ಖಾಸಗಿ ವ್ಯಕ್ತಿಗಳೊಂದಿಗೆ ಗೌಪ್ಯ ಮಾಹಿತಿ ಹಂಚಿಕೆ, ಹಣ ದುರ್ಬಳಕೆ; ಆರೋಪಿತರ ವಿರುದ್ಧ ಕ್ರಮಕ್ಕೆ ಮೀನಮೇ‍ಷ

ಬೆಂಗಳೂರು; ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮೊದಲೇ ಉದ್ದೇಶಿತ ಸ್ವಾಧೀನ ಮಾರ್ಗ, ಪರಿಹಾರ ಮಾನದಂಡಗಳ ಗೌಪ್ಯ ಮಾಹಿತಿಯನ್ನು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೊಂಡಿದ್ದ ಪ್ರಕರಣದ ತನಿಖೆಯ ಬಗ್ಗೆ ಸರ್ಕಾರಕ್ಕೇ ಆಸಕ್ತಿ ಇಲ್ಲವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೀಡಾಗಿರುವ  ಆಧಿಕಾರಿಗಳ ವಿರುದ್ಧದ ದೋಷಾರೋಪಣೆ ಪಟ್ಟಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರವು ವಿಳಂಬ ಮಾಡುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ, ಭೂ ಪರಿಹಾರ ನಿಗದಿಪಡಿಸುವಲ್ಲಿ ಅಧಿಕಾರ ದುರುಪಯೋಗ, ಹಣ ದುರ್ಬಳಕೆಯಾಗಿತ್ತು.

 

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಸೇರಿದಂತೆ ಇನ್ನಿತರರ ವಿರುದ್ಧ ಕ್ರಮ ಜರುಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಆಯುಕ್ತರು ಪತ್ರ ಬರೆದಿದ್ದರು.  ಈ  ಪತ್ರ ಆಧರಿಸಿ ರಾಜ್ಯ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ. ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಅವರೂ ಸಹ ಆಸಕ್ತಿ ವಹಿಸಿಲ್ಲ ಎಂದು ತಿಳಿದು ಬಂದಿದೆ.

 

ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಆಯುಕ್ತರು ಪದೇ ಪದೇ ನೆನಪೋಲೆಗಳನ್ನು ಬರೆಯುತ್ತಿದೆ. ಹೀಗಾಗಿ ರಾಜ್ಯಸರ್ಕಾರವು ಬೇರೆ ದಾರಿಯಿಲ್ಲದೇ ಆಪಾದಿತ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪಿಡಬ್ಲ್ಯೂಡಿಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

 

2025ರ ಡಿಸೆಂಬರ್‍‌ 19ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಷ್ಟ್ರೀಯ ಹೆದ್ದಾರಿ-748ಎ ಮತ್ತು 78 ಎ ಯೋಜನೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಸೆಕ್ಷನ್‌ 3 ಎ ಅಡಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮೊದಲೇ ಉದ್ದೇಶಿತ ಸ್ವಾಧೀನ ಮಾರ್ಗ, ಪರಿಹಾರ ಮಾನದಂಡಗಳ ಬಗ್ಗೆ ಗೌಪ್ಯ ಮಾಹಿತಿಯನ್ನು ಕಾನೂನುಬಾಹಿರವಾಗಿ ಆತನ ಸಂಬಂಧಿಕರ ಮತ್ತು ಇತರ ನೆಚ್ಚಿನ ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದರು. ಇದು ಅಧಿಕಾರ ದುರುಪಯೋಗ ಮತ್ತು ಹಣ ದುರ್ಬಳಕೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಬೇಕು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಆಯುಕ್ತರು ಪತ್ರ ಬರೆದಿದ್ದರು.

 

 

 

ಈ ಪ್ರಸ್ತಾವನೆಯಲ್ಲಿ ಆರೋಪಿಸಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸುವಲ್ಲಿ ರಾಜ್ಯ ಸರ್ಕಾರವು ವಿಳಂಬ ತೋರಿರುವುದು ಪತ್ರದಿಂದ ಗೊತ್ತಾಗಿದೆ.

 

 

ಆಗಿದೆಯೇ ಹಣ ದುರ್ಬಳಕೆ?

 

ರಾಷ್ಟ್ರೀಯ ಹೆದ್ದಾರಿ 748-A ವಿಸ್ತರಣೆಗಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ಕೃಷಿ ಭೂಮಿಗಳ ಖರೀದಿಯಲ್ಲಿ ಭ್ರಷ್ಟಾಚಾರದ ವಾಸನೆ ಹಬ್ಬಿತ್ತು. ಈ ಹಗರಣದಲ್ಲಿ ಬೆಳಗಾವಿಯ ಶ್ರೀನಗರ ಮೂಲದ ವಾಲಿ ಕುಟುಂಬದ ಚಿಕ್ಕ ಮಕ್ಕಳ ತಜ್ಞರಾದ ಡಾಕ್ಟರ್ ರಾಜಶೇಖರ ಮಹಾರುದ್ರಪ್ಪ ವಾಲಿ, ಚಂದ್ರಶೇಖರ ಮಹಾರುದ್ರಪ್ಪ ವಾಲಿ ಮತ್ತು ಶಶಿಶೇಖರ ಮಹಾರುದ್ರಪ್ಪ ವಾಲಿಯವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.

 

ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ವಿಶೇಷ ಭೂಸ್ವಾಧೀನ ಕಚೇರಿಗೆ ವಾಲಿ ಕುಟುಂಬದ ಕಟ್ಟಡವನ್ನು ಬಾಡಿಗೆ ನೀಡಿದ 2 ತಿಂಗಳಲ್ಲೇ, ಅವರು ಹೆದ್ದಾರಿಯ ಸಮೀಪ 15ಕ್ಕೂ ಹೆಚ್ಚು ಕೃಷಿ ಭೂಮಿಗಳನ್ನು ಖರೀದಿಸಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಎನ್‌ ಹೆಚ್‌ 748 ಎ ವ್ಯಾಪ್ತಿಯಲ್ಲಿ ಬರುವ ಬದಾಮಿ, ಗುಲೇದಗುಡ್ಡ, ರಾಮದುರ್ಗ, ಸೌಂದತ್ತಿ ಮತ್ತು ಹುಣಗುಂದ ತಾಲ್ಲೂಕುಗಳಲ್ಲಿ ಈ ಕುಟುಂಬ ಹಠಾತ್ತನೆ ಭೂಮಿ ಖರೀದಿ ಮಾಡಿರುವುದು ಗಂಭೀರ ಪ್ರಶ್ನೆಗಳು ಉದ್ಭವಿಸಿದ್ದವು.

 

ರಾಷ್ಟ್ರೀಯ ಹೆದ್ದಾರಿ 748 ಎ ಬೆಳಗಾವಿ- ರಾಯಚೂರು ಹೆದ್ದಾರಿ ವಿಸ್ತಣೆಯಲ್ಲಿ ಭೂಮಿ ಕಳೆದುಕೊಂಡವರ ಬದಲಿಗೆ ಅನ್ಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ಆದರೆ ಆ ಹಣವನ್ನು ವಸೂಲು ಕಾರ್ಯವು ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಕ್ತಾಯವಾಗಿಲ್ಲ.

 

ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸರಿಯಾಗಿ ದಾಖಲೆಗಳ ಪರಿಶೀಲನೆ ಮಾಡದೇ ಪರಿಹಾರ ಹಣವನ್ನು ಬೇರೆಯವರ ಖಾತೆಗೆ ಜಮಾ ಮಾಡಿದ್ದರು.ಹಣ ಪಡೆದವರೂ ಮರಳಿಸಲೂ ಸಿದ್ಧರಿಲ್ಲದ ಕಾರಣ ಅಧಿಕಾರಿಗಳು ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

 

ವಿಸೇಷ ಭೂ ಸ್ವಾಧೀನ ಅಧಿಕಾರಿಗೆ ನೋಟೀಸ್‌ ನೀಡಲಾಗಿತ್ತು. ಸರ್ಕಾರದ ಹಣ ಮರಳಿಸದ ಕಾರಣ ಜಂಟಿ ಖಾತೆದಾರರಾದ ಸಿದ್ದನಗೌಡ, ರುದ್ರಗೌಡ, ಶಂಕರಗೌಡ ಸೇರಿ ಇದಕ್ಕೆ ಕುಮ್ಮಕ್ಕು ನೀಡಿದ್ದರು ಎನ್ನಲಾಗಿರುವ ಹಿರೇಹಣಗಿ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕ ಅಮರೇಶ, ವಿನಯಕುಮಾರ್ ವಿರುದ್ಧ ನೇತಾಜಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 1860, 420, 406, 149ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

 

ಸಿರವಾರ ತಾಲೂಕಿನ ಪಾತಾಪುರ ಗ್ರಾಮದ ಸರ್ವೆ ನಂಬರ್ 35/2ರಲ್ಲಿ ವಿತರಿಸಿದ್ದ ಭೂಪರಿಹಾರ ಹಣವನ್ನು ಪಿ ಸಿದ್ದನಗೌಡ, ರುದ್ರಗೌಡ, ಶಂಕರಗೌಡ ಅವರ ಒಪ್ಪಂದದಂತೆ ಮೂವರ ಜಂಟಿ ಖಾತೆಗೆ 2023ರ ಅಕ್ಟೋಬರ್‍‌ 9ರಂದು 1,19,64, 711 ರು ಜಮಾ ಮಾಡಲಾಗಿತ್ತು. ಇದರಲ್ಲಿ ಪಾತಪೂರು ಗ್ರಾಮದ ಶ್ರೀದೇವಿ ಮಲ್ಲಯ್ಯ ಸ್ವಾಮಿ ಅವರಿಗೆ ಸೇರಿದ್ದ 43,47,319 ಮನೆಯ ಪರಿಹಾರ ಹಣ ಹಾಗೂ ಉಟಗನೂರು ಬಸವಲಿಂಗ ತಾತಾ ದೇವಸ್ಥಾನ ಪರಿಹಾರ ಹಣ ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಅವಾರ್ಡ್‌ ಪುಸ್ತಕದಲ್ಲಿ ಇದ್ದಂತೆ ಸಿದ್ದನಗೌಡ ಅವರು ಶೇ. 10ರಷ್ಟು ಟಿಡಿಎಸ್‌ ಹೊರತುಪಡಿಸಿ 67 ಲಕ್ಷ ತೆಗೆದುಕೊಳ್ಳಬೇಕಿತ್ತು. ಆದರೆ ಹಣ ಜಂಟಿ ಖಾತೆಗೆ ವರ್ಗಾವಣೆಯಾದ ಮರು ದಿನವೇ ಶ್ರಿದೇವಿ ಮಲ್ಲಯ್ಯ ಸ್ವಾಮಿ ಅವರಿಗೆ ಸೇರಿದ ಪರಿಹಾರ ಹಣ ಸೇರಿ ಒಟ್ಟು 95 ಲಕ್ಷ ರು.ಗಳನ್ನು ತನ್ನ ಖಾಸಗಿ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಅಲ್ಲದೇ ರಾಜಶೇಖರ್ ತೋರಗಲ್ ಎನ್ನುವವರಿಗೂ 11,66,000 ರು ವರ್ಗಾಯಿಸಿರುವುದು ಜಂಟಿ ಬ್ಯಾಂಕ್‌ ಖಾತೆಯ ವಿವರದಿಂದ ತಿಳಿದು ಬಂದಿತ್ತು.

 

ಪ್ರಕರಣದ ವಿಚಾರಣೆಯಲ್ಲಿ ರಾಜಶೇಖರ್ ತೋರಗಲ್, ಹಣ ವರ್ಗಾಯಿಸಿದ್ದ ಅಂದಿನ ವಿಶೇಷ ಭೂ ಸ್ವಾಧೀನ ಅಧಿಕಾರಿ ಹರ್ಷಾ ಶೆಟ್ಟಿ ಸೇರಿ ತಪ್ಪಿತಸ್ಥರ ವಿರುದ್ಧವೂ ಪ್ರಕರಣ ದಾಖಲುಮಾಡಿದ್ದರು.  ಹರ್ಷಾ ಶೆಟ್ಟಿ ಅವಾರ್ಡ್‌ ಮಾಡಿರುವುದು ಲೋಪಗಳಿಂದ ಕೂಡಿದ್ದಲ್ಲದೇ ಜೆಎಂಸಿ ಸರ್ವೆ ಮಾಡದೇ ಇರುವುದರಿಂದ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. 2013 ಭೂ ಸ್ವಾಧೀನ ಕಾಯ್ದೆಯ ಪ್ರಕಾರ ಜೆಎಂಸಿ (ಜಂಟಿ ಭೂ ಮಾಪನಾ ಸರ್ವೆ) ವರದಿ ಅಧರಿಸಿ ಪರಿಹಾರ ಹಣ ನೀಡಬೇಕು ಎಂಬ ಕಾಯ್ದೆಯನ್ನು ಉಲ್ಲಂಘಸಿಲಾಗಿತ್ತು. ಡಿಶಾಂಕ್ ಎಂಬ ಖಾಸಗಿ ಆಪ್‌ ಬಳಸಿ ಹಣಪಾವತಿಸಲಾಗಿತ್ತು.

 

ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಯೋಜನೆಗೆ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವಾಲಯ 2,675.31 ಕೋಟಿ ರೂ. ಮಂಜೂರು ಮಾಡಿದೆ. ಈ ಹೆದ್ದಾರಿಯು ಒಟ್ಟು 92.40 ಕಿಮೀ ಉದ್ದದ ಹೆದ್ದಾರಿಯನ್ನು ಒಳಗೊಂಡಿದೆ. ಈ ಯೋಜನೆಯು ಪಣಜಿ-ಹೈದರಾಬಾದ್ EC10 ಕಾರಿಡಾರ್‌ನ ಅವಿಭಾಜ್ಯ ಅಂಗವಾಗಿದೆ.

 

ರಾಷ್ಟ್ರೀಯ ಹೆದ್ದಾರಿ 748 ( NH 748 ) ಭಾರತದ ಒಂದು ರಾಷ್ಟ್ರೀಯ ಹೆದ್ದಾರಿಯಾಗಿದ್ದು , ಇದು ಕರ್ನಾಟಕದ ಬೆಳಗಾವಿಯಿಂದ ಪ್ರಾರಂಭವಾಗಿ ಉತ್ತರ ಗೋವಾ ಜಿಲ್ಲೆಯ ಪಣಜಿಯಲ್ಲಿ ಕೊನೆಗೊಳ್ಳುತ್ತದೆ . ಪಣಜಿಯಿಂದ ಬೆಳಗಾವಿಗೆ ಮೊಲ್ಲೆಮ್ ಮತ್ತು ಅನ್ಮೋಡ್ ಘಾಟ್ ರಸ್ತೆಯ ಮೂಲಕ ಹೋಗುವ ಹೆದ್ದಾರಿ. 153 ಕಿಮೀ (95 ಮೈ) ಉದ್ದವಿದ್ದು, ಅದರಲ್ಲಿ 82 ಕಿಮೀ (51 ಮೈ) ಕರ್ನಾಟಕದಲ್ಲಿದೆ ಮತ್ತು 71 ಕಿಮೀ (44 ಮೈ) ಗೋವಾದಲ್ಲಿದೆ.

Your generous support will help us remain independent and work without fear.

Latest News

Related Posts