ಬೆಂಗಳೂರು; ಪೊಲೀಸ್ ಇಲಾಖೆಯ ವಾಹನಗಳಿಗೆ ಪೆಟ್ರೋ ಕಾರ್ಡ್ ಮೂಲಕ ಖರೀದಿಸಿರುವ ಡೀಸೆಲ್ ಮತ್ತು ಪೆಟ್ರೋಲ್‌ನ ಪ್ರೋತ್ಸಾಹ ಧನ (ಇನ್ಸೆಂಟೀವ್) ಮೊತ್ತ ಪಾವತಿಯಲ್ಲಿ ಹಲವು ಉಲ್ಲಂಘನೆ, ಲೋಪ, ನಿಗದಿಪಡಿಸಿದ್ದಕ್ಕಿಂತಲೂ ಕಡಿಮೆ ಮೊತ್ತ ಪಾವತಿಯಾಗಿರುವ ಪ್ರಕರಣಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಪೊಲೀಸ್ ಇಲಾಖೆಯಲ್ಲಿನ ವಾಹನಗಳಿಗೆ ಇಂಧನವನ್ನು ಪೂರೈಸುವ ಸಂಬಂಧ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಗೆ 0.75 ಕ್ಯಾಷ್ ಬ್ಯಾಕ್‌ನ್ನು ಆಯಾ ವಾಹನಗಳ ಪೆಟ್ರೋ ಕಾರ್ಡ್‌ಗಳಿಗೆ ಜಮೆ ಮಾಡುವ ಷರತ್ತನ್ನು ವಿಧಿಸಲಾಗಿದೆ. ಪೊಲೀಸ್ ಇಲಾಖೆಯ ಸರ್ಕಾರಿ ವಾಹನಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಲು ಗುತ್ತಿಗೆ ಕಾರ್ಯಾದೇಶ ಪಡೆದಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಆದೇಶದಲ್ಲಿನ ಷರತ್ತಿನಲ್ಲಿ ನಿಗದಿಪಡಿಸಿದ್ದಂತೆ ಕ್ಯಾಷ್ ಬ್ಯಾಕ್ ಪಾವತಿಸುತ್ತಿಲ್ಲ. ಕ್ಯಾಷ್ ಬ್ಯಾಕ್ ರೂಪದಲ್ಲಿ ಪೊಲೀಸ್ ಇಲಾಖೆಯು ವಸೂಲಿ ಮಾಡಬೇಕಿರುವ ಮೊತ್ತವೇ 24.61 ಲಕ್ಷ ರು ನಷ್ಟಿದೆ.
ನಿಗದಿಪಡಿಸಿದ್ದ ಕ್ಯಾಷ್ ಬ್ಯಾಕ್ ಮೊತ್ತಕ್ಕೂ ಮತ್ತು ಪಾವತಿಸಿರುವ ಕ್ಯಾಷ್ ಬ್ಯಾಕ್ ಮೊತ್ತಕ್ಕೂ ವ್ಯತ್ಯಾಸಗಳು ಕಂಡು ಬಂದಿವೆ. ಹಲವು ಜಿಲ್ಲಾ ಪೊಲೀಸ್ ಕಚೇರಿಗಳ ವ್ಯಾಪ್ತಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಯು ನಿಗದಿತ ಮೊತ್ತಕ್ಕಿಂತಲೂ ಕಡಿಮೆ ಮೊತ್ತವನ್ನು ಪಾವತಿಸಿರುವುದು ಬಯಲಾಗಿದೆ.
ಅದೇ ರೀತಿ ಕ್ಯಾಷ್ ಬ್ಯಾಕ್ ಪಾವತಿಸಿರುವ ದಾಖಲೆಗಳಿಗೂ ಮತ್ತು ಪೊಲೀಸ್ ಇಲಾಖೆಯಲ್ಲಿರುವ ದಾಖಲೆಗಳಿಗೂ ತಾಳೆಯಾಗುತ್ತಿಲ್ಲ. ಅಷ್ಟೇ ಅಲ್ಲ, ಹಲವು ಜಿಲ್ಲಾ ಪೊಲೀಸ್ ಕಚೇರಿಗಳ ವ್ಯಾಪ್ತಿಯಲ್ಲಿ ಇನ್ಸೆಂಟೀವ್ ಮೊತ್ತವನ್ನು ಉಪಯೋಗಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಿಲ್ಲ. ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವ ಹಲವು ಲೋಪಗಳನ್ನು ಗಮನಿಸಿದಲ್ಲಿ ಅಕ್ರಮ ನಡೆದಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
2015ರಿಂದ 2024ವರೆಗಿನ ಅವಧಿಯಯವರೆಗೂ ಪೊಲೀಸ್ ಇಲಾಖೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಗೆ ಸಂಬಂಧಿಸಿದಂತೆ ಅಪರಾ ತಪರಾಗಳು ನಡೆಯುತ್ತಿದ್ದರೂ ಸಹ ಸರ್ಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಸಚಿವ ಡಾ ಜಿ ಪರಮೇಶ್ವರ್ ಅವರೂ ಈ ಬಗ್ಗೆ ಗಮನ ಹರಿಸಿಲ್ಲ.
ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ 78,98,229.65 ರು ಇನ್ಸೆಂಟೀವ್ ಮೊತ್ತ ಬಾಕಿ ಬರಬೇಕಿದೆ. ಈ ಪೈಕಿ 24,61,962 ರು ಮೊತ್ತವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ ವಸೂಲು ಮಾಡಬೇಕಿದೆ.
2021ರ ಜನರಿಯಿಂದ 2023ರ ಡಿಸೆಂಬರ್ 31ರವರೆಗೆ ಬಾಕಿ ಬರಬೇಕಾದ ಇನ್ಸೆಂಟೀವ್ ಪಾವತಿಸಬೇಕು ಎಂದು ನೋಟೀಸ್ ನೀಡಿ ಕೈತೊಳೆದುಕೊಂಡಿದೆ. ಅಲ್ಲದೇ 78,98,229.65 ರು.ಗಳನ್ನು ಡಿಡಿ ಮೂಲಕ ಸಲ್ಲಿಸಬೇಕು ಎಂದು 2025ರ ಅಕ್ಟೋಬರ್ 14ರಂದು ಪತ್ರ ಬರೆದಿದೆ. ಆದರೂ ಸಹ ಸರ್ಕಾರಕ್ಕೆ ಇನ್ನೂ ಜಮೆಯಾಗಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪೊಲೀಸ್ ಕಚೇರಿಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ನಡೆದಿದೆ. ಈ ಲೆಕ್ಕ ಪರಿಶೋಧನೆ ವರದಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ ಲೆಕ್ಕ ಪರಿಶೋಧನೆ ವರದಿ ಪ್ರಕಾರ ರಾಜ್ಯದಾದ್ಯಂತ ಇರುವ ಪೊಲೀಸ್ ಕಚೇರಿಗಳು ಮತ್ತು ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ 24,61,962 ರು ಮೊತ್ತವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ ವಸೂಲು ಮಾಡಬೇಕಿದೆ. ಆದರೂ ಪೊಲೀಸ್ ಇಲಾಖೆಯು ಈ ಬಗ್ಗೆ ನಿರಾಸಕ್ತಿ ವಹಿಸಿದೆ. ಅಲ್ಲದೇ ಲೆಕ್ಕ ಪರಿಶೋಧನೆಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನೂ ಕೊಡುತ್ತಿಲ್ಲ.
ಏನಿದು ಪೆಟ್ರೋ ಕಾರ್ಡ್?
ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ವಾಹನಗಳಿಗೆ ಇಂಧನ ಖರೀದಿ ಮತ್ತು ಇಂಧನ ಬಳಕೆಗಾಗಿ ಸರ್ಕಾರದಿಂದಲೇ ಪೆಟ್ರೋ ಕಾರ್ಡ್ ವಿತರಿಸಲಾಗಿದೆ. ಈ ಪೆಟ್ರೋ ಕಾರ್ಡ್‌ಗಳನ್ನು ಬಳಸಿ ಪೆಟ್ರೋಲ್ ಮತ್ತು ಡೀಸೆಲ್‌ನ್ನು ವಾಹನಗಳಿಗೆ ತುಂಬಿಸಲಾಗುತ್ತಿದೆ. ಇಂಧನ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಮುಖ್ಯ ಖಾತೆಗೆ ಇನ್ಸೆಂಟೀವ್ ರೂಪದಲ್ಲಿ ಹಣವನ್ನು ಪಾವತಿಸುತ್ತಿದೆ. ಪ್ರತಿ ಪೆಟ್ರೋ ಕಾರ್ಡ್‌ನಲ್ಲಿ ಹಾಕಿಸಿದ ಇಂಧನಕ್ಕೆ 100.00 ಕ್ಕೆ 00.75 ಮತ್ತು 00.25 (ಏರಿಳಿತ) ಕ್ಯಾಷ್ ಬ್ಯಾಕ್ ರೂಪದಲ್ಲಿ ಅದೇ ಪೆಟ್ರೋ ಕಾರ್ಡ್‌ಗೆ ಹಿಂಭರಿಸಬೇಕು ಎಂದು ಕಾರ್ಯಾದೇಶದಲ್ಲಿ ಷರತ್ತು ವಿಧಿಸಿದೆ.
ಆದರೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯು, ಕಾರ್ಯಾದೇಶದಲ್ಲಿನ ಷರತ್ತಿನ ಪ್ರಕಾರ 100.00 ಕ್ಕೆ 00.75 ರಂತೆ ಕ್ಯಾಷ್ ಬ್ಯಾಕ್ ಪಾವತಿಸುತ್ತಿಲ್ಲ. ಸಂಸ್ಥೆಯ ಈ ಧೋರಣೆಯನ್ನು ಲೆಕ್ಕ ಪರಿಶೋಧಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಷರತ್ತಿನಲ್ಲಿ ವಿಧಿಸಿರುವ ಶೇಕಡವಾರು ಪ್ರಮಾಣದಲ್ಲಿಯೇ ಬಾಕಿ ಇರುವ 24,61,962 ರು.ಗಳನ್ನು ವಸೂಲು ಮಾಡಬೇಕು ಮತ್ತು ಈ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು ಎಂದು ಸೂಚಿಸಿರುವುದು ವರದಿಯಿಂದ ಗೊತ್ತಾಗಿದೆ.
ಪ್ರಕರಣಗಳ ವಿವರ
ದಾವಣಗೆರೆ ಘಟಕದ ಸರ್ಕಾರಿ ವಾಹನಕ್ಕೆ ಸಂಬಂಧಿಸಿದಂತೆ ಇಂಧನದ ಬಳಕೆಗಾಗಿ ಸರ್ಕಾರದಿಂದ ಪೆಟ್ರೋ ಕಾರ್ಡ್ ವಿತರಿಸಲಾಗಿತ್ತು. ಈ ಘಟಕದ ಪೆಟ್ರೋ ಕಾರ್ಡ್ (ಸಂಖ್ಯೆ; 1001731940) ನಲ್ಲಿ 233 ವಾಹನಗಳಿವೆ. (ಅದರಲ್ಲಿ 4 ವಾಹನಗಳು ನೂತನ ವಾಹನಗಳು) 229 ವಾಹನಗಳಿಗೆ ಪೆಟ್ರೋ ಕಾರ್ಡ್ ಇದೆ. ಚುನಾವಣೆ ಮತ್ತು ಇತರ ಕರ್ತವ್ಯಗಳಲ್ಲಿ ಖಾಸಗಿ ಮತ್ತು ಸರ್ಕಾರಿ ವಾಹನಗಳಿಗೆ ಇಂಧನ ತುಂಬಿಸಲಾಗುತ್ತಿದೆ.

ಈ ಪೆಟ್ರೋ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಇಂಧನ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅವರು ಮುಖ್ಯ ಪೆಟ್ರೋ ಕಾರ್ಡ್‌ಗೆ ಬಳಸುವ ಇಂಧನದ ಮೊತ್ತಕ್ಕೆ ಕಂಪನಿಯವರಿಗೆ ಠೇವಣಿ ಇಡಲಾದ ಮೊತ್ತಕ್ಕೆ ಕಂಪನಿಯವರು ಮುಖ್ಯ ಖಾತೆಗೆ ಇನ್ಸೆಂಟೀವ್ ರೂಪದಲ್ಲಿ ಹಣವನ್ನು ಪಾವತಿಸುತ್ತಿರುವುದು ಕಂಡು ಬಂದಿದೆ. ಮತ್ತು ಪ್ರತಿ ಪೆಟ್ರೋ ಕಾರ್ಡ್‌ನಲ್ಲಿ ಹಾಕಿಸಿದ ಇಂಧನಕ್ಕೆ 100.00 ಕ್ಕೆ 00.75 ಮತ್ತು 00.25 (ಏರಿಳಿತ) ಕ್ಯಾಷ್ ಬ್ಯಾಕ್ ರೂಪದಲ್ಲಿ ಅದೇ ಪೆಟ್ರೋ ಕಾರ್ಡ್‌ಗೆ ಹಿಂಬರಿಸಿರುವುದು ಕಂಡು ಬಂದಿದೆ.

ಈ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. 2018ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ಮುಖ್ಕ ಪೆಟ್ರೋ ಕಾರ್ಡ್‌ಗೆ ಬಂದಿರುವ ಇನ್ ಸೆಂಟೀವ್ ಮೊತ್ತ ಮತ್ತು ಪ್ರತಿ ಕಾರ್ಡ್‌ಗೆ ಬಂದಿರುವ ಕ್ಯಾಷ್ ಬ್ಯಾಕ್ ಮೊತ್ತಕ್ಕೆ ಹೊಂದಾಣಿಕೆಯಾಗಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
‘ಈ ಘಟಕಕ್ಕೆ ಸಂಬಂಧಿಸಿದ ಉಪ ಲೆಕ್ಕ ಶೀರ್ಷಿಕೆ 195ರಲ್ಲಿ ಇಂಧನಕ್ಕೆ 2018-19ರ ಆರ್ಥಿಕ ವರ್ಷದಲ್ಲಿ ಬಳಸಿರುವ ಅನುದಾನದಲ್ಲಿ ಸಂಸ್ಥೆಯವರು ಮುಖ್ಯ ಕಾರ್ಡ್‌ಗೆ ಪಾವತಿಸಿರುವ ಇನ್ಸೆಂಟೀವ್ ಮೊತ್ತದ ಬಗ್ಗೆ ಮತ್ತ ಪ್ರತಿ ಕಾರ್ಡ್‌ನ ಕ್ಯಾಷ್ ಬ್ಯಾಕ್ ಮೊತ್ತದ ಬಗ್ಗೆ ಪೂರ್ಣ ದೃಢೀಕೃತ ದಾಖಲೆಗಳೊಂದಿಗೆ ಹಾಗೂ ಕ್ಯಾಷ್ ಬ್ಯಾಕ್ ಮತ್ತು ಇನ್ಸೆಂಟೀವ್ ರೂಪದ ಮೊತ್ತಕ್ಕೆ ಹೆಚ್ಚುವರಿಯಾಗಿ ಬಳಸಲಾದ ಇಂಧನದ ಬಗ್ಗೆ ಮತ್ತು ಅನುದಾನವನ್ನು ಹಿಂಬರಿಸಿದ ಬಗ್ಗೆ ದೃಢೀಕೃತ ದಾಖಲೆ ಮತ್ತು ಅನುಪಾಲನಾ ವರದಿ ಸಲ್ಲಿಸಬೇಕು,’ ಎಂದು ಸೂಚಿಸಿರುವುದು ಗೊತ್ತಾಗಿದೆ.

ದಾವಣಗೆರೆ ಜಿಲ್ಲಾ ಪೊಲೀಸ್‌ನ ಕೆಲವು ಘಟಕಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಪೆಟ್ರೋ ಕಾರ್ಡ್ ಮೂಲಕ ಖರೀದಿಸಿದ ಬಾಬ್ತನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಕಾಲಕಾಲಕ್ಕೆ ಪಾವತಿಸಿದೆ. ಈ ಪಾವತಿಯ ವಿವರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ.
2022ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿರುತ್ತದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಚಿತ್ರದುರ್ಗದ ಪೊಲೀಸ್ ಘಟಕ
ಚಿತ್ರದುರ್ಗ ಜಿಲ್ಲಾ ಪೊಲೀಸ್ ಘಟಕದ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಪೆಟ್ರೊ ಕಾರ್ಡ್ ಮೂಲಕ ಖರೀದಿಸಿದ್ದಕ್ಕೆ ಹಣವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಕಾಲಕಾಲಕ್ಕೆ ಪಾವತಿಸಿದೆ. ಈ ಪಾವತಿಯ ವಿವರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ.
2020ರ ಏಪ್ರಿಲ್ 1ರಿಂದ 2023ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿರುತ್ತದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ಎಸ್‌ಆರ್‍ಸಿಯೂ ಇಲ್ಲ
ಚಿತ್ರದುರ್ಗ ಜಿಲ್ಲಾ ಪೊಲೀಸ್ ಘಟಕದ ಲಾಗ್‌ಬುಕ್‌ಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇಂಧನ ಬಳಕೆ ಕುರಿತಂತೆ 2020-23ನೇ ಸಾಲಿನವರೆಗೆ ಎಸ್‌ಆರ್‍ಸಿ (standard rate of consumption)ಯನ್ನು ನಿಗದಿಪಡಿಸಿದ ಬಗ್ಗೆ ದಾಖಲಾತಿಗಳು ಲಭ್ಯವಿಲ್ಲ. ಸಾದಿಲ್ವಾರು ವೆಚ್ಚದ ಕೈಪಿಡಿ ವಿಶೇಷ ನಿಯಮಗಳಂತೆ ಖರೀದಿಯ ಅಥವಾ ಅಮೂಲಾಗ್ರ ದುರಸ್ತಿ ಬಳಿಕ ವಾಹವನ್ನು ಉಪಯೋಗಿಸುವುದಕ್ಕೆ ಮುಂಚೆ ನಿಯಂತ್ರಣಾಧಿಕಾರಿಯು ವಾಹನವು ಒಂದ ಲೀಟರ್ ಪೆಟ್ರೋಲ್, ಡೀಸೆಲ್‌ಗೆ ಎಷ್ಟು ಮೈಲಿ ಓಡುತ್ತದೆ ಎಂಬುದರ ಬಗ್ಗೆ ಪ್ರತಿಯೊಂದು ವಾಹನವನ್ನು ಪರೀಕ್ಷಿಸಬೇಕು ಹಾಗೂ ವಾಹನದ ಲಾಗ್ ಪುಸ್ತಕದಲ್ಲಿ ಸಂಗತಿಯನ್ನು ದಾಖಲು ಮಾಡಿ ದೃಢೀಕರಿಸಬೇಕು.

ಆದರೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಘಟಕದಲ್ಲಿ 2020-23ನೇ ಸಾಲಿನವರೆಗೆ ಘಟಕದ ಎಲ್ಲಾ ವಾಹನಗಳಿಗೆ ಎಸ್‌ಆರ್‍ಸಿ ನಿಗದಿಪಡಿಸಿರುವ ಬಗ್ಗೆ ದೃಢೀಕೃತ ದಾಖಲಾತಿಗಳನ್ನೇ ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ.
ಹಾವೇರಿ ಜಿಲ್ಲಾ ಪೊಲೀಸ್ ಘಟಕಕ್ಕೆ ಸಂಬಂಧಿಸಿದಂತೆ 2015ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗಿನ ಅವಧಿಯ ತನಕ ಲೆಕ್ಕ ಪರಿಶೋಧನೆ ನಡೆದಿದೆ.
ಹಾವೇರಿ ಜಿಲ್ಲಾ ಘಟಕದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಘಟಕದ ವ್ಯಾಪ್ತಿಯಲ್ಲಿನ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನವನ್ನ ಪೆಟ್ರೋ ಕಾರ್ಡ್ ಮೂಲಕ ವಿತರಿಸಲು ಕಾಲಕಾಲಕ್ಕೆ ನೀಡಲಾದ ಹಣದ ಪಾವತಿ ವಿವರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ.

ಇದರ ಪ್ರಕಾರ 2016ರ ಏಪ್ರಿಲ್‌ರಿಂದ 2020ರ ಮಾರ್ಚ್ ವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವಿಭಾಗಕ್ಕೆ ಒಟ್ಟು ಮೊತ್ತ 1,99, 41,000 ರುಗ.ಳನ್ನು ಪಾವತಿಸಿದ್ದು ಈ ಹಣಕ್ಕೆ ಒಟ್ಟು 2,92,506 ರು.ಗಳ ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿದೆ. 2016ರ ಏಪ್ರಿಲ್‌ನಿಂದ 2020ರ ಮಾರ್ಚ್‌ವರೆಗೆ ಸಂಗ್ರಹವಾದ ಇನ್ಸೆಂಟೀವ್ ಮೊತ್ತ 2,92,506 ರುಗ.ಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ ಘಟಕದ ಪೆಟ್ರೋ ಕಾರ್ಡ್‌ಗೆ ಜಮೆಯಾಗಿದೆ ಎಂದು ತಿಳಿಸಲಾಗಿದೆ.
ಆದರೆ ಈ ಇನ್ಸೆಂಟೀವ್ ಮೊತ್ತವನ್ನು ಉಪಯೋಗಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿಯು ಲೆಕ್ಕ ಪರಿಶೋಧಕರಿಗೇ ಲಭ್ಯವಿಲ್ಲ. ಹೀಗಾಗಿ ಈ ಮಾಹಿತಿ ಮತ್ತು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವವರೆಗೂ 2,92,506 ರುಗ.ಳನ್ನು ಆಕ್ಷೇಪಣೆಯಲ್ಲಿಟ್ಟಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ 2017ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಶಿವಮೊಗ್ಗ ಡಿವಿಜನ್ ವಿಭಾಗದಲ್ಲಿ ಒಟ್ಟು 1,80,00,000 ರು.ಗಳನ್ನು ಪಾವತಿಸಲಾಗಿದೆ. ಜಿಲ್ಲಾ ಪೊಲೀಸ್ ಕಚೇರಿಯಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಕಾಲಕಾಲಕ್ಕೆ ಪಾವತಿಸಲಾದ ಹಣಕ್ಕೆ ಮಾತ್ರ ಇಂಧನವನ್ನು ಸರಬರಾಜು ಮಾಡಬೇಕಿತ್ತು.

ಈ ಹಣದ ಮೇಲೆ ದೊರೆಯುವ ಇನ್ಸೆಂಟೀವ್ ಮೊತ್ತಕ್ಕೆ ಇಂಧನವನ್ನು ಸರಬರಾಜು ಮಾಡಬೇಕಾಗಿರುವುದಿಲ್ಲ. ‘ಆದ್ದರಿಂದ 2017ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ಇನ್‌ಸೆಂಟೀವ್ ಮೊತ್ತ 1,25,516 ರು.ಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್, ಶಿವಮೊಗ್ಗ ಡಿವಿಜನ್ ಅವರಿಂದ ಹಿಂದಕ್ಕೆ ಪಡೆದು ಸದರಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕು,’ ಎಂದು ಲೆಕ್ಕ ಪರಿಶೋಧಕರು ಸೂಚಿಸಿದ್ದರು.

ಇಂಧನ ಖರೀದಿಗೆ ಸಂಬಂಧಿಸಿದಂತೆ ಬಾಕಿ ಇರುವ ಇನ್ಸೆಂಟೀವ್ ಮೊತ್ತ 1,10,250 ರು ಗಳ ವಸೂಲಾತಿ ಮಾಡಬೇಕು ಎಂದು ಸೂಚಿಸಿತ್ತು. 2022ರ ಜೂನ್‌ನಿಂದ 2023ರ ಮಾರ್ಚ್‌ವರೆಗೆ ಒಟ್ಟಾರೆ 1,10,250 ರು.ಗಳ ಇನ್ಸೆಂಟೀವ್ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಬಾಕಿ ಇರುವ ಈ 1,10,250 ರು.ಗಳನ್ನುಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನಿಂದ ವಸೂಲಿ ಮಾಡಿ ಸರ್ಕಾರಕ್ಕೆ ಜಮೆ ಮಾಡಲು ಲೆಕ್ಕ ಪರಿಶೋಧಕರು ನಿರ್ದೇಶಿಸಿರುವುದು ತಿಳಿದು ಬಂದಿದೆ.

ದಾಖಲೆಗಳನ್ನು ಒದಗಿಸದ ಬಳ್ಳಾರಿ ಜಿಲ್ಲಾ ಪೊಲೀಸ್ ಘಟಕ
ಬಳ್ಳಾರಿ ಜಿಲ್ಲಾ ಪೊಲೀಸ್ ಘಟಕದಲ್ಲಿ 2017-18ನೇ ಸಾಲಿನಲ್ಲಿ ಸಾರಿಗೆ ವೆಚ್ಚಗಳಡಿಯಲ್ಲಿ ಘಟಕಕ್ಕೆ 3,45,00,000 ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ 3,44,99,803 ರು.ಗಳನ್ನು ವೆಚ್ಚ ಮಾಡಿತ್ತು. ಉಳಿದಿದದ 11,012 ರು.ಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿದೆ. ಈ ಅನುದಾನದಲ್ಲಿ ಇಂಧನ ಪಡೆಯುವ ಸಂಬಂಧ ಐಒಸಿ ಕಂಪನಿಗೆ 1,18,25,000 ರು ಗಳನ್ನು ಬಿಡುಗಡೆ ಮಾಡಿತ್ತು.

ಈ ಅನುದಾನಕ್ಕೆ ಐಒಸಿ ಕಂಪನಿಯವರು 2017-18ನೇ ಸಾಲಿನಲ್ಲಿ ಪ್ರೋತ್ಸಾಹ ಧನ 83,637.50 ರು ಗಳನ್ನು ನೀಡಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರು 2019ರ ಜನವರಿ 23ರಂದು ಪತ್ರ ಬರೆದಿದ್ದರು.
ಆದರೆ ಐಒಸಿ ಕಂಪನಿಯವರು ನೀಡಿರುವ ಪ್ರೋತ್ಸಾಹ ಧನದ ಹಣ 83,637.50 ರು.ಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ಯಾವುದೇ ವಿವರವಾದ ದಾಖಲೆಗಳನ್ನು ಘಟಕಾಧಿಕಾರಿಗಳು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

2016-17 ಮತ್ತು 2017-18ನೇ ಸಾಲಿನಲ್ಲಿ ವಾಹನಗಳಿಗೆ ಇಂಧನ ಸಂಸ್ಥೆಯಿಂದ ಯಾವ ಯಾವ ವಾಹನಗಳಿಗೆ ಇಂಧನ ಸರಬರಾಜು ಮಾಡಲಾಗಿದೆ ಮತ್ತು ವಾಹನಗಳ ಮೀಟರ್ ರೀಡಿಂಗ್ ನ ಮಾಹಿತಿ ಮತ್ತು ಈ ಮೀಟರ್ ರೀಡಿಂಗ್ ನ್ನು ವಾಹನಗಳ ಲಾಗ್ ಪುಸ್ತಕಗಳೊಂದಿಗೆ ಪರಿಶೀಲಿಸಲಾಗಿದೆ ಎಂಬ ದೃಢೀಕರಣ ಪಾಲನಾ ವರದಿ ಸಲ್ಲಿಸಬೇಕು.
ಹಾಗೆಯೇ ಬಳ್ಳಾರಿ ಜಿಲ್ಲಾ ಪೊಲೀಸ್ ಘಟಕದ ಸರ್ಕಾರಿ ವಾಹನಕ್ಕೆ ಸಂಬಂಧಿಸಿದಂತೆ ಇಂಧನದ ಬಳಕೆಗಾಗಿ ಸರ್ಕಾರದಿಂದ ಪೆಟ್ರೋ ಕಾರ್ಡ್‌ಗಳನ್ನು ವಿತರಿಸಿತ್ತು. ಬಳ್ಳಾರಿ ಪೊಲೀಸ್ ಘಟಕದ ಪೆಟ್ರೋ ಕಾರ್ಡ್ (ಸಂಖ್ಯೆ 1001010163) ನಲ್ಲಿ 252 ವಾಹನಗಳಿವೆ. (ಅದರಲ್ಲಿ 25 ವಾಹನಗಳು ನಿರುಪಯುಕ್ತಗೊಳಿಸಲಾಗಿದೆ) ವಾಹನಗಳಿಗೆ 252 ಪೆಟ್ರೋ ಕಾರ್ಡ್ ಇರುತ್ತದೆ. ಮತ್ತು ಹೆಚ್ಚುವರಿಯಾಗಿ ಪೆಟ್ರೋ ಕಾರ್ಡ್‌ಗಳು ಇರುವ ಬಗ್ಗೆ ಲೆಕ್ಕ ಪರಿಶೋಧಕರಿಗೆ ಮಾಹಿತಿ ನೀಡಿಲ್ಲ.

ಚುನಾವಣೆ ಮತ್ತು ಇತರೆ ಕರ್ತವ್ಯಗಳಲ್ಲಿ ಖಾಸಗಿ, ಸರ್ಕಾರಿ ವಾಹನಗಳಿಗೆ ಇಂಧನ ತುಂಬಿಸಲಾಗುತ್ತಿದೆ. ಈ ಪೆಟ್ರೋ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಇಂಧನ ಸಂಸ್ಥೆಯವರಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯವರು ಪೆಟ್ರೋ ಕಾರ್ಡ್‌ಗೆ ತಾವು ಬಳಸುವ ಇಂಧನ ಮೊತ್ತಕ್ಕೆ ಕಂಪನಿಯವರು ಮುಖ್ಯ ಖಾತೆಗೆ ಇನ್ಸೆಂಟೀವ್ ರೂಪದಲ್ಲಿ ಹಣವನ್ನು ಪಾವತಿಸಿರುವುದು ವರದಿಯಿಂದ ಕಂಡು ಬಂದಿದೆ.
ಮತ್ತು ಪ್ರತಿ ಪೆಟ್ರೋ ಕಾರ್ಡ್‌ನಲ್ಲಿ ಹಾಕಿದ ಇಂಧನಕ್ಕೆ 100 ರು ನಂತೆ 00.75 ಮತ್ತು 00.25 ಕ್ಯಾಷ್ ಬ್ಯಾಕ್ ರೂಪದಲ್ಲಿ ಅದೇ ಪೆಟ್ರೋ ಕಾರ್ಡ್ ಗೆ ಹಿಂಭರಿಸಿರುವುದು ಕಂಡು ಬಂದಿದೆ.
ಈ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇದರ ಪ್ರಕಾರ 2018ರ ಎಪ್ರಿಲ್ 1ರಿಂದ 2019ರ ಮಾರ್ಚ್ 31ವರೆಗೆ ಮುಖ್ಯ ಪೆಟ್ರೋ ಕಾರ್ಡ್‌ಗೆ ಬಂದಿರುವ ಇನ್ಸೆಂಟೀವ್ ಮೊತ್ತ ಮತ್ತು ಪ್ರತೀ ಕಾರ್ಡ್‌ಗೆ ಬಂದಿರುವ ಕ್ಯಾಷ್ ಬ್ಯಾಕ್ ಮೊತ್ತಕ್ಕೆ ಹೊಂದಾಣಿಕೆಯಾಗಿರುವುದಿಲ್ಲ.
ಈ ಘಟಕಕ್ಕೆ ಸಂಬಂಧಿಸಿದ ಉಪಲೆಕ್ಕ ಶೀರ್ಷಿಕೆ 195ರಲ್ಲಿ ಇಂಧನಕ್ಕೆ 2018-19ರ ಆರ್ಥಿಕ ವರ್ಷದಲ್ಲಿ ಬಳಸಲಾದ ಅನುದಾನದಲ್ಲಿ ಸಂಸ್ಥೆಯವರು ಮುಖ್ಯ ಕಾರ್ಡ್‌ಗೆ ಪಾವತಿಸಿರುವ ಇನ್ಸೆಂಟೀವ್ ಮೊತ್ತ ಬಗ್ಗೆ ಮತ್ತು ಪ್ರತೀ ಕಾರ್ಡ್‌ನ ಕ್ಯಾಷ್ ಬ್ಯಾಕ್ ಮೊತ್ತದ ಬಗ್ಗೆ ಪೂರ್ಣ ದೃಢೀಕೃತ ದಾಖಲಾತಿಗಳೊಂದಿಗೆ ಹಾಗೂ ಕ್ಯಾಷ್ ಬ್ಯಾಕ್ ಮತ್ತು ಇನ್ಸೆಂಟೀವ್ ರೂಪದ ಮೊತ್ತಕ್ಕೆ ಹೆಚ್ಚುವರಿಯಾಗಿ ಬಳಸಲಾದ ಇಂಧನದ ಬಗ್ಗೆ ಮತ್ತು ಅನುದಾನವನ್ನು ಹಿಂಬರಿಸಿದ ಬಗ್ಗೆ ಸಂಪೂರ್ಣ ದೃಢೀಕೃತ ದಾಖಲಾತಿಗಳೊಂದಿಗೆ ಪಾಲನಾ ವರದಿ ಸಲ್ಲಿಸಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿರುವುದು ಗೊತ್ತಾಗಿದೆ.
ಇಂಧನ ಖರೀದಿಯಲ್ಲಿ ಕಟಾಯಿಸದ ಜಿಎಸ್‌ಟಿ
ಇಂಧನ ಖರೀದಿಯಲ್ಲಿ ಜಿಎಸ್‌ಟಿ ಮೊತ್ತವನ್ನು ಕಟಾಯಿಸದೇ ಇರುವ ಬಗ್ಗೆಯೂ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ. 2018ರ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ (ಲೆಕ್ಕ ಶೀರ್ಷಿಕೆ 2055-00-104-001-195ರಲ್ಲಿ) ಇಂಧನ ಖರೀದಿ ದಾಖಲಾತಿಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಆದರೆ ಜಿಎಸ್‌ಟಿ ಕಡಿತಗೊಳಿಸಿರುವ ಬಗ್ಗೆ ದಾಖಲಾತಿಗಳೇ ಇಲ್ಲ. ಇದರ ಮೊತ್ತ 1,35,39,320 ರು ಇದೆ.

ಇಂಧನ ಖರೀದಿಸಲಾದ ಮೊತ್ತ 1,35,39,320 ರು.ಗಳಿಗೆ ಲೆಕ್ಕ ಹಾಕಿ ಸಂಬಂಧಪಟ್ಟ ಸಂಸ್ಥೆ, ಕಂಪನಿಯವರಿಂದ ಅನ್ವಯಿಸಬಹುದಾದ ತೆರಿಗೆ ವಸೂಲು ಮಾಡಿ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಸೂಚಿಸಲಾಗಿದೆ.

ಕೊಪ್ಪಳ ಪೆಟ್ರೋ ಕಾರ್ಡ್ ನಲ್ಲಿ ದಾಖಲೆಗಳೇ ಇಲ್ಲ
ಕೊಪ್ಪಳದಲ್ಲಿ ಒಟ್ಟು 176 ವಾಹನಗಳಿಗೆ ಪೆಟ್ರೋ ಕಾರ್ಡ್ ವಿತರಿಸಿದೆ. ಈ ಪೆಟ್ರೋ ಕಾರ್ಡ್‌ಗಳಿಗೆ ಇನ್ಸೆಂಟೀವ್ ಮೊತ್ತ ಪಾವತಿಯಾಗಿದೆ. ಮತ್ತು ಪ್ರತಿ ಪೆಟ್ರೋ ಕಾರ್ಡ್‌ನಲ್ಲಿ ಹಾಕಿಸಿದ ಇಂಧನಕ್ಕೆ 0.75 ಮತ್ತು 0.25 ಕ್ಯಾಷ್ ಬ್ಯಾಕ್ ರೂಪದಲ್ಲಿ ಅದೇ ಪೆಟ್ರೋ ಕಾರ್ಡ್‌ಗೆ ಹಿಂಬರಿಸಿರುವುದು ಕಂಡು ಬಂದಿದೆ.

ದಾಖಲಾತಿಗಳನ್ನು ಪರಿಶೀಲನೆ ವೇಳೆಯಲ್ಲಿ 2017ರ ಏಪ್ರಲ್ 1ರಿಂದ 2019ರ ಮಾರ್ಚ್ 31ರವರೆಗೆ ಮುಖ್ಯ ಪೆಟ್ರೋ ಕಾರ್ಡ್‌ಗೆ ಬಂದಿರುವ ಇನ್ಸೆಂಟೀವ್ ಮೊತ್ತದ ಪೂರ್ಣ ದಾಖಲಾತಿಗಳಿಲ್ಲ ಎಂಬ ಸಂಗತಿಯು ಬಯಲಾಗಿದೆ.
ಶಿವಮೊಗ್ಗ ಕೆಎಸ್‌ಆರ್‍ಪಿ ಪೆಟ್ರೋ ಕಾರ್ಡ್
ಕೆಎಸ್‌ಆರ್‍ಪಿ ಘಟಕದಲ್ಲಿ ಇಂಧನ ಬಳಕೆ ಆಧಾರದ ಮೇಲೆ ಪೆಟ್ರೋ ಕಾರ್ಡ್ ಮೂಲಕ ಇಂಧನ ಖರೀದಿಸಲು ಮುಂಗಡ ಹಣ ಪಾವತಿಸುವ ಸಲುವಾಗಿ ಪ್ರತಿ ಘಟಕದಲ್ಲಿ ನಿರ್ವಹಿಸುವ ವಾಹನಗಳ ಸಂಖ್ಯೆಗಳ ಆಧಾರದ ಮೇಲೆ ದರವನ್ನು ನಿಗದಿಪಡಿಸಿ ಆದೇಶಿಸಿದೆ. ಹಾಗೂ ವಾಹನಗಳಿಗೆ ಇಂಧನವನ್ನು ಎ ಸಿ ಬಿಲ್‌ಗಳ ಮುಖಾಂತರ ಡ್ರಾ ಮಾಡಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಈ ಘಟಕದಲ್ಲಿ ಎ ಸಿ ಬಿಲ್‌ಗಳ ಮುಖಾಂತರ ಇಂಧನವನ್ನು ಖರೀದಿಸುವ ಕ್ರಮವನ್ನು ಕೈಗೊಂಡಿಲ್ಲ. ಇದರ ಬದಲಾಗಿ ಪ್ರತಿ ತಿಂಗಳು ಘಟಕದಲ್ಲಿರುವ ವಾಹನಗಳಿಗೆ ಇಂಧನ ವೆಚ್ಚವನ್ನು ಡಿ ಸಿ ಬಿಲ್‌ಗಳ ಮುಖಾಂತರ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಪಾವತಿಸಿದೆ. ಈ ರೀತಿ ಒಟ್ಟು 92,00,000 ರು ಪಾವತಿಸಿದೆ.

‘ಇಂಧನದ ಬಿಲ್‌ಗಳನ್ನು ಎ ಸಿ ಬಿಲ್‌ಗಳ ಮುಖಾಂತರ ಡ್ರಾ ಮಾಡದಿರಲು ಸೂಕ್ತ ವಿವರಣೆ ನೀಡಬೇಕು. ಮತ್ತು ಡಿ ಸಿ ಬಿಲ್‌ಗಳ ಮುಖಾಂತರ ಖರೀದಿಸಲಾದ ಇಂಧನವನ್ನು ಮಾಹೆಯಾನ ವಾಹನಗಳಿಗೆ ಹಂಚಿಕೆ ಮಾಡಿರುವ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಬೇಕು. ಹಾಗೂ ನಿಯಮಾನುಸಾರ ಇಂಧನಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಎ ಸಿ ಬಿಲ್‌ಗಳ ಮೂಲಕ ಡ್ರಾ ಮಾಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ದಾಖಲೆ ಮತ್ತು ಅನುಪಾಲನಾ ವರದಿ ಸಲ್ಲಿಸಬೇಕು. ಅಲ್ಲಿಯವರೆಗೆ ಲೆಕ್ಕ ಪರಿಶೋಧಕರು 92,00,000 ರು.ಗಳನ್ನು ಆಕ್ಷೇಪಣೆಯಲ್ಲಿಡಲಾಗುತ್ತದೆ,’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಶಿಗ್ಗಾಂವಿ ಕೆಎಸ್‌ಆರ್‍ಪಿ ಘಟಕ
ಶಿಗ್ಗಾವಿ ಕಚೇರಿಯಲ್ಲಿನ ಘಟಕಕ್ಕೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯು ಕಾಲಕಾಲಕ್ಕೆ ವಿತರಿಸಲಾದ ಹಣಕ್ಕೆ ಮಾತ್ರ ಇಂದನವನ್ನು ಸರಬರಾಜು ಮಾಡಬೇಕು. ಈ ಹಣದ ಮೇಲೆ ಮಾಹೆಯಾನ ಇನ್ಸೆಂಟೀವ್ ಮೊತ್ತಕ್ಕೆ ಇಂಧನವನ್ನು ಸರಬರಾಜು ಮಾಡಬೇಕಾಗಿರುವುದಿಲ್ಲ.
ಆದ್ದರಿಂದ 2020 ರವರೆಗೆ ಸಂಗ್ರಹವಾದ ಇನ್‌ಸೆಂಟೀವ್ ಮೊತ್ತವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ ಹಿಂದಕ್ಕೆ ಪಡೆಯಬೇಕು. ಮತ್ತು ಆ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿರುವುದು ತಿಳಿದು ಬಂದಿದೆ.

ಅಲ್ಲದೇ ಶಿಗ್ಗಾವಿ ಕಮಾಂಡೆಂಟ್ 10ನೇ ಪಡೆ ಕಚೇರಿಯಲ್ಲಿನ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ನ್ನು ಪೆಟ್ರೋ ಕಾರ್ಡ್ ಮೂಲಕ ಖರೀದಿಸಿದ ಬಾಬ್ತನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಕಾಲಕಾಲಕ್ಕೆ ಪಾವತಿಸಿದೆ. ಈ ಪಾವತಿಯ ವಿವರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ.

2020ರ ಎಪ್ರಿಲ್ 1ರಿಂದ 2023ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿರುತ್ತದೆ ಎಂಬ ಬಗ್ಗೆ ವಿವರಗಳನ್ನುಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಅದೇ ರೀತಿ ಎಸ್‌ಆರ್‍ಸಿ ನಿಗದಿಪಡಿಸಿರುವ ಬಗ್ಗೆ ಲೆಕ್ಕ ಪರಿಶೋಧಕರಿಗೂ ದಾಖಲಾತಿಗಳೂ ಲಭ್ಯವಿಲ್ಲ.
ಹಾಸನ ಘಟಕದಲ್ಲಿಯೂ ಮಾಹಿತಿ ಲಭ್ಯವಿಲ್ಲ
ಹಾಸನ ಕೆಎಸ್‌ಆರ್‍ಪಿ 11ನೇ ಪಡೆ ಘಟಕದಲ್ಲಿರುವ ಪೊಲೀಸ್ ವಾಹನಗಳಿಗೆ ಇಂಧನವನ್ನು ಪೆಟ್ರೋ ಕಾರ್ಡ್ ಮೂಲಕ ಹಾಕಿಸಿಕೊಂಡಿದೆ. ಈ ಹಣವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಮುಂಗಡವಾಗಿ ಪಾವತಿಸಲಾಗಿದೆ. 2015-16ರಿಂದ 2019-20ರವರೆಗೆ ಒಟ್ಟು ಪಾವತಿಸಿದ್ದ 2,76,00,000 ರುಗಳ ಪಾವತಿ ಹಣದ ಮೇಲೆ ಲಭಿಸಿದ ಇನ್‌ಸೆಂಟೀವ್ ಮೊತ್ತ 3,59,000 ರು ಗಳಾಗಿದೆ.

ಈ ಮೊತ್ತವನ್ನು ಉಪಯೋಗಿಸಿಕೊಂಡಿರುವ ಬಗ್ಗೆ ಯಾವುದೇ ದಾಖಲೆಗಳು ಲೆಕ್ಕ ಪರಿಶೋಧನೆಯ ಪರಶೀಲನೆಗೆ ಒದಗಿಸಿಲ್ಲ. ಮತ್ತು ಈ ಸಂಬಂಧ ಮಾಹಿತಿಯೂ ಸಹ ಲಭ್ಯವಿಲ್ಲ. ಹೀಗಾಗಿ 3,59,000 ರುಗ.ಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿಟ್ಟಿದ್ದಾರೆ.
ತುಮಕೂರು ಕೆಎಸ್‌ಆರ್‍ಪಿ
ತುಮಕೂರು ಕೆಎಸ್‌ಆರ್‍ಪಿ 12ನೇ ಘಟಕಕ್ಕೆ 2017ರ ಏಪ್ರಿಲ್ 1ರಿಂದ 2022ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿರುತ್ತದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ಅದೇ ರೀತಿ ಎಸ್‌ಆರ್‍ಸಿ ನಿಗದಿಪಡಿಸಿರುವ ಬಗ್ಗೆಯು ಯಾವುದೇ ದಾಖಲಾತಿಯೂ ಲಭ್ಯವಿಲ್ಲ.

ಹಾಗೆಯೇ ಇದೇ ಘಟಕದಲ್ಲಿ ಇಂಧನ ಖರೀದಿಗೆ ಸಂಬಂಧಿಸಿದಂತೆ 2022ರಿಂದ 2023ರವರೆಗೆ ಬಾಕಿ ಇರುವ ಇನ್ಸೆಂಟೀವ್ ಮೊತ್ತ 18,750 ರುಗ.ಳನ್ನು ವಸೂಲು ಮಾಡಿಲ್ಲ.

ದೃಢೀಕೃತ ದಾಖಲೆ ಒದಗಿಸದ ಕೊಪ್ಪಳ ಐಆರ್‍ಬಿ
ಕೊಪ್ಪಳ ಐಆರ್‍ಬಿ ಘಟಕದಲ್ಲಿಯೂ ಇದೇ ಕತೆ. ಈ ಘಟಕದ ಸರ್ಕಾರಿ ವಾಹನಕ್ಕೆ ಸಂಬಂಧಿಸಿದಂತೆ ಇಂಧನದ ಬಳಕೆಗಾಗಿ ಸರ್ಕಾರದಿಂದ ಪೆಟ್ರೋ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಮುಖ್ಯ ಪೆಟ್ರೋ ಕಾರ್ಡ್‌ಗೆ ಬಳಸುವ ಇಂಧನದ ಮೊತ್ತಕ್ಕೆ ಕಂಪನಿಯವರಿಗೆ ಠೇವಣಿ ಇಡಲಾದ ಮೊತ್ತಕ್ಕೆ ಕಂಪನಿಯು ಮುಖ್ಯ ಖಾತೆಗೆ ಇನ್ಸೆಂಟೀವ್ ಮೊತ್ತವನ್ನು ಪಾವತಿಸಿದೆ. ಆದರೆ 2017-18ರಿಂದ 2021-22ರವರೆಗೆ ಮತ್ತು 2022ರಿಂದ 2024ರ ಮಾರ್ಚ್ 31ರವರೆಗೆ ಮುಖ್ಯ ಕಾರ್ಡ್‌ಗೆ ಪಾವತಿಸಿರುವ ಕ್ಯಾಷ್ ಬ್ಯಾಕ್ ಮೊತ್ತ ಮತ್ತು ಎಷ್ಟು ಇನ್ಸೆಂಟೀವ್ ಸಂಗ್ರಹವಾಗಿದೆ ಎಂಬ ಬಗ್ಗೆ ಪೂರ್ಣ ದೃಢೀಕೃತ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ಕೊಪ್ಪಳದ ಕೆಎಸ್‌ಆರ್‍ಪಿ ಪೊಲೀಸ್ ತರಬೇತಿ ಶಾಲೆಯಲ್ಲಿಯೂ ಸಹ ಪೆಟ್ರೋ ಕಾರ್ಡ್ ಮೂಲಕ ಖರೀದಿಸಲಾದ ಇಂಧನಕ್ಕೆ ಪಾವತಿ ವಿವರಗಳು ಅಪೂರ್ಣವಾಗಿವೆ. 2022ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಸಂಗ್ರಹವಾಗಿದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ವಿಜಯಪುರ ಐಆರ್‍ಬಿ ಘಟಕದಲ್ಲಿಯೂ ಸಹ 2022ರಿಂದ 2024ರ ಮಾರ್ಚ್ ವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಎಸ್‌ಆರ್‌ಸಿಯನ್ನೂ ನಿಗದಿಪಡಿಸಿಲ್ಲ.

ಶಿವಮೊಗ್ಗದ ಕೈಗಾರಿಕೆ ಭದ್ರತಾ ಪಡೆಯಲ್ಲಿನ ವಾಹನಗಳಿಗೂ ಇಂಧನ ಖರೀದಿ ಮೇಲಿನ ಇನ್ಸೆಂಟೀವ್ ಮೊತ್ತ 12,075 ರುಗ.ಳನ್ನು ಐಒಸಿಯಿಂದ ವಸೂಲು ಮಾಡಿಲ್ಲ.


ಧಾರವಾಡದ ಕೈಗಾರಿಕೆ ಭದ್ರತಾ ಪಡೆಯಲ್ಲಿಯೂ ಸಹ 2021ರಿಂದ 2023ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿರುತ್ತದೆ ಎಂಬ ಬಗ್ಗೆ ದಾಖಲಾತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಎಸ್‌ಆರ್‍ಸಿಯ ದಾಖಲೆಗಳೂ ಲಭ್ಯವಿಲ್ಲ.

ಕೋಲಾರದ ಘಟಕದಿಂದಲೂ ಸರ್ಕಾರಕ್ಕೆ ಜಮೆಯಾಗಿಲ್ಲ
ಕೋಲಾರ ಜಿಲ್ಲಾ ಪೊಲೀಸ್ ಘಟಕದಲ್ಲಿಯೂ ಸಹ 2017-18ನೇ ಸಾಲಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ 1,15,00,000 ರುಗ.ಳನ್ನು ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ವಾಹನಗಳಿಗೆ ಇಂಧನವನ್ನು ಪೂರೈಸಲು ಪಾವತಿಸಲಾಗಿದೆ. ಇದರ ಇನ್ಸೆಂಟೀವ್ ಮೊತ್ತವಾದ 2,09,900.00 ರು.ಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿಂದ ಹಿಂಪಡೆದು ಸರ್ಕಾರಕ್ಕೆ ಜಮೆ ಮಾಡಿಲ್ಲ.

ರಾಜ್ಯ ಗುಪ್ತವಾರ್ತೆ ಘಟಕದಲ್ಲಿಯೂ ಸಹ ಎಷ್ಟು ಇನ್ಸೆಂಟೀವ್ ಸಂಗ್ರಹವಾಗಿದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ತುಮಕೂರು ಜಿಲ್ಲಾ ಪೊಲೀಸ್ ಘಟಕದ ವಾಹನಗಳಿಗೆ 2019ರಿಂದ 2022ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಪಾವತಿಇಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಸಂಗ್ರಹವಾಗಿದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೂ 2021ರಿಂದ 2023ರ ಮಾರ್ಚ್ ವರೆಗೆ ಇಂಧನಕ್ಕೆ ಸಂಬಂಧಪಟ್ಟ ಇನ್ಸೆಂಟೀವ್ 7,39,493 ರು.ಗಳನ್ನು ವಸೂಲಾತಿ ಮಾಡಿಲ್ಲ.

ಹಾಸನದ ಪೊಲೀಸ್ ತರಬೇತಿ ಶಾಲೆಯಲ್ಲಿಯೂ 9,233 ರು.ಗಳನ್ನು ವಸೂಲು ಮಾಡಿಲ್ಲ. 18,00,000 ರು ಗಳ ರೀಚಾರ್ಜ್ 0.75 ರಂತೆ ಒಟ್ಟು 13,500 ರು ಕ್ಯಾಷ್ ಬ್ಯಾಕ್ ಪಾವತಿಸಬೇಕು. ಆದರೆ 4,266.81 ರು ಮಾತ್ರ ಕ್ಯಾಷ್ ಬ್ಯಾಕ್ ಪಾವತಿಸಲಾಗಿದೆ.

ಬಾಕಿ ಉಳಿದ 9,233.19 ರು.ಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿರುವದು ಗೊತ್ತಾಗಿದೆ.
ಕಲಘಟಗಿ ಪೊಲೀಸ್ ತರಬೇತಿ ಶಾಲೆಯಿಂದ ಆದೇಶ ಉಲ್ಲಂಘನೆ
ಧಾರವಾಡದ ಕಲಘಟಗಿಯಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿನ ವಾಹನಗಳಿಗೆ ಪೆಟ್ರೋ ಕಾರ್ಡ್‌ನ ಮೂಲಕ 2021ರ ಆಗಸ್ಟ್, 2022ರ ಸೆಪ್ಟಂಬರ್, ನವೆಂಬರ್, ಡಿಸೆಂಬರ್, 2023ರ ಜನವರಿ ಹಾಗೂ ಮಾರ್ಚ್‌ನಲ್ಲಿ 1,50,000.00 ರು.ಗಳನ್ನು ಪ್ರತಿ ರೀಚಾರ್ಜ್ ಮೊತ್ತಕ್ಕೆ ಶೇ. 0.75ರಂತೆ ಇನ್‌ಸೆಂಟೀವ್ ಪಾವತಿಸದೇ ಕಾರ್ಯಾದೇಶವನ್ನು ಉಲ್ಲಂಘಿಸಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
2021ರ ಏಪ್ರಿಲ್‌ರಿಂದ 2023ರ ಮಾರ್ಚ್‌ವರೆಗೆ ಪಾವತಿಸಲಾಗಿರುವ ಒಟ್ಟು 15,58,871 ರು.ಗಳ ರೀಚಾರ್ಜ್‌ಗೆ 0.75ರಂತೆ ಒಟ್ಟು 11,691.53 ರು. ಇನ್ಸೆಂಟೀವ್ ಪಾವತಿಸಬೇಕಾಗಿತ್ತು. ಆದರೆ 8,258.24 ರು. ಮಾತ್ರ ಇನ್ ಸೆಂಟೀವ್ ಪಾವತಿಸಲಾಗಿದೆ.

ಬಾಕಿ ಉಳಿದ ಇನ್ಸೆಂಟೀವ್ ಮೊತ್ತ 3,432 ರು.ಗಳನ್ನ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಿಂದ ವಸೂಲು ಮಾಡಬೇಕು ಎಂದು ವರದಿಯಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

ಚಿಕ್ಕಮಗಳೂರಿನಲ್ಲಿಯೂ ಇದೇ ಕತೆ
ಚಿಕ್ಕಮಗಳೂರು ಪೊಲೀಸ್ ತರಬೇತಿ ಶಾಲೆಯಲ್ಲಿ ಪೆಟ್ರೋ ಕಾರ್ಡ್ ಗೆ ಶೇಕಡವಾರು ಪಾವತಿಸಬೇಕಾಗಿರುವ ಕ್ಯಾಷ್‌ಬ್ಯಾಕ್ 5,580 ರು.ಗಳನ್ನು ವಸೂಲು ಮಾಡಿಲ್ಲ.

ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ 0.75 ರಂತೆ ಕ್ಯಾಷ್ ಬ್ಯಾಕ್ ನ್ನ ಆಯಾ ವಾಹನಗಳ ಪೆಟ್ರೋ ಕಾರ್ಡ್‌ಗಳಿಗೆ ಜಮೆ ಮಾಡಬೇಕು ಎಂದು ಕಾರ್ಯಾದೇಶವಾಗಿದೆ. ಆದರೆ ಪ್ರತೀ ರೀ ಚಾರ್ಜ್ ಮೊತ್ತಕ್ಕೆ ಶೆ. 0.75ರಂತೆ ಕ್ಯಾಷ್ ಬ್ಯಾಕ್ ಪಾವತಿಸದೇ ಕಾರ್ಯಾದೇಶ ಉಲ್ಲಂಘಿಸಲಾಗಿದೆ.

ಈ ಹಣವನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಬೆಂಗಳೂರಿನ ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿಯೂ ಪೆಟ್ರೋ ಕಾರ್ಡ್ ಮೂಲಕ ಇಂದನ ಖರೀದಿಸಲು ಮುಂಗಡ ಹಣ ಪಾವತಿಸುವ ಸಲುವಾಗಿ ಎ ಸಿ ಬಿಲ್‌ನಲ್ಲಿ ಹಣವನ್ನು ಸೆಳೆಯುತ್ತಿದೆ. ಆದರೆ ಘಟಕದಲ್ಲಿ ಎ ಸಿ ಬಿಲ್ ವಹಿ ನಿರ್ವಹಿಸದೇ ಇರುವುದು ಲೆಕ್ಕ ಪರಿಶೋಧನಾ ಸಮಯದಲ್ಲಿ ಕಂಡು ಬಂದಿದೆ.
ಹಾಗೆಯೇ ಘಟಕದ ಮುಖ್ಯ ಪೆಟ್ರೋ ಕಾರ್ಡ್‌ಗೆ ಶೇಕಡಾವಾರಿನಲ್ಲಿ ಪಾವತಿಸಬೇಕಾಗಿರುವ ಬಾಕಿ ಕ್ಯಾಷ್ ಬ್ಯಾಕ್ 5,335 ರು.ಗಳನ್ನ ವಸೂಲು ಮಾಡಿಲ್ಲ.

ಈ ಶಾಲೆಗೆ ಸಂಬಂಧಿಸಿದಂತೆ 2021ರ ಏಪ್ರಿಲ್‌ನಿಂದ ಮಾರ್ಚ್ 2023ರವರೆಗೆ ಒಟ್ಟು 26,34,939 ರು.ಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಲಾಗಿದೆ.

ಈ ಸಂಸ್ಥೆಯು ಕ್ಯಾಷ್ ಬ್ಯಾಕ್ ರೂಪದಲ್ಲಿ ಒಟ್ಟು 14,426.72 ರು.ಗಳನ್ನ ಪಾವತಿಸಿದ್ದು, 2022ರ ಆಗಸ್ಟ್‌ನಿಂದ ಮಾರ್ಚ್ 2023ರವರೆಗೆ ಡಿ ಜಿ ಮತ್ತು ಐಜಿಪಿ ಕಾರ್ಯಾದೇಶದಂತೆ 0.75 ರಷ್ಟು ಕ್ಯಾಷ್ ಬ್ಯಾಕ್ ರೂಪದಲ್ಲಿ ಪಾವತಿಸದೇ ಶೇಕಡಾವಾರಿನಲ್ಲಿ ಕಡಿಮೆ ನೀಡಿರುವುದು ತಿಳಿದು ಬಂದಿದೆ.

ಬೆಂಗಳೂರಿನ ಪೊಲೀಸ್ ವಾಹನ ಚಾಲನಾ ಮತ್ತು ಸಂರಕ್ಷಣಾ ಶಾಲೆಯ ಪ್ರಕರಣದಲ್ಲಿಯೂ 2021-22 ಮತ್ತು 2022-23ರ ಸಾಲಿನಲ್ಲಿ ಮಾಹೆಯಾನ ಇಂಧನಕ್ಕಾಗಿ ರೀಚಾರ್ಜ್ ಮಾಡಿದ ಮೊತ್ತ ಹಾಗೂ ಅದಕ್ಕೆ ಬಂದಂತಹ ಕ್ಯಾಷ್ ಬ್ಯಾಕ್ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.
ಧಾರವಾಡ ಪೊಲೀಸ್ ಅಧೀಕ್ಷಕರ ಕಚೇರಿ ವ್ಯಾಪ್ತಿಯ ಘಟಕದ ಮುಖ್ಯ ಪೆಟ್ರೋ ಕಾರ್ಡ್‌ಗೆ ಶೇಕಡಾವಾರಿನಲ್ಲಿ ಪಾವತಿಸಬೇಕಿದ್ದ ಕ್ಯಾಷ್ ಬ್ಯಾಕ್ ಮೊತ್ತವಾದ 53,482.22 ರು.ಗಳನ್ನು ಪಾವತಿಸಿಲ್ಲ. ಈ ಹಣವನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ಶಿಫಾರಸ್ಸು ಮಾಡಿದ್ದಾರೆ.

ಪ್ರತಿ ಲೀಟರ್‍ಗೆ 2021ರ ಏಪ್ರಿಲ್‌ನಿಂದ ಮೇ 2022ರವರೆಗೆ 0.75 ರು ನಂತೆ ಕ್ಯಾಷ್ ಬ್ಯಾಕ್ ಪಾವತಿಸಿದೆ. ಆದರೆ 2022ರ ಜೂನ್‌ನಿಂದ ಮಾರ್ಚ್ 2023ರವರೆಗೆ ಶೆ. 0.40 ರಂತೆ ಕ್ಯಾಷ್ ಬ್ಯಾಕ್ ಅನ್ನು ಮುಖ್ಯ ಪೆಟ್ರೋ ಕಾರ್ಡ್‌ಗೆ ಜಮೆಯಾಗಿದೆ. ಆದ್ದರಿಂದ ಬಾಕಿ ಪಾವತಿಸಬೇಕಾಗಿರುವ ಕ್ಯಾಷ್ ಬ್ಯಾಕ್‌ನ ಮೊತ್ತ 53,482 ರು.ಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನಿಂದ ವಸೂಲು ಮಾಡಬೇಕು ಎಂದು ಸೂಚಿಸಿದೆ.

ಬಾಗಲಕೋಟೆಯಲ್ಲಿ ಸಂಗ್ರಹವಾಗಿದ್ದೆಷ್ಟು?
ಬಾಗಲಕೋಟೆ ಜಿಲ್ಲೆ ಪೊಲೀಸ್ ಅಧೀಕ್ಷಕರ ಕಚೇರಿ ವ್ಯಾಪ್ತಿಯ ಪೊಲೀಸ್ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಇಂಧನವನ್ನು ಪೆಟ್ರೋ ಕಾರ್ಡ್ ಮೂಲಕ ವಿತರಿಸಲು ಕಾಲಕಾಲಕ್ಕೆ ನೀಡಿದ್ದ ಹಣ ಪಾವತಿ ವಿವರಗಳನ್ನು ಲೆಕ್ಕಪರಿಶೋಧಕರು ಪರಿಶೀಲಿಸಿದ್ದಾರೆ.

ಇದರ ಪ್ರಕಾರ 2018ರ ಏಪ್ರಿಲ್ 7ರಿಂದ 2019ರ ಮಾರ್ಚ್ 16ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವಿಭಾಗಕ್ಕೆ ಒಟ್ಟು 15900450.00 ರು.ಗಳನ್ನು ಪಾವತಿಸಿದ್ದು, ಸದರಿ ಹಣಕ್ಕೆ ಒಟ್ಟು 2064475.00 ರು.ಗಳ ಕಮಿಷನ್ ಹಣ ಸಂಗ್ರಹವಾಗಿದೆ.
ಜಿಲ್ಲಾ ಪೊಲೀಸ್ ಕಚೇರಿಯಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಕಾಲಕಾಲಕ್ಕೆ ಪಾವತಿಸಲಾದ ಹಣಕ್ಕೆ ಮಾತ್ರ ಇಂಧನವನ್ನು ಸಂಬಂಧಪಟ್ಟ ಸಂಸ್ಥೆಯು ಸರಬರಾಜು ಮಾಡಬೇಕು. ಆದರೆ ಸದರಿ ಹಣದ ಮೇಲೆ ದೊರೆಯುವ ಇನ್ಸೆಂಟೀವ್ ಮೊತ್ತಕ್ಕೆ ಇಂಧನವನ್ನು ಸರಬರಾಜು ಮಾಡಬೇಕಾಗಿರುವುದಿಲ್ಲ. ‘ಆದ್ದರಿಂದ 2018ರ ಏಪ್ರಿಲ್ 7ರಿಂದ 2019ರ ಮಾರ್ಚ್ 16ರವರೆಗೆ ಸಂಗ್ರಹವಾದ ಇನ್ಸೆಂಟೀವ್ ಮೊತ್ತ 2,046, 475 ರು.ಗಳನ್ನು ಐಒಸಿಯಿಂದ ಹಿಂದಕ್ಕೆ ಪಡೆದು ಈ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕು,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ವಿಜಯಪುರದ ಪೊಲೀಸ್ ಅಧೀಕ್ಷಕರ ಕಚೇರಿ ವ್ಯಾಪ್ತಿಯ ಘಟಕದ ಮುಖ್ಯ ಪೆಟ್ರೋ ಕಾರ್ಡ್‌ಗೆ ಶೇಕಡವಾರಿನಲ್ಲಿ ಪಾವತಿಸಬೇಕಾಗಿರುವ ಬಾಕಿ ಕ್ಯಾಷ್ ಬ್ಯಾಕ್ ಮೊತ್ತ 1,33,549 ರು.ಗಳನ್ನು ವಸೂಲಾಗಿಲ್ಲ.

ಈ ಸಂಸ್ಥೆಗೆ 2022ರ ಜೂನ್‌ನಿಂದ 2023ರ ಮಾರ್ಚ್‌ವರೆಗೆ ಒಟ್ಟು 2,76,00,000 ರು ಪಾವತಿಸಲಾಗಿದೆ. ಸದರಿ ಸಂಸ್ಥೆಯವರು ಕ್ಯಾಷ್ ಬ್ಯಾಕ್ ರೂಪದಲ್ಲಿ ಒಟ್ಟು ಮೊತ್ತ 73,450 ರು.ಗಳನ್ನು ಪಾವತಿಸಿದೆ.

ಜೂನ್ 2022ರಿಂದ ಮಾರ್ಚ್ 2023ರವರೆಗೆ ಡಿ ಜಿ, ಐಜಿಪಿ ಕಾರ್ಯಾದೇಶದಂತೆ ಒಟ್ಟು 0.75 ರಷ್ಟು ಕ್ಯಾಷ್ ಬ್ಯಾಕ್ ರೂಪದಲ್ಲಿ ಪಾವತಿಸದೇ ಒಟ್ಟು ಶೇ. 0.26ರಷ್ಟು ಮಾತ್ರ ಪಾವತಿಸಿದೆ. ಆದ್ದರಿಂದ ಬಾಕಿ ಶೇ.0.49ರಷ್ಟು ಪಾವತಿಸಬೇಕಾಗಿರುವ ಕ್ಯಾಷ್ ಬ್ಯಾಕ್‌ನ ಒಟ್ಟು ಮೊತ್ತ 1,03,549 ರು.ಗಳನ್ನು ಸದರಿ ಸಂಸ್ಥೆಯಿಂದ ಪಡೆಯಬೇಕು ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಶಿಫಾರಸ್ಸಾಗಿದೆ.

ಬೀದರ್- ಮೈಸೂರಿನಲ್ಲಿಯೂ ಲೋಪ
ಬೀದರ್‍ನ ಘಟಕಲ್ಲಿಯೂ ಸಹ 2021ರ ಎಪ್ರಿಲ್ ಇಂದ ಜೂನ್ 2022ರವರೆಗೆ ಶೇ. 0.75ರಂತೆ ಕ್ಯಾಷ್ ಬ್ಯಾಕ್ ಪಾವತಿಸಿದೆ. ಆದರೆ 2022ರ ಜೂನ್‌ನಿಂದ ಮಾರ್ಚ್ 2023ರವರೆಗೆ ಶೇ. 0.35ರಂತೆ ಕ್ಯಾಷ್ ಬ್ಯಾಕ್‌ನ್ನು ಮುಖ್ಯ ಪೆಟ್ರೋ ಕಾರ್ಡ್‌ಗೆ ಜಮೆ ಮಾಡಿದೆ.

ಮೈಸೂರಿನ ಕೆಎಸ್‌ಆರ್‍ಪಿಯ 5ನೇ ಪಡೆ ವ್ಯಾಪ್ತಿಯಲ್ಲಿನ ಪೊಲೀಸ್ ವಾಹನಗಳಿಗೆ ಪೆಟ್ರೋ ಕಾರ್ಡ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಿದ್ದಕ್ಕೆ ಹಣವನ್ನು ಐಒಸಿಗೆ ಪಾವತಿಸಲಾಗಿದೆ. 2022ರ ಎಪ್ರಿಲ್ 1ರಿಂದ 2023ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಪಾವತಿಸಿರುವ ಈ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿದೆ ಎಂಬ ಬಗ್ಗೆ ಯಾವುದೇ ವಿವರಗಳನ್ನೂ ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.
ಕಾರವಾರದಲ್ಲಿಯೂ ಸಹ ಇದೇ ಕತೆ. ಈ ಕಚೇರಿ ವ್ಯಾಪ್ತಿಯಲ್ಲಿ 2016ರ ಏಪ್ರಿಲ್ 1ರಿಂದ 2017ರ ಮಾರ್ಚ್ 31ರವರೆಗೆ 194, 2017ರರಿಂದ 2018ರವರೆಗೆ 186, 2018ರಿಂದ 2019ರವರಗೆ ಒಟ್ಟು 202 ವಾಹನಗಳಿವೆ.

ಈ ವಾಹನಗಳಿಗೆ ಪೆಟ್ರೋ ಕಾರ್ಡ್ ಇದೆ. ಮತ್ತು ಹೆಚ್ಚುವರಿಯಾಗಿ ಪೆಟ್ರೋ ಕಾರ್ಡ್‌ಗಳು ಇರುವ ಬಗ್ಗೆ ಲೆಕ್ಕ ಪರಿಶೋಧನೆಗೆ ಮಾಹಿತಿ ಒದಗಿಸಿಲ್ಲ. ಅಲ್ಲದೇ ಚುನಾವಣೆ ಮತ್ತು ಇತರ ಕರ್ತವ್ಯಗಳಲ್ಲಿ ಖಾಸಗಿ, ಸರ್ಕಾರಿ ವಾಹನಗಳಿಗೆ ಇಂಧನ ತುಂಬಿಸಿದೆ.
ಐಒಸಿಯವರು ಪೆಟ್ರೋ ಕಾರ್ಡ್‌ನ ಮುಖ್ಯ ಖಾತೆಗೆ ಇನ್‌ಸೆಂಟೀವ್ ಪಾವತಿಸಿದೆ. ಆದರೆ ದಾಖಲೆಗಳ ಪ್ರಕಾರ 2016ರ ಏಪ್ರಿಲ್ ನಿಂದ 2019ರ ಮಾರ್ಚ್ 31ರವರೆಗೆ ಮುಖ್ಯ ಪೆಟ್ರೋ ಕಾರ್ಡ್‌ಗೆ ಬಂದಿರುವ ಇನ್ಸೆಂಟೀವ್ ಮೊತ್ತ ಮತ್ತು ಪ್ರತಿ ಕಾರ್ಡ್‌ಗೆ ಬಂದಿರುವ ಕ್ಯಾಷ್ ಬ್ಯಾಕ್ ಮೊತ್ತಕ್ಕೆ ಹೊಂದಾಣಿಕೆಯಾಗಿರುವುದಿಲ್ಲ ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

ಉತ್ತರ ಕನ್ನಡದ ಜಿಲ್ಲಾ ಪೊಲೀಸ್ ಘಟಕದ ಮುಖ್ಯ ಪೆಟ್ರೋ ಕಾರ್ಡ್‌ಗೆ ಶೇಕಡವಾರಿನಲ್ಲಿ ಪಾವತಿಸಬೇಕಾಗಿರುವ ಕ್ಯಾಷ್ ಬ್ಯಾಕ್ 93,311 ರು. ವಸೂಲು ಮಾಡಬೇಕಿದೆ.

ಈ ಜಿಲ್ಲೆಯ ಪ್ರಕರಣದಲ್ಲಿ ಐಒಸಿಯು ಶೇ.0.75ರಷ್ಟು ಇನ್ಸೆಂಟೀವ್ ನೀಡದೇ ಕಡಿಮೆ ದರದಲ್ಲಿ ಇನ್ಸೆಂಟೀವ್ ಪಾವತಿಸಿದೆ.

ಬಾಕಿ ಮೊತ್ತ 93,311ರು ಇದೆ.

ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರ ಕಚೇರಿ ವ್ಯಾಪ್ತಿಯ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಲಾಗಿದೆ. ಇಲ್ಲಿಯೂ ಸಹ ಐಒಸಿಯವರು ನೀಡಿದ್ದ ಪ್ರೋತ್ಸಾಹ ಧನಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ಯಾವುದೇ ವಿವರವಾದ ದಾಖಲೆಗಳನ್ನು ಘಟಕಾಧಿಕಾರಿಗಳು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ಅಲ್ಲದೇ 2015ರ ಏಪ್ರಿಲ್ 1ರಿಂದ 2019ರ ಫೆ.8ರವರೆಗೆ ಎಸ್‌ಪಿ ಚಿಕ್ಕಮಗಳೂರು ಜಿಲ್ಲೆಯ ವಾಹನ ಸಾರಿಗೆ ವಿಭಾಗದ ಆಂತರಿಕ ಲೆಕ್ಕ ಪರಿಶೋಧನೆಯನ್ನೂ ನಡೆಸಲಾಗಿದೆ. ಇದರ ಪ್ರಕಾರ ಈ ವಿಭಾಗಕ್ಕೆ ನೀಡಿದ್ದ ಪೆಟ್ರೋ ಕಾರ್ಡ್‌ಗೆ ಸಂಬಂಧಿಸಿದಂತೆ ನೀಡಿರುವ ಒಟ್ಟು ಮೊತ್ತಕ್ಕೆ ಇಂಡಿಯನ್ ಆಯಿಲ್ ಕಂಪನಿಯು ನೀಡಿರುವ ಇನ್ ಸೆಂಟೀವ್ ಮೊತ್ತ 2,36,059 ರು.ಗಳನ್ನು ಡ್ರಾ ಮಾಡಿದೆ ಎಂದು ಹೇಳಲಾಗಿದೆ. ಆದರೆ ಈ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿರುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಅದೇ ರೀತಿ ಇದೇ ಜಿಲ್ಲೆಯ ಪೊಲೀಸ್ ಘಟಕದ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ನ್ನು ಪೆಟ್ರೋ ಕಾರ್ಡ್ ಮೂಲಕ ಖರೀದಿಸಿದ್ದ ಹಣವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಕಾಲಕಾಲಕ್ಕೆ ಪಾವತಿಸಿದೆ. ಈ ಪಾವತಿಯ ವಿವರಗಳನ್ನೂ ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇದರ ಪ್ರಕಾರ 2020ರ ಏಪ್ರಿಲ್ 1ರಿಮದ 2023ರ ಮಾರ್ಚ್ 31ರವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಅದೇ ರೀತಿ ಎಸ್‌ಆರ್‍ಸಿಯನ್ನು ನಿಗದಿಪಡಿಸಿಲ್ಲ ಎಂದು ಗೊತ್ತಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ಪೆಟ್ರೋ ಕಾರ್ಡ್ ಗೆ ಶೇಕಡಾವಾರಿನಲ್ಲಿ ಪಾವತಿಸಬೇಕಾಗಿರುವ ಬಾಕಿ ಕ್ಯಾಷ್ ಬ್ಯಾಕ್ ಮೊತ್ತ 1,05,788.06 ರು ಗಳನ್ನು ವಸೂಲು ಮಾಡಿಲ್ಲ. ಇಲ್ಲಿಯೂ ಸಹ ಐಒಸಿಯು ಕಾರ್ಯಾದೇಶವನ್ನು ಉಲ್ಲಂಘಿಸಿದೆ.

ಈ ಜಿಲ್ಲೆಯಲ್ಲಿ 2022ರ ಜೂನ್‌ನಿಂದ 2023ರ ಮಾರ್ಚ್ ವರೆಗೆ ಒಟ್ಟು 2,76,00,000 ರು.ಗಳ ರೀಚಾರ್ಜ್‌ಗೆ 0.75ರಂತೆ ಒಟ್ಟು 2,07,000 ರು.ಗಳ ಕ್ಯಾಷ್ ಬ್ಯಾಕ್ ಪಾವತಿಸಬೇಕಿತ್ತು. ಆದರೆ 1,01,211.94 ರು ಮಾತ್ರ ಪಾವತಿಸಿದೆ ಆದರೂ ಬಾಕಿ ಕ್ಯಾಷ್ ಬ್ಯಾಕ್ ಮೊತ್ತ 1,05,788.06 ರು.ಗಳನ್ನು ಐಒಸಿಯಿಂದ ವಸೂಲು ಮಾಡಿಲ್ಲ. ಹಾಗೆಯೇ ಪೆಟ್ರೋ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಎ ಸಿ ಮತ್ತು ಎನ್‌ಡಿಸಿ ಬಿಲ್‌ಗಳನ್ನೂ ಸಹ ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ.

ವಾಹನಗಳಿಗೆ ಪೆಟ್ರೋ ಕಾರ್ಡ್ ಮುಖಾಂತರ ಇಂಧನ ಪಡೆಯಲು ತಗುಲುವ ವೆಚ್ಚವನ್ನು ಎ ಸಿ ಬಿಲ್‌ಗಳ ಮೂಲಕ ಡ್ರಾ ಮಾಡಿ ಸಂದಾಯ ಮಾಡಿದೆ. ಇದಕ್ಕೆ ಸಂಬಂಧಿಸಿದ ಎನ್‌ಡಿಸಿ ಬಿಲ್‌ಗಳನ್ನು ತಡವಾಗಿ ಸಲ್ಲಿಸಿರುವುದು ವರದಿಯಿಂದ ತಿಳಿದು ಬಂದಿದೆ.
ದಾವಣಗೆರೆಯ ಆರ್‍ಎಫ್‌ಎಸ್‌ಎಲ್ ಕಚೇರಿ ವ್ಯಾಪ್ತಿಯಲ್ಲಿಯೂ ಐಒಸಿಗೆ ಪಾವತಿಸಿರುವ ಮೊತ್ತದಲ್ಲಿ ಎಷ್ಟು ಇನ್ಸೆಂಟೀವ್ ಮೊತ್ತ ಸಂಗ್ರಹವಾಗಿದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.
ಬೆಂಗಳೂರಿನ ಬೆರಳು ಮುದ್ರೆ ಸಂಗ್ರಹಾಲಯದಲ್ಲಿಯೂ ಸಹ 2021022 ಮತ್ತು 2022-23ರಲ್ಲಿನ ಘಟಕದ ವಾಹನಗಳ ವಿಭಾಗಕ್ಕೆ ಮಾಹೆಯಾನ ಇಂಧನಕ್ಕಾಗಿ ರೀ ಚಾರ್ಜ್ ಮಾಡಿದ್ದ ಮೊತ್ತ ಮತ್ತು ಅದಕ್ಕೆ ಬಂದಂತಹ ಕ್ಯಾಷ್ ಬ್ಯಾಕ್ ವಿವರಗಳ ಅಂಕಿ ಅಂಶಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.
ನಿಸ್ತಂತು ವಿಭಾಗದಲ್ಲಿಯೂ ಕ್ಯಾಷ್ ಬ್ಯಾಕ್ ವಿವರಗಳ ಅಂಕಿ ಅಂಶಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.
ರೈಲ್ವೇಸ್ ಬೆಂಗಳೂರಿನಲ್ಲಿ ಸಹ ಐಒಸಿ ವಿಭಾಗಕ್ಕೆ 19,50,000 ರುಗ.ಳನ್ನು ಪಾವತಿಸಿದ್ದು ಈ ಹಣಕ್ಕೆ 12,555 ರು ಗಳ ಇನ್ಸೆಂಟೀವ್ ಸಂಗ್ರಹವಾಗಿದೆ. ಘಟಕದಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಕಾಲಕಾಲಕ್ಕೆ ಪಾವತಿಸಲಾದ ಹಣಕ್ಕೆ ಮಾತ್ರ ಇಂಧನವನ್ನು ಸಂಬಂಧ ಪಟ್ಟ ಸಂಸ್ಥೆಯು ಸರಬರಾಜು ಮಾಡಬೇಕು.

ಈ ಹಣದ ಮೇಲೆ ದೊರೆಯುವ ಇನ್ಸೆಂಟೀವ್ ಮೊತ್ತಕ್ಕೆ ಇಂಧನ ಸರಬರಾಜು ಮಾಡಬೇಕಾಗಿಲ್ಲ. ‘ಆದ್ದರಿಂದ 2019ರ ಮಾರ್ಚ್ ನಿಂದ 2020ರ ಮಾರ್ಚ್ ವರೆಗೆ ಸಂಗ್ರಹವಾದ ಇನ್ಸೆಂಟೀವ್ ಮೊತ್ತ 12,555 ರು.ಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅವರಿಂದ ಹಿಂದಕ್ಕೆ ಪಡೆದು ಸದರಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕು,’ ಎಂದು ಲೆಕ್ಕ ಪರಿಶೋಧಕರು ಸೂಚಿಸಿರುವುದು ತಿಳಿದು ಬಂದಿದೆ.









