ಚುನಾವಣೆಗಳಲ್ಲಿ ಹಣಬಲ, ತೋಳ್ಬಲ; ಕಲ್ಬುರ್ಗಿ, ಮೈಸೂರು, ಬೆಳಗಾವಿ, ಬೆಂಗಳೂರಿನಲ್ಲಿ ಪ್ರಭಾವ ಬೀರಿದ್ದೆಷ್ಟು?

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ  ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಅವರ ತವರು ಜಿಲ್ಲೆಯಲ್ಲಿಯೂ  ಚುನಾವಣೆಗಳಲ್ಲಿ ಹಣ ಮತ್ತು ತೋಳ್ಬಲದ ಪ್ರಭಾವವು ಹೆಚ್ಚಾಗಿದೆ ಎಂಬ ಸಂಗತಿಯನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನ ವರದಿಯು ಬಹಿರಂಗಗೊಳಿಸಿದೆ.

 

‘ದಿ ಫೈಲ್‌’ ಬಹಿರಂಗಪಡಿಸಿದ್ದ  ಇವಿಎಂಗಳ ನಿಖರತೆ ಮತ್ತು ವಿಶ್ವಾಸಾರ್ಹತೆ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಯನ ವರದಿಯು ಕಾಂಗ್ರೆಸ್‌ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಇದರ ಬೆನ್ನಲ್ಲೇ ಇದೇ ಅಧ್ಯಯನ ವರದಿಯಲ್ಲಿ ಕಲ್ಬುರ್ಗಿ,  ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ವಿಭಾಗದಲ್ಲಿ ನಡೆದಿದ್ದ ಚುನಾವಣೆಗಳಲ್ಲಿ ಹಣ ಬಲ ಮತ್ತು ತೋಳ್ಬಲವು ಹೇಗೆ ಪ್ರಭಾವ ಬೀರಿದೆ ಎಂದು ವಿಶ್ಲೇಷಣೆಯೂ ಇದೆ.

 

ಕೇಂದ್ರ ಚುನಾವಣಾ ಆಯೋಗದ ಮಹತ್ವಾಕಾಂಕ್ಷಿ ‘ಸ್ವೀಪ್’ (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಆಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್) ಉಪಕ್ರಮದಿಂದ ಚುನಾವಣಾ ಸಾಕ್ಷರತೆ, ಮತದಾರರ ಪಾಲ್ಗೊಳ್ಳುವಿಕೆ ಹಾಗೂ ವರ್ತನಾ ಬದಲಾವಣೆಗಳಲ್ಲಿ ಆಗಿರುವ ಬದಲಾವಣೆಗಳ ಪ್ರಮಾಣ ಅರಿಯಲು ನಡೆಸಲಾದ ಸಮೀಕ್ಷಾ ಅಧ್ಯಯನ ಈ ಬಗ್ಗೆ ಬೆಳಕು ಚೆಲ್ಲಿದೆ.

 

ಈ ಅಧ್ಯಯನ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಹಣ ಬಲ ಎಲ್ಲೆಲ್ಲಿ?

 

ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ  ಹಣದ ಪ್ರಭಾವ ಹೆಚ್ಚಾಗುತ್ತಿದೆ ಎಂದು ಶೇ. 49.55ರಷ್ಟು  ಮತದಾರರು ಅಭಿಪ್ರಾಯಪಟ್ಟಿದ್ದಾರೆ.   ಮೈಸೂರು ವಿಭಾಗದಲ್ಲಿ ಶೇಕಡ  62.25 ರಷ್ಟು, ಬೆಂಗಳೂರು ವಿಭಾಗದ ಶೇ 56.44%, ಕಲಬುರಗಿ ವಿಭಾಗದಲ್ಲಿ ಶೇ. 44 ಹಾಗೂ ಬೆಳಗಾವಿ ವಿಭಾಗದಲ್ಲಿ ಶೇ.  28.76ರಷ್ಟು ಪ್ರಮಾಣದಲ್ಲಿ ಹಣಬಲ ಹೆಚ್ಚುತ್ತಿರುವುದಾಗಿ ಸೂಚಿಸಿದ್ದಾರೆ.

 

 

 

ಇನ್ನು, ಹಣದ ಪ್ರಬಾವ ಹೆಚ್ಚಳವಾಗುತ್ತಿರುವುದನ್ನು ಅಲ್ಲಗಳೆದವರ ಪ್ರಮಾಣ  ಶೇ. 35.33ರಷ್ಟಿದ್ದರೆ, ಶೇ. 15.22ರಷ್ಟು ಮತದಾರರು ತಟಸ್ಥ ನಿಲುವು ವ್ಯಕ್ತಪಡಿಸಿದ್ದಾರೆ.

 

 

ತಟಸ್ಥ ಅಭಿಪ್ರಾಯ ವ್ಯಕ್ತಪಡಿಸಿದವರ ಪ್ರಮಾಣವು ಬೆಳಗಾವಿ ವಿಭಾಗದಲ್ಲಿ ಅತ್ಯಧಿಕ ಶೇ.  25.24ರಷ್ಟಿದ್ದರೆ, ಕಲಬುರಗಿಯಲ್ಲಿ ಈ ಸಂಖ್ಯೆ ಕನಿಷ್ಠ ಶೇ.  6.95ರಷ್ಟಿದೆ ಎಂದು ಅಂಕಿಅಂಶಗಳು ಗಮನ ಸೆಳೆದಿವೆ.

 

ತೋಳ್ಬಲದ ಪ್ರಭಾವ ಎಲ್ಲೆಲ್ಲಿ?

 

ಚುನಾವಣೆಯಿಂದ ಚುನಾವಣೆಗೆ ತೋಳ್ಬಲದ ಪ್ರಭಾವ ಹೆಚ್ಚುತ್ತಿರುವುದಾಗಿ ಶೇ.  40.84 ರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದರೆ, ಶೇ  45.12ರಷ್ಟು ಜನ ಇದನ್ನು ಅಲ್ಲಗಳೆದಿದ್ದಾರೆ.  ಮೈಸೂರು ವಿಭಾಗದಲ್ಲಿ ಶೇ. 57.17 ಹಾಗೂ ಬೆಂಗಳೂರು ವಿಭಾಗದಲ್ಲಿ 46.89% ಮತದಾರರು ತೋಳ್ಬಲದ ಪ್ರಭಾವ ಏರಿಕೆಯಾಗುತ್ತಿದೆ ಎಂದಿದ್ದಾರೆ.

 

 

ಆದರೆ, ಬೆಳಗಾವಿ ವಿಭಾಗದಲ್ಲಿ ಅತ್ಯಂತ ಕಡಿಮೆ, ಅಂದರೇ ಶೇ. 15.61ರಷ್ಟು ಮತದಾರರು ಇದಕ್ಕೆ ಸಹಮತ ಸೂಚಿಸಿದ್ದರೆ, ಶೇ. 68.57 ಜನರು ಇದನ್ನು ಅಲ್ಲಗಳೆದಿದ್ದಾರೆ. ಕಲಬುರಗಿಯಲ್ಲಿ ಶೇ.  37.05 ರಷ್ಟು ಮಂದಿ ಸಮ್ಮತಿ ಸೂಚಿಸಿದ್ದರೆ, ಅಸಮ್ಮತಿ ವ್ಯಕ್ತಪಡಿಸಿದವರ ಪ್ರಮಾಣ ಶೇ.  56.28ರಷ್ಟಿದೆ. ಈ ಬಗ್ಗೆ ತಟಸ್ಥ ಅಭಿಪ್ರಾಯ ವ್ಯಕ್ತಪಡಿಸಿದವರ ಪ್ರಮಾಣವು ಬೆಂಗಳೂರು ವಿಭಾಗದಲ್ಲಿ ಅತ್ಯಧಿಕ ಅಂದರೇ ಶೇ. 21.39ರಷ್ಟಿದ್ದರೆ ಕಲಬುರಗಿಯಲ್ಲಿ ತಟಸ್ಥ ನಿಲುವಿನವರ ಪ್ರಮಾಣ ಕನಿಷ್ಠ, ಅಂದರೆ ಶೇ.  6.67ರಷ್ಟಿದೆ.

 

 

ಚುನಾವಣಾ ಸಾಕ್ಷರತೆ ವೃದ್ಧಿ

 

ಚುನಾವಣಾ ಸಾಕ್ಷರತೆ 2018 ಹಾಗೂ 2025ರ ನಡುವೆ ಸಾಕಷ್ಟು ಬದಲಾವಣೆಗಳಾಗಿವೆ. ಎಪಿಕ್ ಹೊಂದಿದವರ ಪ್ರಮಾಣ 8.8 ಪರ್ಸೆಂಟೇಜ್ ಪಾಯಿಂಟ್ಸ್ ( ಪಿ.ಪಿ), ಮತಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿದವರ ಸಂಖ್ಯೆ 5.78 ಪರ್ಸೆಂಟೇಜ್ ಪಾಯಿಂಟ್ಸ್, ನೋಟಾ ಬಗ್ಗೆ ತಿಳಿದವರ ಪ್ರಮಾಣ 11 ಪಿ.ಪಿ, ವಿವಿ ಪ್ಯಾಟ್ ಕುರಿತು ಅರಿವುಳ್ಳವರ ಸಂಖ್ಯೆ 39.4 ಪಿಪಿ, ಇವಿಎಂನಲ್ಲಿ ಬ್ರೈಲ್ ಸೌಲಭ್ಯದ ಬಗ್ಗೆ ತಿಳಿವಳಿಕೆ 29.4 ಪಿಪಿ ಹಾಗೂ ವೋಟರ್ ಪೋರ್ಟಲ್ ಗಳು/ವೆಬ್ ಸೈಟ್ ಗಳ ಬಳಕೆ ಪ್ರಮಾಣ 9.4 ಪಿಪಿಯಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯನ ನಡೆಸಿದ ತಜ್ಞರು ಉಲ್ಲೇಖಿಸಿದ್ದಾರೆ.

 

ಚುನಾವಣೆಗಳಲ್ಲಿ ಹಣಬಲದ ಪ್ರಭಾವ, ತೋಳ್ಬಲದ ಪ್ರಭಾವ, ಚುನಾವಣಾ ಆಪ್ ಗಳು, ಪೋರ್ಟಲ್, ವೆಬ್ ಸೈಟ್ ಗಳ ಕುರಿತಾದ ಅರಿವು, ಇವಿಎಂ ನಲ್ಲಿರುವ ಬ್ರೈಲ್ ಲಿಪಿಯ ಸೌಲಭ್ಯ ಸೇರಿದಂತೆ ವಿವಿಧ ಅಂಶಗಳ ಬಗೆಗೂ ಅಧ್ಯಯನ ಮೌಲ್ಯಮಾಪನವು ಬೆಳಕು ಚೆಲ್ಲಿದೆ.

 

ಉತ್ಸಾಹದ ಮಟ್ಟ

 

ಮುಂಬರುವ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಬಗೆಗಿನ ಉತ್ಸಾಹ ಯಾವ ಮಟ್ಟದಲ್ಲಿದೆ ಎಂಬ ಅಂದಾಜನ್ನೂ ಸಮೀಕ್ಷೆ ಒಳಗೊಂಡಿದೆ. ಆ ಪ್ರಕಾರವಾಗಿ, ನಾಲ್ಕು ವಿಭಾಗಗಳ ಪೈಕಿ, ಬೆಂಗಳೂರು ವಿಭಾಗದಲ್ಲಿ ಶೇ.  33.11ರಷ್ಟು ಮತದಾರರಿಂದ ನಿರುತ್ಸಾಹ ವ್ಯಕ್ತವಾಗಿದ್ದರೆ,  ಕಲಬುರಗಿಯಲ್ಲಿ ಇದು ಶೇ.  34.57ರಷ್ಟಿದೆ. ಬೆಳಗಾವಿ ವಿಭಾಗದಲ್ಲಿ ನಿರುತ್ಸಾಹದ  ಪ್ರಮಾಣ ಶೇ.  15.52 ಹಾಗೂ ಮೈಸೂರು ವಿಭಾಗದಲ್ಲಿ ಶೇ. 22.77ರಷ್ಟು ಕಂಡುಬಂದಿದೆ.

 

ಆಪ್ ಗಳ ಬಗ್ಗೆ ಕಡಿಮೆ ಅರಿವು

 

ಸಿ-ವಿಜಿಲ್ ಆಪ್ ಬಗೆಗಿನ ಅರಿವಿನ ಪ್ರಮಾಣವು ಕಡಿಮೆ, ಅಂದರೆ, ಶೇ.  12.45ರಷ್ಟು ಮಾತ್ರ ಇದ್ದು, ಈ ಬಗ್ಗೆ ಅರಿವು ಇಲ್ಲದಿರುವವರ ಪ್ರಮಾಣ ಶೇ.  87.55ರಷ್ಟಿದೆ. ಮೈಸೂರು ವಿಭಾಗದಲ್ಲಿ ಶೇ.  20.33ರಷ್ಟು, ಬೆಂಗಳೂರು ವಿಭಾಗದಲ್ಲಿ ಶೇ.  14.22ರಷ್ಟು, ಬೆಳಗಾವಿ ವಿಭಾಗದಲ್ಲಿ ಶೇ. 6.95ರಷ್ಟು, ಕಲಬರುಗಿ ವಿಭಾಗದಲ್ಲಿ ಶೇ. 5.90ರಷ್ಟು ಹಾಗೂ ಮೈಸೂರು ವಿಭಾಗದಲ್ಲಿ 20.33%ರಷ್ಟು ಮತದಾರರು ಮಾತ್ರ ಈ ಬಗ್ಗೆ ಅರಿವು ಹೊಂದಿದ್ದಾರೆ ಎಂಬುದನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

 

ಚುನಾವಣಾ ಆಪ್

 

ಅದೇ ರೀತಿಯಾಗಿ, ಚುನಾವಣಾ ಆಪ್ ಬಗ್ಗೆ 22.98%ರಷ್ಟು ಮತದಾರರಿಗೆ ಅರಿವಿದ್ದರೆ, ಈ ಬಗ್ಗೆ ಅರಿಯದವರ ಪ್ರಮಾಣ 77.02%ರಷ್ಟಿದೆ. ಈ ಬಗ್ಗೆ ಅರಿವಿರುವವರ ಪ್ರಮಾಣವು ಮೈಸೂರು ವಿಭಾಗದಲ್ಲಿ 30.25%ರಷ್ಟು, ಬೆಂಗಳೂರು ವಿಭಾಗದಲ್ಲಿ 26.22%, ಬೆಳಗಾವಿ ವಿಭಾಗದಲ್ಲಿ 22.19%ರಷ್ಟು ಹಾಗೂ ಕಲಬುರಗಿಯಲ್ಲಿ 9.90%ರಷ್ಟಿದೆ.

 

ಕೆವೈಸಿ ಆಪ್

 

ಕೆವೈಸಿ ಆಪ್  ಬಗ್ಗೆ ಅರಿವಿರುವುದಾಗಿ 46.22ರಷ್ಟು ಮತದಾರರು ತಿಳಿಸಿದ್ದರೆ, 53.78% ಈ ಬಗ್ಗೆ ತಮಗೆ ಯಾವುದೇ ತಿಳಿವಳಿಕೆ ಇಲ್ಲ ಎಂದಿದ್ದಾರೆ. ಈ ಆಪ್ ಕುರಿತು ಬೆಳಗಾವಿ ವಿಭಾಗದಲ್ಲಿ 66%, ಬೆಂಗಳೂರು ವಿಭಾಗದಲ್ಲಿ 56.11%, ಮೈಸೂರು ವಿಭಾಗದಲ್ಲಿ 45.17% ಮತ್ತು ಕಲಬುರಗಿ ವಿಭಾಗದಲ್ಲಿ 10.67% ಮತದಾರರು ಅರಿವಿರುವುದಾಗಿ ನಮೂದಿಸಿದ್ದಾರೆ.

 

‘ನೋಟಾ’ ಅರಿವು

 

‘ನೋಟಾ’ (ಈ ಮೇಲಿನ ಯಾವ ಅಭ್ಯರ್ಥಿಗೂ ಬೆಂಬಲವಿಲ್ಲ) ಮತ ಚಲಾವಣೆಗೆ ಅವಕಾಶವಿರುವ  ಬಗ್ಗೆ ಅರಿವುಳ್ಳವರ ಪ್ರಮಾಣ 79.37%ರಷ್ಟಿದ್ದರೆ, ಅರಿವಿಲ್ಲದವರ ಸಂಖ್ಯೆ 20.63%ರಷ್ಟಿದೆ. ಅರಿವಿಲ್ಲದವರ ಪ್ರಮಾಣವು ಬೆಂಗಳೂರು ವಿಭಾಗದಲ್ಲಿ ಅತ್ಯಧಿಕ 25.06%ರಷ್ಟಿದೆ. ಉಳಿದಂತೆ, ಇದು ಕಲಬುರಗಿಯಲ್ಲಿ 20.67%ರಷ್ಟು, ಮೈಸೂರಿನಲ್ಲಿ 17.58%ರಷ್ಟು ಹಾಗೂ ಬೆಳಗಾವಿಯಲ್ಲಿ 16.48%ರಷ್ಟಿದೆ.  ಅರಿವುಳ್ಳವರ ಪೈಕಿ 59.45%ರಷ್ಟು ಮತದಾರರು ಮತ ಚಲಾಯಿಸುವ ವೇಳೆ ನೋಡಿ, 6.45%ರಷ್ಟು ಮಂದಿ ಚುನಾವಣಾ ಸಾಕ್ಷರತಾ ಸೆಷನ್ ಗಳಿಂದ, 13.47ರಷ್ಟು ಜನ ಕೇಳಿ ಅಥವಾ ಓದಿ ತಿಳಿದಿರುವುದಾಗಿ ಹೇಳಿದ್ದಾರೆ. .

 

ಬ್ರೈಲ್ ಸೌಲಭ್ಯ

 

ಇವಿಎಂ ನಲ್ಲಿ ಬ್ರೈಲ್ ಲಿಪಿಯ ಸೌಲಭ್ಯ ಇರುವ ಬಗ್ಗೆ ತಮಗೆ ಅರಿವಿದೆ ಎಂದು 76.71%ರಷ್ಟು ಮತದಾರರು ಹೇಳಿದ್ದರೆ, ತಮಗೆ ಅಂತಹ ವ್ಯವಸ್ಥೆ ಇರುವ ಬಗ್ಗೆ ಗೊತ್ತಿಲ್ಲವೆಂದು 23.29%ರಷ್ಟು ಮತದಾರರು ತಿಳಿಸಿದ್ದಾರೆ.

 

ಮಹಿಳೆಯರಿಗೆ ನಿರ್ಧಾರ ಸ್ವಾತಂತ್ರ್ಯ

 

ಹೆಂಗಸರು ಚುನಾವಣೆಯಲ್ಲಿ ಮತ ಚಲಾಯಿಸುವ ಮುನ್ನ ಗಂಡಸರೊಂದಿಗೆ ಅಥವಾ ಹಿರಿಯರೊಂದಿಗೆ ಸಮಾಲೋಚನೆ ನಡೆಸಬೇಕೆ ಎಂಬ ಪ್ರಶ್ನೆಯನ್ನೂ  ಸಮೀಕ್ಷೆ ವೇಳೆ ಕೇಳಲಾಗಿತ್ತು. ಇದಕ್ಕೆ, 37.71% ‘ಸಮಾಲೋಚಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದ್ದರೆ, ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ 51.64%ರಷ್ಟು ‘ಮಂದಿ ಸಮಾಚೋಚನೆ ನಡೆಸುವ ಅಗತ್ಯವಿಲ್ಲ’ ಎಂದಿದ್ದಾರೆ. ಈ ಸಂಬಂಧ ತಟಸ್ಥ ನಿಲುವು ವ್ಯಕ್ತಪಡಿಸಿದವರ ಪ್ರಮಾಣವು 10.65%ರಷ್ಟಿದ್ದು, ಇದು ಮೈಸೂರು ವಿಭಾಗದಲ್ಲಿ 7.92%, ಬೆಂಗಳೂರಿನಲ್ಲಿ 14.28%ರಷ್ಟಿದೆ.

 

 

ಬೆಂಗಳೂರು ವಿಭಾಗದ 12 ಚುನಾವಣಾ ಜಿಲ್ಲೆಗಳು, ಬೆಳಗಾವಿ ವಿಭಾಗದ 8 ಚುನಾವಣಾ ಜಿಲ್ಲೆಗಳು, ಕಲಬುರಗಿ ವಿಭಾಗದ 7 ಚುನಾವಣಾ ಜಿಲ್ಲೆಗಳು, ಮೈಸೂರು ವಿಭಾಗದ 7 ಚುನಾವಣಾ ಜಿಲ್ಲೆಗಳಲ್ಲಿ ಪ್ರಶ್ನಾವಳಿಗೆ ಪಡೆಯಲಾದ ಉತ್ತರಗಳು, 23 ವಿಸ್ತೃತ ಸಂದರ್ಶನಗಳು , ವಿವಿಧ ಮತದಾರರ ಸಮೂಹಗಳೊಂದಿಗೆ ನಡೆಸಲಾದ 57 ಗುರಿ ಕೇಂದ್ರಿತ ಸಂವಾದಗಳು, 16 ಬೂತ್ ಮಟ್ಟದ ಪ್ರಕರಣ ಅಧ್ಯಯನಗಳನ್ನು ಒಳಗೊಂಡಿರುವುದು ವರದಿಯಿಂದ ಗೊತ್ತಾಗಿದೆ.

 

‘ಲೋಕಸಭಾ ಚುನಾವಣೆ 2024- ನಾಗರಿಕರ ತಿಳಿವಳಿಕೆ, ದೃಷ್ಟಿಕೋನ ಮತ್ತು ಅನುಸರಣೆ (ಕೆಎಪಿ)ಗಳ ಸಮೀಕ್ಷೆಯ ಅವಲೋಕನ’  ಎಂಬ ಈ ಅಧ್ಯಯನಕ್ಕಾಗಿ ರಾಜ್ಯದ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಮತದಾರರನ್ನು ಮಾದರಿ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಪ್ರತಿ ಜಿಲ್ಲೆಯ ಒಂದು ನಗರ ಕ್ಷೇತ್ರ (ಸಾಮಾನ್ಯ), ಒಂದು  ಗ್ರಾಮೀಣ ಕ್ಷೇತ್ರ (ಸಾಮಾನ್ಯ) ಮತ್ತು ಒಂದು ಮೀಸಲು ಕ್ಷೇತ್ರವನ್ನು  ಹಾಗೂ ಪ್ರತಿ ಕ್ಷೇತ್ರದಲ್ಲಿ 50 ಮತದಾರರನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಲಾಗಿತ್ತು, . ಗ್ರಾಮೀಣ, ಅರೆಪಟ್ಟಣ ಹಾಗೂ ನಗರ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಅಧ್ಯಯನ ನಡೆಸಲಾಗಿದೆ ಎಂದು ವಿವರಿಸಲಾಗಿದೆ.

 

ಸಮಾಜದಲ್ಲಿ ಶಿಕ್ಷಿತರ ಸಂಖ್ಯೆ ಹಾಗೂ ಚುನಾವಣೆ ಸಾಕ್ಷರತೆ ವೃದ್ಧಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ,  ಚುನಾವಣೆಯಿಂದ ಚುನಾವಣೆಗೆ ಹಣದ ಪ್ರಭಾವ ಹೆಚ್ಚಾಗುತ್ತಿರುವ ವಿಪರ್ಯಾಸವು ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Your generous support will help us remain independent and work without fear.

Latest News

Related Posts