಮುಲ ಕುಮಾರ್‌ ಪರ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದ ಸಂದರ್ಭದಲ್ಲಿ ಎಬಿವಿಪಿ, ಆರ್‌ಎಸ್‌ಎಸ್‌ ಸಂಘಟನೆಯವರು ಎಂದು ಹೇಳಿಕೊಂಡಿದ್ದವರು ಕರಪತ್ರ ಹಂಚುತ್ತಿದ್ದವರಿಗೆ ಕೈಗಳಿಂದ ಮತ್ತು ಹೆಲ್ಮಟ್‌ಗಳಿಂದ ಹೊಡೆದು ಹಲ್ಲೆ ಮಾಡಿದ್ದ ಪ್ರಕರಣವನ್ನೂ ಕೈ ಬಿಡಲಾಗಿತ್ತು.

Your generous support will help us remain independent and work without fear.

Latest News

Related Posts