ಮಾಸ್ಟರ್‍‌ ಪ್ಲಾನ್‌ನಲ್ಲೂ ಶಾಶ್ವತ ಕೃಷಿ ವಲಯ; ತಾಂತ್ರಿಕ ಕೋಶಕ್ಕೆ ಕಡತ ಸಲ್ಲಿಕೆ, ಸರ್ಕಾರದಿಂದ ಮತ್ತೊಂದು ಹೆಜ್ಜೆ

ಬೆಂಗಳೂರು; ದೇವನಹಳ್ಳಿ  ತಾಲ್ಲೂಕಿನ ಚನ್ನರಾಯಪಟ್ಟಣ  ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ವಿಸ್ತೀರ್ಣದ ಜಮೀನನ್ನು ಶಾಶ್ವತ ಕೃಷಿ ವಲಯ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ನಗರಾಭಿವೃದ್ಧಿ ಇಲಾಖೆಯೂ ಸಹ ಈ ಸಂಬಂಧ ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾಗಿದೆ.

 

ಶಾಶ್ವತ ಕೃಷಿ ವಲಯ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಈಗಾಗಲೇ ಹೊರಡಿಸಿರುವ ಅಧಿಸೂಚನೆಗೆ ಚಿಂತಕರ ವಲಯವೂ ಸೇರಿದಂತೆ ಕೃಷಿಕರಲ್ಲಿಯೂ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯೂ ಸಹ ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಬರೆದಿರುವ ಪತ್ರದ ಮೇಲೆ ‘ಯಾವುದೇ ಕಾರಣಕ್ಕೂ ಭೂ ಬಳಕೆಯ ಬದಲಾವಣೆ ಪ್ರಸ್ತಾವನೆಯನ್ನು ಸ್ವೀಕರಿಸಬಾರದು,’ ಎಂದು ಷರಾ ನಮೂದಿಸಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

 

ಹಾಗೆಯೇ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನಿನ ಸರ್ವೆ ನಂಬರ್‍‌ಗಳಿಗೆ ಸಂಬಂಧಿಸಿದಂತೆ  ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್‍‌ ಪ್ಲಾನ್‌ನಲ್ಲಿಯೂ  ಶಾಶ್ವತ ಕೃಷಿ ವಲಯ ಎಂದು ತುರ್ತಾಗಿ ನಮೂದಿಸಬೇಕು ಎಂದೂ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‍‌ ಗಿರಿನಾಥ್‌ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ಕಡತದ (UDD/651/BMR/2025- COMPUTER NUMBER 2010668)  ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು ಶಾಶ್ವತ ಕೃಷಿ ವಲಯ ಪ್ರದೇಶ ಎಂದು ಘೋಷಿಸಲು 2025ರ ಡಿಸೆಂಬರ್‍‌ 4ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಈ ತೀರ್ಮಾನ ಹೊರಬಿದ್ದ ಎರಡೇ ಎರಡು ದಿನದಲ್ಲಿ ಅಂದರೇ 2025ರ ಡಿಸೆಂಬರ್‍‌ 6ರಂದು  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಅಧಿಕೃತ ಆದೇಶ ಹೊರಡಿಸಿತ್ತು.

 

 

ಇದೇ ಆದೇಶದಲ್ಲಿನ ಸಿ ಭಾಗದಲ್ಲಿ ‘ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಗುಂಟೆ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿಗಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದೆ. ನಗರಾಭಿವೃದ್ಧಿ ಇಲಾಖೆಯು ಸಂಬಂಧಪಟ್ಟ ಸಮವರ್ತಿತ ಅಧಿಸೂಚನೆಯನ್ನು ಹೊರಡಿಸಬೇಕು,’ ಎಂದು ತಿಳಿಸಿತ್ತು.

 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ನಗರ ಯೋಜನೆಯ 2025ರ ಡಿಸೆಂಬರ್ 22ರಂದು  ತಾಂತ್ರಿಕ ಕೋಶದ ಅಭಿಪ್ರಾಯ ಪಡೆಯಲು ಕಡತವನ್ನು ಮಂಡಿಸಿದೆ.

 

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಸೆಲ್ವಕುಮಾರ್‍‌ ಅವರೂ ಸಹ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ತುಷಾರ್‍‌ ಗಿರಿನಾಥ್‌ ಅವರಿಗೆ 2025ರ ಡಿಸೆಂಬರ್ 12ರಂದೇ ಪತ್ರ ಬರೆದಿದ್ದರು.

 

‘ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ವಿಸ್ತೀರ್ಣದ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆಯು ಸಮವರ್ತಿತ ಅಧಿಸೂಚನೆ ಹೊರಡಿಸಲು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್‍‌ ಪ್ಲಾನ್‌ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ನಮೂದು ಮಾಡಬೇಕು,’  ಎಂದು ಕೋರಿದ್ದರು.

 

ಅದೇ ರೀತಿ  ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್‍‌ ಪ್ಲಾನ್‌ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ನಮೂದು ಮಾಡಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸೆಲ್ವಕುಮಾರ್ ಅವರು ಬರೆದಿದ್ದ ಪತ್ರದ ಮೇಲೆ  Urgent; Please immediately take steps to issue notification accordingly. No change of land use proposal should be entertained at any cost’ ಎಂದು ಷರಾ ನಮೂದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನ ನ್ನು ಇದರಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅದಕ್ಕೆ ಮುಕ್ತ ಅವಕಾಶವಿದೆ. ಈ ಕುರಿತು ರೈತರು ಅಪಪ್ರಚಾರ, ಗೊಂದಲ ಮತ್ತು ತಪ್ಪು ಕಲ್ಪನೆಗಳಿಗೆ ಕಿವಿಗೊಡಬಾರದು ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಹೇಳಿದ್ದರು.

 

ಚನ್ನರಾಯಪಟ್ಟಣ ಹೋಬಳಿ  ಸರಕಾರವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹೀಗೆ ಮಾಡುವುದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂಬುದು ಸುಳ್ಳು. ಸರಕಾರದ ಉದ್ದೇಶ ಈ ಕೃಷಿ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡುವುದನ್ನು ಹಾಗೂ ರೈತರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುವವರಿಗೆ ಕಡಿವಾಣ ಹಾಕುವುದೇ ಆಗಿದೆ. ತಮ್ಮ ಜಮೀನನ್ನು ಮಾರಾಟ ಮಾಡುವ ರೈತರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಸಿದುಕೊಂಡಿಲ್ಲ’ ಎಂದು ಅವರು ವಿವರಿಸಿದ್ದರು.

 

ದೇವನಹಳ್ಳಿ ಸಮೀಪ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ಸರಕಾರಕ್ಕೆ ಈ ಭೂಮಿಯ ಅಗತ್ಯ ಹೆಚ್ಚು ಇತ್ತು. ಆದರೂ ರೈತರ ಬೇಡಿಕೆಯನ್ನು ಪರಿಗಣಿಸಿ, ಇಲ್ಲಿ ಕೃಷಿ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ. ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಇಷ್ಟಾದರೂ, ರೈತರು ತಾವಾಗಿಯೇ ಸರಕಾರಕ್ಕೆ ಜಮೀನು ಕೊಡಲು ಮುಂದೆ ಬಂದರೆ ಅದಕ್ಕೂ ಅವಕಾಶವಿದೆ. ಇಂತಹ ಜಮೀನುಗಳಿಗೆ ಭೂದರ ನಿರ್ಧಾರ ಸಮಿತಿಯ ತೀರ್ಮಾನದಂತೆ ಪರಿಹಾರ ಕೊಡಲಾಗುವುದು. ಆದರೆ, ಸರಕಾರಕ್ಕೆ ಮಾತ್ರವೇ ಜಮೀನು ಮಾರಾಟ ಮಾಡಬೇಕು ಎಂಬ ಯಾವ ನಿರ್ಬಂಧವೂ ಇಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು.

 

ಈ 13 ಗ್ರಾಮಗಳ ಜಮೀನಿನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿನೋಟಿಫೈ ಮಾಡಿ, ಕೃಷಿ ವಲಯವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು.  ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿ ಮಾಡಿ, ರೈತರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ. ಜೊತೆಗೆ, ಕೃಷಿ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಸಮಜಾಯಿಷಿ ನೀಡಿದ್ದರು.

 

ಗ್ರಾಮಗಳ ಜಮೀನುಗಳು ಈಗಾಗಲೇ ಹಸಿರು ವಲಯದಲ್ಲಿವೆ. ಇಲ್ಲಿ ಕೈಗಾರಿಕೆ ಬೆಳವಣಿಗೆಗೆ ಸಮಾನಾಂತರವಾಗಿ ಕೃಷಿ ಬೆಳವಣಿಗೆಯೂ ಆಗಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ. ಹೀಗಾಗಿಯೇ ಇದನ್ನು ಶಾಶ್ವತ ವಿಶೇಷ ಕೃಷಿ ವಲಯವನ್ನಾಗಿ ಮಾಡಲಾಗಿದೆ. ಇದರಿಂದಾಗಿ ಇಲ್ಲಿ ಕೃಷಿ ಕ್ಷೇತ್ರಕ್ಕೂ ಬಂಡವಾಳ ಹೂಡಿಕೆ ಹರಿದು ಬರಲಿದೆ ಎಂದು ವಿವರಿಸಿದ್ದರು.

 

ಶಾಶ್ವತ ವಿಶೇಷ ಕೃಷಿ ವಲಯದಲ್ಲಿ ಹೆಚ್ಚು ಇಳುವರಿ ಕೊಡುವ ಬೀಜಗಳು, ಶೀತಲಗೃಹಗಳು, ಸಾವಯವ ಕೃಷಿ, ಆಧುನಿಕ ಕೃಷಿ ತಂತ್ರಜ್ಞಾನ, ಹೈಡ್ರೋಪೋನಿಕ್ಸ್, ಮಣ್ಣು ಮತ್ತು ನೀರಿನ ಉತ್ತಮ ನಿರ್ವಹಣೆ, ನೇರ ಮಾರುಕಟ್ಟೆ ಸೌಲಭ್ಯ, ದಲ್ಲಾಳಿಗಳ ಕಾಟದಿಂದ ಮುಕ್ತಿ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ, ಇ-ಟ್ರೇಡಿಂಗ್ ಮತ್ತು ಡಿಜಿಟಲ್ ಮಾರುಕಟ್ಟೆ, ರೈತರು ಮತ್ತು ಕೃಷಿ ನವೋದ್ಯಮಗಳಿಗೆ ವಿಶೇಷ ತೆರಿಗೆ ರಿಯಾಯಿತಿ/ವಿನಾಯಿತಿ, ಕೃಷಿ-ವಾಣಿಜ್ಯ ಯೋಜನೆಗಳಿಗೆ ತ್ವರಿತ ಅನುಮೋದನೆ, ಕೃಷಿ ಆಧರಿತ ಉದ್ಯಮಗಳ ಬೆಳವಣಿಗೆ, ಕೃಷಿ ಉತ್ಪನ್ನಗಳ ರಫ್ತು ವಹಿವಾಟು, ಉಗ್ರಾಣಗಳ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗ ಇವೆಲ್ಲವೂ ಸಾಧ್ಯವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದರು.

 

ಈಗಾಗಲೇ ತಮಿಳುನಾಡು, ಛತ್ತೀಸಗಢ, ಉತ್ತರಾಖಂಡ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ರೀತಿಯ ವಿಶೇಷ ಕೃಷಿ ವಲಯಗಳಿವೆ. ಹಾಗೆಯೇ ವಿದೇಶಗಳಲ್ಲಿಯೂ ಇರುವುದನ್ನು ಗಮನಿಸಿದ್ದೇವೆ. ಅಂತಹ ಕಡೆ ರೈತರಿಗೆ ಏನೇನು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನೂ ಸದ್ಯದಲ್ಲೇ ರಚಿಸಲಾಗುವುದು. ಅಂತಹ ಅನುಕೂಲಗಳನ್ನು ಇಲ್ಲೂ ಒದಗಿಸಲಾಗುವುದು ಎಂದು ಅವರು ಹೇಳಿದ್ದನ್ನು ಸ್ಮರಿಸಬಹುದು.

 

 

ಶಾಶ್ವತ ಕೃಷಿ ವಲಯ; ಸೇಡು, ಪ್ರತಿಕಾರ, ದುಷ್ಟತನ, ಭೂಗತ ಡಾನ್‌ಗಿಂತಲೂ ಕ್ರೂರವಾಯಿತೇ ಸರ್ಕಾರ?

 

ಸರ್ಕಾರವು ಶಾಶ್ವತ ಕೃಷಿ ವಲಯ ಎಂದು ಹೊರಡಿಸಿದ್ದ ಅಧಿಸೂಚನೆಗೆ ಚಿಂತಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದ್ದವು.

Your generous support will help us remain independent and work without fear.

Latest News

Related Posts